ಇದೇ ಮೊದಲ ಬಾರಿಗೆ ಯಕ್ಷಗಾನದ ಕಥೆಯನ್ನು ಇಟ್ಟುಕೊಂಡು ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ರವಿ ಬಸ್ರೂರು ನಿರ್ದೇಶನದ ಈ ಸಿನಿಮಾದಲ್ಲಿ ನಿಜವಾದ ಯಕ್ಷಗಾನ ಕಲಾವಿದರು ನಟಿಸಿದ್ದಾರೆ. 50 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಪ್ರಿಲ್ 18ರಂದು ಈ ಸಿನಿಮಾ ತೆರೆಕಾಣಲಿದೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಅವರು ಸಿನಿಮಾ ನಿರ್ದೇಶನದಲ್ಲೂ ಆಸಕ್ತಿ ಹೊಂದಿದ್ದಾರೆ. ಈಗ ಅವರು ‘ವೀರ ಚಂದ್ರಹಾಸ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿರಿಮೆಯನ್ನು ಜಗತ್ತಿಗೆ ಹೇಳಲು ಈ ಸಿನಿಮಾ ಮಾಡಿದ್ದಾರೆ. ಯಕ್ಷಗಾನ ಪ್ರಸಂಗ ಆಧಾರಿತವಾಗಿ ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ಎನ್.ಎಸ್. ರಾಜ್ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಹೊಂಬಾಳೆ ಫಿಲಂಸ್ ಮೂಲಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ‘ವೀರ ಚಂದ್ರಹಾಸ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಈ ವೇಳೆ ಯಕ್ಷಗಾನ ಕಲಾವಿದರನ್ನು ಗೌರವಿಸಲಾಯಿತು. ಈ ವೇಳೆ ರವಿ ಬಸ್ರೂರು ಅವರು ಮಾತನಾಡಿ, ಇದು ನನ್ನ ಅನೇಕ ವರ್ಷಗಳ ಕನಸು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಸಿನಿಮಾ ಮಾಡಲು ಹೊರಟಾಗ ನಾಗರಾಜ್ ನೈಕಂಬ್ಳಿ, ನವೀನ್ ಶೆಟ್ಟಿ ಅವರು ನನ್ನ ಬೆಂಬಲಕ್ಕೆ ನಿಂತರು. ಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ ನಟಿಸಿದ್ದಾರೆ. ದುಷ್ಟಬುದ್ಧಿ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್ ಅಭಿನಯಿಸಿದ್ದಾರೆ. ಎಲ್ಲಾ ಪಾತ್ರಗಳನ್ನು ನಿಜವಾದ ಯಕ್ಷಗಾನ ಕಲಾವಿದರೇ ಮಾಡಿರುವುದು ವಿಶೇಷ. ಅಂದಾಜು 500 ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕಾಗಿ 600ರಿಂದ 700 ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದೇವೆ ಎಂದು ರವಿ ಬಸ್ರೂರು ಹೇಳಿದರು.

ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸನ ಕಥೆಯನ್ನು ಈ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯನ್ನು ರವಿ ಬಸ್ರೂರು ಅವರು ತೆರೆಮೇಲೆ ತೋರಿಸುತ್ತಿದ್ದಾರೆ. ಈ ಸಿನಿಮಾವನ್ನು ಶಕ್ತಿಯಿಂದ ಮಾಡಿಲ್ಲ, ಭಕ್ತಿಯಿಂದ ಮಾಡಿದ್ದೇವೆ’ ಎಂದು ಚಿತ್ರತಂಡದವರಾದ ನಾಗರಾಜ್ ನೈಕಂಬ್ಳಿ ಹೇಳಿದರು.ನಟ ಶಿಥಿಲ್ ಶೆಟ್ಟಿ ಮಾತನಾಡಿ, ‘ರವಿ ಬಸ್ರೂರು ಅವರು ಪ್ರತಿಭೆ ಇರುವವರನ್ನು ಕರೆದು ಅವಕಾಶ ನೀಡಿದ್ದಾರೆ. ಎಲ್ಲಿಯೂ ಲೋಪವಾಗದ ರೀತಿಯಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾಗಾಗಿ ಅವರ ಡೆಡಿಕೇಶನ್ ದೊಡ್ಡದು. ನಾವೆಲ್ಲಾ ಕುದುರೆ ಸವಾರಿ ಕಲಿತು ಅಭಿನಯಿಸಿದ್ದೇವೆ’ ಎಂದರು. ದುಷ್ಟಬುದ್ಧಿ ಪಾತ್ರಧಾರಿ ಪ್ರಸನ್ನ ಶೆಟ್ಟಿಗಾರ್ ಮಾತನಾಡಿ, ‘ಈಗಾಗಲೇ ದುಷ್ಟಬುದ್ಧಿ ಪಾತ್ರ ಮಾಡಿ ಖ್ಯಾತರಾದವರನ್ನು ಬಿಟ್ಟು, ರವಿ ಬಸ್ರೂರು ಅವರು ನನ್ನಿಂದ ಅದನ್ನು ಮಾಡಿಸಿದ್ದಾರೆ. ಅವರಲ್ಲಿ ಬೆಳಗ್ಗೆ ಇರುವ ಉತ್ಸಾಹವೇ ಸಂಜೆ 6 ಗಂಟೆಗೂ ಇರುತ್ತಿತ್ತು. ಯಕ್ಷಗಾನಕ್ಕೆ ಸಿಕ್ಕಂತಹ ದೊಡ್ಡ ಕೊಡುಗೆ ಇದು’ ಎಂದು ಹೇಳಿದರು. ಪ್ರಮೋದ್ ಮೊಗಬೆಟ್ಟು ಅವರು ‘ವೀರ ಚಂದ್ರಹಾಸ’ ಸಿನಿಮಾಗಾಗಿ 60ರಿಂದ 70 ಹಾಡುಗಳನ್ನು ಬರೆದಿದ್ದಾರೆ. ‘ಒಂದೇ ಚಿತ್ರಕ್ಕಾಗಿ ಇಷ್ಟೊಂದು ಹಾಡುಗಳನ್ನು ಯಾರೂ ಬರೆದಿದ್ದಿಲ್ಲ. ಇದನ್ನು ಗಿನ್ನೀಸ್ ದಾಖಲೆಗೆ ಕಳಿಸುತ್ತಿದ್ದೇವೆ’ ಎಂದು ರವಿ ಬಸ್ರೂರ್ ಮಾಹಿತಿ ನೀಡಿದರು. ಈ ಸಿನಿಮಾದಲ್ಲಿ ನಟ ಶಿವರಾಜಕುಮಾರ್ ಕೂಡ ಒಂದು ಪಾತ್ರ ಮಾಡಿದ್ದಾರೆ. ಹಾಗಾಗಿ ಕೌತುಕ ಹೆಚ್ಚಾಗಿದೆ. ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ಅವರ ಪಾತ್ರಗಳು ಪ್ರಮುಖ ಘಟ್ಟದಲ್ಲಿ ಬರುತ್ತವೆ ಎಂದು ರವಿ ಬಸ್ರೂರು ಹೇಳಿದರು.