ಯಕ್ಷಗಾನದ ವಾಚಿಕ ವಿಭಾಗವಾದ ತಾಳಮದ್ದಳೆಯಲ್ಲಿ ಆಡುವ ಕನ್ನಡ ಭಾಷೆ ಶುದ್ಧ ಸ್ವರೂಪದಲ್ಲಿದ್ದು ಅದು ಇತರ ಕಲಾಪ್ರಕಾರಗಳಿಗೆ ಮಾದರಿಯೆನಿಸಿದೆ. ಈ ದಿಶೆಯಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ಕಳೆದ 11 ವರ್ಷಗಳಿಂದ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವಾಗಿ ಆಯೋಜಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ನವೆಂಬರ 11ರಿಂದ 19ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆದ 12 ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ವಿಭಿನ್ನ ಸ್ವರೂಪದಿಂದ ಗಮನ ಸೆಳೆಯಿತು.
ಸಾಮಾನ್ಯವಾಗಿ ತಾಳಮದ್ದಳೆಯ ದೊಡ್ಡ ಕೂಟಗಳಲ್ಲಿ ಭಾಗವಹಿಸುವ ಜನಪ್ರಿಯ ಅರ್ಥಧಾರಿಗಳನ್ನೇ ಒಟ್ಟುಗೂಡಿಸಿ ಸಪ್ತಾಹಗಳನ್ನು ನಡೆಸುವುದು ವಾಡಿಕೆ. ಅದೇ ಪುನರಾವರ್ತನೆಯಾಗುವುದೂ ಇದೆ. ಯಕ್ಷಾಂಗಣವು ಈ ಹಳೆಯ ದಾರಿಯನ್ನು ಸ್ವಲ್ಪ ಬದಲಾಯಿಸಿ ಈಗಾಗಲೇ ಸ್ಥಾಪಿತರಾದ ಅರ್ಥಧಾರಿಗಳ ಜೊತೆಗೆ ಅಲ್ಲಲ್ಲಿ ಸಂಘ ಸಂಸ್ಥೆಗಳಲ್ಲಿ ಅರ್ಥ ಹೇಳುವ ಹವ್ಯಾಸಿಗಳನ್ನೂ ಬಳಸಿಕೊಂಡು ತನ್ನ ದ್ವಾದಶ ಸರಣಿಯ ತಾಳಮದ್ದಳೆಗಳನ್ನು ನಡೆಸಿತು. ಅದರಲ್ಲಿಯೂ ಮುಖ್ಯವಾಗಿ ಜಿಲ್ಲೆಯ ಕೆಲವು ಆಯ್ದ ಯಕ್ಷಗಾನ ಸಂಘಗಳಿಗೆ ಸಂಯೋಜನೆಯ ಜವಾಬ್ದಾರಿಯನ್ನಿತ್ತು ‘ಸಂಘಟನಾ ಪರ್ವ’ ಎಂಬ ಹೆಸರಿನಲ್ಲಿ ಅದು ಸಂಪನ್ನವಾದುದು ವಿಶೇಷ. ಏಳು ದಿನಗಳಲ್ಲಿಯೂ ತಾಳಮದ್ಧಳೆಗಳಲ್ಲಿ ಹೆಚ್ಚು ಚಾಲ್ತಿಯಲ್ಲದ ಪ್ರಸಂಗಗಳನ್ನೇ ಆಯ್ದುಕೊಂಡಿರುವುದು ಮತ್ತೊಂದು ವಿಶೇಷ.
