‘ಮನೆಗೊಂದು ಗ್ರಂಥಾಲಯ’ ಪರಿಕಲ್ಪನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಮನೆಯಲ್ಲಿ ಪುಸ್ತಕಾಲಯವೊಂದನ್ನು ತೆರೆದಿದೆ. ನಾಡಿನ ದೊರೆಯ ಮನೆಯಲ್ಲಿ ಈಗ ಕನ್ನಡದ 500 ಪುಸ್ತಕಗಳು ತುಂಬಿವೆ. ತುಳು ಸಾಹಿತ್ಯ ಅಕಾಡೆಮಿ ಕೂಡಾ ವಾಚನಾಭಿರುಚಿಯನ್ನು ವೃದ್ಧಿಸುವ ಸದಾಶಯದಿಂದ ಇಂಥದ್ದೇ ಒಂದು ಕಾರ್ಯಕ್ರಮವನ್ನು ಇತ್ತೀಚಿಗೆ ಆರಂಭಿಸಿದಾಗ ಉಪಸ್ಥಿತರಿದ್ದ ಪುತ್ತೂರಿನ ಶಾಸಕರು ಹತ್ತು ಸಾವಿರ ಮೊತ್ತದ ತುಳು ಪುಸ್ತಕವನ್ನು ಖರೀದಿಸಿದ್ದು ದೊಡ್ಡ ಸುದ್ದಿಯಾಯಿತು. ತಮ್ಮ ಮನೆಯೊಳಗಡೆಯೇ ಕನ್ನಡ ಪುಸ್ತಕಗಳನ್ನು ಎದೆಗೇರಿಸಿ ವಾಚನಾಲಯವನ್ನು ಉದ್ಘಾಟಿಸಿದ್ದ ಈ ನಾಡಿನ ಮುಖ್ಯಮಂತ್ರಿಗಳು ಒಂದು ವಿಷಯವನ್ನು ಗಮನಿಸಬೇಕು. ಸಾಹಿತ್ಯ ಸಂಸ್ಕೃತಿ ವ್ಯಾಕರಣ ಕಲೆ ನೆಲಪ್ರೀತಿಯನ್ನು ಆಗಾಗ ಬಹಿರಂಗವಾಗಿಯೇ ವ್ಯಕ್ತಪಡಿಸುವ ಮತ್ತು ಆ ಪರವಾಗಿ ಇದ್ದೇನೆ ಎಂದು ತೋರಿಸಿಕೊಳ್ಳುವ ಮುಖ್ಯಮಂತ್ರಿಗಳು ಕಳೆದ ಮೂರು ವರ್ಷಗಳಿಂದ ಪುಸ್ತಕ ಖರೀದಿ ಯಾಕೆ ಸ್ಥಗಿತಗೊಂಡಿದೆ ಎಂಬ ವಿಷಯವನ್ನು ಪ್ರಾಸ್ತಾಪಿಸಿ, ಬೆಂಬಲವಾಗಿ ನಿಲ್ಲುವ ಭರವಸೆ ನೀಡಬೇಕಾಗಿತ್ತು. ಇವು ಯಾವುದನ್ನೂ ಮುಖ್ಯಮಂತ್ರಿಗಳು ಆ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದಂತಿಲ್ಲ. ಯಾವ ಪತ್ರಿಕೆಗಳಲ್ಲೂ ಇಂಥ ಭರವಸೆ ವರದಿಯಾದುದನ್ನು ನಾನು ಕಂಡಿಲ್ಲ.
ಕನ್ನಡ ಪುಸ್ತಕೋದ್ಯಮವನ್ನು ವಿಸ್ತರಿಸುವ, ಸ್ಥಿರಗೊಳಿಸುವ, ಹಂಚುವ ಕೆಲಸಗಳನ್ನು ಪ್ರಭುತ್ವ ಸಂಬಂಧೀ ಅಕಾಡೆಮಿ, ಪ್ರಾಧಿಕಾರ, ಪರಿಷತ್ತು, ಸಾಂಸ್ಕೃತಿಕ ಇಲಾಖೆಗಳಿಗಿಂತ ಇತ್ತೀಚೆಗೆ ಕರ್ನಾಟಕದ ಖಾಸಗಿ ಪುಸ್ತಕ ಪ್ರಕಾಶನಗಳು ಗಂಭೀರವಾಗಿ ಮಾಡುತ್ತಿರುವುದನ್ನು ಗಮನಿಸಲೇಬೇಕು. ಸ್ವಪ್ನ, ಅಂಕಿತ, ನವ ಕರ್ನಾಟಕ, ಅಯೋಧ್ಯ, ರಾಷ್ಟ್ರೋತ್ಥಾನ, ಬಹುರೂಪಿ, ಆಹರ್ನಶಿ, ಲಡಾಯಿ, ಅಕ್ಷರ, ಪುಸ್ತಕ, ಅಭಿನಯ, ವಸಂತ ಇಂಥ ನೂರಾರು ಪ್ರಕಾಶನಗಳೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಹುಟ್ಟಿಕೊಂಡ ವೀರಲೋಕ, ಪುಸ್ತಕ ಮನೆ ಮುಂತಾದ ಹೊಸ ಸಂಸ್ಥೆಗಳು ಕೂಡ ಹೊಸ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸುವುದಷ್ಟೇ ಅಲ್ಲ ಆ ಲೇಖಕರಿಗೆ ಬಿಡುಗಡೆಯ ಸ್ಥಳದಲ್ಲೇ ರಾಯಲ್ಟಿ ಕೊಡುವುದು, ಅನಾವರಣದ ಕಾರ್ಯಕ್ರಮವನ್ನು ಘನತೆಯ ಕಾರ್ಯಕ್ರಮವನ್ನಾಗಿಸುವುದು; ಬರಹದ ಸ್ಪರ್ಧೆ ಏರ್ಪಡಿಸಿ ಕವಿ ಕಥೆಗಾರ ಕಾದಂಬರಿಕಾರರಿಗೆ ಗರಿಷ್ಠ ಮೊತ್ತದ ಬಹುಮಾನಗಳನ್ನು ನೀಡುವುದರ ಮೂಲಕ ಪುಸ್ತಕೋದ್ಯಮಕ್ಕೆ ಪ್ರಚೋದಕವಾಗಿ ಕೆಲಸ ಮಾಡುತ್ತಿವೆ.ಕನ್ನಡ ಪತ್ರಿಕೆಗಳು ಕೂಡಾ ಸ್ಪರ್ಧೆಗಳನ್ನು ಏರ್ಪಡಿಸಿ ಗರಿಷ್ಠ ಮೊತ್ತದ ಬಹುಮಾನಗಳನ್ನು ಕೊಡುವುದಷ್ಟೇ ಅಲ್ಲ ಬಹುಮಾನಿತ ಕಥೆಗಳನ್ನು ಸಂಕಲನದಲ್ಲಿ ಪ್ರಕಟಿಸುತ್ತಿರುವುದು ಉಲ್ಲೇಖನೀಯ. ಪರಿಣಾಮ ಕನ್ನಡದಲ್ಲಿಂದು ಹೊಸ ಹೊಸ ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಮಹತ್ವದ ಕೃತಿಗಳು ಬೇಡಿಕೆ ಪಡೆದು ಬಹುಬೇಗ ಮರು ಮುದ್ರಣ ಕಾಣುತ್ತಿವೆ. ವೀರಲೋಕ ಪ್ರಕಾಶನದ ಆಶ್ರಯದಲ್ಲಿ ಎರಡು ಬಾರಿ ಪುಸ್ತಕ ಸಂತೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ಇದೀಗ ತಮ್ಮ ಮನೆಯಲ್ಲೇ ಕಿರು ಗ್ರಂಥಾಲಯವನ್ನು ಉದ್ಘಾಟಿಸುವ ಮೂಲಕ ಈ ನಾಡಿನ ಲೇಖಕರಿಗೆ ಓದುಗರಿಗೆ ಶುಭ ಸುದ್ದಿಯೊಂದನ್ನು ಕೊಡುವ ಅಗತ್ಯ ತುಂಬಾ ಇತ್ತು. ಒಂದು ರಾಜ್ಯ, ದೇಶದ ಮನಸ್ಥಿತಿಯನ್ನು ಅಳೆಯುವಾಗ ಅಲ್ಲಿಯ ಜನರ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ, ಸಾಂಸ್ಕೃತಿಕ ಜೀವಂತಿಕೆ ಮೌಲ್ಯಗಳನ್ನು ಜನಮಾನಸದಲ್ಲಿ ತುಂಬುವಲ್ಲಿ ಪುಸ್ತಕಗಳ ಪಾತ್ರ ತುಂಬಾ ಇದೆ. ಈಗಂತೂ ನವ ಮಾಧ್ಯಮಗಳಲ್ಲೂ ದೊಡ್ಡ ವ್ಯಾಪ್ತಿಯಲ್ಲಿ ವೇಗವಾಗಿ ಭಾಗಶ: ಧನಾತ್ಮಕ ವಿಚಾರಗಳು ಹಂಚಿಕೆಯಾಗುತ್ತವೆ. ಇನ್ನೊಂದು ಕಡೆ ಜಾಗತೀಕರಣ ಮತ್ತು ನವ ಮಾಧ್ಯಮ ಕನ್ನಡ ಪುಸ್ತಕೋದ್ಯಮಕ್ಕೆ ಅಡ್ಡಿಯಾಗಬಹುದು ಎಂಬ ವಾದ ಗಟ್ಟಿಯಾಗುತ್ತಿರುವ ಸಂದರ್ಭದಲ್ಲಿ ಪುಸ್ತಕೋದ್ಯಮಕ್ಕೇ ಪ್ರಭುತ್ವ ಬೆಂಗಾವಲಾಗಿ ನಿಲ್ಲಬೇಕಾದ್ದು ತುಂಬಾ ಅಗತ್ಯ. ಸುಮಾರು ಐದಾರು ದಶಕಗಳ ಹಿಂದೆ; ಆಗ ನಮ್ಮ ಪುತ್ತೂರು ಸಣ್ಣಪೇಟೆ. ಇಲ್ಲಿಯ ಒಂದು ಪುಸ್ತಕದಂಗಡಿಯಲ್ಲಿ ಪ್ರತಿವಾರ 600 ಕ್ಕಿಂತ ಹೆಚ್ಚು ”ಸುಧಾ’ ಸಾಪ್ತಾಹಿಕ ಮಾರಾಟವಾಗುತ್ತಿತ್ತು ಎನ್ನುವುದನ್ನು ಅದೇ ಪತ್ರಿಕೆಯ ನಿವೃತ್ತ ಹಿರಿಯ ಕಲಾವಿದ ಪುತ್ತೂರಿನವರೇ ಆದ ಚಂದ್ರನಾಥ ಆಚಾರ್ಯ ನೆನಪಿಸುತ್ತಾರೆ. ಮೊನ್ನೆ ಮೊನ್ನೆಯವರೆಗೆ ಸೈಕಲ್ನಲ್ಲಿ ಮನೆಮನೆಗೆ ಪುಸ್ತಕಗಳನ್ನು ವಾರದ ಬಾಡಿಗೆಗೆ ಓದಲು ಕೊಡುತ್ತಿದ್ದ ಸಂಚಾರಿ ಗ್ರಂಥಾಲಯಗಳನ್ನು ನಾನು ನೋಡಿದ್ದೇನೆ. ಬಳಸಿದ್ದೇನೆ.
ಅಮೆರಿಕದ ಫಿಲಡೆಲ್ಪಿಯ ರಾಜ್ಯದಲ್ಲಿ ಅಲ್ಲಿಯ ಗ್ರಂಥ ಪಾಲಕರು ಸಂತೆ ಮಾರುಕಟ್ಟೆ ಚರ್ಚ್ ಮುಂದೆ ಒಂದು ಮೇಜು ಚೆಯರ್ ಹಾಕಿಕೊಂಡು ಅಲ್ಲೇ ಅಡ್ದಾಡುವ ಜನರನ್ನು ಕರೆದು ಗ್ರಂಥಾಲಯಕ್ಕೆ ಸದಸ್ಯರನ್ನಾಗಿ ಮಾಡುವ ಕ್ರಮ ಇವತ್ತಿಗೂ ಇದೆ. ಉಚಿತವಾಗಿ ಸದಸ್ಯರನ್ನಾಗಿ ಮಾಡಿ ಪುಸ್ತಕ ಓದುವ ಅಭಿರುಚಿಯನ್ನು ವೃದ್ಧಿಸುವ, ಭಾನುವಾರ ರಜಾದಿನಗಳಲ್ಲಿ ಮಕ್ಕಳನ್ನು ಗ್ರಂಥಾಲಯಕ್ಕೆ ಆಕರ್ಷಿಸಲು ಪುಸ್ತಕ ಕೊಟ್ಟು ಓದಿಸಿ ಅವರು ತಿರುಗಿ ಮನೆಗೆ ಹೋಗುವಾಗ ಸರಳ ಪ್ರಶ್ನೆ ಪತ್ರಿಕೆಯನ್ನು ನೀಡಿ ಆ ಪುಸ್ತಕವನ್ನು ನಿಜವಾಗಿ ಅವರು ಓದಿದ್ದಾರೆಯೇ ಎಂದು ಪರೀಕ್ಷಿಸಿ ಅಲ್ಲೇ ಬಹುಮಾನ ಕೊಡುವ ಕ್ರಮ ಎಷ್ಟೊಂದು ಪ್ರೋತ್ಸಾಹದಾಯಕ. ಗ್ರಂಥಾಲಯಗಳಲ್ಲಿ ಚಂದಾದಾರರು ಪುಸ್ತಕವನ್ನು ವಾಪಾಸು ಕೊಡದಿದ್ದರೆ, ಕದ್ದರೆ ಅಲ್ಲಿ ಯಾವ ದಂಡವಿಲ್ಲದೆ ಅವರನ್ನು ಕರುಣಿಸುವ ಕ್ರಮ ಇದೆಯಂತೆ. ಆ ಇಡೀ ಊರಲ್ಲಿ ಯಾರಿಗಾದರೂ ಕಾಯಿಲೆಯಾದರೆ, ತತ್ ಕ್ಷಣ ಅವರಿಗೆ ಯಾವ ಬಗೆಯ ವೈದ್ಯರ ಅಗತ್ಯವಿದೆ ಎಂಬ ಮಾಹಿತಿಯನ್ನು ಅಲ್ಲಿಯ ಗ್ರಂಥಾಲಯಗಳು ಒಳಗೊಂಡಿರುತ್ತವೆ. ಒಂದೊಂದು ಊರಲ್ಲಿ ಎಷ್ಟೆಷ್ಟು ವೈದ್ಯರಿದ್ದಾರೆ, ಅವರು ಎಲ್ಲೆಲ್ಲಿ ಇರುತ್ತಾರೆ, ಯಾರು ಯಾವುದರಲ್ಲಿ ವಿಶೇಷ ತಜ್ಞರು, ಅವರು ಲಭ್ಯವಿರುವ ವೇಳೆ ಯಾವುದು, ಅವರ ಫೀಸು ಎಷ್ಟು ಹೀಗೆ ಅವರ ಭಾವಚಿತ್ರ ಸಹಿತ ಅಲ್ಲಿಯ ಲೈಬ್ರರಿಗಳಲ್ಲಿ ಮಾಹಿತಿ ಲಭ್ಯವಿರುತ್ತದೆ.
