ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್ 3ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ರಕ್ಷಕ ಶಿಕ್ಷಕ ಸಭೆಯನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಬದುಕಿನಲ್ಲಿ ಪೋಷಕರ ಪಾತ್ರ ಮಹತ್ವದ್ದು. ಪೋಷಕರು ತಮ್ಮ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅವರ ಆಗು ಹೋಗುಗಳನ್ನು ವಿಚಾರಿಸಬೇಕು. ಪೋಷಕರು ಸಂಸ್ಥೆಯೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡಾಗ ವಿದ್ಯಾರ್ಥಿಗಳ
ಯಶಸ್ಸು ಸಾಧ್ಯ ಎಂದರು. ಈ ಸಂದರ್ಭ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿ ಶಿಕ್ಷಕಿ ಶೋಭಾ ಪೂಜಾರಿ ಉಪಸ್ಥಿತರಿದ್ದು, ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.



ಕಾಲೇಜಿನ ಉಪ ಪ್ರಾಂಶುಪಾಲ, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾಲೇಜಿನ ಆಡಳಿತಾತ್ಮಕ ಮತ್ತು ಶೈಕ್ಷಣಿಕ ವಿಚಾರಗಳ ಬಗ್ಗೆ ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಶೈಕ್ಷಣಿಕ ನಿಕಾಯಕ ತಿಮ್ಮಪ್ಪ ಡಿ.ಎಸ್ ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿ ಆದಿತ್ಯ ಪ್ರಾರ್ಥಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು














































































