ಮೊದಲ ದಿನ ಸಪ್ತಾಹ ಉದ್ಘಾಟನೆಯ ಬಳಿಕ ಹವ್ಯಾಸಿ ಬಳಗ ಕದ್ರಿ ಇವರು ನಡೆಸಿದ ‘ರಾಜಾ ದಂಡಕ’ ಪ್ರಸಂಗವು ಬಯಲಾಟದಲ್ಲಿ ಹೆಚ್ಚು ರಂಜಿಸುವುದಾದರೂ ತಾಳಮದ್ದಳೆಗೂ ಸೈ ಎನಿಸಿತು. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರೊಂದಿಗೆ ಪುತ್ತೂರು ದೇವರಾಜ ಹೆಗ್ಡೆ, ರವಿ ಅಲೆವೂರಾಯ ವರ್ಕಾಡಿ, ಡಾ. ದಿನಕರ ಎಸ್.ಪಚ್ಚನಾಡಿ, ವಿದ್ಯಾಧರ ಶೆಟ್ಟಿ ಪೊಸಕುರಲ್, ಸುನಿಲ್ ಪಲ್ಲಮಜವಲು ಅರ್ಥಧಾರಿಗಳಾಗಿದ್ದರು. ದಿವಾಕರ ಆಚಾರ್ಯ ಪೊಳಲಿ ಭಾಗವತಿಕೆಗೆ ಸುದಾಸ್ ಆಚಾರ್ಯ ಕಾವೂರು, ರಾಜೇಶ್ ಕುಡುಪಾಡಿ ಹಿಮ್ಮೇಳದಲ್ಲಿದ್ದರು. ಎರಡನೆಯ ದಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ ಪುತ್ತೂರು ‘ಕಚ-ದೇವಯಾನಿ’ ಪ್ರಸಂಗವನ್ನು ನಡೆಸಿಕೊಟ್ಟರು. ಎನ್.ಸಂಜೀವ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಭಾಸ್ಕರ ಶೆಟ್ಟಿ ಅಜ್ಜಿಕಲ್ಲು, ಎಂ.ಸುಂದರ ಶೆಟ್ಟಿ, ಗೋಪಾಲಕೃಷ್ಣ ರಾವ್ ಬೆಟ್ಟಂಪಾಡಿ, ಪ್ರದೀಪ್ ರೈ ಕೆ. ಇವರ ಮುಮ್ಮೇಳಕ್ಕೆ ಶ್ಯಾಮ ಪ್ರಸಾದ ಎಂ., ದಾಮೋದರ ಎಂ., ನಾರಾಯಣ ಶರ್ಮ ನೀರ್ಚಾಲು, ಬಿ.ಡಿ. ಗೋಪಾಲಕೃಷ್ಣ ಭಟ್, ಪ್ರವೀಣ್ ರಾಜ್ ಹಿಮ್ಮೇಳದಲ್ಲಿದ್ದರು.
ಮೂರನೇ ತಾಳಮದ್ದಳೆ ‘ಸೈಂಧವ ವಧೆ’ ನಡೆಸಿಕೊಟ್ಟವರು ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ. ದಿವಾಕರ ಆಚಾರ್ಯ ಗೇರುಕಟ್ಟೆ, ಅಂಬಾ ಪ್ರಸಾದ್ ಪಾತಾಳ, ಜಯರಾಮ ಭಟ್ ದೇವಸ್ಯ, ಗುಡ್ಡಪ್ಪ ಬಲ್ಯ, ಹರೀಶ್ ಆಚಾರ್ಯ ಉಪ್ಪಿನಂಗಡಿ, ಶ್ರೀಧರ ಎಸ್ಪಿ ಸುರತ್ಕಲ್, ಶ್ರುತಿ ವಿಸ್ಮಿತ್ ಉಪ್ಪಿನಂಗಡಿ ಅರ್ಥ ಧಾರಿಗಳು. ಮಹೇಶ್ ಕನ್ಯಾಡಿಯವರ ಪದ್ಯಕ್ಕೆ ಮುರಳೀಧರ ಆಚಾರ್ಯ ನೇರೆಂಕಿ ಮತ್ತು ಶ್ರೀಪತಿ ಭಟ್ ಉಪ್ಪಿನಂಗಡಿ ಅವರ ಹಿಮ್ಮೇಳ. ನಾಲ್ಕನೇ ದಿನದ ಪ್ರಸಂಗ ‘ತ್ರಿಶಂಕು ಸ್ವರ್ಗ’ ಶ್ರೀ ವಾಣೀವಿಲಾಸ ಯಕ್ಷ ಬಳಗ ಕಟೀಲು ಇವರ ಸಂಘಟನೆಯಲ್ಲಿ ಸರ್ಪಂಗಳ ಈಶ್ವರ ಭಟ್, ವಿನಯ ಆಚಾರ್ಯ ಹೊಸಬೆಟ್ಟು, ಪಶುಪತಿ ಶಾಸ್ತ್ರಿ ಶಿರಂಕಲ್ಲು, ಉಮೇಶ್ ನೀಲಾವರ ಅರ್ಥದಾರಿಗಳು. ರವಿಕೃಷ್ಣ ದಂಬೆ, ಸುಬ್ರಮಣ್ಯ ಶಾಸ್ತ್ರಿ ಮಣಿಮುಂಡ, ರಾಮ ಹೊಳ್ಳ ಅವರದು ಹಿಮ್ಮೇಳ.
