ಶಿವಾಯ ಫೌಂಡೇಶನ್ ಹಮ್ಮಿಕೊಂಡ ದಾನ – ಧರ್ಮದ ಇದೊಂದು ಒಳ್ಳೆಯ ಕಾರ್ಯಕ್ರಮ. ನಾನು ಕೂಡ ಕೃಷಿ ಕುಟುಂಬದಲ್ಲಿ ಬೆಳೆದವ. ಕಷ್ಟ ಪಟ್ಟು ಶಿಕ್ಷಣವನ್ನು ಪಡೆದವನ್ನಾಗಿದ್ದೇನೆ. ಆದರೆ ಪ್ರಸ್ತುತ ಹುಟ್ಟೂರು ಎರ್ಮಾಳ್ ನಲ್ಲಿ ಶಾಲೆಯನ್ನು ದತ್ತು ಪಡೆದುಕೊಂಡು ಟ್ರಸ್ಟ್ ರಚನೆ ಮಾಡಿ ಅನೇಕ ಸೌಲಭ್ಯದೊಂದಿಗೆ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತಿದ್ದೇನೆ. ಶಿಕ್ಷಣಕ್ಕಾಗಿ ಸಹಾಯ ಹಸ್ತ ಪಡೆಯುವುದಕ್ಕೆ ಯಾರೂ ಕೂಡ ಸಂಕೋಚ ಮಾಡಬಾರದು. ಕಷ್ಟದಲ್ಲಿದ್ದು ಇತರರ ಸಹಾಯ ಹಸ್ತವನ್ನು ಪಡೆದು ವಿದ್ಯಾರ್ಜನೆಯನ್ನು ಮಾಡಿದವರೇ ಮುಂದೆ ಉನ್ನತ ಮಟ್ಟಕ್ಕೇರಿ ಪ್ರತಿಷ್ಟಿತ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದವರಿದ್ದಾರೆ. ಜೀವನದ ಯಶಸ್ಸಿಗೆ ಕೇವಲ ಶಿಕ್ಷಣವೇ ಮುಖ್ಯವಲ್ಲ. ಅದರ ಜೊತೆ ಸಂಸ್ಕೃತಿ ಸಂಸ್ಕಾರವು ಮುಖ್ಯವಾಗಿರುತ್ತದೆ. ಹಾಗಿರುವಾಗ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ನಮ್ಮ ಹಿರಿಯರ ಸಂಸ್ಕೃತಿ, ಕಲೆ, ಆಚರಣೆ, ಸಂಪ್ರದಾಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಆಗ ಮಕ್ಕಳು ಸುಸಂಸ್ಕೃತರಾಗಿ, ಒಳ್ಳೆಯ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಎಂದು ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಅಧ್ಯಕ್ಷ, ಮಾಜಿನಗರ ಸೇವಕ ಸುರೇಶ್ ಜಿ ಶೆಟ್ಟಿ ಅವರು ನುಡಿದರು.
