ಪೌರಾಣಿಕ ಜಾನಪದ ಕಲೆ ಯಕ್ಷಗಾನವನ್ನು ಕಲಿಸುವ ಮೂಲಕ ಮಕ್ಕಳು ಸಂಸ್ಕಾರ, ಸಂಪ್ರದಾಯದೊಂದಿಗೆ ಬೆಳೆಯಲು ಸಾಧ್ಯ. ಯಕ್ಷಗಾನ ಕಲೆಗೆ ಮಕ್ಕಳು ಸ್ಪಂದಿಸಿದ್ದಲ್ಲಿ ಮುಂದೆ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಕಲೆ ರಾರಾಜಿಸಲಿದೆ. ದಿ. ಕರ್ನಿರೆ ಶ್ರೀಧರ ಶೆಟ್ಟಿಯವರ ಯಕ್ಷಗಾನ ಕಲೆಯ ಮೇಲಿನ ಅಭಿಮಾನವನ್ನು ಮಕ್ಕಳ ಯಕ್ಷಗಾನದ ಮೂಲಕ ಆಯೋಜಿಸುತ್ತಾ ಬಂದಿದ್ದೇವೆ. ಅಲ್ಲದೆ ಪರಿಸರದ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ ಎಂದು ಕಟೀಲು ಶ್ರೀ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಧ್ಯಕ್ಷ ಪಾಂಡು ಎಲ್. ಶೆಟ್ಟಿ ಅಭಿಪ್ರಾಯಪಟ್ಟರು.
ವಸಾಯಿ ಪಶ್ಚಿಮದ ದತ್ತಾನಿ ಮಾಲ್ ನ ಆರ್ನಸ್ವರ್ಣ ಬ್ಯಾಂಕ್ವೆಟ್ ಹಾಲ್ ನಲ್ಲಿ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ.26 ರಂದು ಆಯೋಜಿಸಿದ್ದ ಐದನೇ ವಾರ್ಷಿಕೋತ್ಸವ ಯಕ್ಷ ಸಂಭ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಸಲು ಹುಟ್ಟಿಕೊಂಡ ಈ ಸಂಸ್ಥೆಗೆ ಮಕ್ಕಳ ಪಾಲಕರು, ಪೋಷಕರು ಸಹಕರಿಸಬೇಕು. ಆ ಮೂಲಕ ಹೊರನಾಡಿನಲ್ಲಿ ಯಕ್ಷಗಾನವನ್ನು ವಿಶ್ವಗಾನವಾನ್ನಾಗಿ ಪರಿವರ್ತಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಅರಣ್ಯ ಬ್ರಹ್ಮ ಬಿರುದಾಂಕಿತ ರಾಧಾಕೃಷ್ಣ ನಾಯರ್ ಶುಭ ಹಾರೈಸಿದರು. ಪ್ರಾರಂಭದಲ್ಲಿ ಅತಿಥಿಗಳು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಮಹಿಳಾ ವಿಭಾಗದ ಸದಸ್ಯೆಯರು ಗಣೇಶ ಸ್ತುತಿಗೈದರು. ಅತಿಥಿಗಳನ್ನು ಸಂಸ್ಥೆಯ ಪದಾಧಿಕಾರಿಗಳು ಗೌರವಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ, ದಿ. ಕರ್ನಿರೆ ಶ್ರೀಧರ ಶೆಟ್ಟಿ ಅವರ ಸ್ಮರಣಾರ್ಥಕವಾಗಿ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಆಯೋಜಿಸುತ್ತಿದ್ದೇವೆ. ಜತೆಗೆ ಕಾಡನ್ನು ಬೆಳೆಸಿ – ನಾಡನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೀನ್ ಹೀರೋ ಆಫ್ ಇಂಡಿಯಾ ಬಿರುದಾಂಕಿತ ಅರಣ್ಯಬ್ರಹ್ಮ ರಾಧಾಕೃಷ್ಣ ನಾಯರ್ ಅವರಂತಹ ಪರಿಸರ ಪ್ರೇಮಿ ನಮ್ಮೊಂದಿಗಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಪ್ರಶಸ್ತಿ ಪ್ರದಾನ : ಈ ಸಂದರ್ಭ ಕರ್ನಿರೆ ಶ್ರೀಧರ ಶೆಟ್ಟಿ ಸ್ಮರಣಾರ್ಥ ಯಕ್ಷಕಲಾ ಪೋಷಕ ಪ್ರಶಸ್ತಿಯನ್ನು ಕಲಾಪೋಷಕ ಓ.