ಜಾಗತಿಕ ಮಟ್ಟದ ಬಂಟರ ಸಮಾಗಮ 2024 ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತ್ಯಂತ ಸಂತಸವಾಗುತ್ತಿದೆ. ಕಾರ್ಯಕ್ರಮದ ನೇತೃತ್ವ ವಹಿಸಿದ ಪದಾಧಿಕಾರಿಗಳೆಲ್ಲರನ್ನು ‘ಶೆಟ್ಟೀಜಿ’ ಎಂದು ಕರೆಯುವ ಮೂಲಕ ಎಲ್ಲರಿಗೂ ನಮಿಸುತ್ತಿದ್ದೇನೆ. ಬಂಟ ಸಮಾಜಕ್ಕೆ ಬಂದಾಗಲೆಲ್ಲಾ ನನ್ನಲ್ಲಿ ಉತ್ಸಾಹ ಹೆಚ್ಚುತ್ತದೆ. ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಇಲ್ಲಿ ಬಂದಾಗ ನನ್ನ ಸ್ವಂತ ಮನೆಗೆ ಬಂದಂತೆ ಅನಿಸುತ್ತದೆ. ಬಂಟ ಸಮಾಜದವರಾದ ತಾವು ನಮ್ಮಂತೆ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚು ಒಲವು ತೋರುತ್ತಿದ್ದೀರಿ. ಬಂಟ ಸಮಾಜದ ರಾಜಕೀಯ ನೇತಾರ ಗೋಪಾಲ್ ಸಿ. ಶೆಟ್ಟಿ ನನಗೆ ಹೆಚ್ಚು ಪ್ರಿಯವಾದವರು. ನಾಯಕನೆಂದರೆ ಗೋಪಾಲ್ ಸಿ. ಶೆಟ್ಟಿಯಂತಿರಬೇಕು ಎಂದು ಮಹಾರಾಷ್ಟ್ರ ರಾಜ್ಯದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನುಡಿದರು.
ಅವರು ಡಿಸೆಂಬರ್ 7 ರಂದು ಕುರ್ಲಾ ಪೂರ್ವ ಬಂಟರ ಭವನದಲ್ಲಿ ಜರಗಿದ ವಿಶ್ವ ಬಂಟರ ಸಮಾಗಮ 2024 ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಶೆಟ್ಟೀಸ್ ಉಡುಪಿ ರೆಸ್ಟೋರೆಂಟ್ ಹೆಸರಿನಲ್ಲಿ ಹೋಟೆಲ್ ಉದ್ಯಮದಲ್ಲಿ ಪರಿಣಿತರು. ಉಡುಪಿ ರೆಸ್ಟೋರೆಂಟ್ ಹೆಸರಿನ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಬಂಟರ ಸ್ಟಾರ್ ಹೋಟೆಲಿಗಿಂತ ಉಡುಪಿ ರೆಸ್ಟೋರೆಂಟ್ ರುಚಿ ಅದ್ಬುತವಾದದ್ದು. ಬಂಟ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವವರು ಇದ್ದಾರೆ. ಬಂಟರು ತಮ್ಮ ಬಂಧುಗಳನ್ನು ಎಂದೂ ಮರೆಯುವುದಿಲ್ಲ. ನೀವೆಲ್ಲರೂ ಒಂದೇ ಪರಿವಾರದವರು. ಸಮಾಜದ ವ್ಯವಸ್ಥೆಗೆ ಕಳಕಳಿ ನೀಡುವವರು. ಅಪಾರವಾಗಿ ಸ್ಪಂದಿಸುವವರು. ತಾವೆಲ್ಲರೂ ನನಗೆ ಪ್ರೀತಿ ನೀಡಿದ್ದೀರಿ. ಮಹಾರಾಷ್ಟ್ರದ ಸಂಸ್ಕೃತಿಯನ್ನು ಸಮೃದ್ಧ ಮಾಡುವಲ್ಲಿ ತಮ್ಮೆಲ್ಲರ ದೇಣಿಗೆ ಮಹತ್ವದ್ದು. ಭಾರತದ ಸ್ವರೂಪ ಬಂಟ ಸಮಾಜದಲ್ಲಿ ನೋಡಲು ಸಿಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಬಂಟ ಸಮಾಜ ಪ್ರತೀ ವರ್ಷ ನನ್ನನ್ನು ಕರೆದರೂ ನಾನು ಖಂಡಿತಾ ಬರುತ್ತೇನೆಂದು ಅಭಿಮಾನ ವ್ಯಕ್ತಪಡಿಸಿದರು.
ಗೌರವಾನ್ವಿತ ಮುಖ್ಯಮಂತ್ರಿಯವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೋಪಾಲ್ ಸಿ. ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಆನಂದ ಎಂ. ಶೆಟ್ಟಿ ತೋನ್ಸೆ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಡಾ| ಪಿ.ವಿ. ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಮಹಾ ನಿರ್ದೇಶಕರುಗಳಾದ ರಾಜೇಂದ್ರ ವಿ ಶೆಟ್ಟಿ, ಪಂಜುರ್ಲಿ ಗ್ರೂಪ್, ಶಿವಚಂದ್ರ ಶೆಟ್ಟಿ ಸಿಎಂಡಿ ಉಡುಪಿ ಟು ಮುಂಬೈ, ವಕ್ವಾಡಿ ಪ್ರವೀಣ್ ಶೆಟ್ಟಿ, ಅರವಿಂದ್ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಸಂಘದ ಪದಾಧಿಕಾರಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.