ಅಂದು ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಅಧ್ಯಾಪಕರು ಕೊಡುತ್ತಿದ್ದ ಶಿಕ್ಷೆಗಳನ್ನು ಒಮ್ಮೆ ನೆನಪಿಗೆ ತಂದುಕೊಳ್ಳೊಣವೇ? ನಮ್ಮಲ್ಲಿ ನಾಗರ ಬೆತ್ತದ ರುಚಿಯನ್ನು ಕಾಣದವರು ಇರಲಿಕ್ಕಿಲ್ಲ. ಇನ್ನು ಕುರ್ಚಿ ಕೂರುವುದು, ಬಸ್ಕಿ ಹೊಡೆಯುವುದು, ಕಿವಿ ಹಿಂಡುವುದು, ಕೈ ಗಂಟಿಗೆ ಬೀಳುವ ಪೆಟ್ಟು… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶಿಕ್ಷೆಗಳ ಸಂಖ್ಯೆ ಬೆಟ್ಟದಂತೆ ಬೆಳೆಯುತ್ತ ಹೋಗುತ್ತದೆ. ಆಗ ನೀಡುತ್ತಿದ್ದ ಶಿಕ್ಷೆಯಲ್ಲಿಯೂ ಒಂದು ನೀತಿ ಇರುತ್ತಿತ್ತು. ಜೊತೆಗೆ ಮುಂದೆಂದೂ ಅಂತಹ ತಪ್ಪನ್ನು ಮಾಡಿದೆ ಇರುವಂತೆ ಶಿಕ್ಷೆಗಳು ಸದಾ ನಮಗೆ ಎಚ್ಚರಿಕೆ ನೀಡುತ್ತಿದ್ದವು. ಹಾಗಾಗಿಯೇ ನಮ್ಮಲ್ಲಿ ಒಂದಿಷ್ಟು ಶಿಸ್ತು, ಗೌರವ, ವಿಧೇಯತೆ, ಸಮಯಪಾಲನೆ, ಮನೆಗೆಲಸ ಮತ್ತು ತರಗತಿಗಳಲ್ಲಿ ಕೊಟ್ಟ ಕೆಲಸಗಳನ್ನು ಕಾಲಕಾಲಕ್ಕೆ ಪೂರ್ಣಗೊಳಿಸುವುದು ಇಂತಹ ಉತ್ತಮ ಮೌಲ್ಯಗಳು ತನ್ನಿಂದ ತಾನೇ ಬೆಳೆಯುತ್ತಿದ್ದವು (ಶಿಕ್ಷೆಗೆ ಹೆದರಿ ರೂಢಿಸಿಕೊಳ್ಳುತ್ತಿದ್ದೆವು ಎನ್ನಿ!)
ಇದರ ಜೊತೆಗೆ ಇನ್ನೊಂದಿಷ್ಟು ಅಗತ್ಯ ವಿಷಯಗಳಾದ… ಪುಸ್ತಕಗಳನ್ನು ಸುಂದರವಾಗಿ ಇಟ್ಟುಕೊಳ್ಳುವುದು; ನಮ್ಮ ತರಗತಿಯನ್ನು ಸ್ವಚ್ಛಗೊಳಿಸುವುದು; ಕುಡಿಯುವ ನೀರು ತುಂಬಿಸಿಡುವುದು; ಆಟದ ಮೈದಾನ ಹಾಗೂ ಶಾಲೆಯ ಆವರಣದ ಸ್ವಚ್ಛತೆ (ಈಗ ಇವೆರಡೂ ಸ್ಥಳಗಳನ್ನು ಕಾಣುವುದು ಕಷ್ಟವೆನ್ನಿ); ತರಕಾರಿ ಮತ್ತು ಹೂವಿನ ಗಿಡಗಳನ್ನು ಬೆಳೆಸುವುದು… ಇಂತಹ ಕೆಲಸಗಳಿಗೂ ಆದ್ಯತೆ ನೀಡುತ್ತಿದ್ದರು. ಹಾಗಾಗಿಯೆ ಏನೋ ನಮಗೆ ಸ್ವಚ್ಛತೆ ಮತ್ತು ಕೈ ಕೆಲಸಗಳ, ಸಣ್ಣ ಮಟ್ಟದ ದೈಹಿಕ ಪರಿಶ್ರಮದ ಬಗ್ಗೆಯೂ ತಿಳುವಳಿಕೆ ಮೂಡುತ್ತಿತ್ತು. ಶಾಲೆಗಳು ಕೇವಲ ವಿದ್ಯೆಯನ್ನು ಕಲಿಸುವ ಕೇಂದ್ರಗಳಾಗಿ ಇರಲಿಲ್ಲ. ಶಾಲೆಗಳು ವಿದ್ಯೆಯ ಜೊತೆಗೆ ಬದುಕನ್ನು ಎದುರಿಸುವ ಕಲೆಯನ್ನೂ ಕಲಿಸುವ ನಿಜವಾದ ವಿದ್ಯಾ ದೇಗುಲಗಳೇ ಆಗಿದ್ದವು.