ಅವರು ಆ. 15 ರಂದು ನೆರುಲ್ ಶ್ರೀ ಗಣಪತಿ ದುರ್ಗಾದೇವಿ ಕ್ಷೇತ್ರದಲ್ಲಿ ಶಿವಾಯ ಫೌಂಡೇಶನ್(ರಿ ) ಮುಂಬಯಿ ಇದರ ವತಿಯಿಂದ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಕಷ್ಟದ ಜೀವನವನ್ನು ಅನುಭವಿಸಿರುವ ಹೆಚ್ಚಿನ ಮುಂಬಯಿ ಹೋಟೆಲ್ ಉದ್ಯಮಿಗಳು, ಕಾರ್ಮಿಕರು, ಬಡ ಜನರ ಮೇಲೆ ಹೆಚ್ಚಿನ ಅನುಕಂಪವನ್ನು ತೋರುತ್ತಾರೆ. ಪ್ರಸ್ತುತ ಮುಂಬಯಿಯ ಅನೇಕ ದೇವಸ್ಥಾನಗಳಿಗೆ, ಸಾಮಾಜಿಕ ಸಂಘ – ಸಂಸ್ಥೆಗಳಿಗೆ ಅಲ್ಲದೆ ಊರಿನ ದೇವಸ್ಥಾನಗಳ, ದೈವಸ್ಥಾನಗಳ ಅಭಿವೃದ್ಧಿಗಾಗಿ ಮುಂಬಯಿಯ ಹೋಟೆಲಿಗರ ಕಠಿಣ ಪರಿಶ್ರಮದ ಸಂಪಾದನೆ ಅಲ್ಫಾಂಶವು ಸಲ್ಲುತ್ತಿದೆ. ಕಷ್ಟದ ಜೀವನದಿಂದ ಬೆಳೆದವರೇ ಮುಂದೆ ಸಮಾಜಕ್ಕೆ ತನ್ನಿಂದಾದಷ್ಟು ಸೇವೆಯನ್ನು ಸಲ್ಲಿಸುವ ಮನೋಭಾವನೆಯನ್ನು ಹೊಂದಿರುತ್ತಾರೆ. ಶಿವಾಯ ಫೌಂಡೇಶನ್ ನಲ್ಲಿರುವ ಸದಸ್ಯರೇ ತಮ್ಮ ಸಂಪಾದನೆಯ ಅಲ್ಫಾಂಶವನ್ನು ಬಡವರ ಕಣ್ಣೀರೊರೆಸಲು ಸದುಪಯೋಗ ಮಾಡಿಕೊಳ್ಳುತ್ತಿರುವುದು ಅಭಿನಂದನೀಯ. ಇವರ ಸಮಾಜ ಸೇವೆಗೆ ನಾವೆಲ್ಲರೂ ಸಹಕರಿಸೋಣ ಎಂದು ಸುರೇಶ್ ಶೆಟ್ಟಿಯವರು ಹೇಳಿದರು.
ಫೆಡರೇಶನ್ ಆಫ್ ಹೋಟೆಲ್ ಅಸೋಸಿಯೇಶನ್ ಮಹಾರಾಷ್ಟ್ರ ಉಪಾಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಯವರು ಮಾತನಾಡಿ ವರ್ಷಕ್ಕೆ ಅದೆಷ್ಟೋ ಲಕ್ಷಾಂತರ ರೂಪಾಯಿಯನ್ನು ಶಿವಾಯ ಫೌಂಡೇಶನ್ ಕಷ್ಟದಲ್ಲಿರುವವರಿಗೆ ಸ್ಪಂದಿಸಿ ವಿವಿಧ ರೀತಿಯ ಸೇವೆಗಾಗಿ ವಿನಿಯೋಗಿಸಿ ಬಡ ಜನರನ್ನು ಮೇಲೆತ್ತುವ ಕಾಯಕವನ್ನು ಮಾಡುತ್ತಿರುವುದು ಅಭಿನಂದನೀಯ. ಬಡ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಜೀವನವನ್ನು ಉಳಿಸುವ ಮಹತ್ತರವಾದ ಸೇವೆಯು ಫೌಂಡೇಶನ್ ನಿಂದ ಆಗುತ್ತಿದೆ. ಯಾವುದೇ ಪ್ರಚಾರವನ್ನು ಬಯಸದೆ, ನಿಸ್ವಾರ್ಥವಾಗಿ ಶಿವಾಯ ಫೌಂಡೇಶನ್ ಮಾಡುತ್ತಿರುವ ಸೇವೆಯು ಎಲ್ಲರಿಗೂ ಮಾದರಿಯಾಗಿದೆ. ಫೌಂಡೇಶನ್ ಮಾಡುತ್ತಿರುವ ಸಮಾಜ ಪರ ಸೇವೆಗೆ ನಾವೆಲ್ಲ ಕೈ ಜೋಡಿಸೋಣ ಎಂದರು.
