ಶ್ರೀ ಕೃಷ್ಣ, ಗೋವಿಂದ, ಮುರಾರಿ ಎಂದಾಕ್ಷಣ ನಮ್ಮ ಕಣ್ಮುಂದೆ ಸುಳಿದಾಡುವುದು ಬಾಲ ಕೃಷ್ಣನ ಮುದ್ದು ಮುಖ, ತುಂಟ ಕೃಷ್ಣ, ಬೆಣ್ಣೆ ಕಳ್ಳ,ಕಪ್ಪು ಬಣ್ಣದ ಶ್ಯಾಮ, ಗೋವುಗಳ ಕಾಯುವ ಗೋಪಾಲ, ಪರ್ವತ ಎತ್ತಿ ಹಿಡಿದ ಗಿರಿಧರ, ಕೊಳಲು ಊದುವ ಮುರಲಿ, ರಾಧೆಯ ಸಕ, ಜಗದ ಮಾಲಿಕ ಜಗದೀಶ, ಸುಂದರ ವದನ ಮಥನ, ದುಷ್ಟರ ಸಂಹಾರ, ಶಿಷ್ಟರ ರಕ್ಷಕ ಹೀಗೆ ನೆನಪಿಸಿಕೊಳ್ಳುತ್ತಾ ಭಕ್ತಿಯಿಂದ ಪೂಜಿಪ ಶ್ರೀ ಕೃಷ್ಣ ಹೆಚ್ಚಾಗಿ ಸಿಲ್ಕ್ ನ ಹಳದಿ ಬಣ್ಣದ ದೋತರ ಮತ್ತು ತಲೆಯನ್ನು ನವಿಲು ಗರಿಗಳಲ್ಲಿ ಅಲಂಕರಿಸಿದ್ದು ಕೊಳಲು ಊದುವ ಕೃಷ್ಣನನ್ನೇ ಹೆಚ್ಚಾಗಿ ಬಿಂಬಿಸಲಾಗುತ್ತದೆ. ಭಕ್ತರು ಭಕ್ತಿಯಿಂದ ಆಚರಿಸುವ ಶ್ರೀ ಕೃಷ್ಣಾಷ್ಟಮಿಯ ಸಂಭ್ರಮವು ಬಗೆ ಬಗೆ.
ಶ್ರಾವಣ ಮಾಸದ ಕೃಷ್ಣಾಷ್ಟಮಿಯ ರೋಹಿಣಿ ನಕ್ಷತ್ರದಲ್ಲಿ ದೇವಕಿಯ ಎಂಟನೇ ಗರ್ಭದಲ್ಲಿ ಹುಟ್ಟಿದ ದಿನವನ್ನು ಇಂದಿಗೂ ಮನೆ ಮನೆಯಲ್ಲಿ ಆಚರಿಸುವುದು ಕಾಣ ಸಿಗುತ್ತವೆ. ಈ ದಿನ ಮನೆಯ ಯಜಮಾನ ಅಷ್ಟಮಿ ಉಪವಾಸ ಮಾಡುವ ಕ್ರಮ ಇದ್ದು ಮದ್ಯಾಹ್ಹ ಊಟ ಮಾಡದೆ ಉಪವಾಸದಲ್ಲಿದ್ದು (ಫಲಹಾರ ಸೇವಿಸಬಹುದು) ರಾತ್ರಿ ಶ್ರೀ ಕೃಷ್ಣನನ್ನು ಪೂಜಿಸಿ ಶಂಖ ತೀರ್ಥದಿಂದ ಮೊದಲು ಕೃಷ್ಣನಿಗೂ ಬಳಿಕ ರೋಹಿಣಿ ಸಹಿತನಾದ ಚಂದ್ರನಿಗೂ ಪ್ರತ್ಯೇಕವಾಗಿ ಅರ್ಘ್ಯ ಬಿಡಲಾಗುತ್ತದೆ. ಜಗದೊಡೆಯ ಶ್ರೀ ಕೃಷ್ಣನ ಜನ್ಮದಿನದ ಸಂಭ್ರಮಕ್ಕೆ ರಾತ್ರಿ ತೊಟ್ಟಿಲೋತ್ಸವ ಪೂಜೆ, ಭಜನೆ, ಕೀರ್ತನೆಗಳು ನಡೆಯುತ್ತವೆ. ಸಂಜೆ ತುಳಸಿಕಟ್ಟೆ ಎದುರು ರಂಗೋಲಿ ಹಾಕಿ ತುಳಸಿ ಕಟ್ಟೆಯಲ್ಲಿ ನೆಲ್ಲಿ ಗಿಡ ನೆಟ್ಟು ಪೂಜೆ ಸಲ್ಲಿಸಲಾಗುತ್ತದೆ. ಆ ದಿನ ಹಳ್ಳಿ ಮನೆಗಳಲ್ಲಿ ಚನ್ನೆ ಮಣಿ ಆಟ ಆಡುವುದು ಹಾಗೂ ಜಾಗರಣೆ ಇರುತ್ತದೆ. ಚಂದ್ರದೊದಯದ ನಂತರ ತುಳಸಿ ಕಟ್ಟೆಯಲ್ಲಿ ಬಾಳೆ ಎಲೆ ಮೇಲೆ ಅಕ್ಕಿ ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಇಟ್ಟು ದೀಪ ಧೂಪ ಹಾಕಿ ತುಳಸಿಗೆ ಹಾಲಿನ ಅರ್ಘ್ಯವನಿತ್ತು ಪೂಜೆ ಸಲ್ಲಿಸಿ ಉಂಡೆ, ಚಕ್ಕುಲಿ ಸಹಿತ ನೈವೇದ್ಯ ಅರ್ಪಿಸುವರು. ಅಷ್ಟಮಿಗೆ ಸೇವಿಗೆ, ತೆಂಗಿನ ಕಾಯಿ ಹಾಲು, ಕಡುಬು, ದೋಸೆ, ಪಂಚಕಜ್ಜಾಯ, ಅತ್ರಸ, ಲಡ್ಡು, ಚಕ್ಕುಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ಬಣ್ಣಗಳಲ್ಲಿ ನೀಲಿ ಬಣ್ಣಕ್ಕೆ ವಿಶೇಷ ಅರ್ಥವಿದೆ. ನಿಲುವಿಗೆ ಸಿಗದ ಆಕಾಶ ನೀಲಿ, ಆಳ ಅಳೆಯಲಾಗದ ಸಾಗರ ನೀಲಿ, ಅಗಣಿತ ಗುಣ ಮಹಿಮಾ ಶ್ರೀ ಕೃಷ್ಣನ ಮೈ ಬಣ್ಣ ನೀಲಿ. ಇದರರ್ಥ ಶ್ರೀ ಕೃಷ್ಣ ಆಕಾಶದಂತೆ ವಿಶಾಲವಾಗಿ ಸಮುದ್ರದಂತೆ ವಿಸ್ತಾರ.
ಉಡುಪಿ ಶ್ರೀಕೃಷ್ಣ : ಶ್ರೀ ಕೃಷ್ಣ ನೆಲೆನಿಂತ ಪ್ರಸಿದ್ಧ ಸ್ಥಳ ಉಡುಪಿ. ಕನಕನ ಭಕ್ತಿಗೆ ಒಲಿದು ದಿಕ್ಕನ್ನೇ ಬದಲಿಸಿದ. ಇಂದಿಗೂ ಭಕ್ತರು ಕಿಂಡಿಯಲ್ಲಿ ದರ್ಶನ ಪಡೆಯುತ್ತಾರೆ. ಉಡುಪಿಯಲ್ಲಿ ಮೊಸರು ಕುಡಿಕೆ ಪ್ರಖ್ಯಾತ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಮರುದಿನ ಉಡುಪಿಯಲ್ಲಿ ಸಂಭ್ರಮದ ಹುಲಿ ವೇಷ ಸಹಿತ ನಾನಾ ವೇಷಗಳು ವಾದ್ಯಗಳ ನಿನಾದ, ಬಗೆ ಬಗೆಯ ವೇಷಗಳ ಕುಣಿತ ಜತೆಗೆ ಮೊಸರು ಕುಡಿಕೆ ಒಡೆವ ಗೊಲ್ಲರ ಉತ್ಸಾಹ. ರಾದೆ ಕೃಷ್ಣರ ಸ್ಪರ್ಧೆ ಅಲ್ಲದೇ ಡೋಲು, ತಾಳಗಳ, ಸದ್ದಿಗೆ, ಹೆಜ್ಜೆ ಹಾಕುವ ಹುಲಿ ವೇಷಗಳ ತಂಡ ಶ್ರೀ ಕೃಷ್ಣ ಲೀಲೋತ್ಸವದಲ್ಲಿ ಪಾಲ್ಗೊಂಡು ವಿಟ್ಲಪಿಂಡಿಯ ಸಂಭ್ರಮ. ಉಡುಪಿ ಮಠದ ವತಿಯಿಂದ ಶ್ರೀ ಕೃಷ್ಣನಿಗೆ ನವ ವಿಧದ ಉಂಡೆಗಳ ನೈವೇದ್ಯ ಮಾಡಲಾಗುತ್ತದೆ. ಭಕ್ತರಿಗೂ ಅಷ್ಟಮಿ ಪ್ರಸಾದ ಹಂಚಲಾಗುತ್ತದೆ. ಮಂಗಳ ವಾದ್ಯಗಳ ಮೂಲಕ ಉಡುಪಿಯಲ್ಲಿ ಪಿಟ್ಟಲ್ಲ ಪಿಂಡಿ ಆಚರಿಸುತ್ತಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಪೌರಾಣಿಕ ನೆಲೆ, ಐತಿಹಾಸಿಕ ಹಿನ್ನೆಲೆ ಇದೆ ಹಾಗೂ ಕೃಷ್ಣನ ಬಗೆಗೆ ಅನೇಕ ಕತೆಗಳಿವೆ. ಅದರಲ್ಲೂ ಕೃಷ್ಣನ ಮೈಬಣ್ಣ ನೀಲಿ ಯಾಕೆ ಎನ್ನುವುದು ಒಂದು ಸಿದ್ಧಾಂತ ಪ್ರಕಾರ ವಿಷ್ಣು ಸದಾ ಕಾಲ ನೀರಿನಲ್ಲಿಯೇ ಇರುವ ಕಾರಣ ನೀಲಿ ಬಣ್ಣದಲ್ಲಿದ್ದಾನೆ. ಆದ್ದರಿಂದ ಅವನ ಅವತಾರಗಳು ಸಹ ನೀಲಿ ಬಣ್ಣದಲ್ಲಿದೆ ಎನ್ನಲಾಗಿದೆ.
