ದಿನದಿಂದ ದಿನಕ್ಕೆ ನಮ್ಮ ಮಹಾ ನಗರವಾದ ಮಂಗಳೂರಿನ ಮಧ್ಯಭಾಗದಿಂದ ಹಿಡಿದು ಸುತ್ತಮುತ್ತಲಿನ ಸುರತ್ಕಲ್, ಮುಲ್ಕಿ, ಉಡುಪಿ, ಬಿ.ಸಿ ರೋಡ್, ಪುತ್ತೂರು ಈ ಕಡೆ ತೊಕ್ಕೊಟ್ಟು, ಕೊಣಾಜೆ, ತಲಪಾಡಿ ಎಲ್ಲವೂ ದಾಪುಗಾಲು ಇಡುತ್ತಾ ಅಭಿವೃದ್ಧಿ ಹೊಂದುತ್ತಿದೆ. ಅಭಿವೃದ್ಧಿ ಎಂದರೆ ಅದು ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ, ವಸತಿ ಸಮುಚ್ಚಯ ಇವುಗಳ ಬೆಳವಣಿಗೆಯ ವೇಗ ಮಿತಿಮೀರಿ ಓಡುತ್ತಿದೆ. ಆದರೆ ಇದನ್ನು ಸಮರ್ಪಕವಾಗಿ ನಡೆಸಿಕೊಳ್ಳಲು ನಮ್ಮ ನಗರಗಳ ಧಾರಣಶಕ್ತಿ ಹೇಗಿದೆ ಈ ಬಗ್ಗೆ ಒಮ್ಮೆ ಅವಲೋಕಿಸೋಣ. ಎಲ್ಲದಕ್ಕಿಂತ ಪ್ರಮುಖವಾಗಿ ಇವೆಲ್ಲದರಿಂದ ಬರುವಂತಹ ಕಸ ಅಥವಾ ವೇಸ್ಟೇಜ್ ವಿಲೇವಾರಿಯಲ್ಲಿ ನಮ್ಮ ಪಾತ್ರವೇನು? ಈ ಬಗ್ಗೆ ಈ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬನೂ ಆಲೋಚಿಸಲೇಬೇಕಾಗಿದೆ. ನಾವು ಕಸ ಸಂಗ್ರಹದ ತೆರಿಗೆ ಕಟ್ಟಿ ಬೆಳಿಗ್ಗೆ ಶಿಸ್ತಿನಿಂದ ತೊಟ್ಟೆಯೋ ತೊಟ್ಟಿಯೋ ಹೊರಗೆ ಇಟ್ಟುಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿದಿದ್ದೇವೆ. ಕಾರಣ ಪ್ರತಿಯೊಬ್ಬರೂ ಅವರ ಮನೆಯ ಒಳಗಿಂದ ವಾಸನೆಯ ಕಸವೂ ಬೇಡದ ವಸ್ತುಗಳೋ ಹೊರಗೆ ಹಾಕುವವರೆಗೆ ಮಾತ್ರ ತಮ್ಮ ತರಾತುರಿಯ ಜವಾಬ್ದಾರಿ ಎಂದು ತಿಳಿದಂತಿದೆ. ಆದರೆ ಇದು ಎಷ್ಟು ಸರಿ. ನಾವು ಮಾಡಿದ ಈ ಹಸಿ ಕಸ ಒಣಕಸ ಮುಂದೆ ಎಲ್ಲಿ ಹೋಗುತ್ತದೆ ಇದು ಸರಿಯಾಗಿ ವಿಲೇವಾರಿ ಆಗದಿದ್ದರೆ ಮುಂದೆ ಇದರ ಪರಿಣಾಮ ನಾವು ಉಸಿರಾಡುವ ಗಾಳಿ, ನಾವು ಕುಡಿಯುವ ನೀರು ಮತ್ತು ನಾವು ನಡೆದಾಡುವ ಫುಟ್ ಪಾತ್ ಮತ್ತು ಅದರ ಅಡಿಯಲ್ಲಿ ಹರಿಯುವ ಚರಂಡಿ ಇದರ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ ಎಂದು ನಮಗೆ ಅನಿಸಿಯೇ ಇಲ್ಲ.
