ನವರಾತ್ರಿ,ದಸರಾ, ಮಹಾನವಮಿ, ನಾಡಹಬ್ಬ, ವಿಜಯದಶಮಿ ಎಂದೆಲ್ಲಾ ಕರೆಯುವ ನವೋಲ್ಲಾಸದ ನವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯ ಸಂಭ್ರಮದೊಂದಿಗೆ ದೇಶದ ಹೆಚ್ಚಿನ ಕಡೆಗಳಲ್ಲಿ ಆಚರಿಸಲಾಗುತ್ತದೆ. ಅಶ್ವಯುಜ ಶುದ್ದ ಪ್ರತಿಪದೆಯಂದು ದೇವಿ ಆರಾಧನೆಯ ಕಲಶ ಸ್ಥಾಪನೆಯಾಗುತ್ತದೆ.
ಜಗದ ಉದ್ದಾರಕ್ಕೆ ಕಾರಣೀಭೂತಳಾದ ಆದಿಶಕ್ತಿ, ಆದಿಮಾಯೆಯನ್ನು ಭಕ್ತಿಯಿಂದ ಪೂಜಿಸಿ ಮಾತೆಗೆ ದಿನಕ್ಕೊಂದು ಅಲಂಕಾರ ಮಾಡಿ ನೈವೇದ್ಯ ಅರ್ಪಿಸಿ, ಒಂಬತ್ತು ದಿನ ಆರಾಧಿಸಲ್ಪಡುವ ದುರ್ಗೆ ಇಚ್ಚಾಶಕ್ತಿ, ಕ್ರಿಯಾಶಕ್ತಿ, ಪ್ರೇರಕ ಶಕ್ತಿಯಾಗಿದ್ದಾಳೆ.
ಪ್ರಥಮ ದಿನ ಶೈಲಾ ಪುತ್ರಿಯನ್ನು, ಎರಡನೆಯ ದಿನ ಬ್ರಹ್ಮಚಾರೀಣಿ ಪೂಜೆ, ತೃತೀಯ ದಿನ ಚಂದ್ರಘಂಟಾ, ಚತುರ್ಥ ದಿನ ಕೂಪ್ಮಾಂಡಾ ಸ್ವರೂಪವನ್ನು, ಪಂಚಮದಂದು ಸ್ಕಂದ ಮಾತಾ, ಆರನೆ ದಿನ ಷಷ್ಠಿ ಕಾತ್ಯಾಯಿನಿ, ಏಳನೆ ದಿನ ಸಪ್ತಮಿ ಕಾಳರಾತ್ರಿ,
ಅಷ್ಟಮಿ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಯುದ್ಧದಲ್ಲಿ ವಿಜಯಿಯಾದುದರ ನೆನಪಿಗಾಗಿ ಗಜ, ಅಶ್ವಗಳ ಪೂಜೆ ನಡೆಸಲಾಗುತ್ತದೆ. ನವರಾತ್ರಿಯ ಆಚರಣೆಯಲ್ಲಿ ದಸರಾ ಉತ್ಸವದ ಸೊಬಗನ್ನು, ಸಾಂಸ್ಕೃತಿಕ ಮೆರುಗನ್ನು ಇನ್ನಷ್ಟು ಸಂಭ್ರಮದಿಂದ ಆಸ್ವಾದಿಸಲು ವೈಶಿಷ್ಟ್ಯ ರೀತಿಯಲ್ಲಿ ಶಕ್ತಿ ದೇವತೆಗಳ ಪೂಜೆ ಈ ದಿನಗಳಲ್ಲಿ ನಡೆಯುವುದು.
ದುರ್ಗೆಯ ಪ್ರಾರ್ಥನೆ ಮತ್ತು ದೇವಿಯನ್ನು ಸರಸ್ವತಿಯ ರೂಪದಲ್ಲಿ ಸ್ಥಾಪಿಸಲಾಗುವುದು. ಸರಸ್ಪತಿ ಪೂಜೆಯಲ್ಲಿ ಪುಸ್ತಕ, ವಾಹನಗಳನ್ನು ಪೂಜಿಸಲಾಗುವುದು. ದುರ್ಗಾಷ್ಟಮಿಯಂದು ದುರ್ಗಾದೇವತೆಯ ಪೂಜೆ, ನವಮಿಯಂದು ಆಯುಧ ಪೂಜೆ, ದುರ್ಗಾಮಾತೆಯು ಮಹಿಷಾಸುರನನ್ನು ಮರ್ಧಿಸಿದ ವಿಚಾರವಾಗಿ, ಮಹಿಷನ ತಲೆಯ ಮೇಲೆ ತನ್ನ ಎಡಗಾಲನ್ನಿಟ್ಟ ದುರ್ಗಾಮಾತೆಯ ಮೂರ್ತಿಗೆ ಪೂಜೆ ಮಾಡುವಾಗ ಪರೋಕ್ಷವಾಗಿ ಮಹಿಷನಿಗೂ ಪೂಜೆ ಸಲ್ಲುವಂತೆ ದುರ್ಗಾಮಾತೆ ಮಾಡಿದ್ದಾಳೆ. ಹತ್ತನೆಯ ದಿನದಂದು ದುರುಳ ದಾನವನನ್ನು ದುರ್ಗಾಮಾತೆಯು ಕೊಂದು ಜಯ ಪಡೆದುದರಿಂದ ಅಂದಿನ ದಿನವನ್ನು “ವಿಜಯ ದಶಮಿ” ದಿನವನ್ನಾಗಿ ಆಚರಿಸುವುದು.
ವಿಜಯ ದಶಮಿಯಂದು ಅಕ್ಷರಾಭ್ಯಾಸ, ಸಂಗೀತ, ನೃತ್ಯ ಅಭ್ಯಾಸ ಕಲಿಯಲು ಸುರು ಮಾಡಲು ಶುಭದಿನ ಎಂಬ ನಂಬಿಕೆಯಿದೆ. ಬಂಗಾಳದಲ್ಲಿ ದಸರಾ ಸಮಯದಲ್ಲಿ ನಡೆಯುವ ದುರ್ಗಾ ಪೂಜೆಯು ಬಹಳ ವೈಶಿಷ್ಟ್ಯಪೂರ್ಣವಾಗಿರುತ್ತದೆ.ಬಂಗಾಳದಲ್ಲಿ ದುರ್ಗೋತ್ಸವ, ಉತ್ತರ ಭಾರತದಲ್ಲಿ ರಾಮಲೀಲಾ, ಗುಜರಾತ್ ನಲ್ಲಿ ಗರ್ಭನೃತ್ಯ ಮತ್ತು ಕರ್ನಾಟಕದಲ್ಲಿ ನಾಡಹಬ್ಬದ ಹೆಸರಿನಲ್ಲಿ ದುರ್ಗಾಮಾತೆಗೆ ವಿಶೇಷ ಪೂಜೆಗಳು ಸಲ್ಲುತ್ತದೆ.
ಮೈಸೂರು: ಸಿಂಗಾರದ ಮೈಸೂರು “ಕನ್ನಡದ ಕುಶಲತೆಗೆ ಕನ್ನಡದ ರಸಿಕತೆಗೆ ಕನ್ನಡದ ನಿಪುಣತೆಗೆ ಕನ್ನಡಿಯು ಮೈಸೂರು” ಎಂದು ರಾಷ್ಟ್ರಕವಿ ಕುವೆಂಪುರವರು ಬರೆದ ಕವನದ ಸಾಲು ಮೈಸೂರಿನ ವೈಭವವನ್ನು ಸಾರಿ ಹೇಳುತ್ತದೆ. ಮೈಸೂರು ಅಂದಾಕ್ಷಣ ನೆನಪಿಗೆ ಬರುವುದು ಮೈಸೂರು ದಸರಾ. ವೈಭವ ಭರಿತ ಅರಮನೆ, ಪ್ರಪಂಚದ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಐತಿಹಾಸಿಕ ಸ್ಮಾರಕಗಳು, ಹಲವು ಶತಮಾನಗಳ ಕಾಲ ಕರ್ನಾಟಕದ ರಾಜಧಾನಿಯಾಗಿದ್ದು, ವಿಸ್ತಾರವಾದ ಉದ್ಯಾನಗಳು, ಸಾಲು ಮರಗಳ ಹೆದ್ದಾರಿಗಳು, ಚಾಮುಂಡಿ ಬೆಟ್ಟ, ಮೃಗಾಲಯ, ವಸ್ತು ಸಂಗ್ರಹಾಲಯ, ಕನ್ನಂಬಾಡಿ ಅಣೆಕಟ್ಟು ಮೈಸೂರಿಗೆ ಭೂಷಣವಿದ್ದಂತೆ. ಇನ್ನೂ ಮೈಸೂರಿನ ಹೆಮ್ಮೆಯೆಂದರೆ ಮೈಸೂರಿನ ರೇಷ್ಮೆ ಸೀರೆ, ಸೊಗಸಾದ ಶ್ರೀಗಂಧ ಹಾಗೂ ಮರದ ಕರ ಕುಶಲ ವಸ್ತುಗಳು, ವರ್ಣಚಿತ್ರಗಳು, ಕಲಾಸಂಗ್ರಹ, ಸುಗಂಧ ದ್ರವ್ಯ, ಘಮಘಮಿಸುವ ಮೈಸೂರು ಮಲ್ಲಿಗೆ, ನಂಜನಗೂಡಿನ ರಸಬಾಳೆ, ಚನ್ನಪಟ್ಟಣದ ಬೊಂಬೆ, ಶ್ರೀ ಗಂಧದ ಎಣ್ಣೆಕಾರ್ಖಾನೆ, ಚಿಟ್ಟೆಪಾರ್ಕ್, ಮೈಸೂರಿನ ಮರಳು ಶಿಲ್ಪ. ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ.
ಮೈಸೂರು ದಸರಾ: ದಸರಾ ಉತ್ಸವವನ್ನು ದೇಶದಾದ್ಯಂತ ಆಚರಿಸಿದರೂ ಮೈಸೂರಿನ ಅರಸರ ಕಾಲದಿಂದಲೂ ವಿಶ್ವ ಪ್ರಸಿದ್ದ ದಸರಾ ಮೈಸೂರು ಅರಮನೆಯಲ್ಲಿ ಹತ್ತು ದಿನಗಳ ಕಾಲ ವೈಭವೋವಿತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ದಸರಾ ಉತ್ಸವವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಮೈಸೂರಿನಲ್ಲಿ ಒಂದೆಡೆ ಜಿಲ್ಲಾಡಳಿತ, ಮತ್ತೊಂದು ಕಡೆಯಲ್ಲಿ ರಾಜ ಮನೆತನದವರಿಂದ ನವರಾತ್ರಿ ಹಾಗೂ ದಸರಾ ಆಚರಣೆಗೆ ಸಿದ್ದತೆ ನಡೆಯುತ್ತದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ ದಸರಾ ಮಹೋತ್ಸವ ಉದ್ಘಾಟಿಸಲಾಗುತ್ತದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವಿದ್ಯುತ್ ದೀಪಾಲಂಕಾರ ದಸರಾಗೆ ಇನ್ನಷ್ಟೂ ಮೆರಗು ನೀಡುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದು ದಿವಂಗತರಾಗಿರುವ ಖ್ಯಾತ ಮಹನೀಯರ ಪ್ರತಿಕೃತಿಗಳು ವಿದ್ಯುತ್ ವೈಭವದಿಂದ ಝಗಮಗಿಸುತ್ತದೆ. ಅರಮನೆ ವಿದ್ಯುತ್ ದೀಪಾಲಂಕಾರದ ವೀಕ್ಷಣೆಗೆ ರಾತ್ರಿ 7 ರಿಂದ 9 ರ ರವರೆಗೆ ಅವಕಾಶ ನೀಡಲಾಗುತ್ತದೆ. ಅಂಬಾವಿಲಾಸ ಅರಮನೆಯೆದುರು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧ .
ನಾಡ ಹಬ್ಬ ದಸರಾದ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಆನೆಯ ರಥದ ಮೇಲೆ ಕರ್ನಾಟಕದ ಲಾಂಛನವಾದ “ಗಂಡ ಭೇರುಂಡ” ಧ್ವಜ, ರಥದ ಒಳಗಡೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹವು ಶಾಶ್ವತ ಲಾಂಛನವನ್ನಾಗಿ ಅಧಿಕೃತವಾದ ಮನ್ನಣೆಯನ್ನು ಕರ್ನಾಟಕ ಸರ್ಕಾರವು ನೀಡಿದೆ. ಇಂದಿಗೂ ನವರಾತ್ರಿ ಉತ್ಸವ ಪ್ರಾರಂಭಗೊಂಡು ಮಹಾನವಮಿ ದಿನದ ಕೊನೆಯವರೆಗೆ ಪ್ರತಿ ನಿತ್ಯ ಸಿಂಹಾಸನ ರೋಹಣ, ಒಡ್ಡೋಲಗ, ವಿವಿಧ ಸಾಂಸ್ಕೃತಿಕ ಮನರಂಜನೆಯ ಕಾರ್ಯಕ್ರಮಗಳು ನಡೆಯುತ್ತದೆ. ಕ್ರಿ.ಶ.1399 ಎಪ್ರಿಲ್ 11 ರಲ್ಲಿ ಯದುಕುಲ ತಿಲಕ ಯದುರಾಯರಿಂದ ನೆಲೆಗೊಂಡ ದಸರಾ ಮಹೋತ್ಸವ 1959ರ ಜನವರಿ 26ವರೆಗೆ ಅಂದರೆ ಭಾರತ ಗಣರಾಜ್ಯವೆಂದು ಕರೆಯುವವರೆಗೆ ಮೈಸೂರು ಮಹಾರಾಜರ ಮೂಲಕ ದಸರಾ ಮಹೋತ್ಸವ ಕಂಡಿದೆ.
ನಾಡ ಹಬ್ಬ ದಸರಾ ಅಂದರೆ ಮೈಸೂರಿನ ಭವ್ಯತೆ ಹಾಗೂ ಸಂಪ್ರದಾಯದ ಉತ್ಸವ ಧೀರ್ಘ ಕಾಲದಿಂದ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಅದರಲ್ಲೂ ವಿದೇಶಿಯರನ್ನು ವಿಶೇಷವಾಗಿ ಆಕರ್ಷಿಸುತ್ತಾ ಬಂದಿದೆ. ಮೈಸೂರು ದಸರಾ ಉತ್ಸವ ಹತ್ತು ದಿನಗಳ ಕಾಲ ನೃತ್ಯ, ಕವಿಗೋಷ್ಠಿ, ದೀಪಾಲಂಕಾರ, ಕ್ರೀಡೆ, ಕುಸ್ತಿ, ಸಂಗೀತ ಕಛೇರಿ ಹಾಗೂ ಸಂಸ್ಕ್ರತಿಯನ್ನು ಬಿಂಬಿಸುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅರಮನೆಯ ಆಸುಪಾಸಿನಲ್ಲಿ ನಡೆಸಲಾಗುತ್ತದೆ.
ಚಾಮುಂಡೇಶ್ವರಿ ದೇವಿಯನ್ನು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಅಲಂಕೃತವಾಗಿ ಮೆರವಣಿಗೆ ಮೂಲಕ ತರಲಾಗುತ್ತದೆ. ಚಿನ್ನದ ಅಂಬಾರಿಯ ಮೇಲೆ ತಾಯಿ ಚಾಮುಂಡಿ ದೇವಿಯನ್ನು ಸಂಪ್ರದಾಯ ದಸರಾ ಮೆರವಣಿಗೆಗೆ ಜಂಬೂ ಸವಾರಿಯಲ್ಲಿ ಆನೆ ಹೊತ್ತು ಸಾಗುವುದನ್ನು ನೋಡುವುದೇ ಒಂದು ಸೊಗಸು. ಇದಕ್ಕಾಗಿ ಕಾಡಿನಿಂದ ಆನೆಗಳನ್ನು ಮೈಸೂರಿಗೆ ತರಲಾಗುತ್ತದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಗಜಪಡೆ ತಾಲೀಮು ನೀಡಲಾಗುತ್ತದೆ. ಕೃಷ್ಣ ದೇವರಾಯ ಒಡೆಯರ ಕಾಲಘಟ್ಟದಲ್ಲಿ ಜಯಮಾರ್ತಾಂಡ ಎಂಬ ಹೆಸರಿನ ಆನೆ ಅಂಬಾರಿ ಹೊತ್ತ ಮೊದಲ ಆನೆ. ದಸರಾ ಮೆರವಣಿಗೆಯಲ್ಲಿ ಸಹ ಆನೆಗಳೊಂದಿಗೆ ಮೊದಲಿಂದಲೂ ಭಾಗವಹಿಸುತ್ತಿದ್ದ ಅಭಿಮನ್ಯು ಈ ಬಾರಿ ಗಜ ಪಡೆಯ ಯಜಮಾನ ಹಾಗೂ ಅಂಬಾರಿ ಹೊರುವ ಜವಾಬ್ದಾರಿ ಹೊತ್ತ ಆನೆ. ಅಂಬಾರಿ ಆನೆಯ ಜೊತೆಗೆ ಪಟ್ಟದ ಆನೆಗಳು, ಕುಮ್ಮಿ ಆನೆಗಳು ಸಾಲಾಗಿ ತಮಗೆ ನೀಡಿದ ತರಬೇತಿಯಂತೆ ನಿಧಾನವಾಗಿ ಸಾಗುತ್ತವೆ.
ಈ ಮೆರವಣಿಗೆಯಲ್ಲಿ ಜೊತೆ ಜೊತೆಯಲ್ಲಿ ಸಾಗುವ ವಿವಿಧ ಜಿಲ್ಲೆ ಗಳ ಸಂಸ್ಕೃತಿ ಹಾಗೂ ಕಲೆಯನ್ನು ಬಿಂಬಿಸುವ ಕಲಾ ಸೌರಭಗಳು ಮೆರವಣಿಗೆಯ ಘನತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬನ್ನಿ ಮಂಟಪಕ್ಕೆ ಹೋಗುವ ಜಂಬೂ ಸವಾರಿಯ ಮೆರವಣಿಗೆಯು ವಿಶ್ವ ಪ್ರಸಿದ್ದ ಮೈಸೂರು ದಸರಾಕ್ಕೆ ತಿಲಕವಿಟ್ಟಂತೆ.
ಅರಮನೆ ಆವರಣದಿಂದ ಬನ್ನಿ ಮಂಟಪದ ಪಂಜಿನ ಕವಾಯತ್ತು ಮೈದಾನದವರೆಗೆ ಸುಮಾರು 6 ಕಿಮೀ ದೂರ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜ ಪಡೆಯ ಜೊತೆಗೆ ನಾಡು, ನುಡಿ, ಕಲೆ, ಸಂಸ್ಕೃತಿಯ ಸ್ತಬ್ದ ಚಿತ್ರಗಳು ನೂರಾರು ಕಲಾ ತಂಡಗಳು ವಿವಿಧ ಕಲಾ ಪ್ರಾಕಾರಗಳನ್ನು ಪ್ರದರ್ಶಿಸುತ್ತಾ ಮೈನವೀರೇಳಿಸುವ ಸಾಹಸಗಳ ಪ್ರದರ್ಶನ ನಡೆಯುತ್ತದೆ. ದಸರಾ ಹಬ್ಬವು ದುರ್ಗಾ ಪೂಜೆ ಆಯುಧ ಪೂಜೆ, ವಾಹನ ಪೂಜೆ ಶಕ್ತಿ ದೇವತೆಗಳ ಪೂಜೆ ಈ ದಿನಗಳಲ್ಲಿ ವಿಶೇಷವಾಗಿ ನಡೆಯುತ್ತದೆ. ವರ್ಣ ರಂಜಿತ ಸಿಡಿಮದ್ದುಗಳು ಆಗಸವನ್ನು ಬೆಳಗಿಸುವ ಪಂಜಿನ ಮೆರವಣಿಗೆಯೊಂದಿಗೆ ದಸರಾ ಹಬ್ಬ ಕೊನೆಗೊಳ್ಳುತ್ತದೆ.
