ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿಯ ಖ್ಯಾತ ಉದ್ಯಮಿ, ವಿಶ್ವದ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆಯಾಗಿರುವ ಇಂಡಿಯಾ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷರಾದ ಪುತ್ತೂರು ಮೂಲದ ಮಿತ್ರಂಪಾಡಿ ಜಯರಾಮ ರೈಯವರಿಗೆ ಜೂನ್ 23 ರಂದು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ನೀಡಿ ಗೌರವಿಸಿತು. ವಿದೇಶಿ ಗಣ್ಯರು ಸೇರಿದಂತೆ 60 ಮಂದಿ ಸಾಧಕರಿಗೆ 2024 ರ ಸಾಲಿನ 49ನೇಯ ವಾರ್ಷಿಕ ‘ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಹೆಚ್.ಬಿ.ಪ್ರಭಾಕರ ಶಾಸ್ತ್ರಿಯವರು ನೆರವೇರಿಸಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್ ಜೋಶಿಯವರು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ.ಎಸ್.ನಾರಾಯಣ್ ರವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಆರ್ಯಭಟ ಸಂಸ್ಥೆಯ ಸಂಸ್ಥಾಪಕರಾದ ಡಾ.ಹೆಚ್.ಎಲ್.ಎನ್.ರಾವ್ ರವರು ವಹಿಸಿದ್ದರು.
ಕಾನೂನು ಮತ್ತು ನ್ಯಾಯಾಂಗ ವಿಭಾಗದಿಂದ ಸಿ.ಕೆ. ವೀರೇಶ್ಕುಮಾರ್, ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ರಕ್ಷಿತ್ ಶೆಟ್ಟಿ, ಪತ್ರಕರ್ತರಾದ ವೈ.ಎಸ್.ಎಲ್ ಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಆರ್.ಪಿ.ಅನಿಲ್, ಕತಾರ್ನಿಂದ ಅನಿಲ್ ಚಂದ್ರಶೇಖರ್ ಬಾಸಗಿ, ಲಂಡನ್ನಿಂದ ಡಾ. ಸತ್ಯವತಿ ಮೂರ್ತಿ, ಅಮೇರಿಕಾದಿಂದ ಪ್ರದ್ಯುಮ್ನ ಕಶ್ಯಪ್, ಕೃಷ್ಣ ಆದೋನಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿರುವ 60 ಸಾಧಕರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 23ರ ಸಂಜೆ 6 ಗಂಟೆಗೆ ಪ್ರದಾನ ಮಾಡಲಾಯಿತು.