ಪಾಪಯ್ಯ ಬಟ್ಟೆಗಳ ವ್ಯಾಪಾರಿ, ಪರಮಲೋಭಿ, ಹಣ ಸಂಪಾದಿಸಲು ನಿದ್ರಾಹಾರಗಳನ್ನು ಬಿಟ್ಟಾದರೂ ಹಣ ಸಂಪಾದಿಸುತ್ತಾನೆ. ಭಿಕ್ಷುಕನಿಗೆ ಮಾತ್ರವಲ್ಲ ಬೆಕ್ಕಿಗೂ ನಾಲ್ಕು ಅಗಳು ಅನ್ನ ಹಾಕಲು ಆತನ ಮನಸ್ಸು ಸುತರಾಂ ಒಪ್ಪುವುದೇ ಇಲ್ಲ. ಹಣ ಖರ್ಚು ಮಾಡಬೇಕಾಗಿ ಬಂದರೆ ಸಿಡಿಮಿಡಿಗೊಳ್ಳುತ್ತಾನೆ. ಮುಖ್ಯವಾಗಿ ಯಾರ ಮನೆಗಾದರೂ ಶುಭ ಕಾರ್ಯಕ್ಕೆ ಕರೆದರೆ ಅವರು ಎಷ್ಟೇ ಸಮೀಪದವರಾಗಿರಲಿ ಅವರಿಗೆ ಕಾಣಿಕೆ ಕೊಡಬೇಕಾಗಿ ಬರುವುದೆಂದು ಯಾವುದೋ ಒಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದನು.
ಒಂದು ದಿನ ಆ ಊರಿನ ಜಮೀಂದಾರ್ ಮಗನ ಮದುವೆ ನಿಶ್ಚಯವಾಯಿತು. ಜಮೀಂದಾರ್ ಆಗಿರುವುದರಿಂದ ಎಲ್ಲರೂ ಭಾರಿ ಕಾಣಿಕೆಗಳನ್ನು ಕೊಡಬೇಕೆಂದು ನಿಶ್ಚಯಿಸಿಕೊಂಡರು. ಎಲ್ಲರಿಗೂ ಬಂದ ಹಾಗೆ ಪಾಪಯ್ಯನಿಗೂ ಆಹ್ವಾನ ಪತ್ರಿಕೆ ಬಂತು. ಅದನ್ನು ನೋಡುತ್ತಲೇ ಪಾಪಯ್ಯ ದಿಗಿಲಿನಿಂದ ಕುಗ್ಗಿ ಹೋದನು. ತಾನು ಕಾಣಿಕೆ ಕೊಡದೆ ಮದುವೆಗೆ ಹೋಗಬೇಕೆಂದು ಆಲೋಚಿಸಲು ಆರಂಭಿಸಿದನು. ಕಡೆಗೆ ಒಂದು ಗುಂಡಿಗೆ ಶತಾಬ್ಬಿ ಎಕ್ಸ್ಪ್ರೆಸ್ನಂತೆ ಜೋರಾಗಿ ಹೊಡೆದುಕೊಂಡಿತು. ಎಲ್ಲರೂ ಮದುವೆಗೆ ಹೋಗುತ್ತಾರೆ. ತಾನು ಹೋಗದಿದ್ದರೆ ಜಮಿಂದಾರರ ದೃಷ್ಟಿಯಲ್ಲಿ ತಾನು ಕೀಳಾಗಿ ಬಿಡುತ್ತೇನೆ. ತನ್ನ ಮೇಲಿನ ಗೌರವ ಕಡಿಮೆ ಆಗಿ ಬಿಡುತ್ತದೆ ಎಂದು ಯೋಚಿಸತೊಡಗಿದನು. ಎಲ್ಲರೂ ಜಮೀಂದಾರರ ಮೇಲಿರುವ ಗೌರವದಿಂದ ಬೆಲೆ ಬಾಳುವ ಕಾಣಿಕೆಗಳನ್ನು ಕೊಳ್ಳುತ್ತಿದ್ದರು.
