ವಿದ್ಯಾಗಿರಿ (ಮೂಡುಬಿದಿರೆ): ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ನಿವೃತ್ತ ಸಹ ಪ್ರಾಧ್ಯಾಪಕ ಜಯವಂತ ಜಾಧವ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿ ದೃಶ್ಯ-ಶ್ರವ್ಯ ಸಭಾಂಗಣದಲ್ಲಿ ಸೋಮವಾರ ಇಂಗ್ಲಿಷ್ ಸ್ನಾತಕೋತ್ತರ ವಿಭಾಗ, ಕನ್ನಡ ಪದವಿ ವಿಭಾಗ, ಆಳ್ವಾಸ್ ಸಿನಿಮಾ ಸಮಾಜ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ಸಿನಿಮಾ ರಸಗ್ರಹಣ-ಎರಡು ದಿನಗಳ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ನಳದಲ್ಲಿ ಮನೆ ಮನೆಗೆ ನೀರು ಬರುವಂತೆ, ದೃಶ್ಯ- ಶ್ರವ್ಯ ಮಾಧ್ಯಮ ಬರಲಿದೆ ಎಂದು ಕೆಲವು ದಶಕಗಳ ಹಿಂದೆ ತಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಇಂದು ಸಂವಹನದ ಜೊತೆ ದೃಶ್ಯ-ಶ್ರವ್ಯ ಮಾಧ್ಯಮದ ರೂಪಕದಂತಿರುವ ‘ಮೊಬೈಲ್’ ನಮ್ಮ ಅಂಗೈಯನ್ನು ಆವರಿಸಿದೆ. ಅದರಿಂದ ಅಗಲುವಿಕೆ ಅಸಾಧ್ಯ ಅನಿಸಿದೆ ಎಂದು ಮಾರ್ಮಿಕವಾಗಿ ವಿವರಿಸಿದರು. ಡಿಜಿಟಲೈಸೇಷನ್ ಮತ್ತು ಮಿನಿಯೇಚರೈಸೇಶನ್ ಎಂಬ ಜಾಗತಿಕ ಪ್ರಕ್ರಿಯೆಯು ಇಂದು ಮೊಬೈಲ್ನಲ್ಲಿ ದೊಡ್ಡ ಗ್ರಂಥಾಲಯವನ್ನು, ಜಗತ್ತಿನ ಸಂಪರ್ಕವನ್ನು ನಿಮ್ಮದಾಗಿಸಿದೆ. ಮಾತಿನ ಭಾಷೆಗಿಂತ ವಿಭಿನ್ನವಾಗಿ ಸಿನಿಮಾ ಭಾಷೆ ಸಂವಹನ ಮಾಡುತ್ತಿದೆ ಎಂದರು. ಸಿನಿಮಾದ ಮಹತ್ವವನ್ನು ಹಲವು ದಶಕಗಳ ಹಿಂದೆಯೇ ಮನಗಂಡಿದ್ದ ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತ ಹಾಗೂ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ಅವರು, ‘ಶಿಕ್ಷಣದಲ್ಲಿ ಸಿನಿಮಾ’ದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು. ಅಂದಿನ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದರು ಎಂದರು.
‘ಪುಣೆ ಫಿಲಂ ಸಂಸ್ಥೆಯಲ್ಲಿ ಶಿಬಿರ ಮುಗಿಸಿ ಬಂದ ಕೆ.ವಿ. ಸುಬ್ಬಣ್ಣ ಅವರು ಹೆಗ್ಗೋಡಿನಲ್ಲಿ ಸಿನಿಮಾ ಅಧ್ಯಯನದ ಅವಶ್ಯಕತೆಯನ್ನು ಶಿಬಿರ ಮಾದರಿಯಲ್ಲಿ ಪಸರಿಸಿದರು. ಅವರ ಕೊಡುಗೆ ಅಪಾರ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಸಿನಿಮಾ ಸಮಾಜದ ಪ್ರತಿಬಿಂಬ. ಕೆಲವೊಮ್ಮೆ ಸಮಾಜವೂ ಸಿನಿಮಾದ ಪ್ರತಿಬಿಂಬ ಆಗಬಹುದು. ಆದರೆ, ಸಿನಿಮಾದ ಉದ್ದೇಶ ಕೇವಲ ಹಣ ಮತ್ತು ಮಾರುಕಟ್ಟೆ ಮಾತ್ರವಲ್ಲ, ಸಮಾಜ ನಿರ್ಮಾಣದ ಸದುದ್ದೇಶವನ್ನೂ ಹೊಂದಿದೆ’ ಎಂದರು. ಕಲೆ ಕೇವಲ ಕಲೆಗಾಗಿಯೇ ಅಥವಾ ಯಾವುದಾದರೂ ಉದ್ದೇಶಕ್ಕಾಗಿಯೇ ಎಂಬ ಜಿಜ್ಞಾಸೆ ಬಹಳ ಹಳೆಯದು. ಸಾಮಾಜಿಕ ಬದ್ಧತೆ ಇದ್ದಾಗ ಕಲೆಗೆ ಅರ್ಥ ಬರುತ್ತದೆ.
ಈ ನಿಟ್ಟಿನಲ್ಲಿ ಬಹು ಪ್ರಭಾವ ಬೀರುವ ಮಾಧ್ಯಮ ಸಿನಿಮಾ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ, ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ.ಟಿ.ಕೆ. ರವೀಂದ್ರನ್, ಸಿನಿಮಾ ನೋಡುವುದೂ ಒಂದು ಕಲೆ. ಸಮಾಜಕ್ಕೆ ಸಿನಿಮಾದ ಅವಶ್ಯಕತೆ, ರಸಗ್ರಹಣ ವಿಚಾರಗಳ ಬಗ್ಗೆ ಹೆಗ್ಗೋಡು ನೀನಾಸಂ ಕೊಡುಗೆ ಅನನ್ಯ’ ಎಂದು ಬಣ್ಣಿಸಿದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ, ಆಳ್ವಾಸ್ ಫಿಲಂ ಸೊಸೈಟಿ ಸಂಯೋಜಕ ಹರ್ಷವರ್ಧನ ಪಿ.ಆರ್, ಇಂಗ್ಲಿಷ್ ವಿಭಾಗದ ಜ್ಯೂಲಿಯಾನ ಇದ್ದರು. ಪವಿತ್ರ ತೇಜ್ ನಿರೂಪಿಸಿದರು, ಏಂಜಲ್ ಶೈನಾ ಸ್ವಾಗತಿಸಿ, ಜೀವಿತ ವಂದಿಸಿದರು.