
ಮಾಜಿ ಶಾಸಕ ರಾಜಕೀಯ, ಧಾರ್ಮಿಕ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಾಯಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಕೊನೆಯುಸಿರೆಳೆದರು. 1983- 85 ರ ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಜನಪ್ರತಿನಿಧಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಕೆಗೆ ಹೆಸರುವಾಸಿಯಾಗಿದ್ದರು. ಶಾಸಕರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು.

ಧಾರ್ಮಿಕ ಕ್ಷೇತ್ರದಲ್ಲಿಯೂ ಅವರ ಸೇವೆ ಗಣನೀಯವಾಗಿದ್ದು, ಅನೇಕ ದೇವಾಲಯಗಳ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಂರಕ್ಷಣೆಗೆ ಅವರು ಮುನ್ನಡೆ ನೀಡಿದ್ದರು. ರಾಜಕೀಯ ಹಾಗೂ ನಿಜ ಜೀವನದಲ್ಲಿ ಅಜಾತ ಶತ್ರು ಎನಿಸಿಕೊಂಡಿದ್ದರು. ಸಾಮಾಜಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದ ಅವರು ತಾಲೂಕು ಕೋ ಅಪರೇಟಿವ್ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ, ಬಸ್ರೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹಾಗೂ ಗುರುಕುಲ ವಿದ್ಯಾಸಂಸ್ಥೆಯ ಛೇರ್ಮನ್ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ರೈಸನ್ ನ್ಯೂಟ್ರಿಷನ್ಸ್ ನ ಆಡಳಿತ ನಿರ್ದೇಶಕ ಡಾ. ಬೆಳ್ಳಿಪ್ಪಾಡಿ ಸುಶಾಂತ್ ರೈ ಸಹಿತ ಅಳಿಯಂದಿರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ| ಎ ಸದಾನಂದ ಶೆಟ್ಟಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.





















































































































