ಅಷ್ಟ ವಿನಾಯಕ ಎಂದರೆ ಎಂಟು ಗಣೇಶ ದೇವಾಲಯಗಳ ಗುಂಪು. ಇವು ಮಹಾರಾಷ್ಟ್ರದಲ್ಲಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಅಷ್ಟ ವಿನಾಯಕ ದರ್ಶನ ಮಾಡಲು ಒಂದು ವಿಧಿವತ್ತಾಗಿ ಹೋಗಬೇಕೆಂದು ಪುರಾಣದಲ್ಲಿ ನಿರೂಪಿಸಲಾಗಿದೆ. ಶ್ಲೋಕದಲ್ಲಿ ಹೇಳಿರುವಂತೆ ಮೊದಲಿಗೆ ಮೋರ್ ಗಾಂವ್, ತೇವೂರ್, ಸಿದ್ಧಟೇಕ್, ರಾಜನ್ಗಾಂವ್, ಲೆನ್ಯಾದ್ರಿ, ಓಜಾರ್, ಪಾಲಿ ಮತ್ತು ಮಹಾಡ್ ಹೀಗೆ ಎಂಟು ಗಣಪತಿ ದೇವಸ್ಥಾನಗಳ ದರ್ಶನವೇ ಅಷ್ಟ ವಿನಾಯಕ ದರ್ಶನ. ಬಾಂಬೆ ಅಸೋಸಿಯೇಷನ್ ನ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವ ಹಾಗೂ ಸಮಿತಿ ಸದಸ್ಯೆಯರ ಸಹಕಾರದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ.ಕೆ ಶೆಟ್ಟಿ ಮತ್ತು ಆಡಳಿತ ಸಮಿತಿಯ ಸಂಪೂರ್ಣ ಬೆಂಬಲದಲ್ಲಿ ಜೂನ್ 27 ರಿಂದ 29 ತಾರೀಖಿನವರೆಗೆ ಮೂರು ದಿನಗಳ ಪ್ರವಾಸದಲ್ಲಿ 2 ಬಸ್ಸುಗಳ ವ್ಯವಸ್ಥೆಯೊಂದಿಗೆ 61 ಮಹಿಳೆಯರು ಭಾಗವಹಿಸಿದ್ದರು. ಎಲ್ಲಾ ಮಹಿಳೆಯರು ತುಂಬಾ ಉತ್ಸುಕತೆ, ಉಲ್ಲಾಸದಿಂದ ಪ್ರಯಾಣದ ಬಸ್ಸಿನಲ್ಲಿ ಭಜನೆ, ಕೀರ್ತನೆ ಹಾಡುಗಳನ್ನು ಹಾಡುತ್ತಾ ಆನಂದ ನೀಡುತ್ತಾ ಪ್ರವಾಸದ ಆಯಾಸವನ್ನು ತಣಿಸುತ್ತಾ ಮನೋರಂಜನೆ ನೀಡಿದರು.

ಮೋರ್ ಗಾಂವ್ ನಲ್ಲಿ ನೆಲೆಸಿರುವ ಶ್ರೀ ಮಯೂರೇಶ್ವರ, ತೇವೂರ್ ನ ಶ್ರಿ ಚಿಂತಾಮಣಿ, ಸಿದ್ಧಟೇಕ್ ಶ್ರೀ ಸಿದ್ಧಿವಿನಾಯಕ, ರಾಜನ್ಗಾಂವ್ ಶ್ರೀ ಮಹಾಗಣಪತಿ, ಲೆನ್ಯಾದ್ರಿ ಶ್ರೀ ಗಿರಿಜಾತ್ಮಕ, ಓಜಾರ್ ಶ್ರೀ ವಿಘ್ನಹರ, ಪಾಲಿ ಶ್ರೀ ಬಳ್ಳಾಲೇಶ್ವರ ಮತ್ತು ಮಹಾಡ್ ನ ಶ್ರೀ ವರದ ವಿನಾಯಕ. ಹೀಗೆ ಎಂಟು ಪುಣ್ಯ ಸ್ಥಳಗಳೊಂದಿಗೆ ಮಹಾರಾಷ್ಟ್ರದ ಅತ್ಯಂತ ಪ್ರಮುಖ ಹಿಂದೂ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಮಲ್ಹಾರಿ ಮಾರ್ತಾಂಡನೆಂದೇಪ್ರಖ್ಯಾತ ಜೆಜೂರಿಗಡದ ಖಂಡೋಬಾ ದೇವರ ದರ್ಶನವನ್ನು ಕೂಡಾ ಮಾಡಿದರು. ಖಂಡೋಬಾ ಸಕಮಭಕ್ತಿಯ ದೇವರು ಅಂದರೆ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ದೇವರು ಎಂದು ನಂಬಲಾಗಿದೆ. ಜೆಜುರಿಗಡದ 758 ಮೀಟರ್ ಎತ್ತರದ ಗುಡ್ಡದ ಮೇಲೆ ನೆಲೆಗೊಂಡಿರುವ ಈ ದೇವಾಲಯವು ಸುತ್ತಮುತ್ತಲಿನ ಗ್ರಾಮೀಣ ಭೂದೃಶ್ಯದ ಅತ್ಯುತ್ತಮ ನೋಟವನ್ನು ನೀಡುತ್ತದೆ. ದೇವಾಲಯವು ಮೂರು ಪ್ರವೇಶ ದ್ವಾರಗಳನ್ನು ಹೊಂದಿದ್ದು, ಭಕ್ತರು ಉತ್ತರ ದ್ವಾರದಿಂದ ಸುಮಾರು 385 ಅಸಮ ಮೆಟ್ಟಿಲುಗಳನ್ನು ಮತ್ತು 150 ದೀಪ ಮಾಲೆಗಳನ್ನು ಹತ್ತಬೇಕು.ಇದೊಂದು ಅಭೂತಪೂರ್ವ ಅನುಭವ. ಕೊನೆಗೆ ಪುಣೆಯ ದಗುಡೂ ಶೇಟ್ ಹಲುವಾಯಿ ಮಹಾಗಣಪತಿ ದೇವರ ದರ್ಶನ ಮಾತ್ರವಲ್ಲದೆ ಸಾಮೂಹಿಕ ಭಜನೆಯನ್ನು ಕೂಡಾ ಮಾಡುವುದರೊಂದಿಗೆ ಪ್ರವಾಸವನ್ನು ಮುಗಿಸಿದರು.