ಪಿ. ಪೂಜಾರಿ ಮತ್ತು ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ದೇವಿಪ್ರಸಾದ್ ಆಳ್ವ ತಲಪಾಡಿ ಅವರಿಗೆ ಪ್ರದಾನ ಮಾಡಲಾಯಿತು. ಅಲ್ಲದೇ ಬಾಲ ಕಲಾವಿದರನ್ನು ಯಕ್ಷಕಲಾ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಗೌರವ ಅತಿಥಿಗಳಾಗಿ ಬಂಟರ ಸಂಘ ವಸಾಯಿ – ಡಹಾಣು ಪ್ರಾದೇಶಿಕ ಸಮಿತಿಯ ಉಪ ಕಾರ್ಯಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ, ಹೋಟೆಲ್ ಉದ್ಯಮಿ ರತ್ನಾಕರ್ ಶೆಟ್ಟಿ, ಬಂಟರ ಸಂಘ ಮುಂಬಯಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ದೇವೇಂದ್ರ ಬುನ್ನನ್, ಕಾರ್ಯದರ್ಶಿ ಅನಿತಾ ಡಿ. ಬುನ್ನನ್, ಕೋಶಾಧಿಕಾರಿ ಭಾರತಿ ಎಚ್. ಶೆಟ್ಟಿ, ವಸಾಯಿ – ವಿರಾರ್ ನಗರ ಪಾಲಿಕೆಯ ಮಾಜಿ ಮೇಯರ್ ಪ್ರವೀಣ್ ಶೆಟ್ಟಿ, ಸಲಹೆಗಾರ ಓ.ಪಿ. ಪೂಜಾರಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಕುಸುಮಾ ಬಿ. ಸುವರ್ಣ, ಜತೆ ಕೋಶಾಧಿಕಾರಿ ಅಮಿತಾ ಎಸ್. ಶೆಟ್ಟಿ, ಸಂಚಾಲಕರಾದ ಹರೀಶ್ ಎನ್. ಶೆಟ್ಟಿ, ಸಹ ಸಂಚಾಲಕರಾದ ಹರಿಪ್ರಸಾದ್ ಎಸ್. ಶೆಟ್ಟಿ, ಸದಸ್ಯೆಯರಾದ ಪೂರ್ಣಿಮಾ ಎ. ಶೆಟ್ಟಿ, ಲತಾ ಸಿ. ಆಚಾರ್ಯ, ಸುರೇಖಾ ಎಚ್. ಶೆಟ್ಟಿ, ಮಮತಾ ಶೆಟ್ಟಿ ಸಹಕರಿಸಿದರು. ವಸಾಯಿ ಕರ್ನಾಟಕ ಸಂಘದ ಉಪಾಧ್ಯಕ್ಷ ಕರ್ನೂರು ಶಂಕರ ಆಳ್ವ, ಗೌರವ ಕಾರ್ಯದರ್ಶಿ ರವೀಂದ್ರ ಕೆ. ಶೆಟ್ಟಿ, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಕೆ. ಪ್ರಮೀಳಾ ಎನ್. ಅಮೀನ್, ಕರ್ನಾಟಕ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ, ನಿರ್ದೇಶಕರಾದ ಮುಕುಂದ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಯಕ್ಷಗಾನ ಪ್ರದರ್ಶನ: ಕಟೀಲು ಯಕ್ಷಕಲಾ ವೇದಿಕೆಯ ಬಾಲ ಕಲಾವಿದರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕಟೀಲು ಸದಾನಂದ ಶೆಟ್ಟಿ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಅನಿತಾ ಡಿ. ಬುನ್ನನ್ ವಂದಿಸಿದರು.