ವಿದ್ಯಾಗಿರಿ: ಅಹಿಂಸೆಯು ಹಿಂಸೆಯ ಬದಲಿ ಅಥವಾ ಪ್ರತಿ ಅಲ್ಲ. ಅದು ಪರಿಪೂರ್ಣ ಜೀವನ ದರ್ಶನ. ಮನುಷ್ಯ ಜೀವನ ನಿರ್ವಹಿಸುವ ವಿಧಾನ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಳ್ಪಾಡಿ ವಿಶ್ಲೇಷಿಸಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಆಶ್ರಯದಲ್ಲಿ ನಡೆದ ‘ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು’ ವಿಚಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಹಿಂಸೆ ಎನ್ನುವುದು ಅಧ್ಯಾತ್ಮ. ಆದರೆ, ಅದಕ್ಕೆ ಲೋಕ ಹಾಗೂ ವಾಸ್ತವದ ಸ್ಪರ್ಶ ಇದೆ ಎಂದು ಉಲ್ಲೇಖಿಸಿದ ಅವರು, ಹಿಂಸೆಯ ಮೂಲಕ ಸ್ವಾತಂತ್ರ್ಯ ಗಾಂಧಿಗೆ ಬೇಕಾಗಿರಲಿಲ್ಲ. ಉಗ್ರ ಹೋರಾಟಗಾರರು ಜನರ ಜೊತೆ ಬೆರೆತು ಹೋರಾಡುತ್ತಿರಲಿಲ್ಲ. ಜನರ ಭಾಗವಹಿಸುವಿಕೆ ಗಾಂಧೀಜಿಗೆ ಬಹುಖ್ಯವಾಗಿತ್ತು ಎಂದರು. ಮಾಂಸಾಹಾರ ಮಾಡುವುದೇ ಹಿಂಸೆಯ ಭಾಗ ಅಲ್ಲ. ಹಿಂಸೆ ಎಂಬುದು ಬದುಕಿನಲ್ಲಿ ಹಾಸುಹೊಕ್ಕ ಅನೇಕ ವರ್ತನೆಗಳು ಎಂದರು.
ಅಹಿಂಸೆ ಎಂದರೆ ಒಂದು ಬಾಂಧವ್ಯ. ಹಿಂಸೆ ಮಾಡದೇ ಇರುವುದು ಅಹಿಂಸೆ ಅಲ್ಲ. ಅಹಿಂಸೆ ಪ್ರೀತಿಯ ಬಾಂಧವ್ಯ. ತಾನು ವಿಶ್ವದ ಕೇಂದ್ರ ಎಂಬ ಭಾವ, ‘ಅಂಬಾನಿ’ ಆಗುವ ಆಸೆಯೇ ಅಟ್ಟಹಾಸ. ಅಹಿಂಸೆಯೇ ಮಂದಹಾಸ ಎಂದರು. ಹಿಂದ್ ಸ್ವರಾಜ್ ಎಂಬುದು ಅಹಿಂಸೆಯ ತತ್ವ ಗ್ರಂಧ. ಅದು ಹಾಗೂ ಸತ್ಯಾಗ್ರಹಿ ಇನ್ ಸೌತ್ ಆಫ್ರಿಕಾ ಮತ್ತು ನನ್ನ ಸತ್ಯಾನ್ವೇಷಣೆ ಕೃತಿ ಓದಿದರೆ ಗಾಂಧೀಜಿ ಅರ್ಥ ಆಗಲು ಸಾಧ್ಯ ಎಂದರು. ವಿಜ್ಞಾನ ಎಂಬದು ವಿಘಟಿತ ಜ್ಞಾನ ಆಗುತ್ತಿದೆ. ಆದರೆ, ಗಾಂಧೀಜಿ ಪ್ರತಿಪಾದಿಸಿದ್ದು ಸಮಗ್ರ ಜ್ಞಾನ. ಪ್ರಶ್ನೆಗೂ ಒಂದು ದೃಷ್ಟಿ ಇರಬೇಕು ಎಂದರು. ಅಭಿವೃದ್ಧಿಯ ನಾಗಲೋಟದಲ್ಲಿ ಗಾಂಧಿ ಆಗುಂತಕರಂತೆ ಕಾಣುತ್ತಾರೆ. ಆದರೆ, ಸಂವಾದಗಳ ಮೂಲಕ ಹುಟ್ಟಿದ ಲೋಕಚಿಂತಕ ಗಾಂಧಿ ಇಂದು ಅನಿವಾರ್ಯ ಎಂದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಶೇ 68 ಸಂಪತ್ತು ದೇಶದ 10 ಪ್ರಮುಖರ ಕೈಯಲ್ಲಿದೆ. ನಮ್ಮ ಬದುಕು, ಅಭಿವೃದ್ಧಿ ರಚನೆಯಲ್ಲಿ ಹಿಂಸೆ ಇದೆ ಎಂದ ಅವರು ಎಂದು ಮ್ಯಾನ್ ಹೋಲ್ ಗೆ ಇಳಿದ ಕತೆಯನ್ನು ವಿವರಿಸಿದರು.
ಶೋಷಣೆಯನ್ನು ನಾವೇ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇದ್ದೇವೆ. ಹಸಿವು, ಅಪಮಾನ, ಭಯ ನಮ್ಮನ್ನು ಕಾಡುತ್ತದೆ. ಅಭದ್ರತೆಯ ಸೃಷ್ಟಿಯೇ ಆಟಂಬಾಂಬ್ ನಿರ್ಮಾಣಕ್ಕೆ ಕಾರಣ ಎಂದ ಅವರು, ತನ್ನನ್ನು ನಿಯಂತ್ರಿಸಿಕೊಳ್ಳಲು ಆಗದವರು ಪರತಂತ್ರ ಆಗುತ್ತಾರೆ ಎಂದರು.ಬಳಸಿ ಎಸೆಯುವ ಮಾನಸಿಕತೆಯೇ ವಿಶ್ವಕ್ಕೆ ಅಪಾಯ. ಗಾಂಧಿಯನ್ನು ನಾವು ಗಾಂಧಿತ್ವದ ಮೂಲಕ ಅರಿಯಬೇಕಾಗಿದೆ ಎಂದರು. ದುರ್ಬಲರ ಮೇಲೆ ಮಾಡುವ ಆಕ್ರಮಣ ಹಿಂಸೆ. ನಾವು ‘ಅಮ್ಮನ ಕಾಳಜಿ’ ಹಾಗೂ ‘ಪ್ರಕೃತಿ ನಿಯಮ’ ಪಾಲಿಸುತ್ತಿಲ್ಲ ಎಂದರು. ನಾವು ಮಾತನಾಡುವುದನ್ನು ಮಾಡಬಲ್ಲೆವೇ ಎಂದು ಚಿಂತಿಸಿ. ಗಾಂಧಿತ್ವ ನಮಗೆ ಸಾಧ್ಯವಾಗಲಿ ಎಂದರು. ವಿಚಾರ ಶಿಬಿರದ ಎರಡನೇ ದಿನದ ಮೊದಲ ಗೋಷ್ಠಿ- ‘ಮಹಾತ್ಮ ಮತ್ತು ಬಾಬಾಸಾಹೇಬರ ನಡುವೆ ನಡೆದ ಸಂವಾದವೇನು’? ಎಂಬ ವಿಷಯದ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಗಾಂಧೀಜಿಯವರ ಉದಾತ್ತ ವ್ಯಕ್ತಿತ್ವವನ್ನು ತಿಳಿಸುವಂತಹ ಮೂರು ಸನ್ನಿವೇಶಗಳನ್ನು ವಿವರಿದರು.
ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ರವರ ನಡುವೆ 1931 ಆಗಸ್ಟ್ 14 ರಂದು ಮುಂಬೈನ ಮಲಬಾರ್ ಹಿಲ್ಸ್ನ ಮಣಿಭವನದಲ್ಲಿ ಮೊದಲು ಭೇಟಿಯಲ್ಲಿ ನಡೆದ ಸಂವಾದದ ಮರುಪರಿಕಲ್ಪನೆಯನ್ನು ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಅಮರ್ ಬಿ. ನಡೆಸಿ ಕೊಟ್ಟರು. ದಿನದ ಎರಡನೇ ಗೋಷ್ಠಿಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಧ್ಯಕ್ಷ ಎನ್. ಆರ್. ವಿಶುಕುಮಾರ್ ಮಾತನಾಡಿ ಗಾಂಧೀಜಿಯ ಬಗೆಗಿನ ಸಂಪೂರ್ಣ ಗ್ರಹಿಕೆ ನಮಗಿಲ್ಲ. ಯುವಜನರು ಗಾಂಧೀಜಿಯ ಬಗ್ಗೆ ತಿಳಿದುಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯನ್ನು ನೋಡುವಾಗ ಕುವೆಂಪುರವರು ವಿವರಿಸಿದ ‘ಸರ್ವಜನಾಂಗದ ಶಾಂತಿಯ ತೋಟ’ ನೆನಪಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಧಕ್ಕೆ ಬರುವ ಕೆಲಸವು ಆಗುತ್ತಿದೆ. ಇದು ಸಲ್ಲದು. ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯವನ್ನು ಗಾಂಧೀಜಿ ಅಹಿಂಸೆಯ ಮೂಲಕ ಮಣಿಸಿದರು. 12ನೇ ವಯಸ್ಸಿನಲ್ಲಿಯೇ ಜಾತಿ ಪದ್ಧತಿ ಬಗ್ಗೆ ಸಂಘರ್ಷ ಮಾಡಿದ ಗಾಂಧೀಜಿ, ಆತ್ಮದಲ್ಲೇ ದೇವರನ್ನಿಟ್ಟುಕೊಂಡು ಆ ಮೌಲ್ಯಗಳನ್ನು ನಮಗೆ ನೀಡಿದರು. ಅವರನ್ನು ಅನುಮಾನಿಸುವುದು ನಮಗೆ ಅನುಮಾನ ಎಂದರು. ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್. ಆರ್. ವಿಶುಕುಮಾರ್, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಇದ್ದರು.