ಮುಂಬಯಿ ಬಂಟರ ಸಂಘವು ಸುಮಾರು 2 ವರ್ಷಗಳ ಹಿಂದೆ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ರಕ್ತ ಸಂಗ್ರಹಿಸುವ ಯೋಜನೆಯಲ್ಲಿ ಕೊರತೆಯು ಉಂಟಾದಾಗ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರುಗಳ ಸಹಾಯದಿಂದ 5000 ಬಾಟಲ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಸಂಘದ 9 ಪ್ರಾದೇಶಿಕ ಸಮಿತಿಗಳಲ್ಲಿ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಶಿಬಿರಗಳನ್ನು ಆಯೋಜಿಸುವ ಬಗ್ಗೆ ನಿರ್ಧರಿಸಲು ಯೋಚಿಸಿದಾಗ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಮೊತ್ತ ಮೊದಲಾಗಿ
ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷರಾದ ರತ್ನಾಕರ್ ಶೆಟ್ಟಿ ಮುಂಡ್ಕೂರುರವರು ಹೇಳಿದರು.
ಅವರು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಆಯೋಜಿಸಿದ ಸೇವ್ ದಿ ಬ್ರೆಸ್ಟ್ ಫೌಂಡೇಶನ್ ಹಾಗೂ ವಸಂತ್ ಚಾರಿಟೇಬಲ್ ಟ್ರಸ್ಟ್ ರವರ ಸೌಜನ್ಯದಲ್ಲಿ ಕ್ಯಾನ್ಸರ್ ತಡೆಗಟ್ಟುವ ಶಿಬಿರ ತುಂಗಾ ಹಾಸ್ಪಿಟಲ್ ಸಹಕಾರದೊಂದಿಗೆ ಹಾಸ್ಪಿಟಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪವನ್ನು ಪ್ರಜ್ವಲಿಸಿ ಮಾತನಾಡುತ್ತಾ ಸಾಮಾನ್ಯವಾಗಿ ಮಹಿಳೆಯರಲ್ಲಿ ಮೂರು ಹಂತದಲ್ಲಿ ಎದುರಾಗುವ ಕ್ಯಾನ್ಸರ್ ಸಮಸ್ಯೆಯನ್ನು ಅದರ ಪ್ರಥಮಾರ್ಧದಲ್ಲಿಯೇ ಜಾಗರೂಕರಾಗಿದ್ದರೆ ಈ ಸಮಸ್ಯೆಯಿಂದ ಪಾರಾಗಬಹುದು. ಕೆಲವರು ಈ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಕ್ಯಾನ್ಸರ್ ಬಗ್ಗೆ ವಿಮಾ ಸಂಸ್ಥೆಗಳು ನೆರವನ್ನು ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಸಾಮಾನ್ಯ. ನಮ್ಮ ಬಂಟರ ಸಂಘವು ಆರೋಗ್ಯದ ಬಗ್ಗೆ ವಿಶೇಷ ಸಹಕಾರ ನೆರವು ನೀಡುತ್ತಿದೆ.
ಕ್ಯಾನ್ಸರ್ ನಂತಹಾ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆಗೊಳಪಟ್ಟರೆ ಕ್ಯಾನ್ಸರ್ ನಿಂದ ಪಾರಾಗಬಹುದು ಮಾತ್ರವಲ್ಲದೆ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯು ಹಲವಾರು ಉತ್ತಮ ಮಟ್ಟದ ಕಾರ್ಯಕ್ರಮಗಳನ್ನು ಸಮಾಜ ಬಾಂಧವರಿಗಾಗಿ ಆಯೋಜಿಸುತ್ತಾ ಬಂದಿದೆ. ಇತ್ತೀಚೆಗೆ ಇಲ್ಲಿನ ಸಮಿತಿಯವರು ಮುಂಬಯಿ ಬಂಟರ ಸಂಘದಲ್ಲಿಯೇ ಪ್ರಪ್ರಥಮ ಎಂಬಂತೆ ಸರಕಾರದ ಮುಖೇನ ತಮ್ಮ ಕಛೇರಿಗಾಗಿ ಭೂಮಿಪೂಜೆ ನಡೆಸಿದ್ದು ಶ್ಲಾಘನೀಯವಾಗಿದೆ. ಮೀರಾ ಭಯಂದರ್ ನಲ್ಲಿ ನಮ್ಮವರ ಹಾಸ್ಪಿಟಲ್ ಗಳು ಇವೆ. ನಮ್ಮ ಸಮಾಜದ ರಾಜಕೀಯ ನೇತಾರರು, ಡಾಕ್ಟರುಗಳು, ಸಮಾಜ ಸೇವಕರು ಇದ್ದಾರೆ ಇವರುಗಳೆಲ್ಲಾ ನಮ್ಮ ಸಮಾಜಕ್ಕಾಗಿ ಯೋಗ್ಯ ಕೊಡುಗೆಯನ್ನು ನೀಡಿದರೆ ಇಲ್ಲಿರುವ ನಮ್ಮವರ ವಿವಿಧ ಮಹತ್ವಾಕಾಂಕ್ಷೆಗಳು ಈಡೇರಬಹುದು ಎಂದು ನುಡಿದರು.
ಶಿಬಿರಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಮುಂಬಯಿ ಬಂಟರ ಸಂಘದ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ ತನ್ನ ಅಬಿಪ್ರಾಯದಲ್ಲಿ ಭಾರತ ದೇಶದ ಚರಿತ್ರೆಯಲ್ಲಿ ಕಳೆದ 100 ವರ್ಷಗಳಿಂದ ಜನ ಜೀವನದಲ್ಲಿ ಆರೋಗ್ಯದ ದೃಷ್ಟಿಯಿಂದ ಹಲವಾರು ಏರುಪೇರಾಗಿದೆ. ವಿವಿಧ ತರಹದ ಕಾಯಿಲೆಗಳು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಅದೆಷ್ಟೋ ಜನರು ಸಾವಿಗೆ ಬಲಿಯಾಗಿದ್ದಾರೆ. ಪ್ರಕೃತಿಯ ಸೃಷ್ಟಿಯು ಪಂಚ ಭೂತಗಳಲ್ಲಿ ಲೀನವಾಗಿದೆ. ಅದರ ವಿಕೋಪವು ಇತ್ತೀಚಿನ ಪ್ರಾಕೃತಿಕ ಲಕ್ಷಣಗಳಿಗೆ ತುತ್ತಾಗಿದೆ. ಮಾನವನ ಜೀವನದಲ್ಲಿ ಸಮತೋಲನವನ್ನು ನಾವು ಸದಾ ಕಾಪಾಡಿಕೊಳ್ಳಬೇಕು. ಸ್ತ್ರೀ ಮಾನವ ಕುಲದ ಸೃಷ್ಟಿಕರ್ತೆ. ಆಕೆ ಜೀವನದಲ್ಲಿ ಹಂತ ಹಂತವಾಗಿ ಬೇರೆ ಬೇರೆ ಘಟಕದಲ್ಲಿ ಮುನ್ನಡೆಯುತ್ತಾಳೆ. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಸ್ತ್ರೀಗೆ ವಿಶಿಷ್ಟ ಸ್ಥಾನವನ್ನು ನೀಡಲಾಗುತ್ತಿದೆ. ಸ್ತ್ರೀಯರು ಸೀರೆ ಬಂಗಾರಕ್ಕೆ ಬೇಕಾದಷ್ಟು ಖರ್ಚು ಮಾಡುತ್ತಿದ್ದರೂ, ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಇದು ಸಲ್ಲದು. ಹಂತ ಹಂತವಾದ ತಮ್ಮ ಜೀವನದಲ್ಲಿ ಸ್ತ್ರೀಯರು ತಮಗೋಸ್ಕರ ಮಾತ್ರವಲ್ಲದೆ ತಮ್ಮ ಕುಟುಂಬಗೋಸ್ಕರ ಅರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪ್ರಕೃತಿಯ ಮಡಿಲಲ್ಲಿ ಪ್ರಾಕೃತಿಕ ವಿಕೋಪದ ಇಂದಿನ ದಿನಗಳಲ್ಲಿ ತಾವು ಮಾತ್ರವಲ್ಲದೆ ತಮ್ಮ ಕುಟುಂಬದ ಆರೋಗ್ಯ ಕಾಪಾಡುವುದಕ್ಕಾಗಿ ಜಾಗರೂಕರಾಗಿ ಇರಬೇಕು.
