ಬದುಕೆಂಬ ಪಾತ್ರೆಯಲ್ಲಿ ಪ್ರೀತಿಯೊಂದನ್ನು ಬಿಟ್ಟು ಬೇರೇನನ್ನು ತುಂಬಿಸಿದರೂ ಅದು ನಮಗೇ ಮಾರಕ. ಬೇಡದ ನಕಾರಾತ್ಮಕ ಭಾವನೆಗಳಿಂದ ತುಂಬಿರುವ ಪಾತ್ರೆಯನ್ನು ಬರಿದಾಗಿಸಿ ಅದರಲ್ಲಿ ಪ್ರೀತಿ ತುಂಬಿಸೋಣ, ಪ್ರೀತಿಯನ್ನೇ ಇತರರಿಗೂ ಹಂಚೋಣ. ಐದು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಮೂರು ವರ್ಷದ ಪುಟಾಣಿ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿದ್ದ ಹುಡುಗನಿಗೆ ತಂಗಿಯ ಹೆಜ್ಜೆ ನಿಧಾನವಾಗಿದ್ದು ಗೊತ್ತಾಯಿತು. ಆತ ತಿರುಗಿ ನೋಡಿದ. ತಂಗಿ ಯಾವುದೋ ಅಂಗಡಿ ಮುಂದೆ ನಿಂತು ಏನನ್ನೋ ತದೇಕವಾಗಿ ನೋಡುತ್ತಿದ್ದಳು. ಆತ ಹಿಂದಕ್ಕೆ ಬಂದು ನೋಡಿದ. ಅದೊಂದು ಗೊಂಬೆಗಳ ಅಂಗಡಿ. ‘ನಿಂಗೇನು ಬೇಕು?’ ಎಂದು ಅಣ್ಣ ಕೇಳಿದ. ಆ ಪುಟ್ಟ ಹುಡುಗಿ ಅಂಗಡಿಯಲ್ಲಿದ್ದ ದೊಡ್ಡ ಗೊಂಬೆಯತ್ತ ಬೊಟ್ಟು ಮಾಡಿ ತೋರಿಸಿ ‘ಅದು ಬೇಕು’ ಎಂದಳು. ಹುಡುಗ ಒಬ್ಬ ಜವಾಬ್ದಾರಿಯುತ ದೊಡ್ಡಣ್ಣನಂತೆ ಆಕೆಯ ಕೈ ಹಿಡಿದುಕೊಂಡು ಅಂಗಡಿಯತ್ತ ನಡೆದು ಆ ಗೊಂಬೆಯನ್ನೆತ್ತಿ ಅವಳ ಕೈಯಲ್ಲಿಟ್ಟ.
ಖುಷಿಗೆ ಆಕೆಯ ಕಣ್ಣುಗಳರಳಿದವು. ಅಂಗಡಿಯ ಮಾಲೀಕ ಇವೆಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ. ಆ ಹುಡುಗ ಕೌಂಟರ್ಗೆ ಬಂದು ಈ ಗೊಂಬೆಗೆ ಎಷ್ಟು ದುಡ್ಡಾಗುತ್ತದೆ?’ ಎಂದು ಮಾಲೀಕನನ್ನು ಕೇಳಿದ. ಅಂಗಡಿಯಾತ ವಿಶಾಲ ಹೃದಯದವನಷ್ಟೇ ಅಲ್ಲದೆ, ದುಡ್ಡಿನ ಬೆಲೆ ಏನೆಂದು ಅರಿತವನಾಗಿದ್ದ. ಈ ಚಿಕ್ಕ ಹುಡುಗನ ಬಳಿ ಗೊಂಬೆ ಕೊಳ್ಳುವಷ್ಟು ಹಣವಿಲ್ಲವೆಂದು ಅವನಿಗೂ ಗೊತ್ತಿತ್ತು. ಆದರೂ ಆತ ಸಿಡುಕದೆ ಮಗು, ಗೊಂಬೆಯ ಬದಲಾಗಿ ನೀನು ನನಗೇನು ಕೊಡಬಲ್ಲೆ? ನಿನ್ನ ಬಳಿ ಏನಿದೆ? ಎಂದು ಪ್ರೀತಿಯಿಂದ ಕೇಳಿದ. ಆಗ ಹುಡುಗ, ಸಮುದ್ರತೀರದಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಪ್ಪೆಚಿಪ್ಪುಗಳನ್ನು ಹಣದಷ್ಟೇ ಜೋಪಾನವಾಗಿ ಜೇಬಿನಿಂದ ತೆಗೆದು ಅಂಗಡಿಯವನಿಗೆ ನೀಡಿದ. ಕಪ್ಪೆಚಿಪ್ಪುಗಳನ್ನು ನೋಡಿ ಮಾಲೀಕನ ಮುಖದಲ್ಲಿ ನಗು ಮೂಡಿತು. ಆತನೂ ಅದನ್ನು ಹಣವನ್ನೆಣಿಸುವಂತೆಯೇ ಎಣಿಸ ತೊಡಗಿದ.
ಎಲ್ಲವನ್ನೂ ಎಣಿಸಿ ಮುಗಿಸಿ ತಲೆಯೆತ್ತಿ ಹುಡುಗನ ಕಡೆ ನೋಡಿದ. ಹುಡುಗನಿಗೆ ಆತಂಕವಾಯಿತು, ಯಾಕೆ? ಗೊಂಬೆಯ ಬೆಲೆ ಇದಕ್ಕಿಂತಲೂ ಜಾಸ್ತಿಯಾಗುತ್ತದಾ?ಎಂದು ಮುಗ್ಧವಾಗಿ ಕೇಳಿದ. ಇಲ್ಲ, ಇಲ್ಲ. ನೀನು ಕೊಟ್ಟಿದ್ದು ಜಾಸ್ತಿಯಾಗಿದೆ. ನಾನೇ ನಿನಗೆ ಕೆಲವನ್ನು ವಾಪಸ್ ಕೊಡಬೇಕು ಎಂದು ಹೇಳಿ, ನಾಲ್ಕು ಕಪ್ಪೆಚಿಪ್ಪುಗಳನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ವಾಪಸ್ ಮಾಡಿದ. ಹುಡುಗನಿಗೆ ಬಹಳ ಸಂತೋಷವಾಯಿತು. ಗೊಂಬೆಯನ್ನು ತಂಗಿಯ ಕೈಗೆ ಕೊಟ್ಟು, ತಲೆ ಸವರಿ, ಆಕೆಯ ಹೆಗಲ ಮೇಲೆ ಕೈ ಹಾಕಿಕೊಂಡು ನಡೆದು ಹೋದ. ಅಂಗಡಿಯಲ್ಲಿದ್ದ ಕೆಲಸಗಾರನೊಬ್ಬ ಇವೆಲ್ಲವನ್ನು ನೋಡುತ್ತಿದ್ದ. ಮಾಲೀಕ ನಾಲ್ಕೇ ನಾಲ್ಕು ಕಪ್ಪೆಚಿಪ್ಪಿಗೆ ದೊಡ್ಡ ಗೊಂಬೆಯನ್ನು ನೀಡಿದ್ದು ಅವನಲ್ಲಿ ಆಶ್ಚರ್ಯ ಮೂಡಿಸಿತ್ತು. ಕೊನೆಗೂ ಆತ ಕೇಳಿಯೇ ಬಿಟ್ಟ ಸರ್ 4 ಕಪ್ಪೆಚಿಪ್ಪಿಗೆ ಬದಲಾಗಿ ದುಬಾರಿ ಗೊಂಬೆಯನ್ನು ಕೊಟ್ಟಿದ್ದೇಕೆ?’ ಅಂಗಡಿಯವ ನಸುನಕ್ಕು ಹೇಳಿದ, ಹೌದು ನನ್ನ-ನಿನ್ನ ಕಣ್ಣಿಗೆ ಅವು ಕೇವಲ ಕಪ್ಪೆಚಿಪ್ಪುಗಳು. ಅವುಗಳ ಬೆಲೆ ಶೂನ್ಯ. ಆದರೆ ಆ ಹುಡುಗನಿಗೆ ಅದೇ ಸರ್ವಸ್ವ.
