ಮುಂಬಯಿ ನಗರದಲ್ಲಿ ಶಿಕ್ಷಣ ಪಡೆದು ಕೆಲ ವರ್ಷಗಳ ಕಾಲ ಉದ್ಯೋಗ ಮಾಡಿ ಬಳಿಕ ಕೊಲ್ಲಿರಾಷ್ಟ್ರ ದುಬೈ ಸೇರಿದಂತೆ ವಿದೇಶಗಳಲ್ಲಿ ದುಡಿದ ಅನುಭವಗಳಿದ್ದರೂ ದೈವ ಕೊಡಮಣಿತ್ತಾಯನ ಆದೇಶವನ್ನು ಪಾಲಿಸಿ ಊರಿನಲ್ಲಿ ನೆಲೆ ನೆಂತು ಹಲವಾರು ವರ್ಷಗಳಿಂದ ಕೊಡಮಣಿತ್ತಾಯ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾ ದೈವದ ವಿಶೇಷ ಕೃಪೆಗೆ ಪಾತ್ರರಾದ ಪ್ರಸಾದ ಮುಕ್ಕಾಲ್ದಿ ಇಂದು ತುಳುನಾಡಿನಲ್ಲಿ ಜನಜನಿತ ಹೆಸರು. ಸನ್ಮಾನ್ಯ ಪ್ರಸಾದ ಮುಕ್ಕಾಲ್ದಿ ಅವರ ತೀರ್ಥ ರೂಪರಾದ ಸಂಜೀವ ಶೆಟ್ಟಿ ಅವರು ಕಾರ್ಕಳ ತಾಲ್ಲೂಕಿನ ಪೆರ್ವಾಜೆ ಗ್ರಾಮದಲ್ಲಿ ಸತತ ಮೂವತ್ತೈದು ವರ್ಷಗಳ ಸುದೀರ್ಘ ಕಾಲ ಕೊಡಮಣಿತ್ತಾಯ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸಿ ದೈವದ ಕೃಪೆಗೆ ಪಾತ್ರರಾಗಿದ್ದಷ್ಟೇ ಅಲ್ಲದೇ ಊರಿನ ದೈವಾರಾಧಕರ ಪಾಲಿಗೆ ಗೌರವಾದರಗಳ ಹಿರಿಯ ವ್ಯಕ್ತಿಯಾಗಿ ಮನ್ನಣೆ ಗಳಿಸಿದ್ದರು.
ಒಮ್ಮೆ ಊರ ನೇಮೋತ್ಸವಕ್ಕೆ ಬಂದಿದ್ದ ಪ್ರಸಾದ್ ಅವರ ಮೈಮೇಲೆ ಕೊಡಮಣಿತ್ತಾಯ ದೈವದ ಆವೇಶ ಬಂದು ಈತನನ್ನು ನನ್ನ ಸೇವೆಗೆ ಒಪ್ಪಿಸುತ್ತೇನೆಂಬ ಭಾಷೆ ಕೊಡಬೇಕೆಂದು ಅವರ ಹಿರಿಯರಿಗೆ ಅಪ್ಪಣೆ ಕೊಡಿಸಿದ ಹಿನ್ನೆಲೆಯಲ್ಲಿ ಮುಂದೆ ದೈವದ ಸೇವೆ ಮಾಡುತ್ತೇನೆಂಬ ಭಾಷೆ ಪಡೆದು ಎಣ್ಣೆ ಸ್ವೀಕರಿಸಿ ದೈವ ಕೊಡಮಣಿತ್ತಾಯನ ಸೇವೆಗೆ ತನ್ನ ಜೀವನವನ್ನು ಅರ್ಪಿಸಿಕೊಂಡು ಅಂದಿನಿಂದ ಈತನಕ ಓರ್ವ ಪ್ರಾಮಾಣಿಕ ನಿಷ್ಠಾವಂತ ಸೇವಕನಾಗಿ ದೈವ ಸೇವೆಯ ಕಟ್ಟುಪಾಡು ವಿಧಿ ನಿಯಮಗಳನ್ನು ತಿಳಿದುಕೊಂಡು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದು ಇಂದು ಕೊಡಮಣಿತ್ತಾಯ ದೈವ ಎಂದಾಗ ಪ್ರಸಾದ ಮುಕ್ಕಾಲ್ದಿ ಹೆಸರು ಮನದಲ್ಲಿ ಮೂಡುವಷ್ಟರ ಮಟ್ಟಗೆ ತುಳುನಾಡಿನ ಉದ್ದಗಲ ಹೆಸರು ಪಡೆದಿದ್ದಾರೆ