ನಾವು ಭಯ ಭಕ್ತಿಯಿಂದ ಆರಾಧಿಸುವ ಆರಾಧನಾ ಕೇಂದ್ರಗಳು, ಮಠ ಮಂದಿರಗಳಿಗೆ ಇದೇ ಭೂಮಿಯಲ್ಲಿ ಹರಿಯುವ ನೀರು ಉಪಯೋಗವಾಗುವುದು. ನಮ್ಮಲ್ಲಿ ಹರಿಯುವ ಪವಿತ್ರವಾದ ನದಿಯ ತೀರ್ಥವೂ ಇದೇ ಈ ಭೂಮಿಯ ಅಡಿಭಾಗದ ನೀರಿನ ಒಸರು ಎಂಬ ಜ್ಞಾನವೇ ನಮಗಿಲ್ಲದಾಯ್ತು. ಎಲ್ಲವನ್ನೂ ಕೊಳಚೆ ಮಾಡುವುದು ನಮ್ಮ ಜನ್ಮಸಿದ್ಧ ಹಕ್ಕು ಎಂಬಂತಿದ್ದೇವೆ. ಕೆಲ ವರ್ಷದ ಹಿಂದೆ ಕೆಲವಾದರೂ ಹಸು ಕರುಗಳು ನಗರದಲ್ಲಿ ಕಾಣ ಸಿಗುತ್ತಿದ್ದವು. ಈಗ ಹಾಲು ದನದ ಕೆಚ್ಚಲಿನಿಂದ ಬರುತ್ತಿದೆ ಎಂದು ಹೆಚ್ಚಿನ ಮಕ್ಕಳಿಗೇ ಗೊತ್ತಿಲ್ಲ. ಕಾರಣ ಅವುಗಳು ಕಾಣುವುದು ಹಾಲಿನ ಪ್ಯಾಕೇಟನ್ನು ಮಾತ್ರ. ಈ ದನಗಳೂ ನಮ್ಮ ಈ ಕಾಂಕ್ರೀಟ್ ಕಾಡಿನಲ್ಲಿ ಹುಲ್ಲು ಹಸಿರು ತಿನ್ನುವುದಾದರೂ ಎಲ್ಲಿಂದ? ಎಷ್ಟು ಸಿ.ಸಿ ಕ್ಯಾಮರಾ ಹಾಕಿದ್ದರೂ ಅದನ್ನು ಸರಿಯಾಗಿ ನಿರ್ವಹಿಸದೆ ಇರುವ ಕಾರಣ ಇನ್ನೂ ಕೂಡ ಒಟ್ರಾಸಿ ಕಸ ಎಸೆಯುವ ಭಾಷೆಗೆಟ್ಟ ಸ್ವಾರ್ಥಿ ಜನ ನಮ್ಮಲ್ಲಿ ಇದ್ದಾರೆ. ನಾವು ಬಿಸಾಡಿದ ಈ ಕೊಳಚೆಯ ಪ್ಲಾಸ್ಟಿಕ್, ಥರ್ಮೋಕೋಲ್, ಬಳಸಿ ಎಸೆದ ಬಲೂನು, ಇಂತಹವುಗಳನ್ನೇ ಪ್ರಾಣಿಗಳು ತಿನ್ನಬೇಕಷ್ಟೇ. ಇದರ ಪರಿಣಾಮ ದನ ತಿಂದರೆ ಒಂದಾ ಅದರ ಹಾಲಿನಿಂದ ನಮಗೇ ಕೆಡುಕು ಅಥವಾ ತಿಂದದ್ದು ಕರಗದೆ ಹೊಟ್ಟೆಯುಬ್ಬರದಿಂದ ಅದು ಸಾಯುವುದೂ ಇದೆ. ಹಾಗಾಗಿ ನಗರದಲ್ಲಿ ಬೀಡಾಡಿ ದನಗಳ ಸಂಖ್ಯೆಯೇ ಕಡಿಮೆಯಾಗಿದೆ. ಪ್ರತಿ ಮನೆಯ ಒಬ್ಬ ಸದಸ್ಯ ಈ ಕುರಿತು ಆಲೋಚಿಸಿ, ನಮ್ಮ ಮನೆಯ ಕಸದಿಂದ ಹೇಗೆ ರಸ ತೆಗೆಯಬಹುದು? ಅಂದರೆ ಅದನ್ನೇ ಮರುಬಳಕೆ ಹೇಗೆ ಮಾಡಬಹುದು ಇಲ್ಲವೇ ಅದನ್ನೇ ಮತ್ತೆ ಪರಿಸರ ಸಹ್ಯವಾಗಿ ಹೇಗೆ ಪರಿವರ್ತಿಸಬಹುದು ಎಂದು ಆಲೋಚಿಸಿದರೆ ಎಷ್ಟು ಒಳ್ಳೆಯದಿತ್ತು. ನಮ್ಮ ಪರಿಸರದ ದುರ್ನಾತ, ಕೊಳಕು ಬೀರದಂತೆ ಮಾಡಿ, ನಮ್ಮಿಂದ ಮತ್ತೊಬ್ಬರಿಗೆ ಅಸಹ್ಯವಾಗದಂತೆ ಪರಿಸರವನ್ನು ನಾವು ಹೇಗೆ ನಿರ್ಮಾಣ ಮಾಡಬಹುದು ಎಂಬ ಸಾಮಾನ್ಯ ಜ್ಞಾನ ನಮ್ಮ ಮುಂದಿನ ಪೀಳಿಗೆಗಾದರೂ ಮೂಡುವಂತೆ ಮಾಡಬಾರದೇ?
ನಮಗೆ ನೆನಪು ಬೇಗ ಮಾಸಿ ಹೋಗುತ್ತದೆ. ನಮ್ಮೆಲ್ಲರ ಮನೆ, ವಸತಿ ಸಂಕೀರ್ಣ, ಹೋಟೇಲ್, ಅಂಗಡಿ, ಬೇಕರಿ, ಆಸ್ಪತ್ರೆ, ಶಾಲಾ ಕಾಲೇಜು, ಮೀನು, ಮಾಂಸ, ತರಕಾರಿ ಮಾರ್ಕೇಟು ಇತ್ಯಾದಿ ಎಲ್ಲದರ ದಿನನಿತ್ಯದ ಟನ್ನುಗಟ್ಟಲೆ ಕಸ ಎಲ್ಲಿ ಶೇಖರಣೆ ಆಗಬೇಕು ಮತ್ತು ಇದು ಹೇಗೆ ಸಾಧ್ಯ? ಈ ಬಗ್ಗೆ ಯಾರೂ ಆಲೋಚಿಸುವುದೇ ಇಲ್ಲ. ಮಂಗಳೂರು ಒಂದರದ್ದೇ ಎಲ್ಲಾ ಕಸವನ್ನು ವಾಮಂಜೂರು ಸಮೀಪದ ಪಚ್ಚನಾಡಿಯಲ್ಲಿ ಹಲವಾರು ದಶಕಗಳಿಂದ ಹಾಕುತ್ತಲೇ ಬಂದಿದ್ದಾರೆ. ಇದರ ಮಹಾನ್ ಅವಾಂತರ ಕೆಲವೇ ವರ್ಷದ ಮುಂಚೆ ಆ ಪ್ರದೇಶದ ಕೆಳಗಡೆಯ ಇಡೀ ಊರನ್ನೇ ಕಬಳಿಸಿ ಬಂಗಾರದ ಬೆಳೆ ಬರುವ ಕೃಷಿ ಪ್ರದೇಶವನ್ನೇ ಆಪೋಶನ ತೆಗೆದುಕೊಂಡಿದೆ. ಇದುವರೆಗೂ ಆ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ನಿರ್ವಸಿತರು ಕೋರ್ಟ್ ಕಛೇರಿ ಅಲೆಯುತ್ತಲೇ ಇದ್ದಾರೆ. ಆದರೆ ಇದರ ಪರಿವೆಯೇ ಇಲ್ಲದೆ ಮತ್ತೆ ಮೇಲ್ಭಾಗದಲ್ಲಿ ಕಸ ಸಂಗ್ರಹ ನಿರಂತರ ಸಾಗಿದೆ. ಮತ್ತೆ ಇಲ್ಲಿ ಸಂಗ್ರಹವಾದ ಕಸದಿಂದ ನೈಸರ್ಗಿಕವಾಗಿ ಬೆಂಕಿ ಹತ್ತಿ ಅದರಲ್ಲೇ ಉತ್ಪತ್ತಿಯಾಗುವ (ಬೈಯೋ ಗ್ಯಾಸ್) ಅನಿಲದಿಂದ ವಾರ, ತಿಂಗಳುಗಟ್ಟಲೆ ಬೆಂಕಿಯ ವಾಸನೆ, ಬೂದಿ, ಕಪ್ಪುಹೊಗೆ ಇಡೀ ಊರನ್ನೇ ಆವರಿಸುತ್ತಿದೆ ಮತ್ತು ಇದು ಸುತ್ತ ಮುತ್ತಲಿನ ಊರಿಗೇ ಒಂದು ಶಾಪವಾಗಿ ಪರಿಣಮಿಸಿದೆ. ಏನೇನೋ ಶ್ವಾಸ ಸಂಬಂಧಿ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಪಚ್ಚನಾಡಿಯಲ್ಲಿ ಕೇವಲ ಹೆಸರಿಗಾಗಿ ಕಾರ್ಯ ನಿರ್ವಹಿಸುವ ಸರಕಾರದ ಕಾಂಪೋಸ್ಟ್ ತಯಾರಿಕಾ ಘಟಕ ನಿಜವಾಗಿ ಉತ್ಪತ್ತಿಯಾಗುವ ದಿನವೂ ಹೆಚ್ಚು ಹೆಚ್ಚಾಗಿ ಸಂಗ್ರಹವಾಗುವ ಹಸಿ ಕಸದ ವಿಲೇವಾರಿಗೆ ಖಂಡಿತಾ ಸಾಕಾಗುತ್ತಿಲ್ಲ. ಇದು ಕೇವಲ ಕಣ್ಣು ಕಟ್ಟಿನ ಆಟ ಅಷ್ಟೇ. ಮಹಾನಗರ ಪಾಲಿಕೆಗಳು ಮತ್ತು ಜನತೆ ಒಂದು ತಿಳಿಯಬೇಕಾಗಿದೆ. ಈ ತಾತ್ಕಾಲಿಕ ವ್ಯವಸ್ಥೆ ಎಷ್ಟು ವರ್ಷಗಳಿಗೆ ಸಾಕು? ಮುಂದೆ ಇದಕ್ಕೆ ಶಾಶ್ವತ ಪರಿಹಾರ ಯಾವತ್ತು? ಇದು ಹೊಸ ಸಮಸ್ಯೆ ಅಲ್ಲವೇ ಅಲ್ಲ. ಎಷ್ಟು ಸರಕಾರಗಳು ಬಂದರೂ ಈ ಬಗ್ಗೆ ಖಚಿತವಾದ ಯೋಜನೆ ಯೋಚನೆಗಳೇ ಇಲ್ಲ. ಈ ಕಸಗಳನ್ನು ಆಯಾಯ ವಾರ್ಡ್ ಗಳಲ್ಲೇ ಸರಿಯಾಗಿ ಇತ್ಯರ್ಥ ಪಡಿಸದಿದ್ದರೆ ಇದೂ ಎಂದೂ ಕೊನೆಗಾಣದ ಸಮಸ್ಯೆಯಾಗಿ ಮುಂದುವರಿಯುವುದರಲ್ಲಿ ಸಂಶಯವಿಲ್ಲ.