ಇಂದಿನ ದಿನಗಳಲ್ಲಿ ಅಪಾಯಕಾರಿ ಕಾಯಿಲೆ ಎಂದರೆ ಕ್ಯಾನ್ಸರ್. ಅದರಲ್ಲೂ ಮಹಿಳೆಯರು ತಡೆಗಟ್ಟಬಹುದಾದ ಮೂರು ಸ್ಥರದ ಕ್ಯಾನ್ಸರ್ ಬಗ್ಗೆ ಅರ್ಥಪೂರ್ಣವಾದ ವಿವರಣೆ ನೀಡಿದರು.
ಶಿಬಿರದಲ್ಲಿ ಇನ್ನೋರ್ವ ಉಪನ್ಯಾಸಕರಾದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಆರೋಗ್ಯ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಹಾಸ್ಪಿಟಲ್ ನ ಡಾ. ಭಾಸ್ಕರ್ ಶೆಟ್ಟಿಯವರು ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ ಮಾರಕ ಕಾಯಿಲೆಯೆನಿಸಿದ ಕ್ಯಾನ್ಸರ್ ಸುಮಾರು 35 ರಿಂದ 40 ವರ್ಷ ಪ್ರಾಯದ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ವಿವಿಧ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರು ಸಾಮಾನ್ಯ ಹಾಗೂ ಬೇರೆ ಬೇರೆ ರೀತಿಯ ವೈದ್ಯಕೀಯ ತಪಾಸಣೆಯೊಂದಿಗೆ ಪತ್ತೆ ಹಚ್ಚಿದ ಸ್ತನ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ವಿವಿಧ ತರಹದ ಸ್ತನ ಕ್ಯಾನ್ಸರ್ ನ್ನು ಪ್ರಾಥಮಿಕ ಹಂತದಲ್ಲಿಯೇ ವೈದ್ಯರ ತಪಾಸಣೆಯ ಸಲಹೆ ಸಹಕಾರದಿಂದ ಮುಂದೆ ಆಗುವ ಅನಾಹುತದಿಂದ ಪಾರಾಗಬಹುದು. ಈ ಬಗ್ಗೆ ಮಹಿಳೆಯರು ಅಸಡ್ಡೆ ತೋರದೆ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಇಂತಹ ಸಂದರ್ಭದಲ್ಲಿ ನನ್ನ ಸಹಕಾರ ಸದಾ ತಮಗೆ ಲಭ್ಯವಿದೆ ಎಂದು ನುಡಿದರು.
ಶಿಬಿರದಲ್ಲಿ ಪಾಲ್ಗೊಂಡ ತುಂಗಾ ಹಾಸ್ಪಿಟಲ್ ನ ಆಡಳಿತ ನಿರ್ದೇಶಕ ಡಾ. ಸತೀಶ್ ಬಿ. ಶೆಟ್ಟಿಯವರು ಕ್ಯಾನ್ಸರ್ ಬಗ್ಗೆ ತನ್ನ ಅಭಿಪ್ರಾಯದಲ್ಲಿ ಮುಂಬಯಿ ಬಂಟ್ಸ್ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಇಂದು ಗಮನೀಯ ಮಹತ್ತರವಾದ ಮಹಿಳೆಯರಿಗೆ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಕೃತಿ ಹಾಗೂ ಪ್ರಾಕೃತಿಕ ವಿವಿಧ ಲಕ್ಷಣಗಳಿಂದ ಇಂದಿನ ದಿನಗಳಲ್ಲಿ ಕಂಡು ಬರುತ್ತಿರುವ ಹಲವಾರು ರೋಗಗಳಲ್ಲಿ ಅದರಲ್ಲೂ ಮಹಿಳೆಯರಲ್ಲಿ ಕಂಡು ಬರುತ್ತಿರುವ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯ ಬಗ್ಗೆ ಮಾಹಿತಿಯನ್ನು ನೀಡುವ ಈ ಶಿಬಿರ ಪ್ರಾಮುಖ್ಯತೆಯನ್ನು ಹೊಂದಿದೆ. ಇದೊಂದು ತಡೆಗಟ್ಟಬಹುದಾದ ಕಾಯಿಲೆ. ಜಗತ್ತಿನಲ್ಲಿ ಮಾನವ ಜನಾಂಗದ ಬಹು ಮುಖ್ಯ ಪಾತ್ರದಲ್ಲಿ ಕಾಣುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ. ಕಾಲ ಕಾಲಕ್ಕೆ ಮಹಿಳೆಯರು ವೈದ್ಯಕೀಯ ನೆರವನ್ನು ಪಡೆದುಕೊಂಡಲ್ಲಿ ತಮಗಾಗುವ ಅಸಮಾನ್ಯ ಕಾಯಿಲೆಗಳನ್ನು ತಡೆಗಟ್ಟಬಹುದು. ಇಂದಿನ ಕಾಲದಲ್ಲಿ ಬಹು ರೋಗಗಳೊಲ್ಲೊಂದಾದ ವಿವಿಧ ರೀತಿಯ ಕ್ಯಾನ್ಸರ್ ಕೂಡಾ ತಡೆಗಟ್ಟಬಹುದಾದ ಕಾಯಿಲೆ. ವೈದ್ಯರ ನೆರವಿನಿಂದ ಪ್ರಾಥಮಿಕ ಹಂತದಲ್ಲಿಯೇ ಇದನ್ನು ತಡೆಗಟ್ಟಬಹುದು. ಮಹಿಳೆಯರು ಈ ಬಗ್ಗೆ ಅತೀ ಹೆಚ್ಚು ಜಾಗರೂಕರಾಗಿರಬೇಕು ಎಂದರು.