ತುಳುನಾಡಿನ ಪವಿತ್ರ ದೈವಸ್ಥಾನ ಕ್ಷೇತ್ರಗಳಲ್ಲಿ ಇವರ ಮಹತ್ವದ ಸೇವಾ ಕಾರ್ಯಗಳು ಸಂದಿವೆ. ಎಕ್ಕಾರು, ಕಟೀಲು, ತೆಳ್ಳಾರು, ಪೆರ್ವಾಜೆ, ಮುಜೂರು, ಕೆಮ್ಮಣ್ಣು, ಪಣಂಬೂರು, ಚಿಕ್ಕಲ ಬೆಟ್ಟು ಸೇರಿದಂತೆ ಅನೇಕ ದೈವಸ್ಥಾನಗಳಲ್ಲಿ ಅಲ್ಲಿನ ನೇಮೋತ್ಸವಾದಿಗಳು ವಿಧಿವತ್ತಾಗಿ ಜರಗುವಂತೆ ಸಹಕರಿಸುತ್ತಾರೆ. ಕಾರ್ಕಳ, ಮಂಗಳೂರು, ಮೂಲ್ಕಿ, ಉಡುಪಿ, ನಂದಳಿಕೆ, ಕಟೀಲು ಪರಿಸದಲ್ಲಿನ ಪ್ರತಿಷ್ಠಿತ ಬಹು ಪ್ರಸಿದ್ಧಿ ಪಡೆದ ಕಾರಣೀಕದ ಕ್ಷೇತ್ರಗಳಲ್ಲಿ ಪ್ರಸಾದ ಮುಕ್ಕಾಲ್ದಿ ಮಾರ್ಗದರ್ಶನದಲ್ಲಿ ನೇಮೋತ್ಸವ ಹಾಗೂ ಇತರ ಕಾರ್ಯಕ್ರಮಗಳು ಜರುಗುತ್ತವೆ. ಇವರ ನುಡಿಗಳಲ್ಲಿ ದೈವವನ್ನು ಪ್ರಾರ್ಥಿಸಿಕೊಡುವ ಪ್ರಸಾದದಲ್ಲಿ ತಾವು ನಂಬಿಕೊಂಡು ಬಂದ ದೈವ ದೇವರುಗಳನ್ನು ಕಾಣುವಷ್ಟು ದೈವ ನಿಷ್ಠೆಯ ವ್ಯಕ್ತಿತ್ವ ಪ್ರಸಾದ ಮುಕ್ಕಾಲ್ದಿ ಅವರದ್ದು.
ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ತಿಬಾರ ಕೊಡಮಣಿತ್ತಾಯ ಸನ್ನಿದಾನದ ಕ್ಷೇತ್ರ ಶಿಬರೂರಿನ ಮುಕ್ಕಾಲ್ದಿಯಾಗಿ ಕೊಡಮಣಿತ್ತಾಯ ಆರಾಧಕರ ಮೆಚ್ಚಿನ ಪ್ರಸಾದ ಮುಕ್ಕಾಲ್ದಿಯಾಗಿ ಪೂಜನೀಯ ಭಾವ ಆದರ ಸಂಮಾನಗಳಿಗೆ ಪಾತ್ರರಾಗಿದ್ದಾರೆ. ಅವರ ಪವಿತ್ರ ಬಾಳು ಭವಿಷ್ಯದಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯಗಳಿಂದ ತುಂಬಿರಲೆಂದು ನಾವು ನಂಬಿದ ತಿಬಾರ ಕೊಡಮಣಿತ್ತಾಯನನ್ನು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸೋಣ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು