ಈ ಜಗತ್ತು ದಿನದಿನವೂ ನವನವೀನ. ಪುರಾಣದ ಉಲ್ಲೇಖಗಳಂತೆ ಮತ್ತು ಅಥರ್ವ ವೇದದಲ್ಲಿ ಹದಿನಾಲ್ಕು ಲೋಕಗಳನ್ನು ಹೆಸರಿಸಲಾಗಿದೆ. ಏಳು ಮೇಲಿನ ಲೋಕಗಳು (ವ್ಯಾಹೃತಿಗಳು) ಮತ್ತು ಏಳು ಕೆಳಗಿನ ಲೋಕಗಳು (ಪಾತಾಳಗಳು), ಅವೆಂದರೆ ಮೇಲೆ ಭೂ, ಭುವಸ್, ಸ್ವರ, ಮಹಸ್, ಜನಸ್, ತಪಸ್, ಹಾಗೂ ಸತ್ಯ ಮತ್ತು ಕೆಳಗೆ ಅತಳ, ವಿತಳ, ಸುತಳ, ರಸಾತಳ, ತಲಾತಳ, ಮಹಾತಳ, ಪಾತಾಳ ಹಾಗೂ ನರಕ ಎಂಬವುಗಳು. ಆದರೆ ಲೋಕಗಳಲ್ಲಿ ಈ ನಮ್ಮ ಭೂಲೋಕದಂತಹ ಬದಲಾವಣೆ ಬೇರೆಲ್ಲೂ ಇಲ್ಲವಂತೆ. ಬಾಕಿ ಲೋಕಗಳಲ್ಲಿ ನಿತ್ಯವೂ ಅದೇ ಸ್ಥಿರವಾದ ಸುಂದರತೆ. ಇದು ಭೂಲೋಕ ವಾಸಿಗಳಾದ ನಮಗೆ ಸಂತೋಷವೇ. ಪರಮಾತ್ಮ ಶ್ರೀ ಕೃಷ್ಣನಂದಂತೆ ಬದಲಾವಣೆ ಜಗದ ನಿಯಮ. ಅದು ನಿತ್ಯವೂ ನಿರಂತರವೂ ನಡೆಯುತ್ತಲೇ ಇರಬೇಕು. ಹಾಗಿದ್ದರೇನೇ ಚಂದವೂ. ಆದರೆ ಯಾವ ಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಆದರೆ ಚಂದ ಅಲ್ವೇ? ಕ್ರಿಮಿಕೀಟಗಳಂತೆ ಯೌವನ ಬಂದ ಮಾತ್ರಕ್ಕೆ ಜೋಡಿಯಾಗಿ ಆ ಕೂಡಲೇ ಮಕ್ಕಳೂ ಆಗಿ, ಅವುಗಳು ಕ್ಷಣ ಮಾತ್ರದಲ್ಲಿ ಬೆಳೆದು, ಮತ್ತೆ ಕೆಲವೇ ದಿನದಲ್ಲಿ ಆ ಜೀವಿಯ ಜೀವನ ಅಂತ್ಯವಾಗುವಂತೆ ನಾವೂ ಕೆಲ ತಿಂಗಳುಗಳಲ್ಲೇ ಎಲ್ಲವನ್ನೂ ಮುಗಿಸಿ ವೃದ್ಧರಾದರೆ!!! ಈ ಜೀವನಕ್ಕೆ ಅರ್ಥವೇ ಇಲ್ಲ ಅಲ್ವೇ? ಅದೇ ರೀತಿ ಈ ಬದಲಾವಣೆ, ಆಧುನೀಕತೆ, ತಂತ್ರಜ್ಞಾನಗಳೂ ಕಾಲಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಮಿತ ಮತ್ತು ಹಿತವಾಗಿ ಸಾಗಿದರೆ ಈ ಜಗತ್ತು ಎಷ್ಟು ಸುಂದರವಾಗಿರುತ್ತಿತ್ತು!!.