ಬೊಂಬೆ ಹಬ್ಬ: ದಸರಾ ಬೊಂಬೆಗಳ ಹಬ್ಬವೂ ಹೌದು. ಕರ್ನಾಟಕದ ಕೆಲಭಾಗಗಳಲ್ಲಿ ಹೆಚ್ಚಾಗಿ ಮೈಸೂರಿನಲ್ಲಿ ಹಾಗೂ ತಮಿಳುನಾಡಿನಲ್ಲಿ ಮನೆ ಮನೆಗಳಲ್ಲಿ ಅಲಂಕರಿಸಿದ ವಿವಿಧ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ಒಂಭತ್ತು ದಿನಗಳು ಪೂಜಿಸಿ ದಿನಾ ಒಂದೊಂದು ಸಿಹಿ ತಿಂಡಿ ಮಾಡಿ ಅರ್ಪಿಸುವ ಕ್ರಮವಿದೆ. ಅಂಗೈಯಲ್ಲಿ ಹಿಡಿಯಬಹುದಾದ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಸಾವಿರಾರು ಬೊಂಬೆಗಳನ್ನು ಸಾಲು ಸಾಲಾಗಿ ಒಪ್ಪ ಓರಣವಾಗಿ ಜೋಡಿಸಿಟ್ಟು ಆರತಿ ಬೆಳಗಿ, ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಮತ್ತೆ ಕೆಲವರು ಕಲಾತ್ಮಕವಾಗಿ ಕೂರಿಸಿ ಸಂಭ್ರಮಿಸುತ್ತಾರೆ. ಮನೆಯಲ್ಲಿ ಬೊಂಬೆ ಕೂರಿಸುವಾಗ ಮೊದಲನೇ ಸಾಲಿನಲ್ಲಿ ಗಣೇಶ ಹಾಗೂ ದೇವಿಯನ್ನು ಕೂರಿಸುವುದು ವಾಡಿಕೆ. ನಂತರದ ಸಾಲಿನಲ್ಲಿ ಪಟ್ಟದ ಗೊಂಬೆ, ಬೊಂಬೆಗಳಿಗೆ ತೊಡಿಸುವ ಆಭರಣಗಳು ಮತ್ತು ಪೋಷಾಕುಗಳಿಂದ ಬೊಂಬೆಗಳು ಬಹು ಸುಂದರವಾಗಿ ಕಾಣಿಸುತ್ತದೆ. ಅನುಕೂಲಕ್ಕೆ ತಕ್ಕಂತೆ ವೇದಿಕೆಯನ್ನು ಸಿದ್ದಪಡಿಸಿ ನವರಾತ್ರಿಯನ್ನು ಸಾಂಕೇತಿಸುವಂತೆ ೯ ಮೆಟ್ಟಿಲುಗಳಿರುವಂತೆ ಮಾಡಿ ಆ ಮೆಟ್ಟಿಲುಗಳ ಮೇಲೆ ಅಲಂಕೃತ ಗೊಂಬೆಗಳನ್ನು ಕೂಡಿಸಿ ಕೌಶಲ್ಯ ಮೆರೆಯುತ್ತಿದ್ದ ಕಾಲವೊಂದಿತ್ತು. ರಾಜ ರಾಣಿಯರಿಗೆ ದೇವರ ಸಮಾನ ಸ್ಥಾನಮಾನ ನೀಡುತ್ತಿದ್ದರು. ಈಗ ರಾಜ ರಾಣಿ ಬೊಂಬೆಗಳನ್ನು ನವರಾತ್ರಿಯ ಉತ್ಸವದಲ್ಲಿ ಮನೆಯಲ್ಲಿ ಇಟ್ಟು ಪೂಜಿಸುವ ವಾಡಿಕೆ.
