‘ಸೇವೆಯಿಂದ ದೊರೆಯುವ ನೆಮ್ಮದಿ, ಹಣ, ಆಸ್ತಿ, ಸಂಪಾದನೆಯಿಂದ ದೊರೆಯುವುದಿಲ್ಲ’ ಎಂದು ರೋಟರಿ 3181 ರ ಜಿಲ್ಲೆಯ ಸಲಹೆಗಾರ ಬಿ.ಶೇಖರ್ ಶೆಟ್ಟಿ ಹೇಳಿದರು. ಇಲ್ಲಿನ ರೋಟರಿ ಸಂಸ್ಥೆಯಲ್ಲಿ ನಡೆದ 2024-25 ನೇ ಸಾಲಿನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಿ ಅವರು ಮಾತನಾಡಿದರು.
‘ಕೆಲವರು ಆಸ್ತಿ, ಹಣ, ಅಧಿಕಾರ ಪಡೆಯುವುದಕ್ಕಾಗಿ ಅಡ್ಡ ದಾರಿ ಹಿಡಿಯುತ್ತಾರೆ. ದೇವರು ನಮಗೆ ನೀಡಿರುವ ಪ್ರತಿ ಕ್ಷಣವನ್ನು ಸಂತೋಷ, ಸೇವೆಯಿಂದ ಕಳೆಯುವ ಬದಲು ಅಗತ್ಯಕ್ಕಿಂತಲೂ ಹೆಚ್ಚು ಸಂಪಾದನೆಯ ಬೆನ್ನು ಹತ್ತಿ ನೆಮ್ಮದಿ ಕಳೆದುಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ’ ಎಂದರು. ‘ಸಕಲೇಶಪುರ ರೋಟರಿ ಸಂಸ್ಥೆಯಿಂದ ಶಾಲೆ, ಶ್ರವಣ ದೋಷವುಳ್ಳ ಮಕ್ಕಳಿಗೆ ವಸತಿ ಶಾಲೆ, ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಶ್ಲಾಘನೀಯ’ ಎಂದು ಹೇಳಿದರು.
ಸಂಸ್ಥೆಯ ಸಹಾಯಕ ಗೌರ್ನರ್ ಅರುಣ್ ರಕ್ಷಿದಿ, ವಲಯ ದಂಡಾಧಿಕಾರಿ ಸಿ.ಇ.ಯಶ್ವಂತ್ ಮಾತನಾಡಿದರು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎ.ಡಿ. ವೀರೇಂದ್ರಕುಮಾರ್, ಕಾರ್ಯದರ್ಶಿಯಾಗಿ ರವಿರಾಜ್ ಪಿ. ಶೆಟ್ಟಿ ಹಾಗೂ ನಿರ್ದೇಶಕರಿಗೆ ಬಿ. ಶೇಖರ್ ಶೆಟ್ಟಿ ಪದವಿ ಪ್ರದಾನ ಮಾಡಿದರು. ಸ್ವರೂಪಾ ವೀರೇಂದ್ರ ಹಾಗೂ ವಂದನಾ ರವಿರಾಜ್ ಇದ್ದರು.
ಸೆಸ್ಕ್ ಎಂಜಿನಿಯರ್ ಅಭಿಷೇಕ್ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಚ್.ಎ. ಆದಿತ್ಯ, ಹರೀಶ್ ಸಕಲೇಶಪುರ ರೋಟರಿ ಸಂಸ್ಥೆಗೆ ಸೇರ್ಪಡೆಗೊಂಡರು. ಬೆಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಕೆ.ಎಸ್. ಸವಿತಾ ಅವರನ್ನು ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಸ್.ಎಂ ಸದಾಶಿವ, ಕಾರ್ಯದರ್ಶಿ ಎಸ್.ಎನ್ ಅವಿನಾಶ್ ಸಂಸ್ಥೆಯ 2023-24 ನೇ ಸಾಲಿನ ಚಟುವಟಿಕೆಗಳ ಬಗ್ಗೆ ಮಾತನಾಡಿದರು.