ಆದರೆ ಪ್ರಸ್ತುತ ಎಲ್ಲರಿಗೂ ಎಲ್ಲದರಲ್ಲೂ ಧಾವಂತ ಮತ್ತು ಬೇಗ ಬೇಗನೇ ಎಲ್ಲವೂ ವಿಶೇಷವಾಗಿ ವಿಭಿನ್ನವಾಗಿ ಆಗಬೇಕು ಎಂಬ ಹಂಬಲ. ಅದರ ಪರಿಣಾಮ ವಿಪರೀತವಾಗಬಹುದು. ಅದರಿಂದ ನಮ್ಮದೇ ವಿನಾಶವೂ ಆಗಬಹುದು ಎಂಬ ಯೋಚನೆಯೇ ಇಲ್ಲದಾಗಿದೆ. ಇಷ್ಟೆಲ್ಲವೂ ಪೀಠಿಕೆ ಯಾಕೆ ಕೊಟ್ಟೆ ಎಂದ್ರೆ, ಹೊಸ ಹೊಸ ಆವಿಷ್ಕಾರಗಳು ಎಷ್ಟೇ ನಡೆದರೂ ಮನುಷ್ಯ ಅವಿನಾಶಿಯಾಗಲಾರ. ಹೊಟ್ಟೆಯ ಹಸಿವನ್ನು ಹೊಸ ಹೊಸ ಸಾಧನಗಳಿಂದ, ಸವಲತ್ತುಗಳಿಂದ ತಣಿಸಲಾರ. ಇದು ತಿಳಿಯಲೇ ಬೇಕಾದ ಸತ್ಯ. ಹಾಗಾಗಿಯೇ ಈಗಿನ ಹೊಸ ಜನಾಂಗದ ಕೆಲ ಹುಚ್ಚು ವಿಪರೀತಗಳ ಬಗ್ಗೆ ಹೇಳಲು ಹೊರಟೆ. ಅದರಲ್ಲಿ ಮುಖ್ಯವಾಗಿ ಮೊಬೈಲ್ ಎಂಬ ಮಂತ್ರವಾದಿಯ ಮಂತ್ರ ಶಕ್ತಿಗೆ ಬಲಿಯಾದ ಈ ಜಗತ್ತು ದಿನವೂ ಚಿತ್ರ ವಿಚಿತ್ರ ದಾಸ್ಯ, ಅಪವಾದ ಮತ್ತು ಎಣಿಸಲಾಗದ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದೆ. ಇದು ಸೋಜಿಗದ ಸತ್ಯ. ಮೊಬೈಲ್ ನಲ್ಲಿ ದೊರೆಯುವ ವಿಶೇಷ ತಂತ್ರಜ್ಞಾನವನ್ನು ಬಳಸಿ ಏನೆಲ್ಲಾ ಅವಾಂತರಗಳನ್ನು ನೋಡುವಂತಾಗಿದೆ. ಗಂಡ ಹೆಂಡತಿಯ ಸಂಬಂಧ, ತಂದೆ ಮಕ್ಕಳ ಸಂಬಂಧ, ಶಿಕ್ಷಕ ವಿದ್ಯಾರ್ಥಿಗಳ ಸಂಬಂಧ, ಒಟ್ಟು ಕುಟುಂಬದ, ಸಮಾಜದ ಸಂಬಂಧವೇ ಅರ್ಥವಿಲ್ಲದಂತೆ ಮುಂದುವರಿಯುತ್ತಿದೆ. ನೈತಿಕತೆ ಅಧಪತನ ಕಾಣುತ್ತಿದೆ. ಮನೆ, ಮಠ, ಮಂದಿರ, ಮದುವೆ ಮನೆ, ಸ್ಮಶಾನ ಎಲ್ಲದರಲ್ಲೂ ಈ ಸೂತಕವಿಲ್ಲದ ಮೊಬೈಲ್ ತನ್ನ ಚಿತ್ರೀಕರಣ ಮುಂದುವರಿಸಿದೆ. ಹಬ್ಬ ಹುಣ್ಣಿಮೆ ಒಳ್ಳೆ ದಿನಗಳಲ್ಲಿ ದೇವರಿಗೆ ಪೂಜೆ ಮಾಡುವುದರಿಂದ ಹಿಡಿದು ಹಿರಿಯರ ಕಾಲು ಹಿಡಿಯುವುದು, ಗಂಡನಿಗೆ ನಮಸ್ಕರಿಸುವುದು, ಮೊಬೈಲ್ ಫೋಟೋಗಾಗಿ ಎಂಬಂತಾಗಿದೆ. ಇದೇ ಒಂದು ವಿಚಿತ್ರ ರೋಗ (ಫೋಬಿಯ) ವಾಗಿದೆ. ಒಳ್ಳೆಯ ಕೆಲಸಕ್ಕೆ ಸಮಾರಂಭಕ್ಕೆ ಇದು ಅವಶ್ಯಕ ಎಂದಿಟ್ಟುಕೊಳ್ಳೋಣ. ಒಮ್ಮೆಗೆ ನಾಲ್ಕೈದು ಕ್ಯಾಮರಾ ಬಳಸಿ ಚಿತ್ರೀಕರಿಸುತ್ತಾರೆ ಸರಿಯಪ್ಪ. ಆದರೆ ಯಾವುದೇ ಸಮಾರಂಭದ ದೃಶ್ಯ ಸಮಾರಂಭ ಮುಗಿದ ನಂತರ ಎಷ್ಟು ಮಂದಿ ಎಷ್ಟು ಸಲ ನೋಡಿರಬಹುದು?!. ಒಮ್ಮೆ ಊಹಿಸಿ. ಆದರೂ ಇದೊಂದು ವಿಚಿತ್ರ ಹುಚ್ಚು. ಅದಿರಲಿ, ಯಾವ ಕೆಟ್ಟ/ಬೇಡದ ಕೆಲಸ ಮಾಡಿದರೂ ಅದರದ್ದೂ ವೀಡಿಯೋ ಮಾಡುವುದು ಎಂದರೆ?. ಎಲ್ಲಾ ಬಿಡಿ, ತಾನು ತನ್ನ ಮನೆಯ ಅಂತಃಪುರದ ಪಲ್ಲಂಗದಲ್ಲಿ ತನ್ನ ಮಡದಿಯೊಡನೆ ಸರಸವಾಡುವಾಗಲೂ ಅದನ್ನೂ ವಿಡಿಯೋ ಮಾಡುವ ಕೆಟ್ಟ ಹುಚ್ಚು ಚಟ ಸಂಪ್ರದಾಯದಂತೆ ಮುಂದುವರಿದಿದೆ ಎಂದ್ರೆ ಇದು ಏನು ಮಾದಕ ಹುಚ್ಚು!?.
ಈಗ ನಡೆಯುತ್ತಿರುವ ಹಲವಾರು ಘಟನೆಗಳು ಮುಂಚೆಯೂ ನಡೆಯುತ್ತಿತ್ತು. ಅದೊಂದು ದೊಡ್ಡ ಸಂಗತಿಯೇ ಅಲ್ಲ. ಒಂದು ಕಾಲದಲ್ಲಿ ವಿದ್ಯುತ್ ದೀಪಗಳೇ ಇರದ ಆ ನೀರವ ಕತ್ತಲೆಯ ಜಗತ್ತಿನಲ್ಲಿ ಪ್ರೌಢಾವಸ್ಥೆಯಲ್ಲಿ ಯೌವನದ ಮದದಲ್ಲಿ ಹಳ್ಳಿ ಪಟ್ಟಣ ಎಂಬ ವ್ಯತ್ಯಾಸವಿರದೆ ಇಂತಹ ಘಟನೆಗಳು ಮುಂಚೆಯೂ ನಡೆಯುತ್ತಿತ್ತು. ಆದರೆ ಯಾವುದೇ ಪ್ರಚಾರ ಅಬ್ಬರವಿರದೆ ದೀಪ ಆರಿದಂತೆ ಆರಿಯೂ ಹೋಗುತ್ತಿತ್ತು. ಆದರೆ ಅದೇ ಘಟನೆಗಳು ಈಗ ದೊಡ್ಡ ಸುದ್ದಿಯಾಗಿ ಇದ್ದಲ್ಲೆಲ್ಲಾ ಗುಲ್ಲೆಬ್ಬಿಸುತ್ತಿದೆ. ಮಾನ ಮರ್ಯಾದೆಯ ಹರಾಜು ಹಾಕುತ್ತಿದೆ. ಅದು ಸತ್ಯವೋ ಸುಳ್ಳೋ ಈ ವಿಮರ್ಶೆಗಿಂತಲೂ ಒಂದು ಮೊಬೈಲ್ ನಿಂದ ಇನ್ನೊಂದಕ್ಕೆ ಹರಿದಾಡುವುದಂತೂ ಸತ್ಯ. ಅದು ಹೌದೋ? ಆಗಿರಬಹುದೋ? ಎಂದು ಸರಿಯಾಗಿ ನೋಡಿ, ಓದಿ ಕಳುಹಿಸುವ ಅಥವಾ ಮತ್ತೊಬ್ಬರಿಗೆ ಕಳುಹಿಸಿ ಅದರಿಂದ ತಮಗಾಗಲೀ ಇನ್ನೊಬ್ಬರಿಗಾಗಲೀ ಏನು ಲಾಭವಾಗಬಹುದು? ಕಳುಹಿಸದೆ ಇದ್ದರೆ ಏನು