ಕಲಾ ಸಂಘಟನೆ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿಯ ಆಶ್ರಯದಲ್ಲಿ ಊರಿನ ನುರಿತ ಕಲಾವಿದರ ಕೂಡುವಿಕೆಯಲ್ಲಿ ಸರಣಿ ಯಕ್ಷಗಾನ ತಾಳಮದ್ದಳೆಯು ಜುಲೈ 12ರಂದು ಪ್ರಾರಂಭ ಗೊಂಡಿದ್ದು, ಜು. 20ರವರೆಗೆ ನಗರ ಹಾಗೂ ಉಪನಗರಗಳ ವಿದಧೆಡೆ ನಡೆಯಲಿದೆ. ಬಳಗದ ಅಧ್ಯಕ್ಷ ಸಂಘಟಕ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ, ನೇತೃತ್ವದಲ್ಲಿ ಮುಂಬಯಿ ಪ್ರವಾಸದ ಉದ್ಘಾಟನಾ ಸಮಾರಂಭವು ಸಂಜೆ 5:30 ಕ್ಕೆ ಭಾಂಡೂಪ್ ಪಶ್ಚಿಮದ ಶ್ರೀ ಪಿಂಪ್ಲೇಶ್ವರ ಮಹಾದೇವ ಮಂಡ್ಯದ ಸಭಾಂಗಣದಲ್ಲಿ ಶ್ರೀ ಶನೀಶ್ವರ ಮಿತ್ರ ಮಂಡಳಿಯ ಪ್ರಾಯೋಜಕತ್ವದಲ್ಲಿ ದಮಯಂತಿ ಪುನರ್ ಸ್ವಯಂವರ ತಾಳಮದ್ದಳೆಯೊಂದಿಗೆ ನಡೆಯಿತು.

ಅತಿಥಿಗಳಾಗಿ ಪಾಲ್ಗೊಂಡ ಕಿಶೋರ್ ಸಾಲ್ಯಾನ್, ಸಿ. ಲಕ್ಷ್ಮಣ್, ನವೀನ್ ಅಂಚನ್ ಕಾರ್ಕಳ ಅವರನ್ನು ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಪುಷ್ಪಗುಚ್ಛ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಅರ್ಥದಾರಿಗಳಾಗಿ ಊರಿನ ನುರಿತ ಕಲಾವಿದರಾದ ಹಿಮ್ಮೇಳದಲ್ಲಿ ಭಾಗವತರಾಗಿ ಭರತ್ ಶೆಟ್ಟಿ ಸಿದ್ಧಕಟ್ಟೆ, ಚೆಂಡೆಯಲ್ಲಿ ಅದ್ವೈತ್ ಕನ್ಯಾನ, ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಮುಮ್ಮೇಳದಲ್ಲಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಭಟ್ ಬೊಳಂತಿಮೊಗರು, ಪ್ರಸಾದ್ ಸವಣೂರು, ಶಶಿಕಾಂತ್ ಶೆಟ್ಟಿ ಕಾರ್ಕಳ, ಅವಿನಾಶ್ ಶೆಟ್ಟಿ ಉಬರಡ್ಕ ಭಾಗವಹಿಸಿದ್ದರು. ಶ್ರೀ ಪಿಂಪ್ಲೇಶ್ವರ ಮಹಾದೇವ ಮಂದಿರದ ಪದಾಧಿಕಾರಿಗಳು ಹಾಗೂ ಗಣ್ಯರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರನ್ನು ಶಾಲು ಹೊದಿಸಿ, ಪುಷ್ಪಗುಚ್ಛವನ್ನಿತ್ತು ಗೌರವಿಸಿದರು. ಮಂದಿರಿದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಲಾಭಿಮಾನಿಗಳು, ಸ್ಥಳೀಯ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.