ಪ್ರತಿಷ್ಠಿತ ಪುಣೆ ಬಂಟರ ಸಂಘದ 2025 – 2027 ರ ಅವಧಿಗೆ ನೂತನ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕೆಂಜಾರು ಅಜಿತ್ ಹೆಗ್ಡೆಯವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಏಪ್ರಿಲ್ 14 ರಂದು ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಎರಡು ವರ್ಷಗಳಿಗಾಗಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಕೆಂಜಾರು ಅಜಿತ್ ಹೆಗ್ಡೆಯವರು ಪುಣೆಯಲ್ಲಿ ಪ್ರತಿಷ್ಠಿತ ಹೋಟೆಲ್ ಉದ್ಯಮಿಯಾಗಿ ಮಾತ್ರವಲ್ಲದೇ ಉದ್ಯಮದ ಯಶಸ್ಸಿನೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಿಂಪೋಣಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾಗಿದ್ದಾರೆ. ಪುಣೆ ಬಂಟರ ಸಂಘದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಪ್ರತಿಷ್ಠಿತ ಸಂಘದ ಭವನದ ನಿರ್ಮಾಣ ಹಂತದಲ್ಲಿ ಗುರುತರ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಸಂಘದ ಮೂಲಕ ವರ್ಷವಿಡೀ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದ್ದಾರೆ. ಪುಣೆಯಲ್ಲಿನ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ನಿಕಟತೆಯನ್ನು ಕಾಯ್ದುಕೊಂಡು ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದ ಹೆಗ್ಗಳಿಕೆ ಅವರದ್ದಾಗಿದೆ. ತುಳುನಾಡ ಧಾರ್ಮಿಕ, ಸಾಂಸ್ಕೃತಿಕ, ಕಲಾ ಪ್ರಕಾರಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
