ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2025-26ನೇ ಸಾಲಿನ, 6 ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ನಡೆಯಿತು. ರಾಜ್ಯಾದ್ಯಾಂತ 32 ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಗಡಿಭಾಗದ ಜಿಲ್ಲೆಯಾದ ಕಾಸರಗೋಡು ಹಾಗೂ ಮಹಾರಾಷ್ಟ್ರದ ಗಡಿಜಿಲ್ಲೆಗಳಿಂದ 20134 ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 18634 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಂತರ ಮಾತನಾಡಿದ ಅವರು ಈ ಕನ್ನಡನಾಡಿನಲ್ಲಿ ಜನ್ಮತಾಳಿ, ಬದುಕನ್ನ ನಡೆಸಿ, ಸಂಪಾದನೆಯನ್ನು ಗಳಿಸಿದ ನಮಗೆ ಈ ಕನ್ನಡ ನಾಡಿನ ಋಣ ಎಷ್ಟಿದೆ ಎಂಬುದನ್ನು ನಾವೆಲ್ಲ ಅರಿಯಬೇಕಿದೆ. ನಮ್ಮೆಲ್ಲರ ಕನ್ನಡದ ಬಗೆಗಿನ ಪ್ರೀತಿ ವೇದಿಕೆಯಲ್ಲಿ ಭಾಷಣ ಮಾಡಲು ಮಾತ್ರ ಸೀಮಿತವಾಗಿದೆ.ರಾಜಕಾರಣಿಗಳು ಅಥವಾ ಕನ್ನಡದ ಸಂಘ ಸಂಸ್ಥೆಗಳು ಕನ್ನಡಕ್ಕೆ ಕಿಂಚಿತ್ತು ಸಮಸ್ಯೆಯಾದರೂ ಗಂಭೀರವಾಗಿ ಮಾತನಾಡಲು, ಹೋರಾಟ ಮಾಡಲು ಮುಂದೆ ಬಂದರೂ, ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸಲು ಅವರ ಕೂಡುಗೆ ಸಾಲದು. ಕನ್ನಡ ಮಾಧ್ಯಮ ಶಾಲೆ ಗಟ್ಟಿಗೊಳಿಸದೆ ವಿನಃ ಕನ್ನಡ ಭಾಷೆಗೆ ಭವಿಷ್ಯವಿದೆ ಎಂದು ಹೇಳಲು ತಾನು ಸಿದ್ದನಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಜನರು ಮಾತನಾಡುವ ಭಾಷೆಯಾಗಿ ಸ್ವಲ್ಪ ಸಮಯ ಉಳಿಯಬಹುದೇ ಹೊರತು, ಕನ್ನಡದ ಸಾಹಿತ್ಯ, ಅದರ ಸಾಂಸ್ಕೃತಿಕ ವಿಚಾರವನ್ನು ಸರ್ಯ ಚಂದ್ರರಿರುವಷ್ಟು ಕಾಲ ಮುಂದೆ ಕೊಂಡುಹೋಗಲು ಸಾಧ್ಯವಿಲ್ಲ. ಈ ಶಕ್ತಿ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಸರಕಾರದ 1800 ಪ್ರಾಥಮಿಕ ಶಾಲೆಗಳು ಈ ವರ್ಷ ಮುಚ್ಚಲ್ಪಟ್ಟಿವೆ. 1200ಗಳಷ್ಟು ಶಾಲೆಗಳಲ್ಲಿ ಏಳು ಕ್ಲಾಸುಗಳಿಗೆ ಒಬ್ಬ ಉಪಾಧ್ಯಯರಿರುವುದು ಶೋಷನೀಯ.
ನಮ್ಮ ರಾಜ್ಯದಲ್ಲಿ 2000ನೇ ಇಸವಿಯ ತನಕ ಹತ್ತು ಹಲವು ವಸತಿ ಶಾಲೆಗಳು ಅಂಬೇಡ್ಕರ್ ಶಾಲೆಗಳು, ಮೋರಾರ್ಜಿ ದೇಸಾಯಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳು, ನಾರಾಯಣ ಗುರುವಿನ ಶಾಲೆಗಳು, ಅಬ್ದುಲ್ ಕಲಾಂ ಶಾಲೆಗಳು, ಅಟಲ್ ಬಿಹಾರಿ ವಾಜಪೇಯಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದವು. ತದನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಸುಮಾರು 840 ವಸತಿ ಶಾಲೆಗಳನ್ನು ನಿರ್ಮಿಸಿದವು. ಒಂದು ವಸತಿ ಶಾಲೆಯನ್ನು ನಿರ್ಮಿಸಲು ಕನಿಷ್ಠ 10 ಎಕರೆಯಷ್ಟು ಜಾಗ, 24.5 ಕೋಟಿಯಷ್ಟು ಹಣ, ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸರಿಸುಮಾರು 2 ಲಕ್ಷದಷ್ಟು ಹಣವನ್ನು ವ್ಯಹಿಸುತ್ತಿದೆ. ಒಟ್ಟು 840 ವಸತಿ ಶಾಲೆಗಳ ಮೇಲೆ ಸರಕಾರ ವಾರ್ಷಿಕವಾಗಿ 36 ಸಾವಿರ ಕೋಟಿ ರೂಪಾಯಿಗಳ ಬಜೆಟ್ನ್ನು ಮೀಸಲಿಟ್ಟಿದೆ. ಆದರೆ ಈ ಎಲ್ಲಾ 840 ವಸತಿ ಶಾಲೆಗಳ ಪೈಕಿ ಚಾಮರಾಜಪೇಟೆಯ ಒಂದು ಶಾಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳು ಇಂಗ್ಲೀಷ್ ಮಾಧ್ಯಮ ಶಾಲೆಗಳಾಗಿ ಬದಲಾಗಿರುವುದು ಮಾತ್ರ ದುರಂತವೇ ಸರಿ. ನಾವಿಂದು ಬಡಮಕ್ಕಳಿಗೆ ಕನ್ನಡ ಮಾಧ್ಯಮ, ಸ್ಥಿತಿವಂತರಿಗೆ ಇಂಗ್ಲೀಷ್ ಮಾಧ್ಯಮ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಇದು ಸಲ್ಲದು. ಬುದ್ದಿವಂತಿಕೆಗೆ ಬಾಷೆಯ ತೊಡಕಿಲ್ಲ ಎಂಬುದನ್ನು ಜರ್ಮನಿ, ಜಪಾನ್, ಚೀನಾ, ರಷ್ಯಾ ದೇಶಗಳು ಸಾಬೀತುಪಡಿಸಿವೆ. ಇನ್ನೂ ಮುಂದಾದರೂ ಜಿಲ್ಲೆಗೊಂದರಂತೆ ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಸರಕಾರ ಮುಂದಾಗಬೇಕು. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು 15 ವರ್ಷಗಳ ಹಿಂದೆ ಪ್ರಾರಂಭಿಸಿ ಸದ್ಯ 640 ವಿದ್ಯಾರ್ಥಿಗಳು ಸಂಪೂರ್ಣ ಉಚಿತ ಶಿಕ್ಷಣದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಈ ಶಾಲೆಗಾಗಿ ನಮ್ಮ ಪ್ರತಿಷ್ಠಾನ ಪ್ರತಿ ವಿದ್ಯಾರ್ಥಿಯ ಮೇಲೆ 1.30 ಲಕ್ಷದಂತೆ ಸುಮಾರು 8ಕೋಟಿಯಷ್ಟು ಹಣವನ್ನು ವಿನಿಯೋಗಿಸುತ್ತಿದೆ. ಸರಕಾರ, ಇಲಾಖೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಮಾದರಿಯಾಗಿ ಪರಿಗಣಿಸಿ, ಇದೇ ರೀತಿಯ ಗುಣಾತ್ಮಕ ಶಿಕ್ಷಣವನ್ನು ನೀಡಿದರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಎಂದು ಸೋಲಾಗದು. ನಮ್ಮ ರಾಜ್ಯದಲ್ಲಿರುವ ಹತ್ತು ಹಲವು ಶ್ರೀಮಂತ ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಕಾರ್ಪೋರೇಟ್ ಸಂಸ್ಥೆಗಳು ಆಳ್ವಾಸ್ ಮಾದರಿಯ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಮುಂದೆ ಬರಬೇಕು. ತಮ್ಮ ಸಿಎಸ್ಆರ್ ಫಂಡ್ನ್ನು ಈ ನೆಲೆಯಲ್ಲಿ ವಿನಿಯೋಗಿಸಲು ಮನಸ್ಸು ಮಾಡಬೇಕು. ಈ ಸಂಸ್ಥೆಗಳು ತಮ್ಮ ಸಿಎಸ್ಆರ್ ಫಂಡ್ನ್ನು ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಅಥವಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬಳಸಲು ಮುಂದೆ ಬಂದರೆ ತಾನೇ ಖುದ್ದಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಮಕ್ಕಳಿಗೆ ಈ ಕಾಲಕ್ಕುನುಗುಣವಾದ ಶಿಕ್ಷಣವನ್ನು ನೀಡಲು ಸಿದ್ದ. ಯಾರೇ ಒಬ್ಬ ವ್ಯಕ್ತಿ, ಸಂಘ ಸಂಸ್ಥೆ ಅಥವಾ ಸರಕಾರವಿರಬಹುದು ತನಗೆ ಇಂತಹ ಅವಕಾಶವನ್ನು ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡರೆ, ಅವರ ಹೆಸರಿನಲ್ಲಿ ತನ್ನ ಕ್ಯಾಂಪಸನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಾನು ಉತ್ಸುಕನಾಗಿದ್ದೆನೆ. ಸರಕಾರವು ಬಯಸಿದಲ್ಲಿ ಆಳ್ವಾಸ್ ಕ್ಯಾಂಪಸ್ನಲ್ಲೆ ಒಂದು ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಮುಂದೆ ಬಂದರೆ, ಈ ವರ್ಷದಲ್ಲೆ ಅಂತಹ ಶಾಲೆಯನ್ನು ಪ್ರಾರಂಭಿಸಲು ಸಿದ್ಧ ಎಂದರು. 35ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಯಿತು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ 6ರಿಂದ 9ನೇ ತರಗತಿಯವರೆಗೆ 640ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ಊಟ, ವಸತಿ ವ್ಯವಸ್ಥೆಯಲ್ಲಿ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ. ವಾರ್ಷಿಕ ಈ ವಿದ್ಯಾರ್ಥಿಗಳ ಮೇಲೆ ಸಂಸ್ಥೆ ಸುಮಾರು 8 ಕೋಟಿಯಷ್ಟು ಹಣವನ್ನು ವ್ಯಯಿಸುತ್ತಿದೆ. 6 ರಿಂದ 9ನೇ ತರಗತಿಯವರೆಗಿನ ಪಠ್ಯ ವಿಷಯಗಳು ಮತ್ತು ತಾರ್ಕಿಕ ಸಾಮರ್ಥ್ಯ ಸೇರಿ ಒಟ್ಟು 2 ಗಂಟೆ 30 ನಿಮಿಷದಂತೆ 150 ಅಂಕಗಳಿಗೆ ಪರೀಕ್ಷೆ ನಡೆದಿದೆ. ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಪ್ರತ್ಯೇಕ ಆಯ್ಕೆ ಶಿಬಿರಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
