ಪ್ರಿಯ ಓದುಗರೇ, ನಾನು ಬಹಳ ಆತಂಕ ಹಾಗೂ ಬೇಗುದಿಯಿಂದ ಈ ಲೇಖನ ಬರೆಯುತ್ತಿದ್ದೇನೆ. ಒಂದು ತಿಂಗಳ ಹಿಂದೆ ಕೇರಳದ ಒಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆಯ 10 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಬಹುಶಃ ಭಾರತದಲ್ಲೇ ಇದು ಪ್ರಪ್ರಥಮ ಘಟನೆ ಎಂದರೂ ತಪ್ಪಿಲ್ಲ. ಏಳೆಂಟು ಬೈಕುಗಳಲ್ಲಿ ನಾಲ್ಕೈದು ಮಕ್ಕಳಂತೆ ಏರಿ ಇಂದು ಮಾರ್ಗ ನಮ್ಮದೇ ಎಂಬಂತೆ ಚಿತ್ರವಿಚಿತ್ರ ಕಸರತ್ತಿನ ಶರವೇಗದ ಪಯಣ. ಅಷ್ಟು ಮಾತ್ರವಲ್ಲದೆ ಎರಡು ವಿದೇಶ ನಿರ್ಮಿತ ಆಟದ ಕಾರುಗಳನ್ನು ಬಾಡಿಗೆಗೆ ತಂದು ಸೀಟ್ ಬೆಲ್ಟ್, ಹೆಲ್ಮೆಟ್ ಹಾಕದೆ ಅದರಲ್ಲಿ ಕುಣಿಯುತ್ತಾ ಪಯಣ. ಇವರ್ಯಾರಿಗೂ ಲೈಸೆನ್ಸ್ ಇಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮಾರ್ಗದಲ್ಲಿ ಸಾಗುವ ಇತರ ವಾಹನ ಚಾಲಕರು ಹೆದರಿ ಬದಿಯಲ್ಲೇ ನಿಲ್ಲಿಸ ಬೇಕಾಯಿತು. ಪಾದಚಾರಿಗಳಂತೂ ಬದುಕಿದೆಯಾ ಬಡಜೀವವೇ ಎಂಬಂತೆ ಸಿಕ್ಕಸಿಕ್ಕಲ್ಲಿ ಅವಿತುಕೊಂಡರು. ಪೊಲೀಸರು ಕೈ ತೋರಿಸಿದರೂ ಕ್ಯಾರೇ ಇಲ್ಲದೆ ಚೈತ್ರಯಾತ್ರೆ ನಾಗಲೋಟದಿಂದ ಸಾಗುತ್ತಿತ್ತು. ಮುಂದಿನ ಪೊಲೀಸರಿಗೆ ಸಂದೇಶ ಬಂದೊಡನೆ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿ ತಡೆದು ವಾಹನಗಳನ್ನು ವಶಪಡಿಸಿ, ಮಕ್ಕಳನ್ನು ಠಾಣೆಗೆ ಒಯ್ದರು. ಬಳಿಕ ಹೆತ್ತವರಿಗೆ ತಿಳಿಸಿ ಮಕ್ಕಳನ್ನು ವೈದ್ಯಕೀಯ ತಪಾಸಣೆ ಮಾಡಿ, ಹೆತ್ತವರಲ್ಲಿ ನಡೆದ ಸಂಗತಿ ವಿವರಿಸಿದಾಗ ಅವರ ಕಣ್ಣುಗಳು ಒದ್ದೆಯಾಗಿ ಕೈ ಮೀರಿ ಹೋದ ಅಸಹಾಯಕತೆಯನ್ನು ತೋರಿಸಿದರು. ಹೀಗೇ ಮುಂದುವರಿದರೆ ಮುಂದೆ ಬೀಳ್ಕೊಡುಗೆಗೆ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿದರೂ ಆಶ್ಚರ್ಯವಿಲ್ಲ. ಹಿರಿಯ ಮಾತಿನಂತೆ ಇಂದಿನ ಮಕ್ಕಳೇ ಮುಂದಿನ ಜನಾಂಗ, ಅದು ಇಲ್ಲಿ ಸತ್ಯವಾದರೆ ದೇಶದ ಸ್ಥಿತಿ ಊಹಿಸಲಸಾಧ್ಯ! ಇತ್ತೀಚೆಗೆ ಕೇರಳದ ಪೊಲೀಸ್ ಮುಖ್ಯಸ್ಥರು ಒಂದು ದೊಡ್ಡ ಸಮಾರಂಭದಲ್ಲಿ ಇದೇ ರೀತಿಯ ಹೃದಯ ವಿದ್ರಾವಕ ಪ್ರಕರಣವನ್ನು ವಿವರಿಸಿದರು. ಅವರ ಕೈಕೆಳಗಿನ ಐಪಿಎಸ್ ಅಧಿಕಾರಿ, ಆ ಅಧಿಕಾರಿಯ ಪತ್ನಿ ಐಎಎಸ್ ಪಡೆದು ನೆರೆಯ ರಾಜ್ಯದಲ್ಲಿ ಜಿಲ್ಲಾಧಿಕಾರಿ, ಅವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಪಿಯುಸಿ ಓಡುತ್ತಿದ್ದರೆ, ಇನ್ನೊಬ್ಬ 9 ನೇ ತರಗತಿ. ಆ ಇಬ್ಬರು ಮಕ್ಕಳು ಹಾಸ್ಟೆಲ್ ನಲ್ಲಿ ಓದುತ್ತಿದ್ದರು. ಆದರೆ ಆ ಮಕ್ಕಳು ಈ ಕಳೆದ ರಜೆಯಲ್ಲಿ ಮನೆಗೆ ಬಂದಾಗ, ಅವರ ಚಲನವಲನವನ್ನು ಗಮನಿಸಿದ ಹೆತ್ತವರು ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಭಾರೀ ಪ್ರಮಾಣದಲ್ಲಿ ಮಾರಕ ಡ್ರಗ್ಸ್ ಅಂಶ ಕಂಡು ಬಂತು. ಅವರು ವರಿಷ್ಠಾಧಿಕಾರಿಯಲ್ಲಿ ತಿಳಿಸಿದಾಗ ಒಂದು ತಿಂಗಳು ಅದರದ್ದೇ ಚಿಕಿತ್ಸೆ ಕೊಡಿಸುವ ಆಸ್ಪತ್ರೆಯಲ್ಲಿ ಸೇರಿಸಲಾಯಿತು ಎಂದು ವಿವರಿಸಿದರು.
ನಮ್ಮನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ರಕ್ಷಣೆ ಇಲ್ಲದ ಮೇಲೆ ಜನಸಾಮಾನ್ಯರ ಮಕ್ಕಳ ಪಾಡೇನು ಎಂಬುದನ್ನು ಚಿಂತಿಸಬೇಕಾಗಿದೆ. ಕೇರಳದ ನಾರ್ಕೋಟಿಕ್ ಸೆಲ್ ನ ಖಚಿತ ಮಾಹಿತಿಯಂತೆ ಮಾದಕ ದ್ರವ್ಯ ಸೇವನೆಯ ಮಕ್ಕಳಿದ್ದಾರೆ ಎಂದು ತಿಳಿಯಿತು. ಅದರಲ್ಲಿ ಸಾವಿರಾರು ಮಕ್ಕಳನ್ನು ಪ್ರಾಥಮಿಕ ಹಂತವಾದುದರಿಂದ ತಾಕೀತು ಕೊಟ್ಟು ಬಿಡಲಾಯಿತು. ಆದರೆ 3933 ವಿದ್ಯಾರ್ಥಿಗಳು ಸ್ಥಿರ ವ್ಯಸನಿಗಳೆಂದು ಕಂಡು ಹಿಡಿದು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದು ಕೇರಳದ ಸಿದ್ದಿ ಎಂದು ದಯವಿಟ್ಟು ಅವಗಣಿಸದಿರಿ ಕರ್ನಾಟಕ ರಾಜ್ಯದಲ್ಲಿ ಈ ಬಗ್ಗೆ ಅಷ್ಟಾಗಿ ಶಾಲಾ ಕಾಲೇಜುಗಳನ್ನು ವೈದ್ಯಕೀಯ ತಪಾಸಣೆ ಮಾಡುವುದಿಲ್ಲ. ಆಗಾಗ ಕರಾವಳಿಯಲ್ಲಿ ಹಾಗೂ ರಾಜ್ಯದ ಇತರ ಸ್ಥಳಗಳಲ್ಲಿ ಹೇರಳವಾಗಿ ಡ್ರಗ್ಸ್ ಮಾರಾಟ ಜಾಲ ಪತ್ತೆಯಾಗುವುದನ್ನು ಕೇಳುತ್ತಿದ್ದೇವೆ. ಅದರಲ್ಲೂ ಬೆಂಗಳೂರು ಐಟಿ ಸಿಟಿ ಆಗಿರುವುದು. ವಿದೇಶಿಗಳು ಹೆಚ್ಚಾಗಿ ಉದ್ಯೋಗ ಮಾಡುತ್ತಿರುವುದರಿಂದಾಗಿ ಇತ್ತೀಚೆಗೆ ಬೆಂಗಳೂರು ಡ್ರಗ್ಸ್ ನಲ್ಲಿ ರಾಜಧಾನಿಯಾಗಿದೆ ಎನ್ನುತ್ತಾರೆ. ಕೇವಲ ಒಂದು ಸೂಜಿಯ ತುದಿಯನ್ನು ಈ ಡ್ರಗ್ಸ್ ನಲ್ಲಿ ಆದಿ ತೆಗೆದು ಸಿಗರೇಟಿಗೆ ಹಾಕಿ ಎರಡು ಧಂ ಎಳೆದು ನಾಲೈದು ಗಂಟೆ ಇಹಲೋಕವನ್ನೇ ಮರೆಯುವಷ್ಟು ಭಯಾನಕವಾಗಿದೆ ಅದರ ಪ್ರಭಾವ ಶಾಲಾ ಕಾಲೇಜುಗಳ ಹತ್ತಿರದ ಗೂಡಂಗಡಿ, ಗಿಡಮರಗಳ ಮರೆಯಲ್ಲಿ ಇದರ ವ್ಯವಹಾರ ಅವ್ಯಾಹತವಾಗಿ ನಡೆಯುತ್ತವೆ ಎಂದು ತಿಳಿಯಿತು. ಕೇವಲ ಒಂದೆರಡು ಗ್ರಾಂ ನ ಹುಡಿಯ ಪ್ಯಾಕೇಟನ್ನು ಮುಗ್ಧ ಮಕ್ಕಳ ಪುಸ್ತಕದ ಎಡೆಯಲ್ಲಿಟ್ಟು ಅವರು ಸೂಚಿಸಿದ ಸ್ಥಳಕ್ಕೆ ಮುಟ್ಟಿಸಿದರೆ 50-100 ರೂ. ಕೊಟ್ಟು ತಮ್ಮ ಕದಂಬ ಬಾಹುವನ್ನು ಹರಡುತ್ತಾರೆ. ಒಂದು ಬಹಳ ದುಃಖದ ಸಂಗತಿ ಎಂದರೆ ಈ ಕಳೆದ ಮಹಾಚುನಾವಣೆಯಲ್ಲಿ ಯಾವೊಂದು ಪಕ್ಷವೂ ನಾವು ಗೆದ್ದರೆ ಭಾರತದಲ್ಲಿ ಈ ಮಾದಕ ದಂಧೆ ನಡೆಯದಂತೆ ಮಾಡುತ್ತೇವೆ. ಅಥವಾ ಅಂಥ ವ್ಯಾಪಾರ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ ಎಂದು ಭರವಸೆ ನೀಡಿಲ್ಲ. ಹೆಚ್ಚೇಕೆ. ಕೆಲವು ಸ್ಥಳಗಳಲ್ಲಿ ಈ ದುಷ್ಟ ವ್ಯಾಪಾರಕ್ಕೆ ಪೊಲೀಸರೇ ಅಭಯಹಸ್ತ ನೀಡಿರುವುದು ಬೆಳಕಿಗೆ ಬಂದಿದೆ.
ಆದ್ದರಿಂದ ನಮ್ಮ ಮಕ್ಕಳ ರಕ್ಷಣೆಯ ಸಂಪೂರ್ಣ ಹೊಣೆ ನಮ್ಮದೆಂದು ತಿಳಿದು ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಚೀಲ, ಪುಸ್ತಕಗಳನ್ನು ದಿನನಿತ್ಯ ಪರೀಕ್ಷಿಸಬೇಕು. ಮಕ್ಕಳ ಚಲನವಲನ, ಅವರ ನಡತೆಯಲ್ಲಿ ಆಗುವ ಬದಲಾವಣೆ, ಅನಗತ್ಯ ಹಣ ಕೇಳುವುದು, ತನ್ನ ಶಾಲೆಯ ಮಕ್ಕಳ ಹೊರತು ಇನ್ಯಾರೊಂದಿಗೋ ಬೆರೆಯುತ್ತಾರೋ ಎಂಬುದನ್ನು ಗಮನಿಸಬೇಕು. ಮಾತ್ರವಲ್ಲ. ಶಾಲೆಗೆ ಹೋಗುವಾಗ ಅಥವಾ ದಾರಿಯಲ್ಲಿ ಯಾರೇ ಆಗಲಿ ಕೊಟ್ಟ ಮಿಠಾಯಿ, ತಿಂಡಿಗಳನ್ನು ಪಡೆಯುವುದು, ರಜಾದಿನಗಳಲ್ಲಿ ಮಕ್ಕಳ ಆಟಕೂಟಗಳನ್ನೂ ಗಮನಿಸಬೇಕು. ಇಲ್ಲದಿದ್ದರೆ ನಮ್ಮ ದೇಶದಲ್ಲಿ ಈಗಾಗಲೇ ಹೆಚ್ಚುತ್ತಿರುವ ಪೈಶಾಚಿಕ ಕೃತ್ಯ, ಕಳ್ಳತನ, ಆತ್ಮಹತ್ಯೆ, ಹದಿಹರೆಯದ ಪ್ರೇಮ ಪ್ರಕರಣ, ನಾನಾ ರೀತಿಯ ಖಿನ್ನಲೆ ಮಾರಕ ರೋಗಗಳಿಗೆ ತುತ್ತಾಗಿ ಯುವತ್ವದಲ್ಲೇ ಜೀವಚ್ಛಯ ಆಗುತ್ತಿರುವ ಕರಾಳ ದಿನಗಳನ್ನು ಮನೆಯಲ್ಲಿರುವ ಹೆತ್ತವರು, ಅಜ್ಜ- ಅಜ್ಜಿಯವರು ನೋಡುವಂತಾದೀತು. ಜಾಗ್ರತೆ ಮಾದಕ ದ್ರವ್ಯ ಮುಕ್ತ ಭವ್ಯ ಭಾರತಕ್ಕೆ ಪ್ರಾರ್ಥಿಸೋಣ.
ಕಡಾರು ವಿಶ್ವನಾಥ್ ರೈ