ಇನ್ನೊಂದು ನಂಬಿಕೆ ಪ್ರಕಾರ ವಿಷ್ಣು ಅಳವಡಿಸಿಕೊಂಡಿರುವ ಎರಡು ಕೂದಲುಗಳಲ್ಲಿ ಒಂದು ಕಪ್ಪು ಇನ್ನೊಂದು ಬಿಳಿ. ತಾಯಿ ದೇವಕಿಯ ಗರ್ಭದಲ್ಲಿ ಇದ್ದ ಕಪ್ಪು ಕೂದಲು ಮಾಯಾವಾಗಿ ರೋಹಿಣಿಯ ಗರ್ಭದೊಳಗೆ ಬಂದು ಸೇರಿತು. ಕಪ್ಪು ಕೂದಲಿನ ಕಾರಣ ಕೃಷ್ಣ ನೀಲಿಯಾಗಿ ಹುಟ್ಟಿದ ಎಂಬ ನಂಬಿಕೆ. ಇನ್ನೊಂದು ವಿಚಾರದಂತೆ ಸೃಷ್ಟಿಕರ್ತ ಪ್ರಕೃತಿಗೆ ನೀಲಾಕಾರ, ನೀಲಿಸಾಗರ, ನದಿ ಸಮುದ್ರಗಳು ಹೀಗೆ ಎಲ್ಲಾ ನೀಲಿ ವರ್ಣಗಳಿಂದ ಮನುಷ್ಯರನ್ನು ರಕ್ಷಿಸಲು ಮತ್ತು ದುಷ್ಟತೆಯನ್ನು ನಾಶಮಾಡಲು ಈ ಭೂಮಿಯ ಮೇಲೆ ಅವತರಿಸಿದನು. ಆದ್ದರಿಂದ ಅವನ ಬಣ್ಣ ನೀಲಿ ಎಂದು ಬಿಂಬಿತವಾಗಿದೆ ಎನ್ನುತ್ತಾರೆ ನನ್ನ ಸಹಪಾಠಿ ವೇದ ಮೂರ್ತಿ ನರಸಿಂಹ ಅಡಿಗರು.
ಶ್ರೀ ಕೃಷ್ಣ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿದ್ದಕ್ಕಾಗಿ ದ್ರೌಪದಿಗೆ ಶ್ರೀ ಕೃಷ್ಣ ಅಕ್ಷಯ ವಸ್ತ್ರ ನೀಡಿ ಮಾನ ರಕ್ಷಿಸಿದ ಸಂಕೇತವಾಗಿ ಅಂದು ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ನಮ್ಮನ್ನು ಸದಾ ಕಷ್ಟ ಕಾರ್ಪಣ್ಯಗಳಿಂದ ರಕ್ಷಿಸು ಎಂದು ಕೋರಿ ಕೈಗೆ ದಾರ ಕಟ್ಟುವ ಸಂಪ್ರದಾಯ ಪ್ರಾರಂಭವಾಯಿತು.
