ಶ್ರೀ ಕ್ಷೇತ್ರ ಮುದ್ದುಮನೆಯಲ್ಲಿ ಡಿಸೆಂಬರ್ 2 ರಂದು ಶನಿವಾರ ಬೈಲುಮನೆ ಕುಟುಂಬಿಕರು ಅನಾದಿ ಕಾಲದಿಂದಲೂ ಪ್ರತಿ ವರ್ಷ ನಡೆಸಿಕೊಂಡು ಬರುವ ಸಾಂಪ್ರದಾಯಿಕ, ಧಾರ್ಮಿಕ ಕಂಬಳ ಮಹೋತ್ಸವ ನಡೆಯಲಿದೆ. ಕಂಬಳಕ್ಕೆ ಡಿಸೆಂಬರ್ 30 ರಂದು ಉಕ್ಕಿ ಹೂಡುವ ಕ್ರಮದೊಂದಿಗೆ ಗದ್ದೆಯನ್ನು ಹದಗೊಳಿಸಿ ಕಂಬಳಕ್ಕೆ ನಾಂದಿ ಹಾಡಲಿದ್ದಾರೆ. ಭಕ್ತಿ ಹಾಗೂ ಸಮೃದ್ಧಿಯ ಪ್ರತೀಕವಾದ ಕಂಬಳಗದ್ದೆಯ ಅಂಚು ಸೇಡಿ, ಜಾಜಿ ಹಾಕಿ ಶೃಂಗರಿಸಿ ಕಂಬಳಕ್ಕೆ ಗದ್ದೆ ಅಣಿಗೊಳಿಸಲಾಗಿದೆ.
ಮುದ್ದುಸ್ವಾಮಿ ಕಂಬಳ ನಡೆಸುವ ಬೈಲುಮನೆಯವರು ಭಯ, ಭಕ್ತಿಯಿಂದ ಈ ಆಚರಣೆಯಲ್ಲಿ ತೊಡಗಿಕೊಂಡಿದ್ದು ಈ ವರ್ಷ ಡಿಸೆಂಬರ್ 2 ರಂದು ನಡೆಯುವ ಕಂಬಳ ಅಕ್ಕಯ್ಯ ಆನಂದ ಶೆಟ್ಟಿಯವರ ಪಾಲಿನ ಸೇವೆಯಾಗಿದ್ದು ಆನಂದ ಶೆಟ್ಟಿ, ಭಾಗ್ಯಪ್ರಸಾದ್ ಶೆಟ್ಟಿ, ಲತಾ ಸಂತೋಷ್ ಶೆಟ್ಟಿ, ಮಂಜುಳ ರೈ ಅವರು ವ್ಯವಸ್ಥಾಪಕರಾಗಿ ಕುಟುಂಬಿಕರ ಮಾರ್ಗದರ್ಶನದಲ್ಲಿ ಗ್ರಾಮಸ್ಥರ ಸಹಕಾರದಿಂದ ಕಂಬಳ ನೆರವೇರಿಸಲಿದ್ದಾರೆ.
ಡಿಸೆಂಬರ್ 2 ರಂದು ಕಂಬಳದ ದಿನ ಮುರ್ಹೂತದ ಕೋಣಗಳನ್ನು ಬೆಳಿಗ್ಗೆ 10.30 ರಿಂದ 12 ಗಂಟೆಯ ಒಳಗೆ ಕಂಬಳ ಗದ್ದೆಗೆ ಕೊಂಡೊಯ್ಯುವ ಕ್ರಮ ನಡೆಯಲಿದೆ. ಕೋಣಗಳನ್ನು ವಿಶೇಷವಾಗಿ ಶೃಂಗರಿಸಿ ನಂತರ ಮೆರವಣೆಗೆಯಲ್ಲಿ ಮುದ್ದುಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರಿಗೆ ಮಹಾ ಮಂಗಳಾರತಿ ನಡೆಸಿ ಕಂಬಳಗದ್ದೆಗೆ ಶೃಂಗರಿಸಿದ ಕೋಣಗಳನ್ನು ಮೆರವಣಿಗೆಯಲ್ಲಿ ಕೊಂಬು, ಕಹಳೆ, ಕುಣಿತ, ತಾಳದ ಮಧುರ ಶಬ್ದಗಳೊಂದಿಗೆ ಕಂಬಳಗದ್ದೆ ಕಡೆಗೆ ಮೆರವಣಿಗೆ ಸಾಗುತ್ತದೆ.
