ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ 3 ನೇ ಸಭೆಯು ಕೆಂಗೇರಿ ಉಪನಗರದ ಶ್ರೀಕೃಷ್ಣ ಗ್ರ್ಯಾಂಡ್ ಹೋಟೆಲ್ ನ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಡಿ.ಬಿ ಪ್ರತಾಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಹಟ್ಟಿಯಂಗಡಿಯವರ ಪ್ರಾರ್ಥನೆಯೊಂದಿಗೆ ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯಾಧ್ಯಕ್ಷರಾದ ವಸಂತ ಶೆಟ್ಟಿಯವರು ಮಾತನಾಡಿ, ವಾಣಿಜ್ಯ ತೆರಿಗೆ ಇಲಾಖೆಯು ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರಿಗೆ ನೀಡಿದ ಜಿ.ಎಸ್.ಟಿ ನೋಟಿಸ್ ಬಗ್ಗೆ ನಡೆದ ಹೋರಾಟದಲ್ಲಿ ಅಭೂತಪೂರ್ವ ಜಯಗಳಿಸಲು ಸಹಕರಿಸಿದ ಮುಖಂಡರಿಗೆ, ಕಾರ್ಮಿಕರಿಗೆ, ಮಾಧ್ಯಮದವರಿಗೆ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕಡಿಮೆ ದರದೊಂದಿಗೆ ಉತ್ತಮವಾಗಿ ಆಂಬುಲೆನ್ಸ್ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಗೀತಾ ಶೆಟ್ಟಿಯವರು ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಸಭೆಯಲ್ಲಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಮುಖಂಡರು ತಮ್ಮತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಗೆ 150ಕ್ಕೂ ಹೆಚ್ಚು ಮುಖಂಡರು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿದರು.