ವಿಶ್ವ ಬಂಟ ಸಮ್ಮೇಳನದ ಹಿನ್ನೆಲೆಯಲ್ಲಿ “ಸ್ಥಿತ್ಯಂತರದಲ್ಲಿ ಬಂಟರು, ಶಿಕ್ಷಣ ಮತ್ತು ನಿರುದ್ಯೋಗ” ಕುರಿತ ವಿಚಾರ ಸಂಕಿರಣವು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರುಗಿತು. ಹೇರಂಬ ಇಂಡಸ್ಟ್ರೀಸ್ ಲಿ. ಮುಂಬೈ ಇದರ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ವಿಸ್ವತ್ ಕೆಮಿಕಲ್ಸ್ ಲಿ, ಮುಂಬೈ ಇದರ ಸಿಎಂಡಿ ಬಿ.ವಿವೇಕ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು.
ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ, ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಸ್ತಾವನೆಗೈದು “ಇವತ್ತಿನ ಶಿಕ್ಷಣ ಎತ್ತ ಸಾಗುತ್ತಿದೆ, ನಿರುದ್ಯೋಗವನ್ನೇ ಸೃಷ್ಟಿ ಮಾಡುವ ಶಿಕ್ಷಣ ಸಂಸ್ಥೆಗಳು ಉದ್ಯೋಗ ಕಲ್ಪಿಸುವುದು ಹೇಗೆ? ಇಲ್ಲಿ ಕಲಿತ ಅರ್ಹ ಯುವಕರಿಗೆ ಉದ್ಯೋಗ ಸಿಗದೆ ವಿದೇಶಕ್ಕೆ ಹೋಗಬೇಕಾಗುತ್ತದೆ. ಇದನ್ನು ಪ್ರತಿಭಾ ಪಲಾಯನ ಎನ್ನುತ್ತಾರೆ. ಪ್ರತಿಭಾವಂತ ಬಂಟ ಸಮುದಾಯದ ಯುವಕರನ್ನು ನಮ್ಮ ಸಮಾಜದ ಅಭಿವೃದ್ಧಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿಚಾರ ವಿನಿಮಯ ನಡೆಯಬೇಕು” ಎಂದರು.
ಆಶಯದ ನುಡಿಗಳನ್ನಾಡಿದ ಹೇರಂಬ ಇಂಡಸ್ಟ್ರಿಸ್ ಮುಂಬೈ ಇದರ ಸಿಎಂಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರು, “ಬಂಟರು ಕೃಷಿ ಪ್ರಧಾನವಾದ ಹಿನ್ನೆಲೆಯನ್ನು ಹೊಂದಿದ್ದಾರೆ. ನಾವು ಆಸಕ್ತಿ ಇರುವ ಕ್ಷೇತ್ರದಲ್ಲಿ ಉದ್ಯೋಗ ಹಿಡಿಯಬೇಕು. ನನ್ನ ಕಂಪೆನಿಯಲ್ಲಿ 2500 ಮಂದಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಪಡೆದವರು ತಾವು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೋ ಅದೇ ಕ್ಷೇತ್ರದಲ್ಲಿ ದುಡಿಯಬೇಕು. ನಾನು ಹಣವನ್ನೇ ಸಾಧನೆ ಎಂದು ಹೇಳುವುದಿಲ್ಲ. ಆದರೆ ಜನರಿಂದ ಗುರುತಿಸಲ್ಪಡುವುದು ನಿಜವಾದ ಸಾಧನೆ” ಎಂದರು.
ಉಪೇಂದ್ರ ಶೆಟ್ಟಿ ಅವರು ವಿಚಾರ ಮಂಡಿಸಿ, “ಉದ್ಯೋಗಕ್ಕೆ ಬೇಕಾದ ಅರ್ಹತೆ ಇರದಿದ್ದಲ್ಲಿ ನಾವು ನಮ್ಮಲ್ಲಿರುವ ಕೌಶಲ್ಯವನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು. ಇದಕ್ಕಾಗಿ ಬಂಟರ ಸಂಘಟನೆಗಳು ಅಗತ್ಯವಿರುವ ಆರ್ಥಿಕ ವ್ಯವಸ್ಥೆಯನ್ನು ಕಲ್ಪಿಸಬೇಕು” ಎಂದರು.
