ಧರ್ಮವು ಅಧರ್ಮದ ದಾರಿಯಲ್ಲಿ ನಡೆದಾಗ ಭಗವಂತನು ಯಾವುದೇ ರೂಪದಲ್ಲಿ ಬಂದು ರಕ್ಷಣೆ ನೀಡುತ್ತಾನೆ ಎಂಬ ದೃಢ ನಂಬಿಕೆಯಿಂದ ಹನ್ನೆರಡು ವರ್ಷಗಳ ಹಿಂದೆ ಅಮಾನುಷವಾಗಿ ಕೊಲೆಯಾದ ಧರ್ಮಸ್ಥಳ ಪರಿಸರದ ಬಾಲೆ ಸೌಜನ್ಯಳ ನಿಜವಾದ ಕೊಲೆಗಾರ ಯಾರು ಎಂದು ತಿಳಿಯುವರೇ ಹೋರಾಟ ಆರಂಭವಾಗಿದೆ. ಈ ಹೋರಾಟದಲ್ಲಿ ನ್ಯಾಯ ಸಿಗಲೇಬೇಕೆಂದು ಪ್ರೋತ್ಸಾಹಿಸಿ ಮಹಾರಾಷ್ಟ್ರದ ಮಣ್ಣಿನಲ್ಲಿ ನೆಲೆಸಿದ ಸಮಾನ ಮನಸ್ಕರಾದ ನಾವು ಮುಂಬಯಿಯಲ್ಲೂ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶದಿಂದ ಪೂರ್ವಬಾವಿ ಸಭೆಯಲ್ಲಿ ಒಟ್ಟುಗೂಡಿದ್ದೇವೆ. ನಮ್ಮ ನಡೆ ಕೇವಲ ನ್ಯಾಯದ ಕಡೆ. ಹಿಂದೆ ಸಂತೋಷ್ ರಾವ್ ಎಂಬ ಸಜ್ಜನ ಯುವಕನನ್ನು ಆರೋಪಿಯ ಸ್ಥಾನದಲ್ಲಿಟ್ಟು ಇದೀಗ ನ್ಯಾಯಾಲಯವು ಅವರನ್ನು ನಿರಾಪರಾಧಿ ಎಂದು ತೀರ್ಪು ನೀಡಿದೆ. ಹಾಗಾಗಿ ನಿಜವಾದ ಆರೋಪಿ ಅಲ್ಲದೆ ಸಂತೋಷ್ ರಾವ್ ಹಾಗೂ ಅವರ ಕುಟುಂಬಕ್ಕೆ ಕಳಂಕ ತಂದವರು ಯಾರು ಎಂಬ ಗೊಂದಲವು ಈ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕಾಗಿ ಎಸ್ ಐಟಿ ಮುಖೇನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಮರು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಮಾಡಬೇಕು. ನಾವು ಯಾರದ್ದೇ ಚಾರಿತ್ರ್ಯ ಹರಣ ಮಾಡದೆ ನ್ಯಾಯಕ್ಕಾಗಿ ಪ್ರತಿಭಟಿಸುವ ಎಂದು ಕನ್ನಡ ಜಾನಪದ ಪರಿಷತ್ ಮಹಾರಾಷ್ಟ್ರದ ಅದ್ಯಕ್ಷ, ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ಯಾಡಿ ಹೇಳಿದರು. ಅವರು ಅ.14ರಂದು ಮೀರಾರೋಡ್ ಶೀತಲ್ ನಗರದ ಸಾಯಿ ಸಾಫಲ್ಯ ವಸತಿ ಸಂಕೀರ್ಣದ ವಠಾರದಲ್ಲಿ ಸಭಯನ್ನು ಆಯೋಜಿಸಿ ಮಾತನಾಡುತ್ತಿದ್ದರು.