ಅವನ ಲೆಕ್ಕದಲ್ಲಿ ಆ ಚಿಪ್ಪುುಗಳಿಗೂ ಹಣದಷ್ಟೇ ಬೆಲೆಯಿದೆ. ಈ ವಯಸ್ಸಿನಲ್ಲಿ ಹಣ ಎಂದರೇನು, ಹಣದ ಮಹತ್ವವೇನು ಎಂಬುದು ಅವನಿಗೆ ಅರ್ಥವಾಗುವುದಿಲ್ಲ. ಮಕ್ಕಳಿರುವುದೇ ಹಾಗೆ, ದೇವರಂತೆ. ಆದರೆ ದೊಡ್ಡವನಾದ ಮೇಲೆ ಅವನಿಗೆಲ್ಲ ಅರ್ಥವಾಗುತ್ತದೆ. ಕಪ್ಪೆಚಿಪ್ಪುಗಳಿಗೆ ಬದಲಾಗಿ ಗೊಂಬೆ ಖರೀದಿಸಿದ್ದು ನೆನಪಾದಾಗ ಆತ ನನ್ನನ್ನು ನೆನಪಿಸಿಕೊಳ್ಳುತ್ತಾನೆ, ಅಂದು ತಂಗಿಯ ಕಣ್ಣಲ್ಲಿ ಮಿಂಚಿದ ಬೆಳಕನ್ನು ನೆನಪಿಸಿಕೊಳ್ಳುತ್ತಾನೆ. ಈ ಜಗತ್ತು ಒಳ್ಳೆಯ ವ್ಯಕ್ತಿಗಳಿಂದ ತುಂಬಿಕೊಂಡಿದೆ ಎಂದು ಆತ ನಂಬುತ್ತಾನೆ. ಅಂಥ ನಂಬಿಕೆ ಮನುಷ್ಯನಿಗೆ ಬೇಕು. ಆಗ ಮಾತ್ರ ಬದುಕು ಸಹ್ಯವಾಗುತ್ತದೆ. ಈ ಘಟನೆ ಅವನಲ್ಲಿ ಒಳ್ಳೆಯತನವನ್ನು ಮೂಡಿಸುತ್ತದೆ. ಮುಂದೆ ಆತ ಕೂಡ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ, ಜನರ ಬದುಕಿನಲ್ಲಿ ನಗು ಮೂಡಿಸಲು ಯತ್ನಿಸುತ್ತಾನೆ. ನಾನಿವತ್ತು ದುಡ್ಡಿನಾಸೆಗಾಗಿ ಹುಡುಗನನ್ನು ಬರಿಕೈಯಲ್ಲಿ ಕಳುಹಿಸಬಹುದಿತ್ತು. ಹಾಗೆ ಮಾಡಿದ್ದರೆ ಆ ಹುಡುಗ ಹತ್ತರಲ್ಲಿ ಹನ್ನೊಂದನೆಯ ಗಿರಾಕಿಯೆನಿಸಿಕೊಳ್ಳುತ್ತಿದ್ದ. ಆದರೆ ಈಗಾತ ಒಬ್ಬ ಜವಾಬ್ದಾರಿಯುತ ಅಣ್ಣನಾಗಿ ನನ್ನ ಮನಸ್ಸಿನಲ್ಲಿ ಯಾವತ್ತೂ ಉಳಿದುಕೊಳ್ಳುತ್ತಾನೆ ಎಂದ.
ಅಂಗಡಿಯ ಮಾಲೀಕ ಒಂದು ಗೊಂಬೆಯ ಬೆಲೆಯಲ್ಲಿ ಜಗತ್ತಿಗೆ ಒಳ್ಳೆಯತನವನ್ನು ಹಂಚಿದ್ದ. ನೀವು ಯಾವ ಭಾವನೆಗಳನ್ನು ಜಗತ್ತಿಗೆ ತುಂಬಿಸುತ್ತೀರೋ ಅದು ಹರಡುತ್ತದೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಿದರೆ, ಜಗತ್ತಿನಲ್ಲಿ ಒಳ್ಳೆಯತನ ಪಸರಿಸುತ್ತದೆ. ಕೆಟ್ಟ ಕೆಲಸಗಳನ್ನು ಮಾಡಿದರೆ ಕೆಟ್ಟತನ ಜಗತ್ತನ್ನು ಆವರಿಸುತ್ತದೆ.Realise you are a very powerful source of energy. ನಿಮಗೆ, ನಿಮ್ಮಿಂದಾಗಬಹುದಾದ ಒಂದು ಸಣ್ಣ ಸತ್ಕಾರ್ಯಕ್ಕೆ ಇಡೀ ಜಗತ್ತನ್ನು ಬದಲಿಸುವ ಶಕ್ತಿಯಿದೆ. ನಿಮ್ಮ ಶಕ್ತಿಯ ಬಗ್ಗೆ ನಿಮಗೆ ಅಪನಂಬಿಕೆ ಬೇಡ. ನೀವಿಂದು ಮಾಡಿದ ಒಳ್ಳೆಯ ಕೆಲಸ ಇನ್ನೆಂದೋ ನಿಮಗೆ ಒಳ್ಳೆಯದು ಮಾಡುತ್ತದೆ. ನೀವು ಬಯಸಿದ ರೀತಿಯಲ್ಲಿ, ನಿಮಗೆ ಅರ್ಥವಾಗುವ ರೀತಿಯಲ್ಲಿ ಅಲ್ಲದಿದ್ದರೂ ಯಾವುದೋ ಒಂದು ವಿಧದಲ್ಲಿ ನಿಮ್ಮ ಒಳ್ಳೆಯತನ ನಿಮ್ಮನ್ನು ಸದಾ ಕಾಪಾಡುತ್ತದೆ. ಹಾಗಾಗಿ ನಿಮ್ಮ ಪರಿಸರದಲ್ಲಿ ಒಳ್ಳೆಯತನವನ್ನು ಹರಡಿಸಿ.
ಶ್ರೀಮತಿ ಶಾರದ ನಾಗೇಶ್