ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗ್ಗತ್ತು ಒಂದು ರಣರಂಗ. ಇದ್ದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ (ಏಐ) ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರಿಸ ಬಹುದು ಎಂದರು.
ವಾಣಿಜ್ಯ ವಿದ್ಯಾರ್ಥಿಗಳು ಖಾತೆ, ತೆರಿಗೆ ಹಾಗೂ ಈ ಕ್ಷೇತ್ರದ ಇತರ ವಿಷಯಗಳ ಕುರಿತು ತಿಳಿಯುವುದು ಹಾಗೂ ವಾಣಿಜ್ಯದ ಎಲ್ಲಾ ಆಗುಹೋಗುಗಳನ್ನು ಗಮನಿಸಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳ ನಿಜವಾದ ಜೀವನ ಪ್ರಾರಂಭವಾಗುತ್ತಿದೆ. ಈ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಿಮ್ಮ ಮೇಲಿನ ನಂಬಿಕೆಯನ್ನು ಬೆಳೆಸಿಕೊಳ್ಳಿ ಎಂದರು. ಧನಾತ್ಮಕ ಆಲೋಚನೆಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿ ಜೀವನದ ಒಂದು ಅಮೂಲ್ಯ ಕಾರ್ಯಕ್ರಮ. ಮುಂದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಹೆಸರನ್ನು ತಂದುಕೊಡಲಿ ಎಂದು ಆಶಿಸುತ್ತೇನೆ ಎಂದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ ಇದ್ದರು.ವಿದ್ಯಾರ್ಥಿನಿ ಹಿಬಾ ಫಾತಿಮಾ ಸ್ವಾಗತಿಸಿ, ಖತೀಜಾ ಇನಾಜ್ ನಿರೂಪಿಸಿದರು. ಪ್ರಜ್ಞಾಶ್ರೀ ವಂದಿಸಿದರು.