ಸಭೆಯ ಇನ್ನೋರ್ವ ಆಯೋಜಕ ನೀಲೇಶ್ ಪೂಜಾರಿ ಪಲಿಮಾರು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಧರ್ಮ ಹಾಗೂ ನ್ಯಾಯ ಸಿಗುವಂತಹ ಧಾರ್ಮಿಕ ಕ್ಷೇತ್ರದ ಪರಿಸರದಲ್ಲಿ ನಡೆದ ಈ ಅಮಾನುಷ ಕೃತ್ಯಕ್ಕೆ ನ್ಯಾಯ ಯಾಕೆ ಸಿಗಲಿಲ್ಲ ಎಂಬುದನ್ನು ಎಣಿಸಿ ಇದೀಗ ಕಾನೂನಿನ ಮುಖಾಂತರ ನ್ಯಾಯಾಲಯದ ಮೊರೆ ಹೋಗುವಂತಾಗಿದೆ. ಖ್ಯಾತ ಸಮಾಜಮುಖಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೋಡಿಯವರ ಉಪಸ್ಥಿತಿಯಲ್ಲಿ ಶನಿವಾರ ಅಗಸ್ಟ್ 26 ರಂದು ಮೀರಾರೋಡ್ ಪೂರ್ವದ ಶಾಂತಿ ನಗರ, ಸೆಕ್ಟರ್ 10ರ ಸ್ವಾಮೀ ನಾರಾಯಣ ಮಂದಿರದ (BAPS) ಸಭಾಗೃಹದಲ್ಲಿ ಮಧ್ಯಾಹ್ನ ಗಂಟೆ 2ರಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಗೆ ಒತ್ತಡ ಹಾಗೂ ಬೆದರಿಕೆ ಬಂದರೂ ನಾವೆಲ್ಲರೂ ಸೇರಿ ಸೌಜನ್ಯ ಕುಟುಂಬದ ನ್ಯಾಯಕ್ಕಾಗಿ ಹೋರಾಟ ನಡೆಸುವ ಎಂದರು.
ಸಮಾಜಸೇವಕ, ಹ್ಯುಮಾನಿಟಿ ಫಸ್ಟ್ ಫೌಂಡೇಶನಿನ ರಾಯಭಾರಿ ಡಾ. ಶಿವ ಮೂಡಿಗೆರೆ ಮಾತನಾಡಿ ಇಂದು ನಾವು ಯಾವುದೇ ವ್ಯಕ್ತಿ ಪರ ಅಲ್ಲದೆ ರಾಜಕೀಯವಾಗಿ ಸಭೆಯನ್ನು ನಡೆಸುತ್ತಿಲ್ಲ. ಕೇವಲ ನ್ಯಾಯದ ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ. ಮುಂಬಯಿಯ ಎಲ್ಲಾ ತುಳು ಕನ್ನಡ ಸಂಸ್ಥೆಗಳು ಒಟ್ಟು ಸೇರಿ ಸರಕಾರಕ್ಕೆ ಕೂಡಲೇ ತ್ವರಿತ ಕ್ರಮ ಕೈಗೊಳ್ಳಲು ಲಿಖಿತ ಮನವಿ ನೀಡಬೇಕು. ಮೊದಲ ಬಾರಿ ಈ ಕೇಸಿನ ವಿಚಾರಣೆ ಮಾಡಿದ ವೈದ್ಯರು ಅಲ್ಲದೆ ಪೋಲಿಸು ಅಧಿಕಾರಿಗಳನ್ನು ಮೊದಲು ಅಧಿಕಾರದಿಂದ ವಜಾ ಮಾಡಬೇಕು. ಇವರೇ ಈ ಕೇಸಿಗೆ ಸಂಬಂಧಪಟ್ಟ ಸಾಕ್ಷಿಗಳನ್ನು ನಾಶ ಮಾಡಿದ್ದರಿಂದ ನ್ಯಾಯ ದೊರಕಲಿಲ್ಲ. ಅಲ್ಲದೆ ಅಲ್ಲಿನ ರಾಜಕೀಯ ಪ್ರಭಾವವೂ ಅವರೊಂದಿಗೆ ಜತೆ ಕೂಡಿರಬಹುದು. ನಿಜ ಆರೋಪಿಯನ್ನು ಕಂಡು ಹಿಡಿದು ಶಿಕ್ಷಿಸಿದರೆ ಮಾತ್ರ ಸೌಜನ್ಯ ಮತ್ತು ಸಂತೋಷ್ ರವ್ ಕುಟುಂಬಕ್ಕೆ ನೆಮ್ಮದಿ ಸಿಗಬಹುದು ಎಂದರು.
