ಪ್ರತಿಯೊಂದು ಮಗುವಿನಲ್ಲೂ ಸೂಕ್ತ ಪ್ರತಿಭೆಗಳಿವೆ. ಅಂಥಹ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿದಾಗ ಆ ಮಗು ಹಾಗೂ ಸಮಾಜ ಅದರ ಪ್ರಯೋಜನ ಪಡೆಯಲು ಸಹಕರಿಯಾಗಬಲ್ಲದು. ಈ ನಿಟ್ಟಿನಲ್ಲಿ ಜ್ಞಾನ ಸಂಪಾದನೆಯ ಜೊತೆಗೆ ವಿದ್ಯಾವಂತರಾಗಿ ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಿ ಎಂದು ಶ್ರೀ ವಿಧುಶೇಖರ ಭಾರತಿ ಶ್ರೀ ನುಡಿದರು. ಅವರು ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ ಮತ್ಯಾಡಿ ಕುಂದಾಪುರ ಇಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ಭಾರತೀತೀರ್ಥ ಶ್ರೀಗಳ ಅನುಗ್ರಹದಿಂದ ನಡೆದ ಅಕ್ಷರಾಭ್ಯಾಸ ಮತ್ತು ಸುವಿದ್ಯಾರಂಭ, ವಾಣಿವಿಲಾಸ ವಿದ್ಯಾರ್ಥಿ ನಿಲಯ ಹಾಗೂ ನೂತನ ಕಟ್ಟಡದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವದಿಸಿದರು. ಸ್ವಾಮೀಜಿಯವರು ವೀಣಾಧಾರಿಣಿ ಜಗನ್ಮಾತೆ ಶ್ರೀ ಶಾರದಾಂಬೆಯ ಮೂರ್ತಿಯನ್ನು ಸ್ಥಾಪಿಸಿ, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ಹಾಗೂ ಸಂಸ್ಥೆಯ ಸುಮಾರು 1900 ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ವಿದ್ಯಾರಂಭವನ್ನು ನೆರವೇರಿಸಿದರು. ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು.

ಉಡುಪಿ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಕೃಷ್ಣ ಶೆಟ್ಟಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀ ಶಾರದಾ ಪೀಠಂ ಶೃಂಗೇರಿ ಇದರ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗ ನಾವುಂದ ಬಡಾಕೆರೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಘುರಾಮ ದೇವಾಡಿಗ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕ ರಜತ್ ಭಟ್ ನಿರೂಪಿಸಿ, ಸುಜ್ಞಾನ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ ಸಹಕರಿಸಿ ವಂದಿಸಿದರು.