ಯುವ ಜನತೆಯು ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆದರ್ಶಪ್ರಾಯ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ದೇಶದ ಐಕ್ಯತೆಯಲ್ಲಿ ಕೈಜೋಡಿಸಿ ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ತಮ್ಮ ಪಾತ್ರ ಅತ್ಯಂತ ಹಿರಿದಾಗಿರುತ್ತದೆ. ಮಾತ್ರವಲ್ಲದೇ ಬದುಕಿನಲ್ಲಿ ಯುವ ಜನತೆಯು ಶಿಸ್ತು ಬದ್ಧವಾದ ಜೀವನ ನಡೆಸಿ, ಸಮಾಜದ ಸರ್ವತೋಮುಖ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಮೊಬೈಲ್ ನಲ್ಲಿ ಆಡುವ ಮೂಲಕ ಭಾವನಾತ್ಮಕ ಸಂಬಂಧ ಇಲ್ಲವಾಗಿದೆ. ಮುಂದಿನ ಪೀಳಿಗೆಗೆ ಹೇಗೆ ಬೆಳೆಯಬೇಕು ಎಂದು ತಂದೆ ತಾಯಿಯಂದಿರ ಕೈಯಲ್ಲಿದೆ. ಸಮಾಜದ ಸಮಸ್ಯೆಯನ್ನು ಒಟ್ಟು ಸೇರಿ ಎದುರಿಸಲು ಎಲ್ಲರೂ ಶಕ್ತರಾಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಬಹುಮಾನ ವಿತರಣೆ ಮಾಡಿ, ಸಮಾಜ ಸೇವೆಯಲ್ಲಿ ಗುರುಪುರ ಬಂಟರ ಮಾತೃ ಸಂಘದ ಕಾರ್ಯ ಚಟುವಟಿಕೆಗಳು ಅತ್ಯಂತ ಶ್ಲಾಘನೀಯವೆಂದು ಹೇಳಿದರು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು.
ಉದ್ಯಮಿ ಶೇಖರ್ ಶೆಟ್ಟಿ ಮಾಣಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಓಂ ಪ್ರಕಾಶ್ ಶೆಟ್ಟಿ ವಾಮಂಜೂರು, ಪೂರ್ಣಿಮಾ ಶೆಟ್ಟಿ ವಾಮಂಜೂರು, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಸುರೇಶ್ ಚೌಟ, ಜಗದೀಶ್ ಶೆಟ್ಟಿ, ಕೃಷ್ಣ ಶೆಟ್ಟಿ, ಪುರುಷೋತ್ತಮ್ ಮಲ್ಲಿ, ಸಂಘದ ಯುವ ವಿಭಾಗದ ಅಧ್ಯಕ್ಷ ಸಂದೀಪ್ ಆಳ್ವ ಕಳವೂರು, ದಯಾನಂದ ಮಾಡ, ಇಂದಿರಾಕ್ಷಿ ಪಿ. ಶೆಟ್ಟಿ, ಸಂಘದ ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಚಂದ್ರಹಾಸ ಶೆಟ್ಟಿ ನಾರಳ, ಪ್ರಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ಪ್ರತಿಭಾ ಹೆಗ್ಡೆ ಕುಳವೂರು (ಕೃಷಿ ಕ್ಷೇತ್ರ), ಊರ್ವಿ ಸುಲಾಯ ಮತ್ತು ಆಯುಷ್ ಎ. ರೈ ತಿರುವೈಲು ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು.
ಸಂಘದ ವ್ಯಾಪ್ತಿಯ 16 ಗ್ರಾಮಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಕುಳವೂರು ಗ್ರಾಮ ಸಮಿತಿ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದು, ಉಳಾಯಿಬೆಟ್ಟು ಗ್ರಾಮ ಸಮಿತಿಯು ದ್ವಿತೀಯ ಸ್ಥಾನ ಹಾಗೂ ತೆಂಕು ಉಳಿಪಾಡಿ ಗ್ರಾಮವು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಸ್ವಾಗತಿಸಿದರು. ಸುದರ್ಶನ್ ಶೆಟ್ಟಿ ಪೆರ್ಮಂಕಿ ಹೊಸಮನೆ ಪ್ರಸ್ತಾವಿಸಿದರು. ಉದಯ ಶೆಟ್ಟಿ ಬೆಳ್ಳೂರುಗುತ್ತು ಮತ್ತು ಮನೋಜ್ ರೈ ಮೂಡುಶೆಡ್ಡೆ ನಿರೂಪಿಸಿದರು. ಜಯರಾಮ್ ಶೆಟ್ಟಿ ಕೈಕಂಬ ವಂದಿಸಿದರು.