ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇವಾ ಕಾರ್ಯಗಳ ಜೊತೆಗೆ ಪ್ರತೀ ವರ್ಷ ನಗರದಲ್ಲಿನ ಕೆಲವೊಂದು ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗೆ ಪೂರಕವಾಗಿ ಸ್ವಂದಿಸಿ, ಮಾನವೀಯ ನೆಲೆಯಲ್ಲಿ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿರುವ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ವತಿಯಿಂದ ಈ ವರ್ಷ ಜುಲೈ 1 ರಂದು ಕಾಂಜೂರು ಮಾರ್ಗದಲ್ಲಿರುವ ವಾತ್ಸಲ್ಯ ಟ್ರಸ್ಟ್ ಮುಂಬಯಿಯ ಸಂಚಾಲಕತ್ವದಲ್ಲಿ ಕಾರ್ಯರೂಪದಲ್ಲಿರುವ ಅನಾಥಾಶ್ರಮಕ್ಕೆ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಮುಂದಾಳತ್ವದಲ್ಲಿ ಭೇಟಿ ನೀಡಿ ಅಲ್ಲಿಯ ಅನಾಥ ಮಕ್ಕಳೊಂದಿಗೆ ಬೆರೆತು ಕೆಲವು ಸಮಯ ಕಾಲ ಕಳೆದು ಮಕ್ಕಳಿಗೆ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ನೀಡಿ ಸಹಾಯ ಸಹಕಾರಗಳನ್ನು ನೀಡಲಾಯಿತು. ನವಜಾತ ಶಿಶುವಿನಿಂದ ಹಿಡಿದು 18 ವರ್ಷದ ವಯೋಮಿತಿವರೆಗಿನ ಅನಾಥ ಮಕ್ಕಳಿರುವ ಈ ಅನಾಥಾಶ್ರಮದಲ್ಲಿ ಅವರಿಗೆ ಬೇಕಾದ ವಿದ್ಯಾಭ್ಯಾಸ, ಕಂಪ್ಯೂಟರ್ ಶಿಕ್ಷಣ, ಕರಕುಶಲ (ಸ್ಕಿಲ್ ಡೆವಲಪ್ಮೆಂಟ್)ದಲ್ಲಿ ತರಬೇತಿ, ಊದುಬತ್ತಿ, ಪರಿಮಳದ ದ್ರವ್ಯ ತಯಾರಿಸುವ ತರಬೇತಿ, ಹತ್ತು ಹಲವು ಜೀವನಾವಶ್ಯಕ ತರಬೇತಿಗಳನ್ನು ನೀಡಿ, ಅವರನ್ನು ಸದೃಢರನ್ನಾಗಿ ಮಾಡುವುದು ಈ ಅನಾಥ ಆಶ್ರಮದ ವಿಶೇಷತೆಯಾಗಿದೆ.
ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕೆಲವು ಸದಸ್ಯೆಯರು ಸೇರಿದಂತೆ ಸುಮಾರು 40 ಸದಸ್ಯರು ಈ ಭೇಟಿಯಲ್ಲಿ ಭಾಗವಹಿಸಿದ್ದರು ಮತ್ತು ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅನಾಥ ಬಾಲಕ ಹಾಗೂ ಬಾಲಕಿಯರ ನಡುವೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ತನ್ನ ಮಾನವೀಯತೆಯನ್ನು ಮೆರೆದರು. ಈ ಸಂದರ್ಭದಲ್ಲಿ ವಿಕ್ರೋಲಿ ಬಂಟ್ಸ್ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಯುಗಾನಂದ ಶೆಟ್ಟಿ ವಿಶೇಷ ಅತಿಥಿ ರೂಪದಲ್ಲಿ ಜೊತೆಗಿದ್ದರು.