ಮೂಡುಬಿದಿರೆ: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ ಎಂ ವೀರಪ್ಪ ಮೊಯಿಲಿಯವರ ‘’ವಿಶ್ವಸಂಸ್ಕೃತಿ ಮಹಾಯಾನ’’ – ಸಂಪುಟ-2, ಗದ್ಯ ಮಹಾಕಾವ್ಯ ಬಿಡುಗಡೆ ಸಮಾರಂಭ ಜನವರಿ 12ರಂದು ಭಾನುವಾರ 11 ಗಂಟೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ ವಿಎಸ್ ಆಚಾರ್ಯ ಸಭಾಭವನದಲ್ಲಿ ಜರುಗಲಿದೆ. ಈ ಕಾರ್ಯಕಮ್ರವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಹಾಗೂ ಬೆಂಗಳೂರಿನ ಸಪ್ನ ಬುಕ್ ಹೌಸ್ನ ಸಹಯೋಗದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ.
ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೋ.ಸಿ. ನಾಗಣ್ಣ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದಾರೆ. ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿಗಳಾದ ಡಾ ಬಿ.ಎಂ ವಿವೇಕ ರೈಯವರು ಆಶಯನುಡಿಗಳನ್ನಾಡಲಿದ್ದು, ಮೈಸೂರಿನ ಖ್ಯಾತ ಸಾಹಿತಿ ಹಾಗೂ ಸಂಶೋಧಕರಾದ ಡಾ ಕಬ್ಬಿನಾಲೆ ವಸಂತ ಭಾರಧ್ವಾಜರವರು ಗ್ರಂಥದ ಕುರಿತು ಮಾತನಾಡಲಿದ್ದು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ, ಸಪ್ನ ಬುಕ್ ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮುಖ್ಯ ಅತಿಥಿಗಳ ನೆಲೆಯಲ್ಲಿ ಹಾಜರಿರಲಿದ್ದಾರೆ. ‘’ವಿಶ್ವಸಂಸ್ಕøತಿ ಮಹಾಯಾನ’’ – ಸಂಪುಟ-2 ವಿಶ್ವಸಂಸ್ಕೃತಿಯನ್ನು ಆರಂಭದಿಂದ ಹಿಡಿದು ಇಂದಿನವರೆಗಿನ ಕಾಲವ್ಯಾಪ್ತಿಯಲ್ಲಿ ಅರ್ಥಮಾಡಿಕೊಳ್ಳುವುದು ಊಹೆಗೂ ನಿಲುಕದ ವಿಚಾರ.
ಇನ್ನೂ ಅದನ್ನು ಅರ್ಥೈಸಿಕೊಂಡು ಬರಹದಲ್ಲಿ ದಾಖಲಿಸುವುದು ಇನ್ನಷ್ಟು ಕಷ್ಟದ ಕೆಲಸ. ಅಂಥಾ ಅಗಾಧವಾದ ವಿಚಾರವನ್ನು ಅರ್ಥೈಸಿಕೊಂಡು ಅದರ ತಿಳುವಳಿಕೆಯನ್ನು ಅಮೂಲಾಗ್ರ ಪಡೆದು ಭಾಷೆಯ ಹಿಡಿತದೊಂದಿಗೆ ಪುಸ್ತಕರೂಪದಲ್ಲಿ ಹಿಡಿದಿಡುವ ಕಾರ್ಯವನ್ನು ಮೊೈಲಿಯವರು ಮಾಡಿದ್ದಾರೆ. ಈ ಕೃತಿಯು ಕಾಲ್ಪನಿಕ ಪ್ರಶ್ನೋತ್ತರ ರೂಪದಲ್ಲಿದ್ದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಒಂದು ಕಾಲ್ಪನಿಕ ಚರ್ಚೆಯಲ್ಲಿ ಭಾಗಿಗಳಾದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮತ್ತು ಅಲ್ಲಿ ನೆರೆದಿರುವ ಪರಿಣತರು ಉತ್ತರಿಸುವ ಮಾದರಿಯಲ್ಲಿದೆ. ಗ್ರೀಕ್, ರೋಮ್, ಆಫ್ರಿಕಾ, ಮೆಸೋ ಅಮೇರಿಕಾ, ದಕ್ಷಿಣ ಅಮೇರಿಕಾ, ಚೀನಾ, ಜಪಾನ್, ಇಸ್ಲಾಂ ಜಗತ್ತು- ಹೀಗೆ ಹಲವು ನಾಗರಿಕತೆ ಮತ್ತು ಸಂಸ್ಕøತಿಗಳ ವಿವರಗಳು ಇಲ್ಲಿ ಸಾರಸರ್ವಸ್ವಗೊಂಡಿವೆ. ಅವುಗಳ ಹಿರಿಮೆ-ಗರಿಮೆಗಳ ಬಗ್ಗೆ, ಏಳು-ಬೀಳುಗಳ ಬಗ್ಗೆ ಚರ್ಚೆ ಇದೆ. ಭಾರತದ ವೈದಿಕ ಪರಂಪರೆಗೆ ಸಂಬಂಧಿಸಿದಂತೆ ವೇದ, ಉಪನಿಷತ್ತು ಪುರಾಣಗಳ ಕುರಿತ ಚರ್ಚೆ ಇದೆ. ಅದೇ ರೀತಿ ಭಾರತದ ಮಣ್ಣಲ್ಲೆ ಹುಟ್ಟಿಕೊಂಡ ಬೌದ್ಧ, ಜೈನ ಪರಂಪರೆಗಳ ವಿಚಾರ ಧಾರೆಯು ಇಲ್ಲಿದೆ. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಕೃಷ್ಣಮೂರ್ತಿ ಕಾರ್ಕಳ ಇದ್ದರು.