ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಶ್ರೀಮತಿ ಸವಿತಾ ಅರುಣ್ ಶೆಟ್ಟಿಯವರು ಮಂಡಿಸಿರುವ ಸಂಶೋಧನಾತ್ಮಕ ಪ್ರಬಂಧ “ಬೆಳಕಿಂಡಿ”. ಇದು ಖ್ಯಾತ ಸಾಹಿತಿ ಶ್ರೀಮತಿ ಮಿತ್ರಾ ವೆಂಕಟ್ರಾಜ್ ರವರ ಬದುಕು, ಬರಹಗಳ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಕೃಷಿಯ ಸಮೃದ್ಧ ಮಾಹಿತಿ ನೀಡುವ ಕೃತಿ. ಓದಿ ಅಭಿಪ್ರಾಯ ಬರೆಯಲು ತಡವಾದುದಕ್ಕೆ ವಿಷಾದಿಸುತ್ತೇನೆ. ಉತ್ಕೃಷ್ಟ ಕನ್ನಡದಲ್ಲಿ ಸೊಗಸಾಗಿ ರಚಿಸಿದ ಸಾಹಿತ್ಯಾವಲೋಕನದ ಈ ಕೃತಿ ಸವಿತಾರವರ ಅಪ್ರತಿಮ ಪ್ರತಿಭೆಗೆ ಹಿಡಿದ ಕನ್ನಡಿ.
ಆಧುನಿಕ ಕನ್ನಡ ಸಾಹಿತ್ಯದ ಪ್ರಸಿದ್ಧ ಮಹಿಳಾ ಕತೆಗಾರರಲ್ಲಿ ಮಿತ್ರಾ ವೆಂಕಟ್ರಾಜ್ ರವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಹೊರನಾಡು ಮುಂಬೈನಲ್ಲಿ ವಾಸವಿದ್ದರೂ ಹಳ್ಳಿಯ ಮತ್ತು ನಗರ ಜೀವನದ ಬದುಕು ಬವಣೆಗಳನ್ನು ಕಂಡು ಅನುಭವಿಸಿ ಅದನ್ನು ಕತೆಯಾಗಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು ಮಿತ್ರಾ ವೆಂಕಟ್ರಾಜ್ ರವರು. ಇವರು ಬರೆದಿರುವ ಕಥಾ ಸಂಕಲನಗಳಾದ “ರುಕುಮಾಯಿ”, “ಹಕ್ಕಿ ಮತ್ತು ಅವಳು” ಹಾಗೂ “ಮಾಯಕದ ಸತ್ಯ” ಅಲ್ಲದೆ ಅನೇಕ ಪತ್ರಿಕೆ, ಸಾಪ್ತಾಹಿಕಗಳಿಗೆ ಬರೆದ ಮಿನಿ ಕತೆಗಳ ಗುಚ್ಛವನ್ನೂ ಹೊರ ತಂದಿದ್ದಾರೆ. ಸಣ್ಣ ಕತೆಗಳಲ್ಲದೆ ಮೂರು ತಲೆಮಾರುಗಳ ವಸ್ತುವನ್ನು ಹೊಂದಿರುವ, ಸ್ವಾತಂತ್ರ್ಯ ಪೂರ್ವದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಿನ್ನೆಲೆಯುಳ್ಳ “ಪಾಚಿ ಕಟ್ಟಿದ ಪಾಗಾರ” ಎಂಬ ಬೃಹತ್ ಕಾದಂಬರಿಯನ್ನೂ ರಚಿಸಿದ್ದಾರೆ. ಇವರ ಸಾಹಿತ್ಯ ಕೃತಿಗಳಿಗೆ ಅನೇಕ ಪ್ರಶಸ್ತಿ, ಸನ್ಮಾನಗಳು ಲಭಿಸಿವೆ.
ಬೆಳಕಿಂಡಿ ಕೃತಿಯಲ್ಲಿ ಲೇಖಕಿ ಸವಿತಾರವರು ಮಿತ್ರಾರವರ ಬರಹಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಅವರ ಮೂರು ಕಥಾ ಸಂಕಲನಗಳಲ್ಲಿ ಬರುವ ಪ್ರತಿ ಕತೆಗಳನ್ನೂ ವಿಶ್ಲೇಷಣೆ ಮಾಡಿದ್ದಲ್ಲದೆ ಅವರ ಏಕೈಕ ಕಾದಂಬರಿ ‘ಪಾಚಿ ಕಟ್ಟಿದ ಪಾಗಾರ’ದಲ್ಲಿ ಚಿತ್ರಿತವಾದ ಪ್ರಧಾನ ಪಾತ್ರಗಳ ಮೇಲೂ ಬೆಳಕನ್ನು ಚೆಲ್ಲಿದ್ದಾರೆ.
ಪ್ರಸ್ತುತ ಪ್ರಬಂಧದಲ್ಲಿ ಲೇಖಕಿ ಸಣ್ಣ ಕತೆಗಳೆಂದರೇನು, ಸಣ್ಣ ಕತೆಗಳ ಬಗ್ಗೆ ವಿವಿಧ ಲೇಖಕರ ಅಭಿಪ್ರಾಯ, ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆಗಳ ಉಗಮ ಮತ್ತು ಅದು ಬೆಳೆದು ಬಂದ ರೀತಿ ಮುಂತಾದ ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ಮುಂದಿನ ಅಧ್ಯಾಯಗಳಲ್ಲಿ ಮಿತ್ರಾ ವೆಂಕಟ್ರಾಜ್ ರವರ ಮೂರು ಕಥಾ ಸಂಕಲನಗಳಲ್ಲಿ ಅಡಕವಾದ ಕತೆಗಳ ಕಿರು ಪರಿಚಯ; ಅವರು ಬರೆದ ಏಕೈಕ ಕಾದಂಬರಿಯ ವಸ್ತು ಮತ್ತು ಅದರಲ್ಲಿ ಬರುವ ಪ್ರಧಾನ ಪಾತ್ರಗಳ ಸ್ವಭಾವಗಳನ್ನು ವಿಶ್ಲೇಷಣೆ ಮಾಡುವುದರೊಂದಿಗೆ ಇತರ ಸಾಹಿತಿಗಳ ಅಭಿಪ್ರಾಯಗಳನ್ನೂ ಉಲ್ಲೇಖಿಸಿದ್ದಾರೆ. ಮಿತ್ರಾರವರು ತಮ್ಮ ಕತೆಗಳಲ್ಲಿ ಸಂದರ್ಭಾನುಸಾರ ಬಳಸಿದ ಕುಂದಗನ್ನಡ, ತುಳು ಗಾದೆಗಳು, ಅವರ ನಿರೂಪಣಾ ಶೈಲಿ, ಸ್ತ್ರೀ ಸಂವೇದನೆಯ ಕಥಾವಸ್ತು ಎಲ್ಲವನ್ನೂ ವಿವರಿಸುವುದರಲ್ಲಿ ಲೇಖಕಿ ಇಲ್ಲಿ ಯಶಸ್ವಿಯಾಗಿದ್ದಾರೆ.
ಮಿತ್ರಾ ವೆಂಕಟ್ರಾಜ್ ರವರ ಸಾಹಿತ್ಯಾವಲೋಕನ ಮಾಡುವ ಈ ಪುಸ್ತಕ ಓದುಗರಿಗೆ ಅವರ ಸಮಗ್ರ ಬರಹಗಳ ಮೇಲೆ ಬೆಳಕು ಬೀರುವ ಕಿಂಡಿಯಂತಿದೆ. ಆದ್ದರಿಂದ ಈ ಪುಸ್ತಕಕ್ಕೆ ಬೆಳಕಿಂಡಿ ಎಂಬ ಅನ್ವರ್ಥ ನಾಮದ ಶೀರ್ಷಿಕೆ ಚೆನ್ನಾಗಿ ಒಪ್ಪುತ್ತದೆ. ಡಾ| ಮಮತಾ ರಾವ್ ಅವರ ಸೊಗಸಾದ ಮುನ್ನುಡಿ, ಸಾಹಿತಿ ಜಯಂತ್ ಕಾಯ್ಕಿಣಿಯವರ ನುಡಿ ಸೇಸೆ ಪುಸ್ತಕಕ್ಕೆ ಹೊನ್ನ ಗರಿ ಮೂಡಿಸಿದೆ. ಲೇಖಕಿ ಸವಿತಾ ಅರುಣ್ ಶೆಟ್ಟಿಯವರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಹಾರೈಸಿ ಅಭಿನಂದಿಸುತ್ತೇನೆ.
ಮಹಾಬಲ ಆಳ್ವ ಮಡಿಮೊಗರ್