ಇನ್ನೋರ್ವ ಅತಿಥಿ ಇಲ್ಲಿನ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಅರವಿಂದ ಶೆಟ್ಟಿಯವರು ಸಂದರ್ಭೋಚಿವಾಗಿ ಮಾತನಾಡುತ್ತಾ ಅರೋಗ್ಯ ನಿಟ್ಟಿನಲ್ಲಿ ಈ ಮಹಾನಗರದಲ್ಲಿ ನಮ್ಮವರ ಹಾಸ್ಪಿಟಲ್ ಹಾಗೂ ವೈದ್ಯರುಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕ್ಯಾನ್ಸರ್ ತಜ್ಞೆ ಡಾ. ಸುರೇಖಾ ಮಿಚೇರಿ ಸಾಕ್ಷ್ಯ ಚಿತ್ರದೊಂದಿಗೆ ಕ್ಯಾನ್ಸರ್ ಬಗ್ಗೆ ವಿವರಣೆಗಳನ್ನು ನೀಡಿದರು.
ಸುಮಾರು 60ಕ್ಕಿಂತ ಹೆಚ್ಚು ಮಂದಿ ಮಹಿಳೆಯರು ತಪಾಸಣೆಯಲ್ಲಿ ಭಾಗಿಯಾದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಕಾಶಿಮಿರಾ ಭಾಸ್ಕರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಕುತ್ಯಾರು ಕಿಶೋರ್ ಶೆಟ್ಟಿ, ಡಾ. ಪ್ರಥಾ ಗೌರೀಶ್ ಶೆಟ್ಟಿ, ಡಾ. ತೀರ್ಥಾ ಯನ್. ಶೆಟ್ಟಿ, ಡಾ. ಯೋಗಿನಿ ಕೊಟ್ಟಾರಿ, ಡಾ. ಸುಮನ್ ಸಿರ್ವಿ, ಮೆ. ಸ್ವಾತಿ ಸೇಥ್, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಉದಯ ಶೆಟ್ಟಿ ಪೆಲತ್ತೂರು, ಕೋಶಾಧಿಕಾರಿ ದಾಮೋದರ ಶೆಟ್ಟಿ,ಯುವ ವಿಭಾಗದ ಕಾರ್ಯಧ್ಯಕ್ಷೆ ಕು. ಶೃತಿ ಡಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಪಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ, ಸಲಹೆಗಾರರಾದ ಅಮಿತಾ ಕೆ. ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ, ಕೋಶಾಧಿಕಾರಿ ಶಿಲ್ಪಾ ಶೆಟ್ಟಿ, ಜತೆ ಕೋಶಾಧಿಕಾರಿ ಶೀಲಾ ಶೆಟ್ಟಿ ಹಾಗೂ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತುರವರು ಧನ್ಯವಾದಗಳನ್ನು ಸಮರ್ಪಿಸಿದರೆ, ವಸಂತಿ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮದ ನಿರೂಪಣೆಯನ್ನು ಬಾಬಾಪ್ರಸಾದ್ ಅರಸರವರು ನಿರ್ವಹಿಸಿದರು.
ವರದಿ : ವೈ ಟಿ ಶೆಟ್ಟಿ ಹೆಜಮಾಡಿ