ಮೂಡುಬಿದಿರೆ: ಭಾಷೆ ಎನ್ನುವುದು ಒಂದು ಶಕ್ತಿ, ಇದು ಹೆಚ್ಚಿನ ಜ್ಞಾನವನ್ನ ದೊರಕಿಸಿ ಕೊಡುತ್ತದೆ ಎಂದು ಸೇಂಟ್ ಸ್ಟೀಫನ್ಸ್ ಕಾಲೇಜಿನ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕ ಡಾ. ಎನ್ ಪಿ ಆಶ್ಲೇ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಇಂಗ್ಲೀಷ್ ವಿಭಾಗ ಆಯೋಜಿಸಿದ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಶಿಸ್ತಿನ ಪ್ರಸ್ತುತತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷೆ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಭಾಷೆ ಇದರೆ ಸಾಹಿತ್ಯವನ್ನು ಹುಟ್ಟುಹಾಕಲು ಸಾಧ್ಯ.
ಸಾಹಿತ್ಯ ಬದಲಾದಂತೆ ಭಾಷೆ ಬದಲಾಗುತ್ತದೆ, ಭಾಷೆ ಬದಲಾದಂತೆ ಸಾಹಿತ್ಯವು ಬದಲಾಗುತ್ತದೆ ಎಂದರು. ಯಾವುದೇ ಕೆಲಸವನ್ನ ಮಾಡಬೇಕಾದರೆ ಭಾಷೆ ತುಂಬಾ ಮುಖ್ಯ . ಭಾಷೆಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿದಾಗ ಮಾತ್ರ ಒಂದು ಪ್ರಬಲತೆ ಹೊಂದಲು ಸಾಧ್ಯ. ಇಂದಿನ ಜಗತ್ತಿನಲ್ಲಿ ಸೂಕ್ಷ್ಮತೆಯನ್ನು ಬೇಗ ಅರಿತುಕೊಳ್ಳಬೇಕು, ಆಧುನಿಕರಣದಲ್ಲಿ ಪ್ರತಿಯೊಂದು ಸೂಕ್ಷ್ಮತೆಗೆ ನಾವು ಒಳಗಾಗುತ್ತಿದ್ದೆವೆ ಎಂದು ಹೇಳಿದರು.
ಪ್ರಸ್ತುತ ಕಾಲಮಾನದಲ್ಲಿ ಆಂಗ್ಲ ಭಾಷೆ ಎನ್ನುವುದು ಕೇವಲ ಪ್ರಬುದ್ಧ ಭಾಷೆ ಯಾಗಿ ಕಾಣುವುದಲ್ಲದೆ ದೈನಂದಿನ ಜೀವನಕ್ಕೂ ಆಪ್ತವಾಗಿ ಹಲವಾರು ಕಥೆ, ಕವನ, ಕಾದಂಬರಿಗಳಲ್ಲೂ ಸಾಹಿತ್ಯಿಕ ಸದಾಭಿರುಚಿಯನ್ನ ಉಣಬಡಿಸುತ್ತದೆ. ಆಂಗ್ಲ ಭಾಷೆಯ ಸಾಹಿತ್ಯ ರುಚಿಯನ್ನ ಅರಿಯಲು ಮುಖ್ಯವಾಗಿ ಸಾಹಿತ್ಯಿಕ ಶಿಸ್ತನ್ನು ರೂಢಿಸಿ ಕೊಳ್ಳುವುದು ಅಗತ್ಯ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಯೋಚನೆಗಳು ಕಡಿಮೆ ಆಗಿ ಭಾವನೆಗಳು ಹೆಚ್ಚಾಗುವ ಸಾಧ್ಯತೆಯಲ್ಲಿ ನಾವಿದ್ದೇವೆ, ಯಾವುದೇ ಒಂದು ವಿಷಯದ ಕುರಿತು ಚರ್ಚೆ ಸಮಾಲೋಚನ ತರತಮ್ಯಗಳನ್ನ ಮೀರಿ ನಡೆದಾಗ ಅದು ಮಾನವ ಕುಲದ ಬೆಳವಣಿಗೆಗೆ ಸಾಧ್ಯ ಎಂದರು. ನಂತರ ಕಾರ್ಯಾಗಾರದಲ್ಲಿ ಡಾ ಕೆ ಟಿ ಮಂಜುಳಾ ಇಂಗ್ಲೀಷ್ ಭಾಷೆ ಒಂದು ಸಬಲೀಕರಣ ಸಾಧನ ಇದರ ಕುರಿತು ಉಪನ್ಯಾಸ ನೀಡಿದರು, ಶಿರ್ವದ ಎಂ.ಎಸ್. ಆರ್. ಎಸ್ ಕಾಲೇಜಿನ ಪ್ರಾಂಶುಪಾಲ ಡಾ ಮಿಥುನ್ ಚಕ್ರವರ್ತಿ ಸೃಜನಾತ್ಮಕ ಬರವಣಿಗೆಯ ವ್ಯಾಪ್ತಿಯ ಕುರಿತು ಉಪನ್ಯಾಸ ಕಾರ್ಯಕ್ರಮ ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ, ಇಂಗ್ಲೀಷ್ ಪದವಿ ವಿಭಾಗದ ಮುಖ್ಯಸ್ಥ ಮಚೇಂದ್ರ, ಸ್ನಾತಕೋತ್ತರ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ಟಿ ಕೆ ರವೀಂದ್ರನ್ ಪಾಲ್ಗೊಂಡಿದ್ದರು. ಅನಘಾ ಎಂ ಕಾರ್ಯಕ್ರಮ ನಿರೂಪಿಸಿದರು.