ಆದರೆ, ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಶಾಲೆಯಲ್ಲಿ ಅಧ್ಯಾಪಕರು ಶಿಕ್ಷೆ ನೀಡುವಂತಿಲ್ಲ. ಅಧ್ಯಾಪಕರು ಶಿಕ್ಷೆ ನೀಡಿದ್ದೆ ಆದರೆ ಅವರನ್ನು ಪೋಕ್ಸೋ ಕಾಯಿದೆಯ ಅನ್ವಯ ಕೆಲಸದಿಂದ ತೆಗೆಯಬಹುದು ಅಥವಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಹಾಗಾಗಿ ಯಾವ ಅಧ್ಯಾಪಕರೂ ಶಿಕ್ಷೆಯನ್ನು ನೀಡುವ ಗೋಜಿಗೇ ಹೋಗುವುದಿಲ್ಲ! ಇದರ ಜೊತೆಗೆ ಸ್ವಲ್ಪ ಗಟ್ಟಿಯಾಗಿ ಬೈದರೂ ಸಾಕು ಮಕ್ಕಳ ಪಾಲಕರು ನೇರವಾಗಿ ಶಾಲೆಗೆ ಬಂದು ಶಾಲೆಯ ಆಡಳಿತ ಮಂಡಳಿ ಹಾಗೂ ಸಂಬಂಧಿತ ಅಧ್ಯಾಪಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಹಾಗಾಗಿಯೇ ಇಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆಯ ಭಯ ಇಲ್ಲವೇ ಇಲ್ಲ. ಇನ್ನು ಅಧ್ಯಾಪಕರ ಭಯವಂತೂ ದೂರದ ಮಾತಾಯಿತು ಬಿಡಿ!
ಮಿತ್ರರೇ, ಇನ್ನಾದರೂ ನಾವು ಒಳ್ಳೆಯ ಪಾಲಕರಾಗಿ ಯೋಚಿಸಬೇಕಿದೆ. ನಮಗೆ ದೊರಕಿದ ಶಿಕ್ಷೆಯ ಪರಿಣಾಮದಿಂದ ಇಂದು ನಮ್ಮ ಜೀವನ ಸುಂದರವಾದ ರೂಪ ಪಡೆದಿದೆ. ಇಂದಿಗೂ ನಾವು ಕಲಿತ ಶಾಲೆಯನ್ನು, ಕಲಿಸಿದ ಅಧ್ಯಾಪಕರನ್ನು ಭಕ್ತಿ ಹಾಗೂ ಗೌರವದಿಂದ ನೆನೆಯುತ್ತೇವೆ. ಆದರೆ, ನಮ್ಮ ಮಕ್ಕಳಲ್ಲಿ ಈ ರೀತಿಯ ಭಾವನೆಯನ್ನು ಬಿತ್ತುವಲ್ಲಿ ನಾವು ಸೋಲುತ್ತಿದ್ದೇವೆ. ನಮ್ಮ ಮಕ್ಕಳದೇ ತಪ್ಪಾದರೂ ಅವರ ಪರವಾಗಿ ನಿಂತು ಶಾಲೆ ಹಾಗೂ ಶಿಕ್ಷಕರನ್ನು ದೂರುವ ಮೂಲಕ ಮಕ್ಕಳಲ್ಲಿ ಅಧ್ಯಾಪಕರ ಬಗೆಗೆ ಇರಬೇಕಾದ ಅಲ್ಪಸ್ವಲ್ಪ ಗೌರವ ಹಾಗೂ ಭಕ್ತಿಯನ್ನು ನಾಶ ಮಾಡಿದ್ದೇವೆ.
