ವಿದ್ಯಾಗಿರಿ: ಸಂಕಲ್ಪ ಶಕ್ತಿ, ಕ್ರಿಯಾ ಶಕ್ತಿ ಹಾಗೂ ಜ್ಞಾನ ಶಕ್ತಿ ಸಮ್ಮಿಳಿತಗೊಂಡಾಗ ಜಗತ್ತಿನಲ್ಲಿ ಯಾವುದು ಅಸಾಧ್ಯವಲ್ಲ. ನಮ್ಮಿಂದ ಅಸಾಧ್ಯ ಎಂಬ ವಿಚಾರವು ಸೃಷ್ಟಿಯಲ್ಲೇ ಇಲ್ಲ. ಸಕಾರತ್ಮಕ ಮನಸ್ಥಿತಿ ಇಂದಿನ ಯುವ ಸಮುದಾಯದ ಮಂತ್ರವಾಗಬೇಕು ಎಂದು ಗದಗದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಟೀಮ್ ಮ್ಯಾಟ್ರಿಕ್ಸ್ ಸಹಯೋಗದಲ್ಲಿ ಶುಕ್ರವಾರ ನಡೆದ “ನಾಯಕನ ಹೆಜ್ಜೆಯಲ್ಲಿ – ಸ್ವಾಮಿ ವಿವೇಕಾನಂದರ ಭೋದನೆಗಳನ್ನು ಜೀವನದಲ್ಲಿ ಹೇಗೆ ಅಳವಡಿಸುವುದು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನನ್ನಿಂದ ಅಸಾಧ್ಯ ಎನ್ನುವುದು ಪ್ರಪಂಚದ ಅತ್ಯಂತ ದೊಡ್ಡ ತಪ್ಪು ಎಂದು ವಿವೇಕಾನಂದರು ಹೇಳಿದ್ದಾರೆ.
ನಮ್ಮಲ್ಲಿ ಯಶಸ್ಸಿಗೆ ಬೇಕಾದ ಎಲ್ಲಾ ಸತ್ವಗಳು ಇರುತ್ತವೆ. ಅದನ್ನು ನಾವು ಸರಿಯಾದ ರೀತಿಯಲ್ಲಿ ಆಯೋಜಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ತಮ್ಮ ಎಲ್ಲಾ ನ್ಯೂನತೆಗಳನ್ನು ಮೀರಿ, ಸಾಧನೆ ಮೆರೆದ ಮೇಡಂ ಕ್ಯೂರಿ, ಥಾಮಸ್ ಅಲ್ವಾ ಎಡಿಸನ್, ನೆಪೋಲಿಯನ್, ಅಬ್ರಹಾಂ ಲಿಂಕನ್ ಮತ್ತಿತರರ ಸಾಧನೆಗಳನ್ನು ವಿವರಿಸಿದರು. ಜೀವನದಲ್ಲಿ ಛಲ ಮುಖ್ಯವಾದದ್ದು. ನಿಮ್ಮ ಛಲವೇ ನಿಮ್ಮ ಬಲ. ಛಲ ಇಲ್ಲದಿದ್ದರೆ ನಾವು ಸಾಮಾನ್ಯರಂತೆ ಉಳಿದುಕೊಳ್ಳುತ್ತೇವೆ. ನಮ್ಮನ್ನು ನಾವು ಸಾಬೀತುಪಡಿಸಿಕೊಂಡಾಗ ಮಾತ್ರ ನಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಈ ನೆಲದ ಮೂಲ ಮೌಲ್ಯಗಳನ್ನು ತಿಳಿಸಿಕೊಡುವುದರಲ್ಲಿ ಸಂಪೂರ್ಣ ಎಡವಿದೆ. ಈ ಅಂಶಗಳಿಗೆ ಒತ್ತು ನೀಡುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಂದ ಹೊಸ ಶಿಕ್ಷಣ ನೀತಿಯನ್ನು ಹಲವು ರಾಜ್ಯಗಳು ನಿರಾಕರಿಸುತ್ತಿವೆ. ಇದು ಸಲ್ಲದು ಎಂದು ವಿಷಾದ ವ್ಯಕ್ತಪಡಿಸಿದರು.