ಅದಾನಿ ಗ್ರೂಫ್ ನ ಕಿಶೋರ್ ಆಳ್ವ ಮಾತನಾಡಿ, “ನಮ್ಮ ದೇಶದಲ್ಲಿ ಸಾಕಷ್ಟು ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಉದ್ಯೋಗ ಹುಡುಕುವುದು ಕಷ್ಟವಾಗಲಾರದು. ನಮ್ಮ ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು. ಯುವಕರು ರಾಜಕೀಯಕ್ಕೆ ಬರಬೇಕು. ಆಗ ಶಿಕ್ಷಣ ಮತ್ತು ಉದ್ಯೋಗದ ವ್ಯವಸ್ಥೆ ಬದಲಾಗುತ್ತದೆ” ಎಂದರು. ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ಮಾತನಾಡಿ, “ಮೊದಲು ನಾವು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು. ಮಕ್ಕಳು ಉದ್ಯೋಗಕ್ಕಾಗಿ ಬೇರೆ ದೇಶಕ್ಕೆ ಪಲಾಯನವಾಗುವುದನ್ನು ತಪ್ಪಿಸಲು ನಮ್ಮ ಸಮಾಜದ ಉದ್ಯಮಿಗಳು ಮನಸು ಮಾಡಬೇಕು” ಎಂದರು.
ತೋನ್ಸೆ ಆನಂದ ಶೆಟ್ಟಿ ವಿಚಾರ ಮಂಡಿಸುತ್ತಾ, “ಶಿಕ್ಷಣ ಮತ್ತು ಉದ್ಯೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಣ ಪಡೆದರೆ ಮಾತ್ರ ಉದ್ಯೋಗ ಸಿಗುತ್ತದೆ. ಅದೇ ರೀತಿ ಭಾಷಾ ಕಲಿಕೆ ಅತ್ಯಗತ್ಯ. ಬೇರೆ ಬೇರೆ ಕಡೆಗಳಲ್ಲಿ ಹೋದಾಗ ಅಲ್ಲಿನ ಭಾಷೆಯನ್ನು ಮಾತಾಡಬೇಕಾಗುತ್ತದೆ. ಭಾಷೆ ಗೊತ್ತಿಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಈಗ ಕೆಮಿಕಲ್ ಇಂಜಿನಿಯರ್ ಗಳ ಅವಶ್ಯಕತೆ ತುಂಬಾ ಇದೆ. ಆದರೆ ಅದನ್ನು ಕಲಿಯುವವರ ಸಂಖ್ಯೆ ಬಹಳ ಕಡಿಮೆ. ಹೀಗಾಗಿ ಅವಕಾಶ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಮಕ್ಕಳಿಗೆ ಟಿವಿ, ಮೊಬೈಲ್ ಕೊಡಬೇಡಿ ಅದು ನಿಮ್ಮ ಮಕ್ಕಳನ್ನು ಹಾಳು ಮಾಡುತ್ತದೆ” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಅತಿಥಿಗಳನ್ನು ಸ್ವಾಗತಿಸಿದರು. ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್, ಮುಂಬೈ ಇದರ ಸಿಎಂಡಿ ಆನಂದ ಎಂ.ಶೆಟ್ಟಿ ತೋನ್ಸೆ, ಆದಾನಿ ಗ್ರೂಪ್, ದಕ್ಷಿಣ ಭಾರತ ಉಪಾಧ್ಯಕ್ಷ ಕಿಶೋರ್ ಆಳ್ವ, ಆಸ್ಪೆನ್ ಎಸ್ ಇಝಡ್ ಸೀನಿಯರ್ ಜನರಲ್ ಮೆನೇಜರ್ ಅಶೋಕ್ ಕುಮಾರ್ ಶೆಟ್ಟಿ, ಇಸ್ಸಾರ್ ಫೈನಾನ್ಸಿಯಲ್ ಸರ್ವೀಸಸ್ ಲಿ. ಮುಂಬೈ ಇದರ ಸಿಎಂಡಿ ಡಾ. ಆರ್. ಕೆ. ಶೆಟ್ಟಿ, ಬೆಂಗಳೂರಿನ ಯುನಿವರ್ಸಲ್ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ ನ ಉಪೇಂದ್ರ ಶೆಟ್ಟಿ, ಮುಂಬೈ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ವಿಷಯ ಮಂಡನೆಗೈದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.