ಉಡುಪಿ ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಾಂಶುಪಾಲ ರಾಮಕೃಷ್ಣ ಹೆಗಡೆಯವರು ದೇಶದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ರಕ್ಷಿಸಲು ಸಂವಿಧಾನದ ರಚನೆ ಮಾಡಲಾಯಿತು. ಪ್ರತಿಯೊಬ್ಬರಿಗೂ ನ್ಯಾಯ ಸಮ್ಮತ ಬದುಕಿಗಾಗಿ ಸಂವಿಧಾನ ಸ್ವೀಕೃತಗೊಂಡಿದೆ.
ಪ್ರಜೆಗಳಾದ ನಾವು ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸ್ವಯಂಶಿಸ್ತು ಮತ್ತು ಪ್ರೇರಣೆಯಿಂದ ತೊಡಗಿಸಿಕೊಳ್ಳಬೇಕೆಂದು ನುಡಿದರು. ಆಡಳಿತಾಧಿಕಾರಿಗಳಾದ ಜಯಪ್ರಕಾಶ್ ಶೆಟ್ಟಿಯವರು ಗಣರಾಜ್ಯ ದಿನದ ಸಂದೇಶ ನೀಡಿ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರದೊಂದಿಗೆ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಹಕ್ಕುಗಳೊಂದಿಗೆ ಕರ್ತವ್ಯದ ಪರಿಪಾಲನೆಯಾದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳ್ಳುತ್ತದೆ ವಿದ್ಯಾರ್ಥಿಗಳಾದ ತಾವು ತಮ್ಮ ಮುಂದಿನ ಜೀವನದಲ್ಲಿ ಸಂವಿಧಾನದ ಆಶಯದೊಂದಿಗೆ ಬದುಕನ್ನು ನಡೆಸುವಂತೆ ಕರೆ ನೀಡಿದರು.

ಗಣರಾಜ್ಯ ದಿನದ ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಮನೋಜ್ ಜೋಯಲ್ ಫೆರ್ನಾಂಡಿಸ್, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ, ವಸತಿ ನಿಲಯ ಪಾಲಕರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಆದರ್ಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





































































