ಪಾಪಯ್ಯ ದಿಗಿಲಿನಿಂದ ಕುಗ್ಗಿ ಹೋದನು. ತಾನು ಕಾಣಿಕೆ ಕೊಡದೆ ಮದುವೆಗೆ ಹೋಗಬೇಕೆಂದು ಆಲೋಚಿಸಲು ಆರಂಭಿಸಿದನು. ಕಡೆಗೆ ಒಂದು ಉಪಾಯ ತೋರಿತು. ಮದುವೆಗೆ ತುಂಬ ಜನ ಬರುತ್ತಾರೆ. ಆ ಗಡಿಬಿಡಿಯಲ್ಲಿ ಯಾರು ಯಾವ ಕಾಣಿಕೆ ತಂದಿದ್ದಾರೆಂದು ತಿಳಿಯುವುದಿಲ್ಲ. ಅದರ ಬಗ್ಗೆ ಲಕ್ಷ್ಯ ಕೊಡುವುದೂ ಇಲ್ಲ. ಅದರಿಂದ ತನ್ನ ಸ್ನೇಹಿತ ರಾಮಯ್ಯ ಹೇಗೂ ಮದುವೆಗೆ ಕಾಣಿಕೆ ಕೊಂಡುಕೊಂಡೇ ಇರುತ್ತಾನೆ. ಆ ಕಾಣಿಕೆಯೊಂದಿಗೆ ತನಗೆ ತೋಚಿದ ಯಾವುದಾದರೂ ಚಿಕ್ಕ ವಸ್ತುವನ್ನು ಕಾಣಿಕೆಯಾಗಿಟ್ಟು ಇಬ್ಬರದ್ದೂ ಸೇರಿಸಿ ಒಂದು ಪೆಟ್ಟಿಗೆಯಲ್ಲಿಟ್ಟು, ಮೇಲೆ ಇಬ್ಬರದ್ದೂ ಸೇರಿಸಿಕೊಂಡು ಪೆಟ್ಟಿಗೆಯಲ್ಲಿಟ್ಟು, ಮೇಲೆ ಇಬ್ಬರ ಹೆಸರು ಬರೆದು ಕೊಡಬೇಕೆಂದುಕೊಂಡನು.
ಅಂದುಕೊಂಡ ಹಾಗೇನೇ ರಾಮಯ್ಯನ ಹತ್ತಿರ ಹೋಗಿ ಕೇಳಿದನು. ಅದಕ್ಕೆ ಆತನು “ಜಮೀಂದಾರರು ನನ್ನನ್ನು ಮುಂಚಿತವಾಗಿಯೇ ಬಂದು ಮದುವೆ ಕೆಲಸಗಳನ್ನು ನೋಡಿಕೊಳ್ಳಲು ಹೇಳಿದ್ದಾರೆ. ಅದರಿಂದ ನಾನು ಮೊದಲೇ ಹೋಗುತ್ತೇನೆ. ನೀನು ನಮ್ಮಿಬ್ಬರ ಕಾಣಿಕೆಗಳನ್ನು ಸೇರಿಸಿ ತೆಗೆದುಕೊಂಡು ಬಾ” ಎಂದನು.
