‘ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮತ್ತು ನಾಟಕಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಇವೆರಡೂ ನಮ್ಮ ಸಂಸ್ಕೃತಿಯ ಉಸಿರು. ಮಠ ಮಂದಿರ ಮತ್ತು ಸಂಘ ಸಂಸ್ಥೆಗಳು ಅವುಗಳಿಗೆ ಇನ್ನಷ್ಟೂ ಪೋಷಣೆ ನೀಡುವ ಅಗತ್ಯವಿದೆ’ ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದರು. ಯಕ್ಷಾಂಗಣ ಮಂಗಳೂರು ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ 12ನೇ ವರ್ಷದ ನುಡಿ ಹಬ್ಬದಲ್ಲಿ ನ.16ರಂದು ಕೀರ್ತಿ ಶೇಷ ಅರ್ಥಧಾರಿಗಳಾದ ದಿವಂಗತ ಎ.ಕೆ ನಾರಾಯಣ ಶೆಟ್ಟಿ ಫರಂಗಿಪೇಟೆ ಮತ್ತು ಎ.ಕೆ ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಆಶೀರ್ವಚನ ನೀಡಿದರು.
‘ಯಕ್ಷಗಾನ ಆಟ ಕೂಟಗಳಲ್ಲಿ ಮೆರೆದ ಹಿಂದಿನ ಕಲಾವಿದರು ಬದುಕಿರುವಾಗ ಮಾಡಿದ ಸಾಧನೆಗಳನ್ನು ನೆನಪಿಟ್ಟು, ಮುಂದಿನ ತಲೆಮಾರಿಗೆ ತಿಳಿಯಪಡಿಸುವುದು ಹಿರಿಯರ ಜವಾಬ್ದಾರಿ. ಯಕ್ಷಾಂಗಣದಂತಹ ಸಂಸ್ಥೆಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಶ್ರೇಷ್ಠ ಕಾರ್ಯ’ ಎಂದವರು ನುಡಿದರು. ಮಹೇಶ್ ಮೋಟಾರ್ಸ್ ಮಾಲಕ, ಉದ್ಯಮಿ ಎ.ಕೆ. ಜಯರಾಮ ಶೇಖ ಅವರು ಸಂಸ್ಮರಣಾ ನುಡಿಗಳನ್ನಾಡಿ ‘ಸಂಬಂಧದಲ್ಲಿ ಮಾವನಾಗಿ ತನ್ನ ಬದುಕನ್ನು ರೂಪಿಸಿದ ಎ.ಕೆ.ನಾರಾಯಣ ಶೆಟ್ಟರು ದಿ.ಎಫ್.ಎಚ್ ಒಡೆಯರ್ ಅವರ ಮಾರ್ಗದರ್ಶನದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ ಅರ್ಕುಳ ಪರಿಸರದಲ್ಲಿ ಜನಪ್ರಿಯರಾಗಿದ್ದರು. ನಿಕಟ ಬಂಧು ಎ.ಕೆ.ಮಹಾಬಲ ಶೆಟ್ಟರೊಂದಿಗೆ ಸೇರಿ ಫರಂಗಿಪೇಟೆಯಲ್ಲಿ ಯಕ್ಷಗಾನ ಸಂಘವನ್ನು ಕಟ್ಟಿ ಬೆಳೆಸಿದರು.
ಸಮಾರಂಭದಲ್ಲಿ ಯಕ್ಷಾಂಗಣದ ಹಿರಿಯ ಸದಸ್ಯ, ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ವಕ್ವಾಡಿ ಶೇಖರ ಶೆಟ್ಟಿ ಅವರನ್ನು ಸಪತ್ನಿಕರಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಯಕ್ಷಗಾನ ಕಲಾಸಕ್ತಿ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಶೇಖರ ಶೆಟ್ಟರ ಧರ್ಮಪತ್ನಿ ವಸಂತಿ ಎಸ್. ಶೆಟ್ಟಿ ಜೊತೆಗಿದ್ದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ ಕಾರಂತ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಮುಖ್ಯ ಅತಿಥಿಗಳಾಗಿದ್ದರು. ದಿ.ಎ.ಕೆ. ನಾರಾಯಣ ಶೆಟ್ಟರ ಧರ್ಮ ಪತ್ನಿ ಕಾವೇರಿ, ಅಳಿಯ ವಿಠಲ ರೈ, ಮಕ್ಕಳಾದ ಶ್ರೀನಾಥ ಶೆಟ್ಟಿ ಮತ್ತು ದಾಕ್ಷಾಯಿಣಿ ಉಪಸ್ಥಿತರಿದ್ದರು. ಯಕ್ಷಾಂಗಣದ ಪದಾಧಿಕಾರಿಗಳಾದ ಪಣಿಯೂರು ಕರುಣಾಕರ ಶೆಟ್ಟಿ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಸುಮಾ ಪ್ರಸಾದ್ ವೇದಿಕೆಯಲ್ಲಿದ್ದರು. ಯಕ್ಷಾಂಗಣ ಮಂಗಳೂರು ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಸಂಚಾಲಕ ರವೀಂದ್ರರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.
ಯಕ್ಷಗಾನ ತಾಳಮದ್ದಳೆ ಸಪ್ತಾಹದ ಆರನೇ ದಿನ ಶ್ರೀ ಚಾಮುಂಡೇಶ್ವರಿ ಯಕ್ಷಕೂಟ ಕಣಿಯೂರು ಕನ್ಯಾನ ಇವರಿಂದ ‘ಸುದರ್ಶನೋಪಾಖ್ಯಾನ’ ತಾಳಮದ್ದಳೆ ಜರಗಿತು. ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು, ಶ್ಯಾಮ ಭಟ್ ಪಕಳಕುಂಜ, ಗುಂಡ್ಯಡ್ಕ ಈಶ್ವರ ಭಟ್, ರಾಜಗೋಪಾಲ್ ಕನ್ಯಾನ ಅರ್ಥಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಸೂರ್ಯನಾರಾಯಣ ಭಟ್ ಕಣಿಯೂರು ಹಾಗೂ ಚಂಡೆ ಮದ್ದಳೆಗಳಲ್ಲಿ ರಾಮ ಭಟ್ ಕುದುರೆಕೂಡ್ಲು, ಜಿಡ್ಡು ಶ್ರೀಕೃಷ್ಣ ಭಟ್, ಕುಮಾರ ಅದ್ವೈತ್ ಕನ್ಯಾನ ಭಾಗವಹಿಸಿದ್ದರು.