ಇಂದು ವ್ಯವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ ಎಂದು ಹಿರಿಯ ಸಾಹಿತಿ ಸದಾನಂದ ನಾರಾವಿ ಹೇಳಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದಲ್ಲಿ ಜರುಗಿದ ‘ತುಲುವೆರೆ ಕಲ ವರ್ಸೊಚ್ಚಯ’ದಲ್ಲಿ ಸಮಾರೋಪ ಭಾಷಣ ಮಾಡಿದರು.
ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಪದಾಧಿಕಾರಿಗಳು ಅಭಿನಂದನಾರ್ಹರು. ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಆಶಿಸಿದರು.
ಶಾರದಾ ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಯೂಟ್ಯೂಬ್ ಚಾನೆಲನ್ನು ನಿರೂಪಕ ಕದ್ರಿ ನವನೀತ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಸಾಹಿತಿ, ಸಂಘಟಕ ಕಾ.ವೀ ಕೃಷ್ಣದಾಸ್, ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ‘ತುಳು ಸಾಹಿತ್ಯದ ಬುಲೆಚ್ಚಿಲ್ ದ ತಾದಿ ಆನಿ-ಇನಿ-ನನ’ ವಿಚಾರದ ಕುರಿತು ಹಿರಿಯ ಸಾಹಿತಿ, ಸಂಶೋಧಕ ಮುದ್ದು ಮೂಡುಬೆಳ್ಳೆ ಉಪನ್ಯಾಸ ನೀಡಿದರು. ಹರಿಣಿ ಎಂ. ಶೆಟ್ಟಿ, ದಿವ್ಯಾ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳು ಅವರಿಗೆ ‘ಕಲತ ಬೊಲ್ಲಿ’ ಸನ್ಮಾನ ನೀಡಲಾಯಿತು. ರಾಜಶ್ರೀ ಟಿ ರೈ, ಅಕ್ಷಯ ಆರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿನಮ್ರ ಇಡ್ಕಿದು ಪ್ರಾರ್ಥಿಸಿದರು. ಸಾಹಿತಿ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆ ಸದಸ್ಯರಿಂದ ‘ಅಮೃತ ತುಲು ಚಿಟ್ಕ’ ಕವಿಗೋಷ್ಠಿ ಪದರಂಗಿತ ಮಿನದನ, ಚಾತುರ್ಪು ತೂಪರಿಕೆ ಕಲಾ ಪ್ರದರ್ಶನ ಜರುಗಿತು.