ಮುಂಬಯಿ ಗೋವಿಂದ : ಮುಂಬಯಿಯಲ್ಲಿ ಶ್ರೀ ಕೃಷ್ಣ ಅಷ್ಟಮಿ ಮರುದಿನ ಯುವಕರಿಗೆ ಇನ್ನೊಂದು ಉತ್ಸವ. ಅದೇ ಮೊಸರು ಕುಡಿಕೆ ಅಥವಾ ಮುಂಬಯಿಕರ್ ಭಾಷೆಯಲ್ಲಿ ಹೇಳುವುದಾದರೆ ದಹಿ ಹಂಡಿ ಅಥವಾ ಗೋವಿಂದ. ರಸ್ತೆ ಬದಿಯಲ್ಲಿ ಎತ್ತರಕ್ಕೆ ಮೊಸರು ಕುಡಿಕೆಯನ್ನು ಎತ್ತರಕ್ಕೆ ಕಟ್ಟಿರುತ್ತಾರೆ. ಅದನ್ನು ಮಾನವ ಪಿರಮಿಡ್ ಗಳ ಮುಖಾಂತರ ಹೊಡೆದು ಸಂಭ್ರವಿಸುತ್ತಾರೆ. ಇವರ ಪಂಗಡ ಸಮವಸ್ತ್ರದಲ್ಲಿದ್ದು ತಿಂಗಳುಗಟ್ಟಲೇ ತರಬೇತಿ ಪಡೆಯುತ್ತಾರೆ. ಗೋವಿಂದಗಳು ಮೊಸರು ಕುಡಿಕೆ ಒಡೆಯಲು ಪ್ರಯತ್ನಿಸುವಾಗ ಸಾರ್ವಜನಿಕರು ಒಣ್ಣದ ಓಕುಳಿ ಎರಚುತ್ತಾರೆ. ಇದು ಅತಿ ದೊಡ್ಡ ಸ್ಪರ್ಧೆಯಾಗಿ ಹಣದ ಮೊತ್ತವು ಹೆಚ್ಚಿದ್ದು ಬಹುಮಾನ ವಿಜೇತ ತಂಡಗಳು ಹೆಸರು ವಾಸಿಗಳಾದ ತಂಡವು ಇದೆ. ಕೆಲವೊಮ್ಮೆ ದುರಾದೃಷ್ಟವಶಾತ್ ಗೋವಿಂದಗಳು ಬಿದ್ದು ಪೆಟ್ಟುಮಾಡಿಕೊಳ್ಳುವುದೂ ಇದೆ. ಹೆಣ್ಣು ಮಕ್ಕಳ ಗೋವಿಂದ ತಂಡಗಳು ಮುಂಬಯಿಯಲ್ಲಿ ಗಲ್ಲಿ ಗಲ್ಲಿ ತಿರುಗುತ್ತಾರೆ.
ಭಾರತದಲ್ಲಿ ಸಾಕಷ್ಟು ಕೃಷ್ಣ ದೇವಾಲಯಗಳಿದ್ದು ಅಲ್ಲಿನ ಜನ್ಮಾಷ್ಟಮಿ ವಿಖ್ಯಾತವಾಗಿದೆ. ಉಡುಪಿ ಶ್ರೀ ಕೃಷ್ಣ ಮಠ, ವೃಂದಾವನ ರಾಧ ಮಾದವ ಮೋಹನ ಮಂದಿರ, ಪುರಿ ಜಗನ್ನಾಥ್, ಗುಜರಾತ್ ದ್ವಾರಕಾಧೀಶ,ಇಸ್ಕಾನ್ ಮಂದಿರಗಳು, ಶ್ರೀ ನಾಥ್ ಜಿ ರಾಜಸ್ಥಾನ, ಗುರುವಾಯನೂರು ಕೇರಳ, ರಾಜಗೋಪಾಲ್ ಸ್ವಾಮಿ ತಮಿಳು ನಾಡುಗಳಲ್ಲಿ ವಿಶೇಷ ಆಚರಣೆಗಳಿದ್ದು ದೇಶ ವಿದೇಶಗಳಲ್ಲಿ ಜನ್ಮಾಷ್ಟಮಿ ವಿಧಿವಿಧಾನಗಳಿಂದ ನಡೆಯುತ್ತದೆ.
ಭಾರತೀಯರ ಬದುಕಿನ ಸಂಸ್ಕೃತಿಕ ಚಿಹ್ನೆಗಳು ಹಬ್ಬಗಳ ಕಾಲ ಬದಲಾಗಿದೆ. ಚಿಕ್ಕವರಿದ್ದಾಗ ಎಲ್ಲಾ ಹಬ್ಬಗಳನ್ನು ಕಾತರದಿ ಕಾಯುವ ಮಕ್ಕಳೇ ಹೆಚ್ಚು. ಇಂದು ಹಬ್ಬಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಹಬ್ಬಗಳ ಆಚರಣೆಗಳಲ್ಲಿ ವಿಧಿ ವಿಧಾನಗಳಲ್ಲಿ ಪ್ರಾದೇಶಿಕ ಭಿನ್ನತೆಗಳಿರುತ್ತವೆ. ಸಂಪ್ರದಾಯ, ಸಂಭ್ರಮಗಳು ಎಲ್ಲಾ ಹಬ್ಬಗಳಲ್ಲಿ ಹಾಸು ಹೊಕ್ಕಾಗಿರಬೇಕು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