ರೆಡ್ ಕ್ರಾಸ್ ಸೊಸೈಟಿ ಮೂಲಕ ನಿರಂತರ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿಪುಲ ಅವಕಾಶವಿದೆ. ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡುವಂತೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಡಾ. ಆನಂದ್ ಕೆ. ಹೇಳಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯ ಜತೆ ಸಮಾಲೋಚನೆ ನಡೆಸಿದ ಸಂದರ್ಭ ಮಾತನಾಡಿದ ಅವರು, ರೆಡ್ ಕ್ರಾಸ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ಪಡೆದರು.
ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಕಾಮಗಾರಿ ಪ್ರಗತಿ ಬಗ್ಗೆ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ವಿವರ ನೀಡಿದರು. ಇದೇ ಸಂದರ್ಭ ರೆಡ್ ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಮಾರ್ಗದರ್ಶನ ನೀಡುವಂತೆ ಸಮಿತಿ ವತಿಯಿಂದ ಸಿಇಓ ಅವರನ್ನು ವಿನಂತಿಸಲಾಯಿತು. ಕೋವಿಡ್ ಸಂದರ್ಭ ರೆಡ್ ಕ್ರಾಸ್ ನ ದ.ಕ. ಜಿಲ್ಲಾ ಘಟಕ ಹಮ್ಮಿಕೊಂಡ ಕಾರ್ಯ ಚಟುವಟಿಕೆಗಳನ್ನು ಶ್ಲಾಘಸಿದ ಅವರು ಮುಂದೆ ಎಲ್ಲ ರಿತೀಯ ಸಹಕಾರ ನೀಡುವುದಾಗಿ ತಿಳಿಸಿದರು.
ರೆಡ್ ಕ್ರಾಸ್ ಆಡಳಿತ ಮಂಡಳಿಯ ಖಜಾಂಚಿ ಮೋಹನ್ ಶೆಟ್ಟಿ ಕೆ, ಸದಸ್ಯರಾದ ಯತೀಶ್ ಬೈಕಂಪಾಡಿ, ಗುರುದತ್.ಎಂ.ನಾಯಕ್, ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಸಂಜಯ ಶೆಟ್ಟಿ, ಮ್ಯಾನೇಜರ್ ಸುಧಾಕರ್ ಉಪಸ್ಥಿತರಿದ್ದರು.