ಸಮಾಜ ಸೇವಕ ಏಷ್ಯಾಟಿಕ್ ಕ್ರೇನ್ ಸರ್ವಿಸಸ್ ಮಾಲಕ ಗಣೇಶ್ ಪೂಜಾರಿಯವರು ಮಾತನಾಡಿ ಪ್ರಸ್ತುತ ಸಮಯದಲ್ಲಿ ಹೆಚ್ಚಿನವರಿಗೆ ತಮ್ಮ ಮನೆಯವರ, ಸಂಸಾರದವರ ಬಗ್ಗೆಯೇ ಕಾಳಜಿ ಇರುವುದಿಲ್ಲ ತಮ್ಮವರ ಕಷ್ಟದ ಬಗ್ಗೆ ಚಿಂತಿಸುವವರಿಲ್ಲ. ಹಾಗಿರುವಾಗ ಶಿವಾಯ ಫೌಂಡೇಶನ್ ಸಾಮಾಜಿಕ ಚಿಂತನೆಯೊಂದಿಗೆ ಮಾಡುತ್ತಿರುವ ಜನಪದ ಸೇವೆಯು ತುಂಬಾ ಮೆಚ್ಚುವಂತದ್ದು. ದೈವ ದೇವರುಗಳ ಅನುಗ್ರಹ, ಗುರು ಹಿರಿಯರು ನಮಗೆ ನೀಡಿದ ಸಂಸ್ಕಾರದಿಂದ ನಾವಿಂದು ಕರ್ಮ ಭೂಮಿ ಮುಂಬಯಿ ಮಹಾನಗರದಲ್ಲಿ ಸಾಧನೆಯೊಂದಿಗೆ ಇಂತಹ ಒಳ್ಳೆಯ ಮಾದರಿ ಕಾರ್ಯವನ್ನು ಮಾಡಲು ಸಾಧ್ಯವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕೇವಲ ಇಂಜಿನಿಯರ್, ಡಾಕ್ಟರ್ ಮಾಡಿದರೆ ಅಥವಾ ಇಲ್ಲವೇ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿದರೆ ಸಾಲದು. ಮಕ್ಕಳಿಗೆ ಪಾಲಕರು ಜೀವನ ಮೌಲ್ಯದ ಬಗ್ಗೆ ತಿಳಿಯಪಡಿಸಬೇಕು. ಪ್ರಸ್ತುತ ಮಕ್ಕಳು ಪಾಶ್ಚತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ. ಮಾನವೀಯತೆಯಿಂದ ಸಂಸ್ಕಾರಯುತ ಧರ್ಮದ ನಡೆದ ಮಕ್ಕಳಿಗೆ ಜೀವನ ಮೌಲ್ಯದ ಪಾಠವೂ ಅತ್ಯಗತ್ಯ. ಶಿಕ್ಷಣದೊಂದಿಗೆ ಮಾನವೀಯ ಗುಣಗಳಿದ್ದರೆ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.
ಶಿವಾಯ ಫೌಂಡೇಶನ್ ಸಂಸ್ಥೆಯ ಸದಸ್ಯೆ ಜಯಲಕ್ಷ್ಮಿ ಶೆಟ್ಟಿ ಸಿಂಗಾಪುರ ಅವರು ಮಾತನಾಡಿ, ಕಷ್ಟದಲ್ಲಿರುವವರಿಗೆ ಸಹಾಯವನ್ನು ಒದಗಿಸುವ ಮನೋಭಾವನೆಯಿಂದ ಫೌಂಡೇಶನ್ ಎಲ್ಲಾ ಸದಸ್ಯರು ಸೇರಿ ಸಾಮಾಜಿಕ ಸೇವೆಯನ್ನು ವಿವಿಧ ರೀತಿಯಲ್ಲಿ ಮಾಡುತ್ತಿದ್ದೇವೆ ಎಂದರು.
ವಳದೂರು ವೆಲ್ಫೇರ್ ಅಸೋಸಿಯಶನ್ ಅಧ್ಯಕ್ಷ ಲೀಲಾಧರ್ ಶೆಟ್ಟಿ ವಳದೂರು ಅವರು ಮಾತನಾಡಿ ಮುಂಬೈ ಮಹಾ ನಗರದಲ್ಲಿ ಅನೇಕ ಸಂಘ ಸಂಸ್ಥೆ ಗಳು ಮಕ್ಕಳಿಗೆ ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರವನ್ನು ನೀಡುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಸಂಘ – ಸಂಸ್ಥೆಗಳಲ್ಲಿ ಆಯಾಯ ಜಾತಿ ಬಾಂಧವರ ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ. ಆದರೆ ಶಿವಾಯ ಫೌಂಡೇಶನ್ ಮಾತ್ರ ನಾರಾಯಣ ಗುರುಗಳ ತತ್ವ ಸಂದೇಶದಂತೆ ಜಾತಿಯನ್ನು ಮೀರಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು. ಮಕ್ಕಳು ಶಿಕ್ಷಣವಂತರಾದರೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ. ಇಂತಹ ಸಂಸ್ಥೆ ಗಳಿಂದ ಶೈಕ್ಷಣಿಕ ನೆರವನ್ನು ಪಡೆದ ಮಕ್ಕಳು ಮುಂದೆ ಉನ್ನತ ಹುದ್ದೆಯನ್ನು ಪಡೆದು ತಾವು ಗಳಿಸಿದ ಅಲ್ಪ ಅಂಶವನ್ನು ಸಮಾಜದಲ್ಲಿ ಕಷ್ಟದಲ್ಲಿರುವವರ ಸೇವೆಗೆ ವಿನಿಯೋಗಿಸಿ ಋಣವನ್ನು ತೀರಿಸು ಪ್ರಯತ್ನವನ್ನು ಮಾಡಬೇಕು ಎಂದರು. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರ್ ರವರು ಮಾತನಾಡಿ ಸಮಾಜಕ್ಕೆ ತಮ್ಮಿಂದ ಏನಾದರೂ ಸೇವೆಯನ್ನು ಸಲ್ಲಿಸಬೇಕೆಂಬ ಸದುದ್ದೇಶದಿಂದ ಕೇವಲ 11 ಮಂದಿ ಸದಸ್ಯರಿಂದ ಸ್ಥಾಪನೆಗೊಂಡ ನಮ್ಮ ಸಂಸ್ಥೆಯಲ್ಲಿ ಪ್ರಸ್ತುತ 84 ಮಂದಿ ಇದ್ದಾರೆ. ಸಮಾನ ಮನಸ್ಕ ಸದಸ್ಯರೆಲ್ಲಾ ಸೇರಿ ಕ್ಯಾನ್ಸರ್ ಪೀಡಿತರಿಗೆ, ನಿರ್ಗತಿಕರಿಗೆ, ಕಷ್ಟದಲ್ಲಿರುವವರಿಗೆ ವಿವಿಧ ರೀತಿಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ. ಕಳೆದ ಐದು ವರ್ಷಗಳಲ್ಲಿ 45 ಲಕ್ಷ ಕ್ಕೂ ಮಿಕ್ಕಿ ಹಣವನ್ನು ಸಮಾಜಪರ ಸೇವೆಗೆ ವಿನಿಯೋಗಿಸಿದ್ದೇವೆ ಎನ್ನಲು ಅಭಿಮಾನವಾಗುತ್ತದೆ. ನಿಸ್ವಾರ್ಥವಾಗಿ ಸೇವೆಗೈಯ್ಯುತ್ತಿರುವ ನಮ್ಮ ಸಂಸ್ಥೆಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು. ವೇದಿಕೆಯಲ್ಲಿ ಸತೀಶ್ ಕ್ಯಾಟರರ್ಸ್ ನ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗಾಗಿ ಹಮ್ಮಿಕೊಂಡ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಅಲ್ಲದೇ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು, ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಶಿವಾಯ ಫೌಂಡೇಶನ್ ನ ಹರೀಶ್ ಕೋಟ್ಯಾನ್ ಇನ್ನ, ತಾರಾನಾಥ ರೈ ಪುತ್ತೂರು, ಮಧುಸೂದನ್ ಶೆಟ್ಟಿ ಬೈಕಲಾ, ಸಂತೋಷ್ ಬಿರಾವ್ ದಂಪತಿ, ಮೊದಲಾದವರನ್ನು ಗೌರವಿಸಲಾಯಿತು. ಪ್ರಭಾವತಿ ಶೆಟ್ಟಿ ಮತ್ತು ಲತಾ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮವನ್ನು ರಂಗಭೂಮಿಯ ಗೌರವ ಕಾರ್ಯದರ್ಶಿ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಮತ್ತು ಶಿವಾಯ ಫೌಂಡೇಶನ್ ನ ಡಾ. ಸ್ವರ್ಣ ಶೆಟ್ಟಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಹಾಡುಗಾರ ವಿಜಯ್ ಶೆಟ್ಟಿ ಮೂಡುಬೆಳ್ಳೆ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿಶೇಷ ಸಹಕಾರವನ್ನು ನೀಡಿರುವ ಗುರುದೇವಾ ಸೇವಾ ಬಳಗ ಮಹಾರಾಷ್ಟ್ರಅಧ್ಯಕ್ಷ, ಬಾಲಾಜಿ ಕ್ಯಾಟರರ್ಸ್ ದಾಮೋದರ್ ಶೆಟ್ಟಿ ಅವರನ್ನು ಹಾಗೂ ಸಂಗೀತ ಕಾರ್ಯಕ್ರಮವನ್ನು ನೀಡಿರುವ ಕಲಾವಿದರಾದ ವಿಜಯ್ ಶೆಟ್ಟಿ ಮೂಡುಬೆಳ್ಳೆಯವರನ್ನು ಪ್ರಶಾಂತ್ ಶೆಟ್ಟಿ ಪಲಿಮಾರ್, ಪ್ರಶಾಂತ್ ಶೆಟ್ಟಿ ಪಂಜ ಇವರು ಗೌರವಿಸಿದರು. ಶಿವಾಯ ಫೌಂಡೇಶನ್ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.