ಪಾಪಯ್ಯ ಮನೆಗೆ ಬಂದು ರಾಮಯ್ಯ ಕೊಟ್ಟ ಕಾಣಿಕೆ ಪೆಟ್ಟಿಗೆಯನ್ನು ತೆರೆದು ನೋಡಿದನು. ಅದರಲ್ಲಿ ಅಮೃತ ಶಿಲೆಯಿಂದ ಮಾಡಿದ ಕೃಷ್ಣನ ವಿಗ್ರಹವಿತ್ತು. ಅಷ್ಟರಲ್ಲಿ ಪಾಪಯ್ಯನ ಚಿಕ್ಕ ಮಗ ಓಡುತ್ತಾ ಬಂದು “ಬೊಂಬೆ ತುಂಬ ಚೆನ್ನಾಗಿದೆ. ನಾನು ಆಡಿಕೊಳ್ಳುತ್ತೇನೆ” ಎಂದು ಕೇಳಿದನು. ಪಾಪಯ್ಯನ ಮಗುವಿನೊಂದಿಗೆ “ಇದು ನಮ್ಮ ವಸ್ತು ಅಲ್ಲ, ಇದರೊಂದಿಗೆ ಆಡಿಕೊಳ್ಳುವಾಗ ಕೈ ಜಾರಿ ಕೆಳಗೆ ಬಿದ್ದರೆ ಮುರಿದು ಹೋಗುತ್ತದೆ. ನಾನು ಹೊಸ ಬೊಂಬೆಯನ್ನು ತೆಗೆದು ಕೊಡುತ್ತೇನೆ” ಎಂದನು.
ಆದರೂ ಮಗು ಕೇಳದೆ, ಪಾಪಯ್ಯನ ಕೈಯಲ್ಲಿರುವ ಬೊಂಬೆಯನ್ನು ಕಿತ್ತುಕೊಂಡು ಪಕ್ಕದ ರೂಮಿಗೆ ಓಡಿ ಹೋಯಿತು. ಬೊಂಬೆ ಎಲ್ಲಿ ಮುರಿದು ಹೋಗುವುದೋ ಎಂಬ ಭಯದಿಂದ ಪಾಪಯ್ಯ ರೂಮಿಗೆ ಹೋಗಿ ಮಗುವನ್ನು ಮುದ್ದಿಸಿ, ಮತ್ತೆ ಎಲ್ಲಿ ಕೇಳುತ್ತಾನೋ ಎಂಬ ಭಯದಿಂದ ಮೆಲ್ಲನೆ ಬೊಂಬೆಯನ್ನು ತೆಗೆದುಕೊಂಡು ಬೇಗ ಬೇಗ ಪೆಟ್ಟಿಗೆಯಲ್ಲಿಟ್ಟು ಅದರ ಸುತ್ತಲೂ ಹುಲ್ಲನ್ನು ಹರಡಿ, ಮೇಲೆ ಬಣ್ಣದ ಕಾಗದಗಳಿಂದ ಅಲಂಕರಿಸಿ, ಅದರ ಮೇಲೆ ಪಾಪಯ್ಯ ರಾಮಯ್ಯ ಎಂದು ಇಬ್ಬರ ಹೆಸರು ಬರೆದು ಮದುವೆಗೆ ಹೊರಟನು. ಮದುವೆಯಲ್ಲಿ ತಾನು ಈ ಕಾಣಿಕೆ ತಂದಿರುವೆನೆಂದು ಅಂದುಕೊಳ್ಳಬೇಕೆಂದು ಅಲ್ಲೆಲ್ಲಾ ಎದೆ ಸೆಟೆದು ನಡೆಯುತ್ತಿದ್ದನು. ತಾನು ಯಾವ ಕಾಣಿಕೆಯನ್ನು ಕೊಡಲಿಲ್ಲವೆಂದು ಮನಸ್ಸಿನಲ್ಲೇ ಸಂತೋಷಿಸಿದನು.