ಒಟ್ಟಿನಲ್ಲಿ ಅವರವರ ಭಾವಕ್ಕೆ ಮತ್ತು ಭಕ್ತಿಗೆ ತಕ್ಕಂತೆ ಮುಂಬಯಿಯಲ್ಲಿ ೯ ದಿನಗಳು ನಿರ್ದಿಷ್ಟವಾದ ಬಣ್ಣದ ಬಟ್ಟೆಗಳನ್ನೇ ತೊಟ್ಟು ನವರಾತ್ರಿಯಲ್ಲಿ ಸಂಭ್ರಮಿಸಿ ಗರ್ಭನೃತ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ದೇವಿಯ ಕಳಶ ಪೋಟೋ ಇಟ್ಟು ನೃತ್ಯದಲ್ಲಿ ಭಾಗವಹಿಸಿ ತಮ್ಮ ಭಕ್ತಿ ಮೆರೆಯುತ್ತಾರೆ. ದಕ್ಷಿಣ ಭಾರತದಲ್ಲಿ ನವರಾತ್ರಿ ಶ್ರಾವಣ, ಆಷಾಢ ಮಳೆಯಿಂದ ತೊಯ್ದು ಮತ್ತೆ ಚಿಗುರುವ ಪ್ರಕೃತಿಯ ಪೂಜೆಗೆ ಹೆಚ್ಚು ಆದ್ಯತೆ. ಬಂಗಾಳದಲ್ಲಿ ದೇವಿಯ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಒಂಬತ್ತು ದಿನಗಳಲ್ಲಿ ದುರ್ಗೆ, ಲಕ್ಷ್ಮೀ ಮತ್ತು ಸರಸ್ಪತಿ, ಕಾಳಿ, ಮಹಾಕಾಳಿ, ಶಕ್ತಿಪೂಜೆಯಿಂದ ವಿದ್ಯೆ, ಸಂಪತ್ತು, ಆರೋಗ್ಯ ಲಭಿಸುತ್ತದೆ ಎಂಬ ದೃಷ್ಟಿಯಿಂದ ಪೂಜೆಗಳು ನಡೆಯುತ್ತದೆ. ದೊಡ್ಡ ಕಣ್ಣಿನ ಅಷ್ಟ ಭುಜಗಳ ಭಯಂಕರ ರೂಪದ ಕಾಳಿಮಾತೆಗೂ ಪೂಜೆ ಸಲ್ಲಿಸಲಾಗುತ್ತದೆ.
ಗುಜರಾತಿನವರು ಒಂಬತ್ತು ರಂಧ್ರಗಳ ಮಣ್ಣಿನ ಮಡಿಕೆಯ ನಂದಾ ದೀಪದಿಂದ ಪೂಜೆ ಕೈಗೊಳ್ಳುತ್ತಾರೆ. ಹೆಣ್ಣು ಮಕ್ಕಳಿಗೆ ಆದರದಿಂದ ಕನ್ಯಾ ಪೂಜೆ ಮಾಡುವರು. ಪ್ರತಿ ದಿನ ಗರ್ಭ ದಾಂಡಿಯಾ ನಡೆಯುತ್ತದೆ. ಒಂಬತ್ತು ದಿನಗಳು 9 ಶ್ಲೋಕಗಳ ಮೂಲಕ ದೇವಿಯನ್ನು ಸ್ತುತಿಸುವರು. ಬೆಳಕಿನ ದೀಪದಲ್ಲಿ ರಾತ್ರಿಯ ಕಾಲದಲ್ಲಿ ಮಹಾ ಮಾಯೆಯನ್ನು ಪೂಜಿಸುವ ಆರಾಧಿಸುವುದು ನವರಾತ್ರಿಯ ವಿಶೇಷ.
ನಾನು ಮುಂಬಯಿಯಲ್ಲಿ ನೋಡಿದಂತೆ ವರ್ಷದಲ್ಲಿ ನಾಲ್ಕು ಬಾರಿ ನವರಾತ್ರಿ ಆಚರಿಸುತ್ತಾರೆ. ವಸಂತ ನವರಾತ್ರಿ, ಆಷಾಢ ನವರಾತ್ರಿ, ಮಾಘ ನವರಾತ್ರಿ, ಶರನ್ನವರಾತ್ರಿ ಆಚರಣೆಯಲ್ಲಿದೆ. ಹಾಗೆ ನವರಾತ್ರಿಯಲ್ಲಿ ಕವಿಗೋಷ್ಠಿ, ಉತ್ತರ ಭಾರತಿಯರು ರಾಮಲೀಲಾ ನಡೆಸುವರು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