ಸಪ್ತಾಹದ ಐದನೇ ದಿನ ಪುರುಷೋತ್ತಮ ಪೂಂಜರ ‘ಬಿನದ ದಾಂಪತ್ಯ’ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಅವರ ಸಂಘಟನೆ. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ಗಣೇಶ ಕುಂಜತ್ತೂರು, ಆನಂದ ಸೌರ್ಕುಡೇಲು, ಹರಿಶ್ಚಂದ್ರ ನಾಯ್ಗ ಮಾಡೂರು, ಗಣೇಶ ಕಾವ ಅಂಡಾಲಬೀಡು, ಬಾಲಕೃಷ್ಣ ಶೆಟ್ಟಿ, ನವೀನ್ ಇರಾ, ದೀವಿತ್ ಎಸ್.ಕೆ.ಪೆರಾಡಿ ಅರ್ಥಧಾರಿಗಳು. ರಾಜಾರಾಮ ಹೊಳ್ಳ ಕೈರಂಗಳ ಮತ್ತು ದೇವಿಪ್ರಸಾದ್ ಆಳ್ವ ತಲಪಾಡಿ ಭಾಗವತಿಕೆಯಲ್ಲಿದ್ದರೆ ಮಯೂರ್ ನಾಯಗ ಮಾಡೂರು,ಮನ್ವಿತ್ ಶೆಟ್ಟಿ ಇರಾ, ಸ್ಕಂದ ಕೊನ್ನಾರ್ ಹಿಮ್ಮೇಳ ಒದಗಿಸಿದ್ದರು. ಆರನೇ ದಿನ ‘ಸುದರ್ಶನೋಪಾಖ್ಯಾನ’; ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು ಕನ್ಯಾನ ಅವರ ಪ್ರಸ್ತುತಿ. ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು, ಶ್ಯಾಮ ಭಟ್ ಪಕಳಕುಂಜ, ಗುಂಡ್ಯಡ್ಕ ಈಶ್ವರ ಭಟ್, ರಾಜಗೋಪಾಲ್ ಕನ್ಯಾನ ಅರ್ಥಧಾರಿಗಳಾಗಿದ್ದರೆ ಸೂರ್ಯನಾರಾಯಣ ಭಟ್ ಕಣಿಯೂರು ಅವರ ಭಾಗವತಿಕೆ, ರಾಮ ಭಟ್ ಕುದುರೆಕೂಡ್ಲು, ಜಿಡ್ಡು ಶ್ರೀಕೃಷ್ಣ ಭಟ್ , ಕುಮಾರ ಅದ್ವೈತ್ ಕನ್ಯಾನ ಹಿಮ್ಮೇಳದಲ್ಲಿದ್ದರು.
ಸಪ್ತಾಹದ ಕೊನೆಯ ದಿನ ತುಳು ಕನ್ನಡ ಎರಡು ಪ್ರಸಂಗಗಳು. ಮಧ್ಯಾಹ್ನದ ತುಳು ಪ್ರಸಂಗ ‘ರೆಂಜೆ ಬನೊತ ಲೆಕ್ಯೆಸಿರಿ’ ದೇವೀ ಮಹಾತ್ಮೆಯ ಕಥಾವಸ್ತುವನ್ನೊಳಗೊಂಡಿತ್ತು. ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಅವರದೇ ಭಾಗವತಿಕೆಗೆ ಕೋಳ್ಯೂರು ಭಾಸ್ಕರ, ರೋಹಿತ್ ಉಚ್ಚಿಲ್ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಹಿಮ್ಮೇಳ ನೀಡಿದ್ದರು. ಸಂಜಯ ಕುಮಾರ್ ಶೆಟ್ಟಿ ಗೋಣೀಬೀಡು, ಡಾ. ದಿನಕರ ಎಸ್.ಪಚ್ಚನಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅವಿನಾಶ್ ಶೆಟ್ಟಿ ಉಬರಡ್ಕ, ಜಯರಾಮ ಪೂಜಾರಿ ನರಿಕೊಂಬು ಅರ್ಥಧಾರಿಗಳಾಗಿದ್ದರು. ಸಾಯಂಕಾಲ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದ ಬಳಿಕ ತಾಳಮದ್ದಳೆಗೆ ಅಪರೂಪವಾಗಿರುವ ಪ್ರಸಂಗ ‘ಸತೀ ಶಕುಂತಲೆ’ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರಿಂದ ವಿಭಿನ್ನವಾಗಿ ಪ್ರಸ್ತುತಗೊಂಡಿತು. ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬಳೆ, ಹರೀಶ್ ಬಳಂತಿಮೊಗರು, ಮಹಾಬಲ ಶೆಟ್ಟಿ ಕೂಡ್ಲು, ರಮೇಶ ಸಾಲ್ವಣ್ಕರ್, ಉಮೇಶ ಆಚಾರ್ಯ ಗೇರುಕಟ್ಟೆ, ಕೆ.ಎಸ್.ಮಂಜುನಾಥ ಶೇರಿಗಾರ, ದಿನೇಶ್ ಶೆಟ್ಟಿ ಅಳಿಕೆ, ವಿಜಯಶಂಕರ ಆಳ್ವ ಮಿತ್ತಳಿಕೆ, ಆಜ್ಞಾ ಸೋಹಂ ವರ್ಕಾಡಿ ಅವರ ಮುಮ್ಮೇಳಕ್ಕೆ ಪ್ರಶಾಂತ ರೈ ಪುತ್ತೂರು ಭಾಗವತಿಕೆ ಮತ್ತು ಕೋಳ್ಯೂರು ಭಾಸ್ಕರ ಹಾಗೂ ಸತ್ಯಜಿತ್ ರಾಯಿ ಅವರ ಹಿಮ್ಮೇಳವಿತ್ತು.