ಸ್ವಚ್ಚತೆ ಎನ್ನುವುದು ಒಂದು ದೇಹಕ್ಕೆ ಎಷ್ಟು ಮುಖ್ಯವೋ ಹಾಗೆಯೇ ಒಂದು ಮನೆಗೆ ಹಾಗೆಯೇ ವಠಾರಕ್ಕೆ ಮತ್ತು ಅದು ಇಡೀ ಊರಿಗೆ ಮುಖ್ಯ. ಇದು ಹೇಗೆಂದರೆ ಒಂದು ಮನೆಯ ಟಾಯ್ಲೇಟ್ ಸರಿ ಇರುವವರೆಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ಒಂದು ವೇಳೆ ಬ್ಲಾಕ್ ಆದರೆ ಮನೆಯವರೆಲ್ಲರೂ ತೀವ್ರವಾದ ಸಮಸ್ಯೆಗೆ ಒಳಗಾಗುವರು. ನಗರದ ನೈರ್ಮಲ್ಯ ಎನ್ನುವುದೂ ಇಷ್ಟೇ ಮುಖ್ಯ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವವರೇ ನಮ್ಮಲ್ಲಿ ಹೆಚ್ಚು. ಒಂದು ದಿವಸ ಎಲ್ಲರೂ ರಸ್ತೆ ತಡೆ ಮಾಡಿ ಗೈ.ಗೈ ಗುಯಿಂ ಗುಯಿ ಸದ್ದು ಮಾಡಿ ಮತ್ತೆ ಸುಮ್ಮನಿರುತ್ತಾರೆ. ಇದು ಒಮ್ಮೆಗೇ ಎಂದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಎಲ್ಲದಕ್ಕೂ ಟೆಂಪರರಿ ಪರಿಹಾರಗಳ ಆಶ್ವಾಸನೆ ಅಷ್ಟೇ. ಮಂಗಳೂರು ಸ್ಮಾರ್ಟ್ ಸಿಟಿಯ ಕಾಮಗಾರಿ ಕಳೆದ ಕೆಲವಾರು ವರ್ಷಗಳಿಂದ ಸಾಗುತ್ತಲೇ ಇದೆ. ಮಹಾನ್ ರೆಕಾರ್ಡ್ ಎಂಬಂತೆ ನಗರದ ಕೆಲವಾರು ರಸ್ತೆಗಳು ಸ್ಪರ್ಧೆಗೆ ಬಿದ್ದಂತೆ ಪ್ರತೀ ವಾರವೂ ಅಗೆಯುವುದು ಮುಚ್ಚುವುದು ಈ ಕಣ್ಣುಮುಚ್ಚಾಲೆ ನಡೆಯುತ್ತಲೇ ಇದೆ. ಜನಗಳೂ ಹೇಳಿ, ಕೇಳಿ, ಬೈದು, ಪೇಪರ್, ನ್ಯೂಸ್ ಎಲ್ಲದರಲ್ಲೂ ಹಾಕಿ ಹಾಕಿ ಸುಸ್ತಾಗಿ ಹೈರಾಣಾಗಿ ಹೋಗಿದ್ದಾರೆ. ಇದನ್ನು ಕೇಳುವವರೇ ಇಲ್ಲ. ಮಂಗಳೂರು, ಉಡುಪಿ, ಪುತ್ತೂರು, ತಲಪಾಡಿ ಈ ನಾಲ್ಕೂ ಕಡೆಯ ಮಂದಿ ದೇಶ ವಿದೇಶಗಳಲ್ಲಿ ಮಹಾನ್ ಸಾಧಕರಾಗಿ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಆ ಮೂಲಕ ಜಗತ್ತಿನ ಎಲ್ಲಾ ಕಡೆಯೂ ಪ್ರಸಿದ್ದರೇ. ಇದು ಹೆಮ್ಮೆ ತರುವ ವಿಚಾರವೇ. ಆದರೆ ಅಷ್ಟೇ ಖೇದಕರ ವಿಚಾರವೆಂದರೆ ಮಂಗಳೂರಿನ ಟ್ರಾಫಿಕ್ ಮತ್ತು ಡ್ರೈನೇಜ್ ವ್ಯವಸ್ಥೆ ಮತ್ತು ಪಾರ್ಕಿಂಗ್ ಇರದ ನಗರದ ಹೃದಯ ಭಾಗದ ವ್ಯಾಪಾರೀ ಕೇಂದ್ರಗಳು ಮತ್ತು ಒಂದು ಮಳೆ ಬಂದರೂ ಕೊಳಕು ತುಂಬಿಕೊಳ್ಳುವ ಬೀದಿಗಳು. ಕಾರಣ ನೀರು ಸರಾಗವಾಗಿ ಹರಿದು ಹೋಗದಂತೆ ಮಾಡಿದ ಅವೈಜ್ಞಾನಿಕ ರಸ್ತೆಗಳು ಮತ್ತು ತುಂಬಿ ಹರಿಯುವ ಒಳ ಚರಂಡಿಗಳು. ಇಂದು ನಗರದಲ್ಲಿ ವಾಹನ ಚಲಾಯಿಸುವುದೇ ದುಸ್ತರ ಮತ್ತು ಬೇಸರ ಹುಟ್ಟಿಸುತ್ತಿದೆ. ಆದರೆ ಇದಕ್ಕೆಲ್ಲ ಪರಿಹಾರ ಕೊಡುವವರು ಯಾರು? ಮತ್ತೆ ಎಂದು?
“ಮನೆಗೊಂದು ಮರ” ಎಂಬ ಮಾತು ಘೋಷಣೆ ಗೆ ಮಾತ್ರ ಸೀಮಿತವಾಗಿದೆ. ಕಾರಣ ಇಡೀ ನಗರವೇ ಕಾಂಕ್ರೀಟ್ ಮತ್ತು ಇಂಟರ್ ಲಾಕ್ ಅಳವಡಿಸಿರುವುದರಿಂದ ಇದ್ದ ಮರಗಳನ್ನು ಕಡಿಯುತ್ತಾರೆಯೇ ಹೊರತು ಮರ ನೆಡುವುದಾದರೂ ಎಲ್ಲಿ ಎಂಬ ಪ್ರಶ್ನೆ?. ಹಾಗಾಗಿ ಪ್ರತೀ ವನಮಹೋತ್ಸವಕ್ಕೂ ಒಂದೇ ಗುಂಡಿಯಲ್ಲಿ ಮತ್ತೆ ಮತ್ತೆ ನೆಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಪೇಪರ್ ನಲ್ಲಿ ಹಾಕುವಂತಾಗಿದೆ. ನಮ್ಮ ಮನೆಯ ಹಸಿ ಕಸವನ್ನು ನಾವೇ ಒಂದು ವೇಸ್ಟ್ ಬಕೇಟ್ ನಲ್ಲಿ ಸಂಗ್ರಹಿಸುತ್ತಾ ಅದಕ್ಕೆ ಸ್ವಲ್ಪ ಮಣ್ಣು ಮತ್ತು ಉಪ್ಪುಹಾಕಿ ನಮ್ಮ ಮನೆಯ ತೋಟಕ್ಕೆ, ಹೂ ಗಿಡಗಳಿಗೇ ಹಾಕಿದರೆ ಅದು ನಮಗೂ ಸಾವಯವ ಗೊಬ್ಬರವಾಗುತ್ತದೆ ಮತ್ತು ಅದರಿಂದ ಮತ್ತೊಬ್ಬರಿಗೆ ಸಮಸ್ಯೆಯಾಗುವುದಿಲ್ಲ. ಆದರೆ ಈ ವ್ಯವಧಾನ ಮತ್ತು ಮನಸ್ಸು ಎಷ್ಟು ಮಂದಿಗೆ ಇದೆ?. ಕೆಲಸ- ಮನೆ ಮೊಬೈಲ್- ಟಿವಿ ಇದರಲ್ಲೇ ಬಿಡುವೆಲ್ಲಾ ಕಳೆದು ಹೋಗುತ್ತಿದೆ. ಮನೆ ಮಂದಿಯ ಜೊತೆ ಮಾತಾಡಲೂ ಪುರುಸೋತ್ತಿಲ್ಲದ ಮಂದಿಗೆ ಹೂ, ಗಿಡ, ತರಕಾರಿ ಬೆಳೆಸುವ ಮನಸ್ಸು ಹೇಗೆ ತಾನೇ ಬರಲು ಸಾಧ್ಯ? ದಿನವೂ ಕೇಳುತ್ತಿರುವ ಬೇರೆ ಬೇರೆ ಚಿತ್ರ ವಿಚಿತ್ರ ಖಾಯಿಲೆಗಳ ಕಾರಣವೇ ನಮ್ಮ ಪರಿಸರ ಮತ್ತು ನಾವು ತಿನ್ನುವ ಆಹಾರದಲ್ಲಿರುವ ಅನಗತ್ಯವಾದ ರಾಸಾಯನಿಕಗಳು. ಇದಕ್ಕೆ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದಲೇ ಸೃಷ್ಟಿಯಾಗುತ್ತಿದೆ ಈ ಹೆಸರು ಹೇಳಲು ಕಷ್ಟವಾದ ಖಾಯಿಲೆಗಳು. ನಾವು ತಿನ್ನುವ ಬಸಳೆಯೋ, ಬೆಂಡೆಯೋ, ಟೊಮ್ಯಾಟೊವೋ ನಾವೇ ನಮ್ಮ ಸಣ್ಣ ಜಾಗದಲ್ಲಿ ಖಾಲಿ ಗೋಣಿಯಲ್ಲೋ ವೇಸ್ಟ್ ಪ್ಲಾಸ್ಟಿಕ್ ನಲ್ಲೋ ಬೆಳೆಸುವ ಮನಸ್ಸು ಮಾಡಿದರೆ ಮತ್ತು ನಮ್ಮದೇ ಮನೆಯ ಅಥವಾ ನಮ್ಮ ಕಾಂಪೌಂಡ್ ನ ಬಿಸಾಡುವ ಸಾವಯವ ಗೊಬ್ಬರವನ್ನು ಇದರ ಬುಡಕ್ಕೆ ಹಾಕಿ ಬೆಳೆದರೆ ಅದು ನಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ಸ್ವಚ್ಚ ಪರಿಸರಕ್ಕೂ ಒಳ್ಳೆಯದು. ಈ ಕುರಿತಾಗಿ ನಮ್ಮ ಮಕ್ಕಳಿಗೆ ಶಾಲೆ ಮತ್ತು ವಠಾರಗಳಲ್ಲಿ ಜಾಗೃತಿ ಹುಟ್ಟಿಸುವ ಕಾರ್ಯಗಾರಗಳು ಆಗಬೇಕಾಗಿದೆ. ನಮ್ಮ ಆಹಾರ, ನಮ್ಮ ಆರೋಗ್ಯ, ಸ್ವಚ್ಛಪರಿಸರ, ಶುದ್ಧ ನೀರು ಅದರ ಜವಾಬ್ದಾರಿ ನಮ್ಮದೇ. ನಾವು ಬುದ್ದಿವಂತರು, ತಿಳುವಳಿಕೆಯುಳ್ಳವರು, ಎಲ್ಲವೂ ಮುಗಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ನಮ್ಮ ನಾಳೆಯ ಆರೋಗ್ಯದ ಜಾಗ್ರತೆ ನಾವೇ ಮಾಡಬೇಕಾಗಿದೆ. ಸರಕಾರ ಮಹಾ ನಗರಪಾಲಿಕೆಗಳು ಎಷ್ಟು ಅಂತ ಈ ಬಗ್ಗೆ ತಿಳುವಳಿಕೆ ನೀಡಬಹುದು ಇದನ್ನು ಪ್ರತಿಯೊಬ್ಬನೂ ಆಲೋಚಿಸುವುದು ಬೇಡವೇ?
ಲೇಖಕರು : ಶರತ್ ಶೆಟ್ಟಿ ಪಡುಪಳ್ಳಿ.