ಕೋಣಗಳಿಗೆ ನೋಗ ಹಾಗೂ ಅಡ್ಡ ಹಲಗೆ ಅಥವಾ ಕೊರಡು (ಗೋರಿ) ಕಟ್ಟಿ ಜಯ ಘೋಷದೊಂದಿಗೆ ಕೋಣಗಳನ್ನು ಮೆಲ್ಲಗೆ ಗದ್ದೆಗೆ ಇಳಿಸಲಾಗುತ್ತದೆ. ಗದ್ದೆಗೆ ಇಳಿಸುವಾಗ ಎರಡು ಕಡೆ ಬಳ್ಳಿ ಹಿಡಿದು ಸಹಾಯಕರು ಸಾಗುತ್ತಾರೆ. ಮುಹೂರ್ತದಲ್ಲಿ ಕೋಣಗಳಿಗೆ ಕಟ್ಟಿದ ಗೋರಿಯನ್ನು ಕಂಬಳದ ಮನೆ ಯಜಮಾನ ಭಾಗ್ಯಪ್ರಸಾದ ಶೆಟ್ಟಿಯವರು ಏರಲಿದ್ದಾರೆ.
ಮುದ್ದುಸ್ವಾಮಿ ಕಂಬಳ ಕಟ್ಟು ಕಟ್ಟಳೆಯ ಆರಾಧನೆಯೊಂದಿಗೆ ಅಂದು ಮದ್ಯಾಹ್ನ ಕ್ಷೇತ್ರಪಾಲನಿಗೆ ವಿಷೇಶ ಪೂಜೆ ನಡೆಯಲಿದೆ. ಬೈಲುಮನೆಯ ಎಲ್ಲಾ ಪರಿವಾರ ದೇವರಿಗೆ ಬೆಳಿಗ್ಗೆಯಿಂದಲೇ ಪೂಜೆ ಆರಂಭವಾಗುತ್ತದೆ. ನಂಬಿದವರನ್ನು ಸಲಹಿ, ಸಮೃದ್ಧಿ, ಅಭಯ ಕರುಣಿಸುವ ಮುದ್ದುಸ್ವಾಮಿ ನೆಲೆ ನಿಂತ ಬೀಡು ಶ್ರೀ ಕ್ಷೇತ್ರ ಮುದ್ದುಮನೆ. ಎಲ್ಲವನ್ನು ವಿವರಿಸಲಾಗದಷ್ಟು ನಿಗೂಢ ರಹಸ್ಯದ ಕ್ಷೇತ್ರವಿದು.
ಬೈಲುಮನೆ ಕುಟುಂಬಿಕರು ತಲೆತಲಾಂತರಗಳಿಂದ ನಡೆಸುವ ಸಂಪ್ರದಾಯ ಬದ್ದ, ಧಾರ್ಮಿಕ ಆಚರಣೆಯ ಕಂಬಳದಲ್ಲಿ ದೈವ, ದೇವತಾ ಆರಾಧನೆ ಪ್ರಧಾನವಾಗಿರುವುದರಿಂದ ಶ್ರೀ ಮುದ್ದುಸ್ವಾಮಿ ದೇವರಿಗೆ ಸಲ್ಲುವ ಹಲವು ಸೇವೆಗಳಲ್ಲಿ ಕಂಬಳವು ಒಂದು. ಗ್ರಾಮ್ಯ ಸೊಡಗಿನ ಆಚರಣೆಯ ಕಂಬಳ ಕಣ್ತುಂಬಿಕೊಳ್ಳುವುದು ಇಲ್ಲಿ ಭಕ್ತಿಯಿಂದ. ಈ ಕಂಬಳಕ್ಕೆ ಧಾರ್ಮಿಕ ಮೆರುಗು, ದೈವಿ ಕೃಪೆ ಇರುತ್ತದೆ ಎಂಬ ನಂಬಿಕೆ ಗ್ರಾಮಸ್ಥರು ಹಾಗೂ ಕುಟುಂಬಿಕರಲ್ಲಿ ಇದೆ. ಸಂಜೆ 6 ಗಂಟೆಗೆ ಮನೆ ಹೋರಿಯನ್ನು ಇಳಿಸಲಾಗುವುದು. ಸಂಜೆ 7 ಗಂಟೆಗೆ ಕಂಬಳ ಮುಗಿದ ಮೇಲೆ ಕಂಬಳಕ್ಕೆ ಬಂದ ಎಲ್ಲಾ ಕೋಣಗಳ ಪರವಾಗಿ ಅದರ ಯಜಮಾನರಿಗೆ ಗೌರವಾರ್ಥವಾಗಿ ಆದಿನ ಸಂಜೆ ಮುದ್ದುಸ್ವಾಮಿ ದೇವಳದಲ್ಲಿ ಕಬ್ಬು ಸಿಯಾಳ ನೀಡುವ ಕ್ರಮ ಮುದ್ದುಸ್ವಾಮಿ ದೇವಳದಲ್ಲಿ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಮುದ್ದುಸ್ವಾಮಿ ಕಂಬಳ ಮಹೋತ್ಸವನ್ನು ಚಂದಗಾಣಿಸಿ ಕೊಡಬೇಕಾಗಿ ಬೈಲುಮನೆ ಕುಟುಂಬಿಕರು ವಿನಂತಿಸಿಕೊಂಡಿದ್ದಾರೆ.