ಯಕ್ಷಾಂಗಣವು ಆರಂಭದಿಂದಲೂ ತನ್ನ ಸಪ್ತಾಹದಲ್ಲಿ ಯಕ್ಷಗಾನಕ್ಕಾಗಿ ಸೇವೆ ಸಲ್ಲಿಸಿ ಗತಿಸಿ ಹೋದ ಹಿರಿಯರು ಮತ್ತು ಯಕ್ಷಗಾನ ಕಲಾವಿದರನ್ನು ಸ್ಮರಿಸುವ ಕಾರ್ಯ ಮಾಡಿಕೊಂಡು ಬಂದಿದೆ. ಅದರಂತೆ ಈ ಬಾರಿಯೂ ಪ್ರತಿದಿನ ಅನುಕ್ರಮವಾಗಿ ಕೀರ್ತಿಶೇಷರಾದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ. ಕಾಂತ ರೈ ಮೂಡಬಿದ್ರೆ, ಕುಂಬಳೆ ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮ ಜರಗಿತು. ಕಳೆದ 11 ವರ್ಷಗಳಿಂದ ಪ್ರತಿ ಬಾರಿ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನುಡಿ ಹಬ್ಬದ ರೂಪದಲ್ಲಿ ನಡೆಸುತ್ತಿರುವ ಈ ತಾಳಮದ್ದಳೆ ಸಪ್ತಾಹದಲ್ಲಿ ಎರಡು ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಉದ್ಘಾಟನೆಯ ದಿನ ಯಕ್ಷಗಾನ ಕಲಾ ಪೋಷಕರಿಗಾಗಿ ನೀಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ವನ್ನು ಈ ಬಾರಿ ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ ಕುಮಾರ ಕಲ್ಕೂರ ಅವರಿಗೆ ಪ್ರದಾನ ಮಾಡಲಾಯಿತು. ಸಮಾರೋಪದಂದು ಕಲಾವಿದರಿಗಾಗಿ ಕೊಡ ಮಾಡಿದ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು ಹವ್ಯಾಸಿ ಭಾಗವತ, ಪ್ರಸಂಗಕರ್ತ ಕೆ. ಎಸ್. ಮಂಜುನಾಥ ಶೇರೆಗಾರ್ ಹರಿಹರಪುರ ಅವರು ಸ್ವೀಕರಿಸಿದರು. ಅಲ್ಲದೇ ಹೆಸರಾಂತ ಹಾಸ್ಯಪಟು ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದಿಂದ ನೀಡುವ ‘ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ಪ್ರದಾನಿಸಲಾಯಿತು. ಇದರೊಂದಿಗೆ ಯಕ್ಷಾಂಗಣದ ಹಿರಿಯ ಸದಸ್ಯರಾದ ವಕ್ವಾಡಿ ಶೇಖರ ಶೆಟ್ಟಿ ಮತ್ತು ವಾಸುದೇವ ಆರ್.ಕೊಟ್ಟಾರಿ ಅವರನ್ನೂ ಸಾಂದರ್ಭಿಕವಾಗಿ ಸನ್ಮಾನಿಸಿದ್ದು ಯಶಸ್ವೀ ಸಂಘಟನೆಗೊಂದು ಮಾದರಿ.
ಒಟ್ಟಿನಲ್ಲಿ ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರ ಪರಿಕಲ್ಪನೆಯಲ್ಲಿ ಒಂದು ವಾರ ಪರ್ಯಂತ ಅಚ್ಚುಕಟ್ಟಾಗಿ ನೆರವೇರಿದ ‘ಸಂಘಟನಾ ಪರ್ವ’ ತಾಳಮದ್ದಳೆ ಸಪ್ತಾಹದ ಸಂಘಟನೆಯಲ್ಲಿ ಹೊಸ ಸಾಧ್ಯತೆಯನ್ನು ಹುಟ್ಟು ಹಾಕಿದ್ದು ಸುಳ್ಳಲ್ಲ.
ಲಕ್ಷ್ಮೀನಾರಾಯಣ ರೈ ಹರೇಕಳ