ಅದೇ ದೇಶದ ಗ್ರಂಥಾಲಯಗಳ ಇನ್ನೊಂದು ವೈಶಿಷ್ಟ್ಯ ಪುಸ್ತಕಗಳನ್ನು ಮಾತ್ರ ಹಂಚುವುದಲ್ಲ. ಅದರ ಜೊತೆಗೆ ಗ್ರಂಥಾಲಯಗಳಲ್ಲಿ ಜೀವಂತ ಬೆಕ್ಕು, ನಾಯಿಮರಿ, ಗಿಳಿ, ಮನೆಗೆ ಅಗತ್ಯಕ್ಕೆ ಬೇಕಾಗುವ ಉಳಿ ಸುತ್ತಿಗೆ, ಬರೆಯುವ ಪೆನ್ಸಿಲ್, ಇಂಕ್ ಬಾಟ್ಲಿ, ಗಾರೆ ಕತ್ತಿ, ಸ್ಕ್ರೂ ಡ್ರೈವರ್ ಮುಂತಾದ ಚರ ಸೊತ್ತುಗಳನ್ನು ಕೂಡ ಇಟ್ಟುಕೊಳ್ಳುವ ಕ್ರಮ ಇದೆಯಂತೆ. ತನ್ನ ಸದಸ್ಯನೊಬ್ಬನ ಮನೆಯಲ್ಲಿ ಗೋಡೆಗೆ ಮೊಳೆ ಬಡಿಯುವ ಸುತ್ತಿಗೆಯೊಂದರ ಅಗತ್ಯ ಬಿದ್ದಾಗ ಆತ ಕೇವಲ ಅಷ್ಟಕ್ಕೇ ಅದನ್ನು ನೂರಾರು ರೂಪಾಯಿ ಕೊಟ್ಟು ಅಂಗಡಿಯಿಂದ ಖರೀದಿಸುವ ಅಗತ್ಯವಿಲ್ಲ. ಬದಲಾಗಿ ತನ್ನ ಗ್ರಂಥ ಚಂದದಾರಿಕೆಯ ನಮೂದು ದಾಖಲೆಯನ್ನು ತೋರಿಸಿ ಆತ ಸುತ್ತಿಗೆಯನ್ನು ಒಂದು ದಿನದ ಮಟ್ಟಿಗೆ ಬಳಸಿಕೊಳ್ಳಬಹುದು. ಮನೆಯಲ್ಲಿರುವ ಮಗುವಿಗೆ ಬೆಕ್ಕಿನ ಮರಿಯ ಜೊತೆಗೆ, ನಾಯಿಯ ಜೊತೆಗೆ, ಗಿಳಿಮರಿಯ ಜೊತೆಗೆ ಆಟವಾಡಲು ಆಸೆಯಾದರೆ ಆ ಮಗು ತಾಯಿಯ ಅಕ್ಕ ಅಣ್ಣನ ಜೊತೆಗೆ ಗ್ರಂಥಾಲಯಕ್ಕೆ ಹೋಗಿ ಮರಿಯೊಂದಿಗೆ ಮನೆಗೆ ಬಂದು ದಿನವಿಡೀ ಆಟವಾಡಬಹುದು. ಸಂಜೆ ಹೊತ್ತು ಗ್ರಂಥಾಲಯಕ್ಕೆ ಬೆಕ್ಕು ನಾಯಿಮರಿಯನ್ನು ಬಿಟ್ಟು ಬಂದರೆ ಮುಗೀತು. ಎಷ್ಟು ಚಂದ ನೋಡಿ ಈ ವ್ಯವಸ್ಥೆ. ಮಕ್ಕಳ ಮನಸ್ಸನ್ನು ಬೌದ್ಧಿಕವಾಗಿ ಪ್ರಭುದ್ಧಗೊಳಿಸುವ ಪುಸ್ತಕಗಳ ಜೊತೆಗೆ ಹಾಡು ಕುಣಿತ ಚಿತ್ರಕಲೆ ಬಹುಬಗೆಯ ಆಟ, ಮುದ್ದಿಸುವ ಪ್ರಾಣಿಗಳು ಇತ್ಯಾದಿಗಳಿಗೆ ಪೂರಕವಾಗುವ ಪರಿಕರಗಳನ್ನು ಪುಸ್ತಕಗಳ ಹಾಗೆಯೇ ಎರವಲು ಕೊಡುವ ಕ್ರಮ ಆ ದೇಶದ ಮಕ್ಕಳನ್ನು ಎಳವೆಯಲ್ಲೇ ಪ್ರೋತ್ಸಾಹಿಸುತ್ತವೆ.ನಿಮಗೆ ಗೊತ್ತಿರಬೇಕು, ಆಂಡ್ರೋ ಕಾರ್ನಾಗಿ ಅಮೆರಿಕದ ಬಹುದೊಡ್ಡ ಶ್ರೀಮಂತನಾಗಿದ್ದ. ಮೂಲದಲ್ಲಿ ಅವನು ಕಡುಬಡವ ಪರದೇಶಿ. ಆಂಡ್ರೋ ಶ್ರೀಮಂತನಾದುದೇ ಅಮೆರಿಕದ ಲೈಬ್ರರಿಗಳಿಂದ. ಆ ದೇಶಕ್ಕೆ ಕಾಲಿಟ್ಟ ಕೂಡಲೇ ಅವನು ಗ್ರಂಥಾಲಯಗಳಿಗೆ ಹೋದ. ಸಾಕ್ಷರತಾ ಆಂದೋಲನದಲ್ಲಿ ಸೇರಿಕೊಂಡು ಅಕ್ಷರ ಕಲಿತ. ಅಕ್ಷರದಿಂದ ವಾಕ್ಯ, ವಾಕ್ಯದಿಂದ ಪುಸ್ತಕ, ಮುಂದೆ ನಾನಾ ಕೃತಿಗಳನ್ನು ಓದಿ ಬುದ್ದಿವಂತನಾದ. ಕೋಟ್ಯಾಧೀಶನಾದ. ಈ ನೆನಪಿನಲ್ಲಿ ಆತ ಆ ದೇಶದ ಋಣ ಸಂದಾಯಕ್ಕಾಗಿ ಸುಮಾರು ನಾಲ್ಕೈದು ಸಾವಿರ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನು ಕಟ್ಟಿಕೊಟ್ಟಿದ್ದಾನೆ. ಒಂದು ಕಾಲದಲ್ಲಿ ಅಮೆರಿಕದ ಬೆಸ್ಟ್ ಸೆಲ್ಲರ್ ಪುಸ್ತಕಗಳ ಸುಮಾರು 50 ಸಾವಿರದಷ್ಟು ಪ್ರತಿ ಮಾರಾಟವಾಗುತ್ತಿತ್ತು ಎನ್ನುವುದು ಉತ್ಪೇಕ್ಷೆಯಲ್ಲ.! ಮೊನ್ನೆ ಮೊನ್ನೆ ಈ ರಾಜ್ಯದ ಯಾವುದೋ ಒಂದು ಶಾಲೆಯಲ್ಲಿ ಪಾಠ ಪುಸ್ತಕ ಬಿಟ್ಟು ಬೇರೆ ಯಾವುದೇ ಪುಸ್ತಕವನ್ನು ಓದಬಾರದೆನ್ನುವ ನಿರ್ಬಂಧವನ್ನು ಅಲ್ಲಿಯ ಆಡಳಿತಾಂಗ ಮಕ್ಕಳಿಗೆ ಹೇರಿದ್ದನ್ನು ಓದಿದ ನೆನಪು. ಬೇರೆ ಪುಸ್ತಕ ಓದಬೇಡಿ ಎನ್ನುವ ನಿಯಮಾವಳಿಗಳನ್ನು ಲಿಖಿತವಾಗಿ ಅಲ್ಲಿಯ ಶಿಕ್ಷಕರು ಸಂಚಾಲಕರು ರೂಪಿಸಬೇಕಾಗಿಲ್ಲ. ನಮ್ಮ ಇವತ್ತಿನ ಅಂಕ ಆಧರಿತ ಶಿಕ್ಷಣ ವ್ಯವಸ್ಥೆಯೇ ಓದುವ ಆಸಕ್ತಿಯನ್ನು ನಿರ್ಬಂಧಿಸುತ್ತಿದೆ. ಶೈಕ್ಷಣಿಕ ವರ್ಷದ ಮೊದಲ ದಿನ ತರಗತಿ ಪ್ರವೇಶಿಸುವ ಎಷ್ಟೋ ಉಪನ್ಯಾಸಕರು ಬೇರೆ ಯಾವ ಮಾತುಗಳನ್ನು ಆಡದೆ ಮೊತ್ತ ಮೊದಲು ಮಾಡಿಸುವ ಕೆಲಸ ನೇರವಾಗಿ ಆಯಾಯ ವರ್ಷದ ಸಿಲಬಸ್ ಬರೆಸುವುದು. ಅದು ಇಡೀ ವರ್ಷ ಪಾಠ ಪಟ್ಟಿಯನ್ನು ಚೌಕಟ್ಟು ಮುರಿಯದಂತೆ ನಿರ್ಬಂಧಿಸುವುದೆಂದೇ ಅರ್ಥ. ಮುಂದೆ ಆ ಉಪನ್ಯಾಸಕ ಪಾಠದ ಸಂದರ್ಭದಲ್ಲಿ ಏನೇ ಹೇಳಲಿ ಎದುರುಗಡೆ ಕೂತ ಮಗು ಇದು ಮುಂದೆ ಬರೆಯುವ ಪರೀಕ್ಷೆಗೆ ಇದೆಯೇ ಇಲ್ಲವೇ ಎಂದು ಯೋಚಿಸಿ ಇದೆ ಎಂದಾದರೆ ಮಾತ್ರ ಸ್ವೀಕರಿಸುವ ಬೌದ್ಧಿಕ ತಲೆ ನಮ್ಮ ಮಕ್ಕಳದ್ದು. ಭಾಷಾ ಉಪನ್ಯಾಸಕನೊಬ್ಬ ಬೇಂದ್ರೆ ಪಂಪ ಕುವೆಂಪು ತೇಜಸ್ವಿಯೋ ಪಾಠ ಮಾಡುವಾಗ ಆ ಪಾಠದ ಆಚೆ ಸರಿದರೆ ಇದು ಯಾಕೆ ನಮಗೆ? ಎಂದು ಪರಿಭಾವಿಸುವ ಮಕ್ಕಳ ಸಂಖ್ಯೆ ವೃದ್ಧಿಸುತ್ತಿದೆ. ನಿಜವಾದ ಅರ್ಥದಲ್ಲಿ ಇವರು ಬರೆಯುವ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆಯೇ ಹೊರತು ಬದುಕುವ ಪರೀಕ್ಷೆಗೆ ಅಲ್ಲವೇ ಅಲ್ಲ. ಬದುಕುವ ಪರೀಕ್ಷೆಗೆ ಸಿದ್ಧನಾಗುವವರಿಗೆ ಕಡಲೆ ಮೀನು ಬೇಳೆ ಕಟ್ಟಿಕೊಂಡು ತಂದ ಕಾಗದವೂ ಕೂಡಾ ಅರಿವನ್ನು ಬಿತ್ತುವ ದಾರಿ ಆಗುತ್ತದೆ.!
ಲೇಖಕರು : ನರೇಂದ್ರರೈ ದೇರ್ಲ