ವಿದ್ಯಾಗಿರಿ: ವಿಶಾಲ ಬಯಲುರಂಗ ಮಂದಿರದಲ್ಲಿ ಕಂಗೊಳಿಸಿದ ದೇಶದ ಐಕ್ಯತೆಯ ಪ್ರತೀಕವಾದ ‘Alva’s, ಸೇರಿದ್ದ ೩೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿ, ಸಿಬ್ಬಂದಿ, ಪೋಷಕರು, ಅತಿಥಿಗಳ ಕೈಯಲ್ಲಿ ಹಾರಾಡಿದ ರಾಷ್ಟ್ರ ಧ್ವಜ, ಆವರಣದ ಸುತ್ತಲೂ ತ್ರಿವರ್ಣ ಸ್ಥಂಭಗಳು, ದೇಶಪ್ರೇಮ ಮೂಡಿಸುವ ತ್ರಿವರ್ಣ ಚಿತ್ತಾರಗಳು, ತ್ರಿವರ್ಣದ ಪುರುಲಿಯೋ ಸಿಂಹಗಳು, ಜನ ಗಣ ಮನ, ವಂದೇ ಮಾತರಂ, ಕೋಟಿ ಕಂಠೋ ಸೇ… ರಾಷ್ಟ್ರ ಹಾಗೂ ದೇಶಭಕ್ತಿ ಗೀತೆಗಳು…. ಸಂವಿಧಾನ ಅನುಷ್ಠಾನದ ಭಕ್ತಿ, ಗೌರವ, ಪ್ರೀತಿಯ ದೇಶಭಕ್ತಿಯ ಕ್ಷಣಗಳು ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮೂಡಿಬಂತು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ‘ನಾವೆಲ್ಲರೂ ಸಂವಿಧಾನ ಬದ್ಧವಾಗಿ ಕರ್ತವ್ಯ ಹಾಗೂ ಹಕ್ಕುಗಳನ್ನು ಪಾಲಿಸುವ ಸಂಕಲ್ಪವನ್ನು ಮಾಡುವ ದಿನ ಇದಾಗಿದೆ’ ಎಂದರು. ‘ಆಳ್ವಾಸ್ ಅಂಗಣದಲ್ಲಿ ಗಣರಾಜ್ಯೋತ್ಸವವು ಐತಿಹಾಸಿಕ ವಿರಾಟ ರಾಷ್ಟ್ರೀಯ ಹಬ್ಬವಾಗಿದೆ’ ಎಂದು ಅವರು ಸಂಭ್ರಮಿಸಿದರು. ‘ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಆಳ್ವಾಸ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ತಾಣವಾಗಿದೆ’ ಎಂದು ಶ್ಲಾಘಿಸಿದರು. ಹುಟ್ಟಿದ ಊರು, ಪೋಷಿಸಿದ ತಂದೆ-ತಾಯಿ, ಕಲಿಸಿದ ಶಿಕ್ಷಕರು ಹಾಗೂ ಸಂಸ್ಥೆಯನ್ನು ಕಷ್ಟಕಾಲದಲ್ಲಿ ಮರೆಯಬೇಡಿ ಎಂದು ಹಿತವಚನ ಹೇಳಿದರು. ಡಾ.ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವದ ಶ್ರೇಷ್ಠವಾದ ನಮ್ಮ ಸಂವಿಧಾನ ರಚನೆಯಾಗಿ, ಜಾರಿಗೆ ಬಂದಿದೆ. ಇದು ನಮ್ಮ ದೇಶಕ್ಕೆ ಶಕ್ತಿ ತುಂಬಿದ ದಿನ ಎಂದು ಬಾಬಾಸಾಹೇಬರ ಗುಣಗಾನ ಮಾಡಿದರು. ಸಂವಿಧಾನವು ಪ್ರತಿಯೊಬ್ಬರಿಗೆ ಶಿಕ್ಷಣ, ಧಾರ್ಮಿಕ, ಅಭಿವ್ಯಕ್ತಿ, ಮೂಲ ಸೌಕರ್ಯಗಳನ್ನು ನೀಡಿದೆ.

ಸಂವಿಧಾನವೇ ನೆಲದ ಸರ್ವೋಚ್ಛ ಕಾನೂನು. ನಾವೆಲ್ಲ ಶ್ರದ್ಧೆಯಿಂದ ಗೌರವಿಸಬೇಕು ಎಂದರು. ದೇಶವು ವಿಜ್ಞಾನ -ತಂತ್ರಜ್ಞಾನದಲ್ಲಿ ಮುಂದುವರಿದರೂ ನಮಗೆ ಎಲ್ಲ ಹಕ್ಕುಗಳನ್ನು ನೀಡಿದ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನ ದೇಶದ ಏಕತೆಯ ಪ್ರತೀಕ. ಅದರ ರಚನೆಯ ನೇತೃತ್ವ ವಹಿಸಿದ ಅಂಬೇಡ್ಕರ್, ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವೆಲ್ಲ ಕೃತಜ್ಞರಾಗಿರಬೇಕು ಎಂದು ಸ್ಮರಿಸಿದರು. ಹಕ್ಕು ಮತ್ತು ಕರ್ತವ್ಯ ನಿರ್ವಹಿಸುವ ಸಂಕಲ್ಪದ ಪ್ರಮುಖ ದಿನಾಚರಣೆ ಮೂಲಕ ದೇಶಭಕ್ತಿ ಜಾಗೃತವಾಗಲಿ ಎಂದು ಹಾರೈಸಿದರು. ಬೆಳಿಗ್ಗೆ ೮.೩೦ಕ್ಕೆ ಸರಿಯಾಗಿ ಆರಂಭವಾದ ಸಮಾರಂಭವು ಸಮಯ ಪರಿಪಾಲನೆಯನ್ನು ಸಾಕ್ಷೀಕರಿಸಿತು. ತಿರಂಗ ಬಣ್ಣದಿಂದ ೧೯೨೦ ವಿದ್ಯಾರ್ಥಿಗಳು ಸುತ್ತಲೂ ಅಂಚನ್ನು ನಿರ್ಮಿಸಿದರೆ, ೩೧೮೮ ವಿದ್ಯಾರ್ಥಿಗಳು ತಿರಂಗದಲ್ಲಿ ರಚಿಸಿ ವಿವಿಧತೆಯಲ್ಲಿ ಏಕತೆಯ ಸಂದೇಶ ರವಾನಿಸಿದರು.






































































