ಪಾಪಯ್ಯನ ಜಿಪುಣತನ ತಿಳಿದ ಕೆಲವರು “ಒಳಗೆ ಯಾವುದೋ ಚಿಕ್ಕ ವಸ್ತುವಿರಬೇಕು. ಆದರೆ ದೊಡ್ಡದಾಗಿ ಪೋಸ್ ಕೊಡುತ್ತಿದ್ದಾನೆ. ಜಿಪುಣಾ ಗ್ರೇಸರ ಇವನು ಭಾರಿಯಾಗಿ ಏನು ಕೊಡುವುದಿಲ್ಲ” ಎಂದು ಅಂದುಕೊಂಡರು. ಮತ್ತೆ ಕೆಲವರು ಮಾತ್ರ “ಜಮೀಂದಾರರ ಮೇಲಿರುವ ಗೌರವದಿಂದ ಬೆಲೆ ಬಾಳುವ ಕಾಣಿಕೆ ತಂದಿರಹುದು” ಎಂದು ಅಂದುಕೊಂಡರು. ಕಾಣಿಕೆ ಅರ್ಪಿಸುವ ಸಮಯದಲ್ಲಿ ಎಲ್ಲರಿಗಿಂತಲೂ ಮೊದಲು ಹೋಗಿ ತನ್ನ ಹೆಸರು, ಸ್ನೇಹಿತ ರಾಮಯ್ಯನ ಹೆಸರು ಇರುವ ಪೆಟ್ಟಿಗೆಯನ್ನು ಕೊಟ್ಟನು ಪಾಪಯ್ಯ.
ಜಮೀಂದಾರರ ಗುಮಾಸ್ತ ಯಾರ ಯಾರ ಹೆಸರಿನಲ್ಲಿ ಏನೇನು ಕಾಣಿಕೆಗಳು ಬಂದಿದೆ ಎಂದು ತಿಳಿದುಕೊಳ್ಳಲು ಪೆಟ್ಟಿಗೆಗಳನ್ನೆಲ್ಲಾ ಬಿಚ್ಚಿತೊಡಗಿದನು. ಅದನ್ನು ಗಮನಿಸಿದ ಪಾಪಯ್ಯನ ಗುಂಡಿಗೆ ವೇಗವಾಗಿ ಹೊಡೆದುಕೊಳ್ಳಲು ಆರಂಭಿಸಿತು. ಆದರೆ ಪೆಟ್ಟಿಗೆಯನ್ನು ಪೂರ್ತಿಯಾಗಿ ಬಿಚ್ಚಿದ ಮೇಲೆ ಪಾಪಯ್ಯನ ಗುಂಡಿಗೆ ಹಠಾತ್ತನೆ ನಿಂತಂತಾಯಿತು. ಆ ಸಮಯಕ್ಕೆ ರಾಮಯ್ಯ ಸಹ ಅಲ್ಲಿಗೆ ಬಂದನು. ಗುಮಾಸ್ತ ಪೆಟ್ಟಿಗೆಯಿಂದ ಅಮೃತ ಶಿಲೆಯ ಕೃಷ್ಣನ ಬೊಂಬೆ ತೆಗೆದನು. ಬೊಂಬೆಯ ಕೊರಳಲ್ಲಿ ತಳತಳನೆ ಹೊಳೆಯುತ್ತಿರುವ ಚಿನ್ನದ ಸರ ಇದೆ. ರಾಮಯ್ಯ ಗುಮಾಸ್ತೆಯೊಂದಿಗೆ “ಆ ಅಮೃತ ಶಿಲೆಯ ಕೃಷ್ಣ ನನ್ನ ಕಾಣಿಕೆ, ಆ ಚಿನ್ನದ ಸರ ಪಾಪಯ್ಯನ ಕಾಣಿಕೆ” ಎಂದು ಹೇಳಿದನು. ಆಗ ಪಾಪಯ್ಯ ಕೆಂಡ ತುಳಿದವನಂತೆ ಬೆಚ್ಚಿದನು. ಆ ಮಾಲೆಯನ್ನು ನೋಡಿ ಆತನ ಮುಖದಲ್ಲಿ ರಕ್ತ ಬತ್ತಿ ಹೋಯಿತು. ಅದು ತನ್ನ ಮಗನ ಕುತ್ತಿಗೆಯಲ್ಲಿದ್ದ ಚಿನ್ನದ ಸರ. ಬೊಂಬೆಯೊಂದಿಗೆ ಆಡಿಕೊಳ್ಳುತ್ತಿರುವಾಗ ಆ ಸರವನ್ನು ತೆಗೆದು ವಿಗ್ರಹಕ್ಕೆ ಹಾಕಿರಬೇಕು. ತಾನು ಭಯ, ಗಡಿಬಿಡಿ, ಆತುರಗಳಲ್ಲಿ ಆ ಬೊಂಬೆಯನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟು ಹುಲ್ಲು ಮುಚ್ಚಿ, ಬಣ್ಣ ಬಣ್ಣದ ಕಾಗದಗಳೊಂದಿಗೆ ಸುತ್ತಿ ಅಲಂಕರಿಸಿಬಿಟ್ಟಿದ್ದಾನೆ. “ಅಯ್ಯೋ! ಎಂತಹ ಮನೆ ಹಾಳು ಕೆಲಸವಾಯಿತು. ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿತಲ್ಲಾ” ಎಂದು ಮಮ್ಮಲ ಮರುಗಿದನು.