ಮುಂಬಯಿಯ ಖ್ಯಾತ ಸಮಾಜಮುಖಿ ಹೋರಾಟಗಾರ ಬೆರ್ಮೊಟ್ಟು ಚಂದ್ರಕೃಷ್ಣ ಶೆಟ್ಟಿ ಮಾತನಾಡುತ್ತಾ ಇತಿಹಾಸದಲ್ಲೇ ಧರ್ಮದ ಕ್ಷೇತ್ರವಾದ ಅಣ್ಣಪ್ಪ ದೈವ ನೆಲೆಸಿದ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಇಂದು ಕಳಂಕ ಬಂದಿದೆ. ಕ್ಷೇತ್ರದ ಮಹಿಮೆಯ ಬಗ್ಗೆ ಹೆಗ್ಗಡೆಯವರ ಬಾಯಿಯಿಂದ ಬರುವ ಮಾತಿನ ಬಗ್ಗೆ ನಂಬಿಕೆಯಿದೆ. ಲೋಕಕ್ಕೆ ನ್ಯಾಯ ಸಿಗುವ ಸ್ಥಳದಲ್ಲಿ ನ್ಯಾಯಕ್ಕೆ ಅನ್ಯಾಯವಾಗಿದೆ. ಇದಕ್ಕೆ ಪರಿಹಾರವಾಗಿ ನ್ಯಾಯವು ಮರು ತನಿಖೆಯ ಮುಖಾಂತರ ನ್ಯಾಯಾಲಯದಿಂದ ಸಿಗಬಹುದೇ ಅಥವಾ ಧರ್ಮದ ನೆಲೆಯಲ್ಲಿ ಮಾತನಾಡುವ ದೇವರ ನಾಲಗೆಯಿಂದ ಬರಹುದೇ ಎಂದು ಕಾಯುವಂತಾಗಿದೆ. ಹೆಗ್ಗಡೆಯವರು ಯಾಕೆ ಮೌನವಾಗಿದ್ದಾರೆ, ಅವರೇ ಮುಂದೆ ಬಂದು ದೈವದೇವರ ಪರವಾಗಿ ನ್ಯಾಯ ನೀಡಲಿ, ಪ್ರತಿಭಟನೆ ನಿಲ್ಲಿಸಿ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಲಿ. ಸೌಜನ್ಯಳ ತಾಯಿ ಮೂವರು ಅಪರಾಧಿಗಳೆಂದು ಹೆಸರು ಹೇಳಿದ್ದರೂ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ರಾಕೀಯ ಪ್ರಭಾವವನ್ನು ಎದ್ದು ಕಾಣಿಸುತ್ತಿದೆ. ಸೌಜನ್ಯ ಕುಟುಂಬ ಹಾಗೂ ಸಂತೋಷ್ ರಾವ್ ಕುಟುಂಬಕ್ಕೆ ಕೂಡಲೇ ನ್ಯಾಯ ದೊರೆಯುವಂತೆ ದೇವರಲ್ಲಿ ಪ್ರಾರ್ಥಿಸುವ ಎಂದರು.
ನಮ್ಮ ಹೋರಾಟ ಧರ್ಮದ ನೆಲೆ ಅಥವಾ ಯಾವುದೇ ವ್ಯಕ್ತಿಯ ಮೇಲೆ ಅಲ್ಲ. ಪಾಪಕೃತ್ಯ ಮಾಡಿದವನನ್ನು ಕಂಡುಹಿಡಿದು ಇಂತಹ ಕೃತ್ಯೆ ಮುಂದೆ ಆಗದಂತೆ ತಡೆಯುವುದರ ಮೂಲ ಉದ್ದೇಶ ಎಂದು ಗಂಧರ್ವ ಸುರೇಶ್ ಶೆಟ್ಟಿ ಹೇಳಿದರು.
ಶ್ರೀ ಶಕ್ತಿ ಸಂಘಟನೆಯ ಅದ್ಯಕ್ಷೆ ಶಾಲಿನಿ ಸತೀಶ್ ಶೆಟ್ಟಿ, ಸಮಾಜ ಸೇವಕಿ ವಸಂತಿ ಶೆಟ್ಟಿ, ಡಾ.ರವಿರಾಜ್ ಸುವರ್ಣ, ಪತ್ರಕರ್ತ ವಿಜಯ ಶೆಟ್ಟಿ ಕುತ್ತೆತ್ತೂರು ಸೌಜನ್ಯ ಹತ್ಯೆಯ ಬಗ್ಗೆ ಮಾತನಾಡಿ ಮುಂದಿನ ಪ್ರತಿಭಟನಾ ಸಭೆಗೆ ಸಲಹೆ ಸೂಚನೆ ನೀಡಿ ತಮ್ಮ ಸಹಕಾರ ವ್ಯಕ್ತಪಡಿಸಿದರು. ರಾಧಾಕೃಷ್ಣ ಶೆಟ್ಟಿ, ಮೀರಾರೋಡ್ ಹಾಗೂ ವಿಜಯ ಶೆಟ್ಟಿ ಮೂಡುಬೆಳ್ಳೆ, ಪ್ರಭಾಕರ ಬೆಳ್ವಾಯಿ, ಸುಂದರ ಶೆಟ್ಟಿ ವಾಮನಪದವು, ಶೇಖರ ಪೂಜಾರಿ ಮತ್ತಿತರರು ಸಹಕರಿಸಿದ್ದರು. ಆರಂಭದಲ್ಲಿ ಸೌಜನ್ಯಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯನ್ನು ಜಿ.ಕೆ.ಕೆಂಚನಕೆರೆ ನಿರೂಪಿಸಿದರು.