ಕನ್ನಡವನ್ನು ನಾವು ತಾಯಿಯ ರೂಪದಲ್ಲಿ ಪೂಜಿಸಿ ಗೌರವಿಸುತ್ತೇವೆ. ಕನ್ನಡವು ಮನ- ಮನೆಗಳನ್ನು ಬೆಸೆಯುವ ಭಾಷೆಯಾಗಿದೆ. ಕನ್ನಡ ನಾಡು ನುಡಿಯ ಸಂರಕ್ಷಣೆಗೆ ನಾವೆಲ್ಲರೂ ಪಣ ತೊಡುವುದರೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ನಿವೃತ್ತ ಶಿಕ್ಷಕ ರವೀಂದ್ರ ರೈ ಹರೇಕಳ ಹೇಳಿದರು. ಅವರು ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗ್ಲಾಸ್ ಹೌಸ್ ನಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕನ್ನಡರಿಗೆ ಆಂಗ್ಲ ಭಾಷೆಯ ದ್ವೇಷವಿಲ್ಲ. ಇತರ ಭಾಷೆಗಳನ್ನು ದ್ಬೇಷಿಸದೆ ಎಲ್ಲಾ ಭಾಷೆಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಕರುನಾಡು ಸರ್ವಧರ್ಮ ಸಮನ್ವಯದ ಕ್ಷೇತ್ರ ಹಾಗೂ ಸಂಸ್ಕೃತಿಯ ನೆಲೆಬೀಡಾಗಿದೆ ಎಂದರು.


ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅವರು ದ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ನೆಲ ಜಲ ಭಾಷೆಯನ್ನು ನಾವು ಮಾತೃ ಸಮಾನವಾಗಿ ನೋಡುತ್ತೇವೆ. ಇಂದಿನ ಬದುಕಿನ ಆಗುಹೋಗುಗಳ ನಡುವೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳೋಣ. ನಮ್ಮ ಮುನ್ನಡೆಗೆ ಭಾಷೆಯು ಶಕ್ತಿಯಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈಸ್ ಡೀನ್ ಪ್ರೊ. ಜಯಪ್ರಕಾಶ್ ಶೆಟ್ಟಿ, ಡೀನ್ ಪ್ರೊ. ಕೃಷ್ಣ ನಾಯಕ್, ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಶೆಟ್ಟಿ, ನಿಟ್ಟೆ ವಿವಿಯ ಆಡಳಿತ ನಿರ್ದೇಶಕರಾದ ಸಾಯಿ ಪ್ರಸನ್ನ ಹೆಗ್ಡೆ, ಪಠ್ಯಪರಿಷ್ಕರಣೆ ನಿರ್ದೇಶಕ ಪ್ರೊ.ನಾಗೇಶ್ ಪ್ರಭು, ವೈಸ್ ಡೀನ್ ಪ್ರೊ. ಮಿತ್ರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕುಮಾರ್ ಶೆಟ್ಟಿ ವಂದಿಸಿದರು. ಸುಮಿತಾ ವಿಜಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





































































































