ಚಿಣ್ಣರಬಿಂಬ ಮುಂಬಯಿ ಇದರ ಮೀರಾ ರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆಯು ಆಗಸ್ಟ್ 24 ರಂದು ರವಿವಾರ ಮಧ್ಯಾಹ್ನ 1 ಗಂಟೆಯಿಂದ ಭಾಯಂದರ್ ಪೂರ್ವದ ನ್ಯೂ ಸೈಂಟ್ ಆಗ್ನೆಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ. ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವನ್ನು ರೈ ಸುಮತಿ ಎಜುಕೇಷನಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಡಾ| ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ, ಉದ್ಯಮಿ ರಮೇಶ ಎಂ ಶೆಟ್ಟಿ ಸಿದ್ಧಕಟ್ಟೆಯವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟ್ಸ್ ಫೋರಂ ಅಧ್ಯಕ್ಷ ಉದಯ ಎಮ್ ಶೆಟ್ಟಿ ಮಲಾರಬೀಡು, ಮೀರಾರೋಡ್ ಶಿಬಿರದ ಹಿರಿಯ ವಿದ್ಯಾರ್ಥಿಗಳಾದ ಸಿಎ ಶ್ರೀರಕ್ಷಾ ಶೆಟ್ಟಿ, ಇಂಜಿನಿಯರ್ ನಿರೀಕ್ಷಾ ಶೆಟ್ಟಿ, ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮವನ್ನು ಮೊಟ್ಟಮೊದಲ ಬಾರಿಗೆ ಚಿಣ್ಣರಬಿಂಬ ವತಿಯಿಂದ ಪರಿಸರದ ತುಳು ಕನ್ನಡಿಗರ ಮಕ್ಕಳಿಗೆ ಆಯೋಜಿಸಲಾಗಿದೆ. ಬಳಿಕ ಶಿಬಿರ ಮಟ್ಟದಲ್ಲಿ ಭಾವಗೀತೆ, ಜಾನಪದ ಗೀತೆ, ಭಾಷಣ, ಚರ್ಚಾ ಸ್ಪರ್ಧೆ, ಏಕಪಾತ್ರಾಭಿನಯ, ಛದ್ಮವೇಷ ಸ್ಪರ್ಧೆ, ಪಾಲಕರ ದೇಶಭಕ್ತಿಗೀತೆ ಸ್ಪರ್ಧೆಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಲಿದೆ.
ಚಿಣ್ಣರ ಬಿಂಬ ಸಾವಿರಾರು ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯವನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟಿರುವುದು ಈ ಸಂಸ್ಥೆಯ ಧನಾತ್ಮಕ ಸಾಧನೆ. ಚಿಣ್ಣರಬಿಂಬದ ಶಿಬಿರಗಳಲ್ಲೊಂದಾದ ಮೀರಾರೋಡ್ ಶಿಬಿರದ ಚಿಣ್ಣರಿಗೆ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಭಾಗವಹಿಸಿ ಚಿಣ್ಣರನ್ನು ಪ್ರೋತ್ಸಾಹಿಸುವಂತೆ ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.