ಸರವನ್ನು ನೋಡಿದವರೆಲ್ಲರೂ “ಆಹಾ! ಚಿನ್ನದ ಸರವನ್ನು ಕಾಣಿಕೆಯಾಗಿ ಕೊಟ್ಟಿದ್ದಾನೆಂದರೆ ಪಾಪಯ್ಯನಿಗೆ ಜಮೀಂದಾರರ ಮೇಲೆ ಅದೆಷ್ಟು ಅಭಿಮಾನ ಗೌರವ ಇರಬೇಕು. ನಿಜವಾಗಿ ಪಾಪಯ್ಯನಲ್ಲಿ ಬದಲಾವಣೆ ಬಂದಿದೆ. ನಮ್ಮ ಎಲ್ಲರ ಕಾಣಿಕೆಗಳಿಗಿಂತಲೂ ಬೆಲೆ ಬಾಳುವ ಕಾಣಿಕೆ ಕೊಟ್ಟು ನಮ್ಮೆಲ್ಲರನ್ನು ಮಿಂಚಿ ನಿಂತಿದ್ದಾನೆ” ಎಂದುಕೊಂಡರು. ಪಾಪಯ್ಯನಿಗೆ ಏನು ಹೇಳಬೇಕೆಂದು ತೋರದೆ ಪೆಚ್ಚಾಗಿ ನಕ್ಕನು. ರಾಮಯ್ಯನ ಪಕ್ಕದಲ್ಲಿ ಜೀವಂತ ಹೆಣದಂತೆ ನಿಂತಿದ್ದನು. ಜಮೀಂದಾರರು ಬಂದು ಮೆಚ್ಚಿಗೆಯಿಂದ ಪಾಪಯ್ಯನ ಬೆನ್ನು ತಟ್ಟಿ ಆತನ ಕಾಣಿಕೆಯನ್ನು ಹೊಗಳಿ ಹೊರಟು ಹೋದರು. ಪಾಪಯ್ಯನಿಗೆ ಗುಂಡಿಗೆ ಬಾಯಿಗೆ ಬಂದಾಯಿತು. ಅಳಲಾರದೆ ನಗುತ್ತಿದ್ದನು. ಪಾಪಯ್ಯನಿಗೆ ಸಂಕಟ ಅಲ್ಲಿ ಯಾರಿಗೂ ತಿಳಿಯಲಿಲ್ಲ. ಆದರೆ ಸ್ವತಃ ಜಮೀಂದಾರರೇ ಮೆಚ್ಚಿ ಹೊಗಳಿದರೂ ಪಾಪಯ್ಯನ ಸಂತೋಷಿಸದೇ ಚಿಂತಿಸುತ್ತಾ ನಿಂತಿರುವನಲ್ಲಾ ಏಕೆ ಎಂದು ಯಾರಿಗೂ ಅರ್ಥವಾಗಲಿಲ್ಲ.