ಇಂಗ್ಲೆಂಡ್ ನ ನಾಟಿಂಗ್ ಹ್ಯಾಮ್ ಶೈರ್ ನ ಕಿಂಗ್ಸ್ ಮಿಲ್ ಅಸ್ಪತ್ರೆಯಲ್ಲಿ ಕನ್ಸಲೆಂಟ್ ಫಿಸಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್ ರಾಯಲ್ ಕಾಲೇಜ್ ಆಫ್ ಪಿಸಿಷಿಯನ್ಸ್ ಫೆಲೋ (ಎಫ್.ಆರ್.ಸಿ.ಪಿ ಲಂಡನ್) ಗೌರವಕ್ಕೆ ಪಾತ್ರರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ವೃತ್ತಿಪರ ಸಾಧನೆ, ದೀರ್ಘಕಾಲದ ಅನುಭವ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ನೀಡಲಾಗುವ ಈ ಪ್ರತಿಷ್ಠಿತ ಫೆಲೋ ಗೌರವವು ಡಾ. ರಾಜೇಶ್ ರೈ ಅವರ ವೃತ್ತಿ ಜೀವನದ ಮಹತ್ವದ ಮೈಲಿಗಲ್ಲಾಗಿದೆ. ಡಾ. ರಾಜೇಶ್ ರೈ ಅವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಡುಪಿ ಮಣಿಪಾಲದ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರ್ಣಗೊಳಿಸಿ ನಂತರ ತುಮಕೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ಮೈಸೂರಿನ ಜಿ.ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಎo.ಡಿ ಪಡೆದರು. ನಂತರ ನವದೆಹಲಿಯಲ್ಲಿ ಡಿಎನ್ಬಿ ಪದವಿ ಪೂರ್ಣಗೊಳಿಸಿದರು. ಇಂಗ್ಲೆಂಡ್ ನ ರಾಯಲ್ ಕಾಲೇಜ್ ಆಫ್ ಪಿಸಿಷಿಯನ್ಸ್ ನ ಎಂ.ಆರ್.ಸಿ.ಪಿ ಪದವಿಯನ್ನು ಪಡೆದಿರುವ ಅವರು ಇದೀಗ ಅದೇ ಪ್ರತಿಷ್ಠಿತ ಸಂಸ್ಥೆಯ
ಎಫ್.ಆರ್.ಸಿ.ಪಿ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದ ಡಾ. ರಾಜೇಶ್ ರೈ ಅವರು 16 ವರ್ಷಗಳ ಕಾಲ ಎ.ಜೆ ಆಸ್ಪತ್ರೆಯಲ್ಲಿ ಕನ್ಸಲೆಂಟ್ ಫಿಸಿಷಿಯನ್ ಆಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ಎ.ಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯರಿಗೆ ಬೋಧನೆ ಮತ್ತು ತರಬೇತಿ ನೀಡುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದವರು. ಬಳಿಕ ಇಂಗ್ಲೆಂಡ್ ಗೆ ತೆರಳಿದ ಅವರು ಅಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್.ಎಚ್.ಎಸ್) ನಲ್ಲಿ ತಮ್ಮ ವೈದ್ಯಕೀಯ ವೃತ್ತಿ ಜೀವನವನ್ನು ಮುಂದುವರಿಸಿದರು. ಪ್ರಸ್ತುತ ನಾಟಿಂಗ್ ಹ್ಯಾಮ್ ಶೈರ್ ನ ಮಿಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕನ್ಸಲೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯ ಜತೆಗೆ ವೈದ್ಯಕೀಯ ಶಿಕ್ಷಣ, ವೈದ್ಯರ ತರಬೇತಿ ಹಾಗೂ ಆರೋಗ್ಯ ಸೇವೆಯ ವಿವಿಧ ಜವಾಬ್ದಾರಿಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಡಾ. ರಾಜೇಶ್ ರೈ ಅವರು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ‘ಸಹಕಾರ ರತ್ನ’ ಕೆ. ಸೀತಾರಾಮ ರೈ ಸವಣೂರು ಮತ್ತು ಶ್ರೀಮತಿ ಕಸ್ತೂರಿಕಲಾ ಎಸ್ ರೈ ದಂಪತಿಯ ಪುತ್ರ. ಡಾ. ರಾಜೇಶ್ ರೈ ಅವರ ಪತ್ನಿ ಶ್ರೀಮತಿ ಅಶ್ವಿತ ರಾಜೇಶ್ ರೈ ಅವರು ಹ್ಯೂಮನ್ ನ್ಯೂಟ್ರಿಷನ್ ಆಂಡ್ ಡೈತೇಟಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಲಂಡನ್ ನ ಕೇoಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಮಂಗಳೂರಿನಲ್ಲಿ ಹಲವು ವರ್ಷಗಳ ಕಾಲ ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಇಂಗ್ಲೆಂಡ್ ನ ಎನ್.ಎಚ್.ಎಸ್ ನಲ್ಲಿ ಕನ್ಸಲ್ಟoಟ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಅವರ ವೃತ್ತಿಪರ ಪಯಣ ಗಮನಾರ್ಹವಾಗಿದೆ.

















































































































