ಡ್ರಗ್ಸ್ ಜಾಲ ಚಕ್ರವ್ಯೂಹ ಇದ್ದಂತೆ. ಇದರಿಂದ ಹೊರಬರುವುದು ಕಷ್ಟ ಈ ಬಗ್ಗೆ ಯೋಚಿಸಲೂ ಬೇಡಿ. ಮಾದಕ ವಸ್ತುಗಳು ನಿಮ್ಮ ಗುರಿ ಸಂತೋಷವನ್ನೇ ಕೊಲ್ಲುತ್ತವೆ. ಹೀಗೆ ಯುವ ಸಮುದಾಯಕ್ಕೆ ಎಚ್ಚರಿಕೆ ನೀಡಿದವರು ವೈದ್ಯರು, ಶಿಕ್ಷಣ ತಜ್ಞರು, ನೌಕರರ ವಲಯದ ಪರಿಣಿತರು, ಉದ್ಯಮಿಗಳು. ವಿಜಯ ಕರ್ನಾಟಕ ದಿನಪತ್ರಿಕೆ, ಧಾರವಾಡ ಜಿಲ್ಲಾ ನೌಕರರ ಸಂಘದ ಸಹಯೋಗದೊಂದಿಗೆ ನೌಕರ ಭವನದಲ್ಲಿ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯರು, ಶಿಕ್ಷಣ ತಜ್ಞರು ತಾವು ಕಂಡ ಕೆಲ ಅನುಭವಗಳ ಚಿತ್ರಣ ತೆರೆದಿಡುವ ಜತೆಗೆ ಹೇಗೆ ಮಾರಕವಾಗಿದೆ ಎಂಬುದನ್ನು ಔಚಿತ್ಯಪೂರ್ಣವಾಗಿ ತೆರೆದಿಟ್ಟರು. ನೂರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ಆಸಕ್ತಿಯಿಂದ, ತದೇಕ ಚಿತ್ತದಿಂದ ಎಲ್ಲರ ಭಾಷಣಗಳನ್ನೂ ಕೇಳಿದರು.
ಡ್ರಗ್ಸ್ ವ್ಯಸನಿಗಳ ಬದುಕು ಹಾಳಾಗಿರುವ ವಾಸ್ತವತೆಯನ್ನು ಬಿಚ್ಚಿಟ್ಟ ಪಂಜುರ್ಲಿ ಹೋಟೆಲ್ಸ್ ಸಮೂಹದ ಸಂಸ್ಥಾಪಕ ರಾಜೇಂದ್ರ ಶೆಟ್ಟಿ ನಾನು ಮುಂಬಯಿಯಲ್ಲಿ ಚಾ ಮಾರುತ್ತಿದ್ದಾಗ ಅದೆಷ್ಟೋ ಜನ ಡ್ರಗ್ಸ್ ನಿಂದಲೇ ವೈಯಕ್ತಿಕ ನೆಮ್ಮದಿ, ಕೆಲವರು ಕುಟುಂಬ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಮಾದಕ ವಸ್ತು, ದೇಶಕ್ಕೆ ಮಾರಕ ಆಗುತ್ತಿದೆ. ಯುವ ಸಮೂಹ ತಮ್ಮನ್ನು ತಾವು ಕಾಪಾಡಿಕೊಂಡು ಡ್ರಗ್ಸ್ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಧುಮುಕಬೇಕು ಎಂದು ಕಿವಿಮಾತು ಹೇಳಿದರು.
“ಡ್ರಗ್ಸ್ ನಗರ, ಹಳ್ಳಿ ಎಂಬ ತಾರತಮ್ಯ ಇಲ್ಲದೆ ಇಡೀ ದೇಶವನ್ನು ವ್ಯಾಪಿಸಿದೆ. ಯುವಕರ ಜೀವನವನ್ನು ಸಾಯಿಸುತ್ತಿದೆ. ಭಾರತದ ಒಟ್ಟು ಜನಸಂಖ್ಯೆಯ ಪೈಕಿ 30 ಕೋಟಿಗೂ ಅಧಿಕ (ಶೇ 20ರಷ್ಟು) ಜನ 20 ವರ್ಷದೊಳಗಿನವರು. ಆದರೆ, ಈ ಹದಿಹರೆಯದ ಪೈಕಿ ಶೇಕಡ 30ರಷ್ಟು ಡ್ರಗ್ಸ್ ಚಟಕ್ಕೆ ಅಂಟಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಹೀಗಾಗಿ ಭವಿಷ್ಯದ ಪ್ರಜೆಗಳು ಯಾವ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಬೇಕಿದೆ” ಎನ್ನುತ್ತಲೇ ಡ್ರಗ್ಸ್ ಜಗತ್ತಿನ ಕರಾಳ ಸಂಗತಿಗಳನ್ನು ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಸಂದರ್ಭೋಚಿತವಾಗಿ ತೆರೆದಿಟ್ಟರು.
ಖ್ಯಾತ ಹೃದ್ರೋಗ ತಜ್ಞ ಡಾ. ಸುಧೀರ ಜಂಬಗಿ ಅವರು ಡ್ರಗ್ಸ್ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ವೈಜ್ಞಾನಿಕ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದರು. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹಾಗೂ ವೈ. ಬಿ. ಅಣ್ಣಿಗೇರಿ ಕಾಲೇಜಿನ ಛೇರ್ಮನ್ ಪ್ರೊ.ನಾಗೇಶ ಅಣ್ಣಿಗೇರಿ ಮಾತನಾಡಿ, ಯುವಕರೇ ದೇಶದ ಭವಿಷ್ಯ ಎಂಬ ಕಾಲವೊಂದಿತ್ತು. ಈಗ ಆರೋಗ್ಯಕರ ಯುವಕರೇ ದೇಶದ ಭವಿಷ್ಯ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಕೆಟ್ಟ ಮೇಲೆ ಬುದ್ಧಿ ಬರುವುದು ಬೇಡ. ಈಗಲೇ ಜಾಗೃತಿ ವಹಿಸಬೇಕು. ಏನೇ ಮಾಡುವ ಮುನ್ನ 10 ಬಾರಿ ಯೋಚಿಸಬೇಕು ಎಂದು ವಿವರಿಸಿದರು. ಕೆ. ಎಚ್. ಕಬ್ಬೂರ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಈರಪ್ಪ ಪತ್ತಾರ ಮತ್ತಿತರರು ಉಪಸ್ಥಿತರಿದ್ದರು.