‘ಹೆಣ್ಣು-ಗಂಡು ಜೈವಿಕ ಸತ್ಯ: ಮೇಲು-ಕೀಳಲ್ಲ’
ವಿದ್ಯಾಗಿರಿ: ‘ಹೆಣ್ಣು ಮತ್ತು ಗಂಡು ಎಂಬುದು ಜೈವಿಕ ಸತ್ಯವೇ ಹೊರತು ಮೇಲು-ಕೀಳಲ್ಲ. ಗಂಡಿನೊಳಗೊಂದು ಹೆಣ್ಣು ಹಾಗೂ ಹೆಣ್ಣಿನೊಳಗೊಂದು ಗಂಡು ಮನಸ್ಸು ಇದ್ದಾಗ ಮಾತ್ರ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ’ಎಂದು ಶಿವಮೊಗ್ಗದ ಸಹ್ಯಾದ್ರಿ ಪದವಿ ಪೂರ್ವಕಾಲೇಜು ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು.
ಆಳ್ವಾಸ್ ಪದವಿ ಪೂರ್ವಕಾಲೇಜಿನ ಆಂತರಿಕ ಸಮಿತಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ನಾವೆಲ್ಲ ಪರಸ್ಪರ ಅರಿತಾಗ ಸಮಸ್ಯೆ ಇತ್ಯರ್ಥವಾಗುತ್ತದೆ. ಗಂಡು ಹೆಣ್ಣನ್ನು ಹಾಗೂ ಹೆಣ್ಣು ಗಂಡನ್ನು ಅರಿತಿರಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಅಕ್ರಮ, ದೌರ್ಜನ್ಯವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು ಎಂದರು.
‘ಹಣ್ಣು ಹಣ್ಣು ಮುದುಕಿ ಬಾಲ್ಯದಲ್ಲೇ ಸತ್ತು ಹೋದಳು’ ಎನ್ನುವ ಕತೆಯಂತೆ ಹೆಣ್ಣಿನ ಬದುಕಾಗಿದೆ. ಆಕೆಯ ಬಾಲ್ಯ, ಯೌವ್ವನವನ್ನು ಸಮಾಜ ಕಿತ್ತುಕೊಳ್ಳುತ್ತಿದೆ. ಅದನ್ನು ಮೀರಿ ಮುನ್ನಡೆಯಬೇಕು. ಸಾಧನೆ ಮಾಡಬೇಕು. ಮಡಿವಂತಿಕೆ ಬೇಡ’ ಎಂದು ಹೆಣ್ಣು ಮಕ್ಕಳನ್ನು ಅವರು ಹುರಿದುಂಬಿಸಿದರು.
‘ಗಂಡು ಆಕಾಶ ತತ್ವ ಮತ್ತು ಹೆಣ್ಣು ಪ್ರಕೃತಿ ತತ್ವ. ಹನಿ ವೀರ್ಯಕ್ಕೆ ವ್ಯಕ್ತಿತ್ವ ನೀಡುವವಳು ಹೆಣ್ಣು. ಎಲ್ಲರೂಪವ ದಾಟಿ ಪಡೆಯುವ ರೂಪವೇ ಹೆಣ್ಣು. ಹೀಗಾಗಿ ಆ ವ್ಯಕಿತ್ವದಲ್ಲಿ ಎಲ್ಲ ಶಕ್ತಿ ಇರುತ್ತದೆ’ ಎಂದು ಬಣ್ಣಿಸಿದರು. ‘ತುಂಬಿದ ಸಭೆಯಲ್ಲಿ ದ್ರೌಪದಿಯ ಬಟ್ಟೆ ಬಿಚ್ಚುವುದೂ ಒಂದು ಆದರ್ಶದಕತೆಯೇ?’ಎಂದು ಪ್ರಶ್ನಿಸಿದ ಅವರು, ‘ಅನಾದಿ ಕಾಲದಿಂದ ಹಿಡಿದು ಇಂದಿನ ಜಾಹೀರಾತು, ಧಾರವಾಹಿ, ಸೌಂದರ್ಯ ಸ್ಪರ್ಧೆಗಳಲ್ಲೆಲ್ಲ ಹೆಣ್ಣನ್ನು ಭೋಗದ ವಸ್ತುವಾಗಿ ಚಿತ್ರಿಸುತ್ತಿದ್ದಾರೆ. ಮೊಬೈಲ್ ಮೂಲಕವೂ ಹೆಣ್ಣು ವಂಚನೆಗೆ ಈಡಾಗುತ್ತಿದ್ದಾಳೆ. ಇದು ಖಂಡನೀಯ’ ಎಂದರು.
‘ಹದಿಹರೆಯದ ಭಾವನೆಗಳು ಸಹಜ. ಆದರೆ, ಅದಕ್ಕಿಂತ ಮಿಗಿಲಾದ ಜವಾಬ್ದಾರಿ ನಮ್ಮನ್ನು ಎಚ್ಚರಿಸುತ್ತಿರಬೇಕು. ಆಗ ನಾವು ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದರು. ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಪ್ರಾಂಶುಪಾಲ ಪೆÇ್ರ. ಮೊಹಮದ್ ಸದಾಕತ್ ಮಾತನಾಡಿ, ಹದಿಹರೆಯದಲ್ಲಿ ಕನಸು ತಪ್ಪಲ್ಲ. ಆದರೆ, ಎಂತಹ ಕನಸು ಕಾಣುತ್ತೀರಿ ಎಂಬುದು ಮುಖ್ಯವಾಗುತ್ತದೆ. ಈ ವಯಸ್ಸಿನಲ್ಲಿ ಮನಸ್ಸು ಸೂಕ್ಷ್ಮವಾಗಿರಬೇಕು. ನೀವು ಸದಾ ಜಾಗೃತರಾಗಿ ನಿಮ್ಮ ಗುರಿಯೆಡೆಗೆ
ಮುನ್ನಡೆಯಬೇಕುಎಂದರು. ‘ಹೆಣ್ಣು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮನೆಯಿಂದ ಆರಂಭಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳೂ ಮಾಡಬೇಕು. ದೌರ್ಜನ್ಯ ನಡೆಯುವ ಕಾರಣವನ್ನು ಪತ್ತೆ ಹಚ್ಚಿ, ಕಿತ್ತೊಗೆಯಬೇಕು ಎಂದರು.
ಉಪಪ್ರಾಂಶುಪಾಲರಾದ ಝಾನ್ಸಿ ಪಿ.ಎನ್., ರಸಾಯನ ಶಾಸ್ತ್ರ ವಿಭಾಗದ ಸಂಯೋಜಕರಾದ ಗಿರೀಶ್ ಎಸ್.ಸಿ. ಮತ್ತು ಎನ್.ಕುಮಾರ್ ಇದ್ದರು. ಕಾರ್ಯಕ್ರಮ ಸಂಯೋಜಕಿ ಡಾ ಸುಲತಾ ಸ್ವಾಗತಿಸಿದರು. ಉಪನ್ಯಾಸಕಿ ಆಶಾ ಈ ಕಾರ್ಯಕ್ರಮ
ನಿರೂಪಿಸಿದರು. ಉಪನ್ಯಾಸಕ ದಿನೇಶ್ ವಂದಿಸಿದರು.