ಆಸೆ ಮತ್ತು ಅರ್ಹತೆಗೆ ವ್ಯತ್ಯಾಸವಿದೆ. ನಮಗೆ ಅರ್ಹತೆ ಇರುವುದನ್ನು ಪಡೆದುಕೊಳ್ಳದಂತೆ ಮಾಡಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಆಸೆ ಇರುತ್ತದೆ. ಬದಲಾಗಿ ಅರ್ಹತೆ ಇರುವುದಿಲ್ಲ ಎಂದು ತಿಳಿಸಿದರು. ಜೀವನದಲ್ಲಿ ಭರವಸೆ ಮುಖ್ಯವಾದದ್ದು. ನಮ್ಮ ಶ್ರಮ ನಮಗೆ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ಭರವಸೆಯಿರಬೇಕು. ನಾವು ದೈಹಿಕವಾಗಿ ದುರ್ಬಲರಾಗಿರಬಹುದು. ಆದರೆ ಮಾನಸಿಕವಾಗಿ ದುರ್ಬಲರಾಗಿರಬಾರದು. ನಮ್ಮಲ್ಲಿ ಆತ್ಮವಿಶ್ವಾಸ ಯಾವಾಗಲು ಎತ್ತರದಲ್ಲಿರಬೇಕು ಎಂದರು. ಶಿಕ್ಷಣದ ಉದ್ದೇಶ ನಮ್ಮಲ್ಲಿರುವ ಸಾಮರ್ಥ್ಯವನ್ನು ಹೊರಕ್ಕೆ ತರುವುದು. ತರಬೇತಿ ನೀಡುವುದು. ಕೇವಲ ಜ್ಞಾನವನ್ನು ತುಂಬುವುದು ಅಲ್ಲ ಎಂದರು. ಮಾಹಿತಿ, ಜ್ಞಾನ ಬುದ್ಧಿವಂತಿಕೆಯು ಶಿಕ್ಷಣಉದ್ದೇಶ ವಾಗಬೇಕು. ನಿಮ್ಮನ್ನು ಮತ್ತೆ ವಿದ್ಯಾವಂತರಾಗಿ ಮಾಡಲು ವಿವೇಕಾನಂದರನ್ನು ಒದಿರಿ. ನಮ್ಮ ಗುರಿ ಯಾವಾಗಲು ಎತ್ತರದಲ್ಲಿರಬೇಕು. ವಿವೇಕಾನಂದರ ಬೋಧನೆಗಳನ್ನು ಅಳವಡಿಸಿದರೆ ಅಂಚೆಯವನು ಐಎಎಸ್ ಅಧಿಕಾರಿಯಾಗಲು ಸಾಧ್ಯ ಎಂದರು. ನಿಮ್ಮ ವರ್ತನೆ ನಿಮ್ಮ ಎತ್ತರವನ್ನು ನಿರ್ಧರಿಸುತ್ತದೆ.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಮಗೆ ಎಲ್ಲವನ್ನು ಒಪ್ಪಿಕೊಳ್ಳಲು ಗೊತ್ತಿದೆ. ಆದರೆ ಪ್ರಶ್ನಿಸಲು ಗೊತ್ತಿಲ್ಲ. ಎಲ್ಲಿವರೆಗೆ ನಾವು ಪ್ರಶ್ನೆ ಮಾಡುವುದಿಲ್ಲವೋ ಅಲ್ಲಿವರೆಗೂ ಗುಲಾಮರಾಗಿರುತ್ತೇವೆ ಎಂದರು. ಸ್ವಾಮಿ ವಿವೇಕಾನಂದರ ಬೋಧನಗಳನ್ನು ಪಾಲಿಸಬೇಕು ಅವರ ಹೆಜ್ಜೆಯಲ್ಲಿ ನಡೆಯಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ, ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಧ್ಯಾಪಕ ಸುಹಾಸ್ ಶೆಟ್ಟಿ, ರೂಪೇಶ್ ಶೆಟ್ಟಿ, ವಿದ್ಯಾರ್ಥಿ ಆದಿತ್ಯ ನಾಯಕ್ ಮತ್ತು ಧೀರಜ್ ಬಂಗೇರ ಇದ್ದರು. ಪ್ರತೀಕ್ಷಾ ಶೆಣೈ ಸ್ವಾಗತಿಸಿದರು. ಖುಷಿ ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು. ಸಂತೃಪ್ತಿ ರಾವ್ ವಂದಿಸಿದರು.