‘ನಮ್ಮ ಭವಿಷ್ಯದ ನಿರ್ಮಾತೃ ನಾವೇ’
ವಿದ್ಯಾಗಿರಿ: ‘ನಮ್ಮ ಭವಿಷ್ಯದ ನಿರ್ಮಾತೃಗಳು ನಾವೇ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ‘ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು. ‘ಪ್ರತಿ ವ್ಯಕ್ತಿಯೂ ತನ್ನ ಜೊತೆಯೇ ತಾನು ಅತಿ ಹೆಚ್ಚು ಸಂವಹನ ನಡೆಸುತ್ತಾನೆ. ಆ ಸಂವಹನದ ಆಧಾರದಲ್ಲಿಯೇ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ, ನಮ್ಮನ್ನು ನಾವೇ ರೂಪಿಸಿಕೊಳ್ಳುತ್ತೇವೆ’ ಎಂದರು. ‘ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಹಿತಿ ಗಳಿಕೆಗಿಂತ ಹೆಚ್ಚು ತಿಳಿವಳಿಕೆ ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು. ಸಮಾಜ ಹಾಗೂ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಮೌಲ್ಯಯುತ ಪ್ರಶ್ನೆಗಳನ್ನು ಕೇಳಬೇಕು’ ಎಂದರು.
‘ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿಫುಲ ಅವಕಾಶ ಹೊಂದಿದ್ದು, ವೈಯಕ್ತಿಕ ವಿಕಸನಕ್ಕೆ ಉತ್ತಮ ವೇದಿಕೆ ಹೊಂದಿದೆ’ ಎಂದು ಅವರು ವಿವರಿಸಿದರು. ‘ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನ’ ಕುರಿತು ಮಾತನಾಡಿದ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಧನಂಜಯ ಆಚಾರ್ಯ, ‘ಪತ್ರಕರ್ತರಿಗೆ ಸಂವಿಧಾನದ ಸ್ಪಷ್ಟ ಅರಿವು ಇರಬೇಕು. ಇಲ್ಲದಿದ್ದರೆ, ತಪ್ಪು ಸಂದೇಶ ರವಾನೆ ಆಗುತ್ತದೆ’ ಎಂದರು.
ಸಂವಿಧಾನದ ಕಲಂಗಳನ್ನು ಉಲ್ಲೇಖಿಸಿದ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ನಡೆದ ಚರ್ಚೆಗಳು, ಪ್ರಕರಣಗಳು, ಮೊಕದ್ದಮೆಗಳನ್ನು ಉದಾಹರಿಸಿ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಮೌಲ್ಯವನ್ನು ವಿವರಿಸಿದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಪಿ.ಆರ್., ನಿಶಾನ್ ಕೋಟ್ಯಾನ್, ಅಕ್ಷಯ್ ಕುಮಾರ್ ಹಾಗೂ ವಿದ್ಯಾರ್ಥಿ ಸಂಯೋಜಕಿ ಅಶ್ವಿನಿ ಎಚ್. ಇದ್ದರು. ವಿದ್ಯಾರ್ಥಿಗಳಾದ ಅವಿನಾಶ್ ಕಟೀಲ್ ಮತ್ತು ಪ್ರಿಯದರ್ಶಿನಿ ಮುಜಗೊಂಡ ಕಾರ್ಯಕ್ರಮ ನಿರೂಪಿಸಿದರು.