ನಷ್ಟವಾಗಬಹುದು?. ಅದು ಒಂದು ವೇಳೆ ಎಡಿಟ್ ಮಾಡಿದ್ದು ಅಥವಾ ಬೋಗಸ್ ವೀಡಿಯೋ/ ಫೋಟೋವೋ ಆಗಿದ್ದಲ್ಲಿ, ಅದರಲ್ಲಿರುವ ವ್ಯಕ್ತಿಯ ಮಾನ ಹರಣವಾಗಬಹುದು. ಇಲ್ಲವೇ ಆತ ಬೇಸರಗೊಳ್ಳಬಹುದು, ಖಿನ್ನತೆಯಿಂದ ಸಾಯಲೂಬಹುದು ಎಂದು ಆಲೋಚಿಸುವ ತಾಳ್ಮೆ ವಿವೇಕ ಇರುವವರೇ ಬರೀ ಕಡಿಮೆಯಾಗಿದ್ದಾರೆ. ಸುದ್ದಿ ಹರಡುವುದರಲ್ಲೇ ಬಿಸಿಯಾಗಿದ್ದಾರೆ. ಮೊಬೈಲ್ ಎಂಬ ಸಾಮ್ರಾಜ್ಯದ ಅಧಿಪತಿಗಳಾಗಿ ಬೆರಳ ತುದಿಯಲ್ಲಿ ಒತ್ತಿ ಒತ್ತಿ ಇನ್ನೊಬ್ಬರಿಗೆ ಕಳುಹಿಸಿ ಅದರಿಂದ ಹೀರೋ ಆಗುವವರು ಬಹಳಷ್ಟು ಮಂದಿ. ಇದುವೇ ನಮ್ಮಲ್ಲಿ ಇಂದು ನಡೆಯುತ್ತಿರುವ ಅದೆಷ್ಟೋ ಬೇಡದ ಘಟನೆಗಳಿಗೆ ಪ್ರಚೋದನೆ ಎಂಬುದು ನಮ್ಮ ಎಲ್ಲಾ ವಿದ್ಯಾವಂತರೂ ವಿವೇಕಿಗಳೂ ಎಂದೆಣಿಸಿದವರು ತಿಳಿದೂ ತಿಳಿಯದಂತಿರುವ ಕಟು ಸತ್ಯ.
ಮದುವೆಗೆ ಹೆಣ್ಣು ನೋಡುವಾಗಿಂದ ಪ್ರಾರಂಭವಾಗಿ, ಪ್ರಿವೆಡ್ಡಿಂಗ್ ಶೂಟ್, ಮೆಹಂದಿ, ಮದುವೆ, ರಿಸಪ್ಷನ್, ಸಂಗೀತ್, ಇನ್ನೂ ಹತ್ತು ಹಲವು ಫಂಕ್ಷನ್ಗಳು, ಎಲ್ಲೆಲ್ಲೂ ವೀಡಿಯೋ ವೀಡಿಯೋ. ನೆನಪುಗಳು ಮುಂದೆಯೂ ಬೇಕು ಎಂದು ನಾವೂ ಪೋಟೋ ವೀಡಿಯೋ ಮಾಡಿದ್ದೇವೆ. ಆದರೆ ಈಗಿನ ವಿಪರೀತ ಎಂದ್ರೆ ಒಂದು ಕಾರ್ಯಕ್ರಮವನ್ನು ಒಬ್ಬ ಪ್ರೊಫೆಷನಲ್ ಫೋಟೋಗ್ರಾಫರ್ ಗೆ ವಹಿಸಿಕೊಟ್ಟ ಮೇಲೆ ಮತ್ತೆ ಇಪ್ಪತ್ತು ಮಂದಿ ವೀಡಿಯೋ ಮಾಡುವ ಮೊಬೈಲ್ ನಲ್ಲಿ ಶೂಟಿಂಗ್ ಮಾಡುವ ಅಗತ್ಯವಾದರೂ ಏನು?. ಇದೇ ಪ್ರತೀ ಕಾರ್ಯಕ್ರಮದಲ್ಲಿ ಕಿರಿಕಿರಿ ಉಂಟು ಮಾಡುವುದು. ಇದರಿಂದಲೇ ಮತ್ತೆ ಕೆಲವಷ್ಟು ಕಿರಿಕ್ ಗಳೂ ಸಂಭವಿಸುವುದು. ಅದು ದೈವ ದೇವರ ಆಲಯ, ಆಲಡೆ, ಬನ, ಕೊಡಿಯಡಿ, ಗರ್ಭಗುಡಿ, ರೆಸ್ಟ್ ರೂಮ್, ಬೆಡ್ ರೂಮ್ ಎಲ್ಲೆಂದರಲ್ಲಿ ಎಲ್ಲೆ ಮೀರಿ ಓಡುತ್ತಿದೆ. ಮೊನ್ನೆ ಮೊನ್ನೆ ಒಂದು ವೀಡಿಯೋ ಬಂತು. ಒಂದು ಕಾರ್ ರಸ್ತೆ ಮಧ್ಯೆ ಹೊತ್ತಿ ಉರಿಯುತ್ತಿದೆ. ಸುತ್ತ ಮತ್ತಲಿನ ಮಂದಿ ಕೇವಲ ವೀಡಿಯೋ ಮಾಡುವುದರಲ್ಲೇ ಬಿಜಿ!. ನೋಡು ನೋಡುತ್ತಿದ್ದಂತೆ ಆ ಉರಿಯುತ್ತಿದ್ದ ಕಾರು ಡ್ರೈವರೇ ಇಲ್ಲದೇ ಮುಂದೆ ಚಲಿಸಲು ಫ್ರಾರಂಭಿಸಿತು ಮತ್ತು ಎದುರಿಗಿದ್ದವರೆಲ್ಲಾ ಚೆಲ್ಲಾಪಿಲ್ಲಿ ಓಡುವಂತಾಯಿತು. ಇಂತಹ ಹಲವಷ್ಟು ಸನ್ನಿವೇಶಗಳು ದಿನನಿತ್ಯ ನಡೆಯುತ್ತಿದೆ. ಮನೆ ಹೊತ್ತಿ ಉರಿಯಲಿ, ನೀರಲ್ಲಿ ಮುಳುಗಲಿ, ಆಕ್ಸಿಡೆಂಟ್ ಆಗಲಿ, ಹೃದಯಾಘಾತವಾಗಲಿ ಏನೇ ಆದರೂ ಅದರ ಸಂವೇದನೆಯೇ ಇಲ್ಲದೇ ರೆಕಾರ್ಡ್ ಮಾಡುವ ಅಮಾನವೀಯತೆ ವಿಪರೀತವಾಗಿ ಮುಂದುವರಿಯುತ್ತಿದೆ. ಹೋಟೆಲ್ ಗೆ ಹೋಗಲು ಕಾರ್ ಹತ್ತುವಾಗ ಒಂದು ಸೆಲ್ಫಿ, ಹೋಟೇಲ್ ಒಳಗೆ ಹೋಗುವಾಗ, ಫುಡ್ ಮೆನುವಿನ ಫೋಟೋ, ಆರ್ಡರ್ ಮಾಡಿದ ಪ್ರತೀ ಐಟಮ್ ನ ಜೊತೆ ಸೆಲ್ಪೀ, ಬಾಯಿಗಿಡುವಾಗ ಸೆಲ್ಫಿ. ಅಯ್ಯೋ ಅಯ್ಯೋ ಮತ್ತೆ ಬೆಳಿಗ್ಗೆ ಅದು ಹಿಂದಿನಿಂದ ಹೊರ ಬರುವಾಗಿನ ಸೆಲ್ಪಿಯೊಂದು ತೆಗೆಯಲು ಸ್ವಲ್ಪ ಕಷ್ಟ!. ಹಾಗಾಗಿ ಅದೊಂದು ಬರುತ್ತಿಲ್ಲ.
ಕಾರಣ ಇಂದು ಹುಟ್ಟಿದ ಮಕ್ಕಳದ್ದೇ ಸೆಲ್ಫಿ ಮತ್ತೆ ಆ ಮಗು ಕೂಡಾ ಮೊಬೈಲ್ ಇಲ್ಲದೇ ಏನೂ ಮಾಡದು. ಈ ಮೊಬೈಲ್ ದಾಸತ್ವ ಇಡೀ ಮನುಕುಲವನ್ನೇ ಶಂಡನನ್ನಾಗಿಸುತ್ತಿದೆ. ಇದು ನಿಜಕ್ಕೂ ಭಯಹುಟ್ಟಿಸುವ ವಿಚಾರ. ಇಂತಹ ಮೊಬೈಲ್ ನ ಮಿತಿ ಮೀರಿದ ಬಳಕೆ ಇದು ಮನುಷ್ಯನ ನೆನಪು ಶಕ್ತಿಯಿಂದ ಹಿಡಿದು, ದೃಷ್ಟಿ ದೋಷ, ನರ ದೌರ್ಬಲ್ಯ, ಸಂತಾನಾಭಿವೃಧ್ದಿಯ ಶಕ್ತಿ ಹೀನತೆಯವರೆಗೆ ಪ್ರಭಾವ ಬೀರುತ್ತಿದೆ. ಈ ಬಗ್ಗೆ ತೀವ್ರವಾದ ಅರಿವು ಮೂಡಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅಲ್ಲವೇ?.
-ಶರತ್ ಶೆಟ್ಟಿ ಪಡುಪಳ್ಳಿ