ಇಷ್ಟಲ್ಲದೇ ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡ ಪರಿಣಾಮ, ಹಲವಾರು (ಅವರ ವಯಸ್ಸಿಗೆ ಮೀರಿದ ಯಾ ಪಠ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಪೂರಕವಲ್ಲದ) ವಿಷಯಗಳನ್ನು ಅರಿತುಕೊಂಡಿದ್ದಾರೆ. ಇದು ನೇರವಾಗಿ ಅವರ ವಿದ್ಯಾಭ್ಯಾಸ, ನಡೆ-ನುಡಿಗಳ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿವೆ! ತರಗತಿಯಲ್ಲಿ ಶಿಕ್ಷಕರಿಗೆ ಎದುರು ವಾದಿಸುವುದು. ನನಗೆಲ್ಲ ಗೊತ್ತಿದೆ ಎನ್ನುವಂತಹ ಉಡಾಫೆಯ ವರ್ತನೆಯ ಜೊತೆಗೆ ತನ್ನ ಸಹಪಾಠಿಯ, ಗೆಳೆಯ-ಗೆಳತಿಯೊಡನೆ ಕೆಲವೊಮ್ಮೆ ಅಸಹಜ ನಡವಳಿಕೆ ತೋರಿಸುವುದರಿಂದ ಹೊಂದಾಣಿಕೆಯು ಕಷ್ಟವಾಗುತ್ತಿದೆ.
ಮಿತ್ರರೇ, ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ನಮ್ಮ ಮಕ್ಕಳ ಅಧೋಗತಿಗೆ ನೇರವಾಗಿ ನಾವೇ ಹೊಣೆಗಾರರಾಗುತ್ತಿದ್ದೇವೆ. ನಮ್ಮ ಮಕ್ಕಳು ಅಶಿಸ್ತು, ಅಗೌರವ ತೋರುತ್ತಾರೆ ಎಂದರೆ, ಅದಕ್ಕೆ ಕಾರಣಿಕರ್ತರು ಸ್ವತಃ ನಾವೇ. ನಮ್ಮ ಮಕ್ಕಳು ಸಮಯಪಾಲನೆ, ಸ್ವಚ್ಛತೆ, ತಾಳ್ಮೆ, ಹೊಂದಾಣಿಕೆ, ವಿಧೇಯತೆ – ಇಂತಹ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಗಾಳಿಗೆ ತೂರಿ ಬಿಟ್ಟಿದ್ದಾರೆ ಎಂದಾದರೆ ಅದಕ್ಕೆಲ್ಲ ಜವಾಬ್ದಾರರು ನಾವೇ. ಇನ್ನಾದರೂ ನಾವು ಎಚ್ಚೆತ್ತುಕೊಂಡಾಗ ಮಾತ್ರ ಮುಂದಿನ ಪೀಳಿಗೆ ಉತ್ತಮ ನಾಗರೀಕರಾಗುವುದರ ಜೊತೆಗೆ ಅವರ ಭವಿಷ್ಯವೂ ಭವ್ಯವಾಗಿರುತ್ತದೆ!
ಸರ್ವೇ ಜನಾಃ ಸುಖಿನೋ ಭವಂತು