ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ ಇಳಕಲ್ ಕೆಂಪು ಶಿಲೆಯ ಗರ್ಭಗುಡಿ ಸಹಿತ ಸಂಪೂರ್ಣ ಪುನರ್ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಉಚ್ಚಂಗಿ ಹಾಗೂ ಸ್ವರ್ಣ ಗದ್ದುಗೆಯಲ್ಲಿ ಕಾಪು ಶ್ರೀ ಮಾರಿಯಮ್ಮನ ಪುನರ್ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ರತ್ನ ಖಚಿತ ಸ್ವರ್ಣ ಗದ್ದುಗೆಯಲ್ಲಿ ಕಾಪು ಶ್ರೀ ಮಾರಿಯಮ್ಮ ವಿರಾಜ ಮಾನಳಾಗುವುದರೊಂದಿಗೆ ಕಾಪು ಮಾರಿಯಮ್ಮನ ಕ್ಷೇತ್ರದಲ್ಲಿ ಸ್ವರ್ಣ ಯುಗ ಆರಂಭಗೊಂಡಿತು. ಕೊರಂಗ್ರಪಾಡಿ ವೇದಮೂರ್ತಿ ಕೆ.ಜಿ. ರಾಘವೇಂದ್ರ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿಗಳಾದ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಆರ್ಚಕ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿ ಹಾಗೂ ವೈದಿಕ ವೃಂದದವರು ಬೆಳಗ್ಗೆ 11.05ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಭಕ್ತಾದಿಗಳ ಸ್ವರ್ಣ ಕಾಣಿಕೆಯ ಮೂಲಕ ನಿರ್ಮಾಣಗೊಂಡಿರುವ ಸುಮಾರು 15 ಕೋಟಿ ರೂ. ವೆಚ್ಚದ ರತ್ನ ಖಚಿತ ಸ್ವರ್ಣಗದ್ದಿಗೆ (ಮಹಾಸ್ವರ್ಣಪೀಠ)ಯಲ್ಲಿ ಶ್ರೀ ಮಾರಿಯಮ್ಮನನ್ನು ಪುನರ್ ಸ್ಥಾಪಿಸಲಾಯಿತು.ಇದಕ್ಕೂ ಮೊದಲು ಬಾಲಾಲಯ ತೆರವುಗೊಳಿಸಿ ಉಚ್ಚಂಗಿ ಸಹಿತ ಮಾರಿಯಮ್ಮನನ್ನು ನೂತನ ದೇವಾಲಯ ಪ್ರಾಂಗಣದ ಯಜ್ಞ ಮಂಟಪದಲ್ಲಿ ಪವಡಿಸಿ ಶಯನ ಪೂಜೆ ನೆರವೇರಿಸಲಾಯಿತು. ಬಳಿಕ ಉಚ್ಚಂಗಿ ಸಹಿತ ಮಾರಿಯಮ್ಮನನ್ನು ದೇವಾಲಯ ಪ್ರವೇಶಿಸಿ ಮೊದಲು ಉಚ್ಚಂಗಿ ಪ್ರತಿಷ್ಠೆ ನಡೆಸಲಾಯಿತು. ಬಳಿಕ ವ್ಯಾಸ್ತಾಂಗ ಸಮಸ್ತನಾಸ್ಯ ಪೂರ್ವಕ ಮಾರಿಯಮ್ಮನ ಪ್ರತಿಷ್ಠೆ ನೆರವೇರಿಸಲಾಯಿತು. ಬೆಳಿಗ್ಗೆ 8:00 ಗಂಟೆಯಿಂದ ನಿದ್ರಾಕಲಶಾಭಿಷೇಕ, ಜೀವಕುಂಭಾಭಿಷೇಕ, ಮಹಾಪೂಜಾ, ಪ್ರತಿಜ್ಞಾವಿಧಿ ಆಚಾರ್ಯದಕ್ಷಿಣಾ ಇತ್ಯಾದಿ ವಿಧಿಗಳನ್ನು ನೆರವೇರಿಸಲಾಯಿತು. ಬೆಳಿಗ್ಗೆ 8:00 ಗಂಟೆಯಿಂದ ಹೇರಂಭ ಗಣಪತಿ ಮಂತ್ರಯಾಗ, ಪ್ರತಿಷ್ಠಾಪನಾಂಗ ಪ್ರತ್ಯಕ್ಷ ಗೋದಾನ, ಮೇಧಾಸಾಮ್ರಾಜ್ಯ ಪ್ರದಕಾಳೀ ಸಹಸ್ರನಾಮ ಯಾಗ, ಮಧುರಪ್ರದ ಮಧುರಫಲ ಚಂಡೀಯಾಗ, ಪಂಚದುರ್ಗಾಮಂತ್ರ ಯಾಗ, ಆವಹಂತೀ ಸೂಕ್ತಯಾಗ, ವಾಗಂಬ್ರಿಣೀಸೂಕ್ತ ಯಾಗ, ಪ್ರಾಸಾದ ಪ್ರತಿಷ್ಠಾ ಜೀವಕುಂಭೋ ತ್ಥಾಪನ ಅನುಷ್ಠಾನಗಳು ಜರುಗಿದವು.
ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಸ್ವರ್ಣ ಗದ್ದುಗೆ ಸಮಿತಿ ಅಧ್ಯಕ್ಷ ರವಿ ಸುಂದರ್ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಕೋತ್ವಾಲಗುತ್ತು, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಧವ ಆರ್. ಪಾಲನ್, ಮನೋಹರ್ ಎಸ್. ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ರವಿಕಿರಣ್, ಉದಯ ಸುಂದರ್ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ, ಭಗವಾನ್ ದಾಸ್ ಶೆಟ್ಟಿಗಾರ್, ಸುಹಾಸ್ ಹೆಗ್ಡೆ ನಂದಳಿಕೆ, ಅರುಣ್ ಶೆಟ್ಟಿ ಪಾದೂರು, ಕೋಶಾಧಿಕಾರಿ ಸುದೇಶ್ ರೈ, ಬೀನಾ ವಾಸುದೇವ ಶೆಟ್ಟಿ, ಶೇಖರ್ ಸಾಲ್ಯಾನ್, ಮನೋಹರ್ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ, ಕೆ. ಚಂದ್ರಶೇಖರ್ ಅಮೀನ್, ನಿರ್ಮಲ್ ಕುಮಾರ್ ಹೆಗ್ಡೆ, ಬಿ.ಕೆ. ಶ್ರೀನಿವಾಸ್, ಜಗದೀಶ್ ಬಂಗೇರ, ರೇಣುಕಾ ಧನಂಜಯ, ರತ್ನಾಕರ ಹೆಗ್ಡೆ ಕಲಿಲಬೀಡು, ಕೆ. ರತ್ನಾಕರ್ ಶೆಟ್ಟಿ, ವಿದ್ಯಾಧರ ಪುರಾಣಿಕ್ ರಾಜೇಶ್ ಕಾಂಚನ್ ಉಪಸ್ಥಿತರಿದ್ದರು.
